ಮಂಗಳವಾರ, ಮಾರ್ಚ್ 28, 2023
33 °C

ಕೊರೊನಾ ಸಂಕಷ್ಟದಲ್ಲೂ ಸಮಾಧಾನದ ಬೆಳಕು

ಮಾಲತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಾರ್ಚ್‌ ತಿಂಗಳ ಅಂತ್ಯದಲ್ಲಿ ಲಾಕ್‌ಡೌನ್ ಎಂದು ಸರ್ಕಾರ ಘೋಷಣೆ ಹೊರಡಿಸಿದಾಗಿನಿಂದಲೂ ಹೆಚ್ಚಿನವರಲ್ಲಿ ಒಂದು ಬಗೆಯ ಹತಾಶೆ, ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯ ಒತ್ತಡವನ್ನು ಎದುರಿಸಲಾಗದ ಉದ್ವಿಗ್ನತೆ ಕಾಣುತ್ತಿದೆ. ಮರಣ ಭಯದ ಹತಾಶೆಯಿಂದ ಕಂಗಾಲಾದ ಅಕ್ಕಪಕ್ಕದ ಮನೆಯ ವೃದ್ಧರು, ಅಂಗಳಕ್ಕೂ ಇಳಿದು ಆಡಲಾಗದ ಚಿಣ್ಣರು, ತಮ್ಮ ಬೌದ್ಧಿಕ ಸಾಮರ್ಥ್ಯ, ದೈಹಿಕಬಲದ ಸದುಪಯೋಗಪಡಿಸಿಕೊಳ್ಳುವ ಅವಕಾಶವೇ ಸಿಗದೇ ಕೋಣೆ ಮೂಲೆ ಹಿಡಿದ ಯುವಜನರು, ಟಿವಿ, ರೇಡಿಯೊ ಹಚ್ಚಿದರೆ ಎಚ್ಚರಿಕೆಯ ಮಾತುಗಳು, ರೋಗಪೀಡಿತರ, ಸತ್ತವರ ಲೆಕ್ಕಾಚಾರಗಳು.. ಎಲ್ಲೆಲ್ಲಿಯೂ ಕೊರೊನಾದ ಮಾತುಗಳೇ. ಮನೆಯ ಬಾಗಿಲು– ಕಿಟಕಿಗಳನ್ನು ಮುಚ್ಚಿಟ್ಟು ಕೂತರೂ ಮನದ ಬಾಗಿಲನ್ನು ಮುಚ್ಚಿಡಲಾಗಲಿಲ್ಲ.

ಬುದ್ಧಿ ‘ಗತಕಾಲದಲ್ಲಿ ಶರವೇಗದಲ್ಲಿ ಓಡುತ್ತಿದ್ದ ನಾವು ನೆಮ್ಮದಿಯಿಂದಿದ್ದೆವು’ ಎನ್ನುವ ನೆನಪನ್ನು ಹೆಕ್ಕಿ ತೆಗೆದು ‘ಇನ್ನು ಅವೆಲ್ಲ ಸಾಧ್ಯವೇ ಇಲ್ಲವೇ?’ ಎಂದೊಮ್ಮೆ ಕೇಳುತ್ತಿತ್ತು. ಮತ್ತೊಮ್ಮೆ ಮುಂದೆ ಬರುವ ದಿನಗಳು ಭೀಕರವೇ? ಎಂದು ಪ್ರಶ್ನಿಸುತ್ತಿತ್ತು. ಅದೇ ಸಮಯದಲ್ಲಿ ನಮ್ಮ ನಿತ್ಯ ನೆಮ್ಮದಿಗೆ ದುಡಿಯುವ ಪೌರಕಾರ್ಮಿಕರು, ದಿನಸಿ ಅಂಗಡಿಯವರು, ಹಾಲು ಮೊಸರು, ಹಣ್ಣು– ತರಕಾರಿ ಮಾರುವವರು, ದಿನಪತ್ರಿಕೆ ಹಂಚುವವರು, ಆರೋಗ್ಯ ಕಾರ್ಯಕರ್ತರು ಬದುಕಿನ್ನೂ ನಿಂತ ನೀರಾಗಿಲ್ಲ ಎಂಬ ಭರವಸೆ ಮೂಡಿಸುತ್ತಿದ್ದರು. ‘ಅನುದಿನವೂ ಕುಸಿಯುವ ಗೋಡೆ ನಮ್ಮ ಮನಸ್ಸು. ಅದನ್ನು ನಿತ್ಯವೂ ಕಟ್ಟುತ್ತಿರಬೇಕು’ ಎಂದು ಎಂದೋ ಓದಿದ ಮಾತು ನೆನಪಾಯಿತು. ಆತ್ಮಸ್ಥೈರ್ಯ ಉಳ್ಳವರನ್ನು ಮಾತನಾಡಿಸಲಾರಂಭಿಸಿದೆ.

ಸಾಂತ್ವನ ಹೇಳುವ ಕೆಲಸ
ಗೆಳತಿ ಸುಧಾ ಶರ್ಮಾ ‘ಇಷ್ಟೊಂದು ಬಿಡುವು ನಮಗೆಲ್ಲಿ ಸಿಗುತ್ತಿತ್ತು. ಕೊರೊನಾ ನಮಗೆ ಆತ್ಮವಿಮರ್ಶೆಗೆ ಅವಕಾಶ ನೀಡಿದೆ’ ಎನ್ನುತ್ತಲೇ ‘ಕಷ್ಟಕಾಲದಲ್ಲಿ ಒಟ್ಟಿಗಿರೋಣ’ ಎನ್ನುವ ಆಡಿಯೊ ಸರಣಿಯನ್ನು ಸಾರ್ವಜನಿಕರಿಗಾಗಿ ಸಿದ್ಧಪಡಿಸಿ ಕಳಿಸಲಾರಂಭಿಸಿದ್ದಳು. ಜನರ ಮನದಲ್ಲಿ ಧೈರ್ಯದ ಬೀಜ ಬಿತ್ತುತ್ತಿದ್ದಳು. ಹಿರಿಯ ಲೇಖಕಿ, ಮಾನಸಿಕರೋಗ ತಜ್ಞೆ ಶಾಂತಾ ನಾಗರಾಜ್ ಬೆಂಗಳೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಆಪ್ತ ಸಮಾಲೋಚನೆ ಕೇಂದ್ರವನ್ನು ನಡೆಸುತ್ತಿದ್ದಾರೆ. ತಮ್ಮ ಹದಿನೈದು ಸಂಗಡಿಗರೊಂದಿಗೆ ಅಲ್ಲಿ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಎಪ್ಪತ್ತೇಳರ ಇಳಿವಯಸ್ಸಿನಲ್ಲಿಯೂ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಸಮುದಾಯ ರೇಡಿಯೋಕ್ಕಾಗಿ ಪೇರೆಂಟಿಂಗ್ ಕುರಿತು ಅರಿವು ಮೂಡಿಸುವ ಧ್ವನಿ ಸುರುಳಿಗಳ ಸರಣಿ ನಿರ್ಮಿಸಿದ್ದಾರೆ. ವೃದ್ಧರು ಕೊರೊನಾ ಆತಂಕ ಮೀರುವುದು ಹೇಗೆ ಎಂಬುದರ ಬಗ್ಗೆ, ಕುಟುಂಬದವರು ಹಿರಿಯರನ್ನು ನೋಡಿಕೊಳ್ಳುವ ಕುರಿತು ತಮ್ಮ ಬರಹಗಳಿಂದ, ಧ್ವನಿಸುರುಳಿಗಳಿಂದ, ವೆಬಿನಾರ್ ಮೂಲಕ ಸಮಾಜಕ್ಕೆ ತಿಳಿಸುತ್ತಿದ್ದಾರೆ. ಬೆಂಗಳೂರಿನ ಸಿ.ಚೈತ್ರಾ ಕೊರೊನಾದ ದೆಸೆಯಿಂದ ಉದ್ಯೋಗ ಕಳೆದುಕೊಂಡರೂ ಕಂಗೆಡದೆ ತಮ್ಮದೇ ಆದ ಕೌನ್ಸೆಲಿಂಗ್ ಸೆಂಟರ್ ತೆರೆದು ಆನ್‌ಲೈನ್‌ ಮೂಲಕ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ.

‘ಯಾವುದು ನಮ್ಮ ಹಿಡಿತದಲ್ಲಿಲ್ಲವೂ ಅಂತಹ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳದಿರೋಣ. ನಮ್ಮನ್ನು ನಾವು ಬದಲಾಯಿಸಿಕೊಂಡು ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಮುನ್ನಡೆಯೋಣ’ ಎನ್ನುವ ಇವರ ಮಾತುಗಳು ಕೊರೊನಾದ ಕತ್ತಲಲ್ಲಿ ಆಶಾ ಕಿರಣಗಳಾಗಿ ತೋರುತ್ತಿವೆ. ಇವರಂತೆಯೇ ದೇಶದಾದ್ಯಂತ ಹಲವು ಮಾನಸಿಕ ತಜ್ಞರು ಎಲೆಮರೆಯ ಕಾಯಿಗಳಂತೆ ಉಳಿದು ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ‘ಕಣ್ಣಿಗೆ ಕಾಣುವ ದೇಹದ ಸಮಸ್ಯೆಗಳಿಗೆ ಕೊಡುವಷ್ಟೇ ಮಹತ್ವವನ್ನು ಮಾನಸಿಕ ಸಮಸ್ಯೆಗಳಿಗೂ ಕೊಡಬೇಕು. ಸ್ವಸ್ಥ ಮನಸ್ಸುಗಳು ಮಾತ್ರ ಸರಿಯಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುನ್ನಡೆಯಬಲ್ಲವು. ರೋಗಗ್ರಸ್ಥ ಮನಸ್ಸುಗಳು ಸಣ್ಣ ಸಣ್ಣ ಸಮಸ್ಯೆಗಳನ್ನೂ ಸೋಲೆಂದು ಭಾವಿಸುತ್ತವೆ. ಕೌಟುಂಬಿಕ ದೌರ್ಜನ್ಯ ಎಸಗುತ್ತವೆ. ಖಿನ್ನತೆಯಿಂದ ಕೆಲವೊಮ್ಮೆ ಸಾವನ್ನೂ ಆಯ್ಕೆ ಮಾಡಿಕೊಳ್ಳುತ್ತವೆ. ಆಶಾವಾದಿಗಳಾಗಬೇಕು..’ ಎನ್ನುತ್ತಾರೆ ಶಾಂತಾ ನಾಗರಾಜ್.

ಹಸಿದವರಿಗೆ ಅನ್ನದಾಸೋಹ
ಮನೆಯೊಳಗೇ ಇದ್ದು ಬೇಜಾರು. ಇನ್ನೆಷ್ಟು ದಿನವೋ ಈ ಕಷ್ಟ ಎಂದು ತಲೆ ಕೆಡಿಸಿಕೊಳ್ಳುವವರ ಸಂಖ್ಯೆ ಬಹು ದೊಡ್ಡದಿದ್ದರೂ ಬೇರೆಯವರ ಕಷ್ಟಕ್ಕೆ ಒದಗೋಣ ಎನ್ನುವ ಸಮಾಜಮುಖಿಗಳ ಸಂಖ್ಯೆಯೂ ಸಣ್ಣದೇನಲ್ಲ. ಶ್ರೀರಂಗಪಟ್ಟಣದ ವೇದವಿದ್ವಾಂಸ ಲಕ್ಷ್ಮೀಶ ಶರ್ಮಾ ಅಂಥವರಲ್ಲೊಬ್ಬರು. ದಿಢೀರ್ ಲಾಕ್‌ಡೌನ್‌ನಿಂದ ತಮ್ಮೂರಿಗೆ ಬಂದ ಪ್ರವಾಸಿಗರು, ನಿರಾಶ್ರಿತರು, ಭಿಕ್ಷುಕರು, ಕಾರ್ಮಿಕರು ಉಪವಾಸ ಬೀಳಬೇಕಾಗುತ್ತದೆ ಎಂದು ಚಿಂತಿಸಿದ ಲಕ್ಷ್ಮೀಶ ಅವರು, ತಮ್ಮ ವಿದ್ಯಾರ್ಥಿಗಳ ಜೊತೆ ಸೇರಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ನಿತ್ಯವೂ ಅಡುಗೆ ತಯಾರಿಸಿ ಅಗತ್ಯವಿದ್ದ ಸುಮಾರು ಸಾವಿರ ಜನರಿಗೆ ವಿತರಿಸಲಾರಂಭಿಸಿದರು. ‘ಈ ಕಾರ್ಯದ ವಿವರಗಳನ್ನು ಫೇಸ್‌ಬುಕ್‌ಗೆ ಕೆಲವು ವಿದ್ಯಾರ್ಥಿಗಳು ಅಪ್‌ಲೋಡ್ ಮಾಡುತ್ತಿದ್ದರು. ಅನೇಕ ಅಪರಿಚಿತರೂ ಮೆಚ್ಚಿ ಧನಸಹಾಯ ಮಾಡಿದರು. ಊರ ನಾಗರಿಕರು, ರೈತರು, ಸಹೃದಯಿಗಳು ಕೆಲಸದಲ್ಲಿಯೂ ಕೈಜೋಡಿಸಿದರು, ಧನ-ಧಾನ್ಯಗಳನ್ನು ದೇಣಿಗೆಯಾಗಿ ನೀಡಿದರು’ ಎನ್ನುವ ಲಕ್ಷ್ಮೀಶ, ‘ನಾನು ನಿಮಿತ್ತ ಮಾತ್ರ. ಎಲ್ಲರ ಸಹಕಾರದಿಂದ ಇವೆಲ್ಲ ಸಾಧ್ಯವಾಯಿತು’ ಎನ್ನುತ್ತಾರೆ.

ಕಲೆಗೂ ಪ್ರೋತ್ಸಾಹ
ಕಲಿಯಬೇಕು ಹಾಡಬೇಕು, ನರ್ತಿಸಬೇಕು, ಅಭಿನಯಿಸಬೇಕು, ವೇದಿಕೆಯನ್ನೇರಿ ಕಾರ್ಯಕ್ರಮಗಳನ್ನು ನೀಡಬೇಕು... ಇಂತಹ ಎಲ್ಲ ಕಲಾ ಚಟುವಟಿಕೆಗಳೂ ಕೋವಿಡ್–19 ಕಾರಣದಿಂದ ಕೆಲಕಾಲ ನಿಂತುಹೋದವು. ಆದರೆ ಕ್ರಮೇಣ ಅನೇಕ ಕಲಾಸಕ್ತರು ಆನ್‌ಲೈನ್‌ ಸಂಗೀತ– ನೃತ್ಯ ತರಬೇತಿಗೆ ಸೇರಿಕೊಂಡಿದ್ದಾರೆ. ಸಂಗೀತ ನೃತ್ಯಗಳನ್ನು ಕಲಿತರೂ ಕಾರಣಾಂತರದಿಂದ ವಿಮುಖರಾದ ಕೆಲವರು ಮತ್ತೆ ನಿತ್ಯಾಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಕೆಲವು ಕ್ರಿಯಾಶೀಲ ಮನಸ್ಸುಗಳು ತಂತ್ರಜ್ಞಾನದ ಸಹಾಯದಿಂದ ಕಲಾಪ್ರಕಾರವನ್ನು ಜೀವಂತವಾಗಿಡಲು ಹೊಸ ಮಾರ್ಗವನ್ನರಸಿವೆ. ಅದರಲ್ಲಿ ಜನಪ್ರಿಯವಾಗಿದ್ದು ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳು. ಕೆಲವರು ತಮಗಿರುವ ಪ್ರತಿಭೆಗೆ ತಾವೇ ಅವಕಾಶ ಕಲ್ಪಿಸಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಇತ್ತೀಚೆಗೆ ನಾಡಿನ ಗಮನ ಸೆಳೆದ ಗಾಯಕಿಯರು ಶಿಲ್ಪಾ ಮುಡಬಿ, ಮಾನಸಿ ಸುಧೀರ್, ಸಾನ್ವಿ ಶೆಟ್ಟಿ... ಮುಂತಾದವರು.

ಕೆಲವರು ಕಲಾ ತಂಡವನ್ನೇ ಕಟ್ಟುತ್ತಿದ್ದಾರೆ. ಹಿಂದೂಸ್ತಾನಿ ಭರವಸೆಯ ಯುವಗಾಯಕ ಎಂದು ಗುರುತಿಸಲ್ಪಡುತ್ತಿರುವ ವಿಶಾಲ ಹೆಗಡೆಯವರು ವೃತ್ತಿಯಲ್ಲಿ ಎಂಜಿನಿಯರ್. ಸಂಗೀತ ಪ್ರತಿಷ್ಠಾನ ಹುಟ್ಟುಹಾಕಿ ಪ್ರತಿ ಶನಿವಾರ ಒಂದೊಂದು ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ‘ಸೂರ ಪ್ರಭಾತ್’ ಹೆಸರಲ್ಲಿ ನಡೆಯುವ ಈ ಕಾರ್ಯಕ್ರಮ ಬೆಳಗಿನ ರಾಗಗಳನ್ನು ಕೇಳುವ ಸುಯೋಗ ಕಲ್ಪಿಸಿದೆ. ಕಥಕ್ ಕಲಾವಿದರಾದ ನಿರುಪಮಾ ರಾಜೇಂದ್ರ ಅವರು ಹಾಕುವ ಮನಮೋಹಕ ನೃತ್ಯಗಳನ್ನು ನೋಡಿದರೆ ಎಂತಹ ಕಷ್ಟಗಳನ್ನೂ ಕೆಲಕಾಲ ಮರೆತೇಬಿಡಬಹುದು.

ಜಾನಪದ ಕಲಾವಿದರು, ನಾಟಕ, ಯಕ್ಷಗಾನ ಕಲಾವಿದರು ಕೂಡಾ ಫೇಸ್‌ಬುಕ್ ಲೈವ್ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ. ವೇದಿಕೆಯ ಕಾರ್ಯಕ್ರಮಗಳಂತೆ ಇದು ಸುಖ ನೀಡುವುದಿಲ್ಲ ಎಂಬ ಕೊರತೆ ಇದ್ದರೂ ಇದು ಕಲಾವಿದರಿಗೆ, ಪ್ರೇಕ್ಷಕರಿಗೆ ಹೊಸತೊಂದು ಕಲಾಸ್ವಾದನೆಯ ಮಾರ್ಗ ಎನಿಸುತ್ತಿರುವುದು ಸುಳ್ಳಲ್ಲ. ಸಾಹಿತ್ಯದ ಚಟುವಟಿಕೆಗಳು ಕೂಡಾ ಫೇಸ್‌ಬುಕ್‌ನಲ್ಲಿ ಭರದಲ್ಲಿ ನಡೆಯುತ್ತಿವೆ. ಕಥೆ, ಕವಿತೆ ಓದುವವರು, ಸ್ಪರ್ಧೆ ನಡೆಸುವವರು, ಟಾಸ್ಕ್‌ ಕೊಟ್ಟು ಬರೆಯುವವರು, ಬರೆಸುವವರು.. ಹೀಗೆ ಸತ್ವಯುತವಾದ ಬರಹಗಳಷ್ಟೇ ಜೊಳ್ಳು ಸಾಹಿತ್ಯವೂ ಸೃಷ್ಟಿಯಾಗುತ್ತಿದೆ. ಬರೆಬರೆದು ಎಲ್ಲರೂ ಸುಧಾರಿಸಿಬಿಡಬಹುದೇ? ಕಾಲವೇ ಉತ್ತರಿಸಬೇಕಷ್ಟೇ.

ಸ್ವಾವಲಂಬನೆಗೆ ದಾರಿ
ತಂತ್ರಜ್ಞಾನದ ಸದ್ಬಳಕೆಯಿಂದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಲು ನೆರವಾಗಿ ನಿಲ್ಲುವ ಯೋಜನೆ ರೂಪಿಸಿದ ಮುಂಬೈ ನಿವಾಸಿ ಅಪರ್ಣಾರಾವ್ ‘ಮಹಿಳಾ ಮಾರುಕಟ್ಟೆಯನ್ನು’ ಇತ್ತೀಚೆಗೆ ಹುಟ್ಟುಹಾಕಿದ್ದಾರೆ. ಆರಂಭಿಸಿದ ಅಲ್ಪ ಕಾಲದಲ್ಲಿಯೇ ಹದಿಮೂರು ಸಾವಿರಕ್ಕೂ ಹೆಚ್ಚು ಜನರು ಈ ಪೇಜ್‌ ಅನ್ನು ಫಾಲೋ ಮಾಡುತ್ತಿದ್ದು, ಬಟ್ಟೆಗಳನ್ನು, ಕರಕುಶಲ ವಸುಗಳನ್ನು, ತಿಂಡಿ– ತಿನಿಸುಗಳನ್ನು ಖರೀದಿಸಿ ಗ್ರಾಮೀಣ ಹಾಗೂ ನಗರವಾಸಿ ಮಹಿಳೆಯರ ಕೌಶಲಕ್ಕೆ ಬೆಂಬಲ ನೀಡಿದ್ದಾರೆ. ಶ್ರಮ ಬಂಡವಾಳದಲ್ಲಿ ತಾವು ತಯಾರಿಸುವ ವಸ್ತುಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೇ ಮಾರಬಹುದಾದ ಈ ಅವಕಾಶದಿಂದ ಮಹಿಳಾ ಮಾರುಕಟ್ಟೆಯ ಸದಸ್ಯೆಯರು ನೆಮ್ಮದಿ ಕಾಣುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.

ಕೋವಿಡ್–19 ವೈರಾಣು ಸೃಷ್ಟಿಸಿದ ಆತಂಕದೊಂದಿಗೆ ನಿಜಕ್ಕೂ ಯುದ್ಧ ಸಾರುವವರು ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿಗಳು. ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಬರುವ ಇವರಿಗೆ ಸೋಂಕಿನ ಭಯ ಕಾಡದಿರಲು ಸಾಧ್ಯವೇ ಇಲ್ಲ. ಅತಿಕಾಳಜಿ, ಎಚ್ಚರಿಕೆಯಲ್ಲಿ ರಕ್ಷಾಕವಚದಲ್ಲಿ ಬೇಯುತ್ತಾ ಲಕ್ಷಾಂತರ ರೋಗಿಗಳನ್ನು ಗುಣಮುಖರನ್ನಾಗಿಸಿರುವ ಇವರ ಸಾಧನೆಗೆ ಶರಣೆನ್ನಬೇಕು. ಅವರ ಸೇವೆಗೂ ಸಾವಿಗೂ ಕೂದಲೆಳೆಯಷ್ಟೇ ಅಂತರವಿರುತ್ತದೆ ಎಂಬುದನ್ನು ಸಮಾಜ ಅರಿಯಬೇಕು. ಕೊಂಚ ಅಲಕ್ಷ್ಯ ಮಾಡಿದರೂ ಅವರ ಇಡೀ ಕುಟುಂಬವೇ ಕಷ್ಟಪಡಬೇಕು. ಕೋಟ್ಯಂತರ ರೂಪಾಯಿ ವ್ಯಯಿಸಿ ಕಟ್ಟಿದ ಆಸ್ಪತ್ರೆ ಸೀಲ್‌ಡೌನ್ ಆಗುತ್ತದೆ. ‘ಇಂತಹ ಆತಂಕದಲ್ಲಿಯೇ ಕಾಲಕಳೆಯುತ್ತಿರುವ ಮೈಸೂರಿನ ಅಪೋಲೊ ಆಸ್ಪತ್ರೆಯ ಸಿಬ್ಬಂದಿಗೆ ನಾನು ನಿತ್ಯವೂ ಯೋಗಾಭ್ಯಾಸ ಮಾಡಿಸುತ್ತೇನೆ’ ಎನ್ನುತ್ತಾರೆ ಮೈಸೂರಿನ ಯೋಗ ಶಿಕ್ಷಕಿ ಪ್ರಭಾ ಸತೀಶ್. ‘ಮನಸ್ಸು, ಬುದ್ಧಿ, ದೇಹ ಮೂರಕ್ಕೂ ಏಕಕಾಲದಲ್ಲಿ ಚೈತನ್ಯ ನೀಡುವ ಶಕ್ತಿ ಇರುವ ಯೋಗಾಭ್ಯಾಸ ಪ್ರತಿಯೊಬ್ಬರ ದೈನಂದಿನ ಚಟುವಟಿಕೆಯಾಗಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ಎಲ್ಲ ಅನಾರೋಗ್ಯದಿಂದ ಪಾರಾಗಲು ಇರುವ ಉಪಾಯ’ ಎನ್ನುತ್ತಾರೆ ಪ್ರಭಾ.

ಹಣ್ಣು– ತರಕಾರಿ ಮಾರುವ ಬಡಗಿ, ಚಾಟ್ಸ್‌ ಮಾರುವ ವಕೀಲ, ಟ್ಯಾಕ್ಸಿ ಓಡಿಸುವ ಸಿನಿಮಾ ನಟರು, ವಿದ್ಯಾರ್ಥಿಗಳಿರುವಲ್ಲಿ ಹೋಗಿ ಪಾಠ ಮಾಡುವ ಶಿಕ್ಷಕರು... ಭೇಷ್ ಎನ್ನಬೇಕು ಕಷ್ಟಕ್ಕೆ ಕುಸಿಯದ ಇವರ ಸಾಹಸಕ್ಕೆ. ‘ನಾನೆಂದರೆ ಹೀಗೆ’ ಎನ್ನುವ ಪರಿಧಿಯನ್ನು ಹಾಕಿಕೊಳ್ಳುವ ನಾವು ಸಾಂದರ್ಭಿಕವಾಗಿ ಅದನ್ನು ವಿಸ್ತರಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ಧೈರ್ಯ ಮಾಡಿದರೆ ಪ್ರತಿಯೊಬ್ಬರ ಬದುಕಿಗೂ ಹೇರಳ ಅವಕಾಶಗಳ ಹೆಬ್ಬಾಗಿಲು ತೆರೆದೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು