ಹೃದಯ ಸೂರೆಗೊಂಡ ಜೋಗ ವೈಭವ

7
ಏಕಾಂಗಿ ಪ್ರವಾಸ

ಹೃದಯ ಸೂರೆಗೊಂಡ ಜೋಗ ವೈಭವ

Published:
Updated:
Deccan Herald

30 ವರ್ಷಗಳ ಹಿಂದಿನ ಮಾತು. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸಿದ ಪರಿಣಾಮ ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿತ್ತು.  ಜೋಗ ಜಲಪಾತ ಮೈದುಂಬಿ ಧುಮುಕುತ್ತಿರುವ ಚಿತ್ರವನ್ನು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ನೋಡಿದ ಕೂಡಲೇ ‘ನಾಳೆ ದಿನ ಭಾನುವಾರ, ಜೋಗ ಜಲಪಾತ ನೋಡಲು ಹೋಗೊಣ’ ಎಂದು ನನ್ನ ಆಪ್ತ ಗೆಳೆಯರಿಗೆ ಹೇಳಿದೆ. ‘ಈ ವಾ‌ರ ಬೇಡ, ಮುಂದಿನ ವಾರ ಹೋಗೋಣ’ ಎಂದರು. ‘ಮುಂದಿನ ವಾರದ ಹೊತ್ತಿಗೆ ಮಳೆ ಕಡಿಮೆಯಾಗಿ ಜೋಗ ಜಲಪಾತದ ವೈಭವ ಕಡಿಮೆ ಆಗಿರುತ್ತದೆ. ನೀವು ಬಂದರೂ ಸಂತೋಷ, ಬರದಿದ್ದರೂ ಸಂತೋಷ. ನಾನಂತೂ ನಾಳೆ ಜೋಗ ಜಲಪಾತಕ್ಕೆ ಹೋಗಿಬರುವುದು ಖಚಿತ’ ಎಂದು ಹೇಳಿದೆ.

ಗೆಳೆಯರು ‘ಹೋಗಿ ಬಾ ಗೆಳೆಯಾ’ ಎಂದು ಬಿಟ್ಟರು. ಬೆಳಿಗ್ಗೆ ಆರುಗಂಟೆಗೆ ತಯಾರಾದ ನಾನು ಕಡೂರಿನಿಂದ ಶಿವಮೊಗ್ಗದ ಬಸ್ಸು ಹತ್ತಿದೆ. ಶಿವಮೊಗ್ಗ ಹೋಟೆಲಿನಲ್ಲಿ ಬಿಸಿ ಬಿಸಿ ದೋಸೆ ತಿಂದು, ಕಾಫಿ ಕುಡಿದು ಖಾಸಗಿ ಬಸ್ಸಿನಲ್ಲಿ ಸಾಗರಕ್ಕೆ ಹೋಗಿ ಇಳಿದೆ. ಹನ್ನೊಂದು ಗಂಟೆ ಆಗಿತ್ತು ಬಸ್ಸು ಹತ್ತಿ ಕಾರ್ಗಲ್‌ನಲ್ಲಿ ಇಳಿದೆ. ಭಾನುವಾರವಾದ್ದರಿಂದ ವಾಹನಗಳ ಸಾಲು ಮೈಲಿಗಟ್ಟಲೆ ಇತ್ತು.

ಸಣ್ಣಗೆ ಮಳೆ ಹನಿಯುತ್ತಿತ್ತು. ಸರಸರನೆ ಜಲಪಾತದ ಕಡೆಗೆ ನಡೆಯತೊಡಗಿದೆ. ಜೋಗ ಜಲಪಾತದ ಎದುರು ಹೋಗಿ ನಿಂತೆ. ಅಬ್ಬಾ! ರಾಜ , ರಾಣಿ, ರೋರರ್‌, ರಾಕೆಟ್‌!! ಬ್ರಿಟಿಷ್‌ ಅಧಿಕಾರಿ ಕಾರ್ಲಿನ್‌ ಎಂತಹ ಅರ್ಥಪೂರ್ಣ ಹೆಸರಿಟ್ಟಿದ್ದಾರೆ ಎನಿಸಿತು.

’ರಾಜಾ’ ಗಾಂಭೀರ್ಯದಿಂದ ಧುಮುಕುತ್ತಿದ್ದರೆ, ‘ರಾಣಿ’ ವೈಯಾರದಿಂದ ಧುಮುಕುತ್ತಿತ್ತು. ‘ರೋರರ್‌’ ಆರ್ಭಟಿಸುತ್ತಾ ಧುಮುಕುತ್ತಿತ್ತು. ರಾಕೆಟ್‌ ಶರವೇಗದಲ್ಲಿ ಧುಮುಕುತ್ತಿತ್ತು. ಕಣ್ಣು ಮಿಟುಕಿಸದೇ ಜಲಪಾತವನ್ನು ನೋಡುತ್ತಾ ಆನಂದಪಟ್ಟೆ. ಬಿಸಿ ಬಿಸಿ ಚಿತ್ರಾನ್ನ, ಉಪ್ಪಿಟ್ಟು ಮಾರಾಟ ಮಾಡುತ್ತಿದ್ದರು. ಅದನ್ನು ತಿಂದು ಬಿಸಿ ಕಾಫಿ ಕುಡಿದೆ. ಕೆಲವು ಕಾಲೇಜು ಹುಡುಗ, ಹುಡುಗಿಯರು ಜೋಗದ ಗುಂಡಿಗೆ ಇಳಿಯಲು ಹೋದರು. ನಾನೂ ಅವರೊಂದಿಗೆ ಸೇರಿಕೊಂಡು ಜೋಗದ ಗುಂಡಿಗೆ ಇಳಿದೆ. ಎಂಟನೂರ ಇಪ್ಪತ್ತೊಂಬತ್ತು ಅಡಿಗಳ ಎತ್ತರದಿಂದ ಧುಮುಕುವ ಜೋಗ ಜಲಪಾತದ ಅಡಿಯಲ್ಲಿ ನಿಂತು ಆನಂದಿಸಿದೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಎಲ್ಲರೂ ಜಲಪಾತದ ಗುಂಡಿಯಿಂದ ಮೇಲೆ ಹತ್ತತೊಡಗಿದರು. ನಾನು ಮೇಲೆ ಹತ್ತಿ ಬಂದೆ. 

ಸಾಗರ, ಸಾಗರ ಎಂದು ಖಾಸಗಿ ಬಸ್ಸಿನವರು ಕೂಗುತ್ತಿದ್ದರು. ಬಸ್ಸು ಹತ್ತಿ ಸಾಗರಕ್ಕೆ ಬಂದೆ. ಸಾಗರದಿಂದ ಶಿವಮೊಗ್ಗಕ್ಕೆ ಬಂದು ಹೋಟೆಲಿನಲ್ಲಿ ಊಟ ಮಾಡಿದೆ. ಶಿವಮೊಗ್ಗದಿಂದ ಕಡೂರಿಗೆ ಬಂದು ಇಳಿದೆ. ಜೋಗ ಜಲಪಾತದ ಒಂದು ದಿನದ ಏಕಾಂಗಿ ಪ್ರವಾಸ ಮನಸ್ಸಿಗೆ ಮುದ ನೀಡಿತ್ತು. ಆ ನಂತರ ನಾನು ಬಹಳಷ್ಟು ಭಾರಿ ಜೋಗ ಜಲಪಾತ ನೋಡಿದೆನಾದರೂ  ಮೂವತ್ತು ವರುಷಗಳ ಹಿಂದಿನ ರಭಸ ಜೋಗ ಜಲಪಾತಕ್ಕೆ ಈಗ ಇಲ್ಲ ಎನಿಸುತ್ತದೆ.
-ಎಸ್‌.ಎನ್‌, ಕೃಷ್ಣಮೂರ್ತಿ, ಕಡೂರು, ಚಿಕ್ಕಮಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !