ಗುರುವಾರ , ಜೂನ್ 4, 2020
27 °C

ಮತ್ತದೇ ಬೇಸರ, ಅದೆ ಸಂಜೆ...

ಸುಬ್ರಾಯ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

prajavani

ನಾವು ಗೌರವಿಸುವ,ಪ್ರೀತಿಸುವ ಹಾಗೂ ಸದಾ ನಮ್ಮ ಮನದಲ್ಲೇ ಕಾಪಿಟ್ಟುಕೊಂಡಿರುವ ಸಾಹಿತಿಗಳು ಒಬ್ಬೊಬ್ಬರಾಗಿ ಹೊರಟು ಹೋಗುತ್ತಿದ್ದಾರೆ. ಇಂದು ಪ್ರಿಯ ಕವಿ,ಗೆಳೆಯ ನಿಸಾರ್ ಅಹಮದ್ ಕೂಡಾ ಹೊರಟು ಹೋಗಿಯೇ ಬಿಟ್ಟರು!,ಅವರದೇ ಹಾಡೀಗ ಕಿವಿಗೆ ಬಂದು ಅಪ್ಪಳಿಸುತ್ತಾ ಇದೆ..ಮತ್ತದೇ ಬೇಸರ,ಅದೆ ಸಂಜೆ,ಅದೇ ಏಕಾಂತ....

ಕಳೆದ ಅರುವತ್ತರ ದಶಕ ಅದು. ನವ್ಯ ಚಳವಳಿಯು ಉತ್ತುಂಗದಲ್ಲಿ ವಿಜೃಂಭಿಸುತ್ತಿದ್ದಕಾಲ ಅದು.ರಾಮಚಂದ್ರ ಶರ್ಮರಂತೂ ಹಾಡುಗಳ ಹಾಗೂ ಹಾಡು ಬರೆಯುವವರ ಬಗ್ಗೆ ಬಂಡಾಯವೆದ್ದ ಕಾಲ ಅದು.ಹಾಡು ಬರೆಯಲು ನಾನು ಹಿಂಜರಿಯುತ್ತಿದ್ದ ಕಾಲ ಅದು.ಅಂಥ ಸಂದರ್ಭದಲ್ಲಿ ನನ್ನ ಕೈ ಸೇರಿದ ಅವರ"ಮನಸು ಗಾಂಧಿ ಬಜಾರು"ಸಂಕಲನದ ಹೆಸರೇ ನನಗೆ ವಿಶಿಷ್ಟವೆನಿಸಿತು.ಅದರಲ್ಲಿನ ಅನೇಕ ನವ್ಯ ಕವಿತೆಗಳೊಂದಿಗೆ ಒಂದು ಕವಿತೆಯು ನನ್ನನ್ನು ವಿಶೇಷವಾಗಿ ಆಕರ್ಷಿಸಿತ್ತು."ಮನೋರಮಾ,ಮನೋರಮಾ,ಹೆಸರು ಮಾತ್ರ ಸಾಲದೇನೆ ಮಲಗೋಬದ ಘಮಘಮ"ಎನ್ನುವ ಗೀತೆ ಅದು.ಅದು ಹಾಡು ಬರೆಯುವ ಕುರಿತಾದ ನನ್ನ ಹಿಂಜರಿಕೆಯನ್ನು ತೊಡೆದು ಹಾಕಿತು.

ಶರ್ಮರ ಮಾತನ್ನು ಗಣನೆಗೇ ತೆಗೆದು ಕೊಳ್ಳದ ನಿಸಾರ್ ನವ್ಯರೊಂದಿಗಿದ್ದೂ ನವ್ಯರಂತಾಗದೆ ನವ್ಯ ಕವಿತೆಗಳೊಂದಿಗೆ ಭಾವಗೀತೆಗಳನ್ನೂ ಬರೆಯುತ್ತಾ ಹೋದರು.ಆ ಮೂಲಕ ನವ್ಯಕಾವ್ಯವು ನಿರ್ಮಿಸಿದ್ದ ಏಕತಾನತೆಯನ್ನು ಮುರಿದರು.ಆ ನಿಟ್ಟಿನಲ್ಲಿಅವಯಳರ ನಿತ್ಯೋತ್ಸವ ಎನ್ನುವ ಕ್ಯಾಸೆಟ್ ಹೊಸ ವಿಕ್ರಮವನ್ನೇ ಸ್ಥಾಪಿಸಿತು.ಅವರಜೋಗದ ಸಿರಿ ಬೆಳಕಿನಲ್ಲಿ ಹಾಡಿನ ಮೂಲಕ ಅವರು ಕನ್ನಡ ನಾಡಿನ ಮನೆ ಮಾತಾದರು.ಅವರ ಎವರ್ ಗ್ರೀನ್ ಹಾಡು ಎನ್ನಲಾಗುವ "ಮತ್ತದೇ ಬೇಸರ.."ದೊಂದಿಗೆ,"ಕುರಿಗಳು ಸಾರ್ ಕುರಿಗಳು","ಬೆಣ್ಣೆ ಕದ್ದ ನಮ್ಮ ಕೃಷ್ಣ"ಮೊದಲಾದ ಅವರ ಅನೇಕ ಗೀತೆಗಳು ಜನ ಮಾನಸದಲ್ಲಿ ಸದಾ ಉಳಿಯುವ ಹಾಡುಗಳಾಗಿವೆ.

ರಾಮನ್ ಸತ್ತ ಸುದ್ದಿ,ಅಮ್ಮ ,ಆಚಾರ,ನಾನು,ಸ್ವಯಂ ಸೇವೆಯ ಗಿಳಿಗಳು,ಮಾಸ್ತಿ,..ಮೊದಲಾದ ಅತ್ಯುತ್ತಮ ಕವಿತೆಗಳೊಂದಿಗೆ ಅನೇಕ ಜನಪ್ರಿಯ ಗೀತೆಗಳನ್ನೂ ನೀಡಿರುವ ಹಾಡಿನ ಸರದಾರ,ಸಹೃದಯಿ,ಪ್ರಿಯ ಗೆಳೆಯ ನಿಸಾರ್ ಇಂದು ಇಲ್ಲ ಎನ್ನುವುದನ್ನು ನಂಬಲು ಕಷ್ಟವಾಗ್ತಿದೆ.ಆದರೇನು-ನನ್ನ ಜತೆ ಅವರಕವಿತೆಗಳು ,ಲಲಿತ ಪ್ರಬಂಧಗಳು ನಾಟಕಗಳು...ಇವೆ.ಎಲ್ಲಕ್ಕಿಂತ ಹೆಚ್ಚಾಗಿ ಸದಾ ಗುನುಗುನಿಸಬಹುದಾದ ಹಾಡುಗಳಿವೆ.ಅಷ್ಟು ಸಾಕು ನನಗೆ 

ಅವರ ನೆನಪಿಗೆ ನನ್ನ ಗೌರವಪೂರ್ವಕ ನಮನಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು