ಅನ್ನವನ್ನು ಕಂಡುಹಿಡಿದವರಾರು?

7
ಬೆಳದಿಂಗಳು

ಅನ್ನವನ್ನು ಕಂಡುಹಿಡಿದವರಾರು?

Published:
Updated:

ಅನ್ನವನ್ನು ಕಂಡುಹಿಡಿದವರಾರು?
ನಾವೆಲ್ಲರೂ ಅಭಿಮಾನಶಾಲಿಗಳು. ಎಲ್ಲರೂ ನಮ್ಮನ್ನು ಗೌರವಿಸಬೇಕು, ಗುರುತಿಸಬೇಕು ಎಂದು ಸದಾ ಬಯಸುತ್ತಿರುತ್ತೇವೆ. ನಮ್ಮನ್ನು ವ್ಯಕ್ತಿಯಾಗಿಯೂ ಪ್ರಶಂಸಿಸಬೇಕು, ನಾವು ಮಾಡುವ ಕೆಲಸವನ್ನೂ ಪ್ರಶಂಸಿಸಬೇಕು. ಒಟ್ಟಿನಲ್ಲಿ ‘ನಾನು’ ಮತ್ತು ‘ನಾನು ಮಾಡಿದ್ದು’ – ಇಷ್ಟನ್ನು ಎಲ್ಲರೂ ಗುರುತಿಸಬೇಕು, ಹೊಗಳಬೇಕು. ಆದರೆ ವಾಸ್ತವವಾಗಿ ಜಗತ್ತು ನಮ್ಮಿಂದಲೇ, ನಮ್ಮ ಕಾರ್ಯಗಳಿಂದಲೇ ನಡೆಯುತ್ತಿದೆಯೆ? ಮಂಕುತಿಮ್ಮನ ಕಗ್ಗದ ಮಾತೊಂದು ಹೀಗಿದೆ:

ಅಕ್ಕಿಯೊಳಗನ್ನವನು ಮೊದಲಾರು ಕಂಡವರು? |
ಅಕ್ಕರದ ಬರಹಕ್ಕೆ ಮೊದಲಿಗನದಾರು? |
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ |
ದಕ್ಕುವುದೆ ನಿನಗೆ ಜಸ? – ಮಂಕುತಿಮ್ಮ |

ನಾವು ನಿತ್ಯವೂ ಅನ್ನವನ್ನು ತಿನ್ನುತ್ತೇವೆ. ಆದರೆ ಮನುಷ್ಯನು ಸೃಷ್ಟಿಯ ಮೊದಲಿನಿಂದಲೂ ಅನ್ನವನ್ನೇ ತಿನ್ನುತ್ತಿಲ್ಲ. ಮೊದಲಿಗೆ ಅವನು ಪ್ರಾಣಿಯಂತೆ ಹಸಿಮಾಂಸವನ್ನೇ ತಿನ್ನುತ್ತಿದ್ದ. ಮಾಂಸವನ್ನು ಬೇಯಿಸಿ ತಿನ್ನುವುದನ್ನು ಕಲಿತುಕೊಳ್ಳಲು ಅವನಿಗೆ ಸಾವಿರಾರು ವರ್ಷಗಳೇ ಹಿಡಿಸಿವೆಯೆನ್ನಿ! ಇನ್ನು ಅವನು ಕೃಷಿಯನ್ನು ಕಲಿತು, ಭತ್ತವನ್ನು ಬೆಳೆದು, ಅದರ ಮೂಲಕ ಅಕ್ಕಿಯನ್ನು ಪಡೆದು, ಅದನ್ನು ಅನ್ನವನ್ನಾಗಿಸುವ ಕೌಶಲವನ್ನು ಸಂಪಾದಿಸಲು ತುಂಬ ಶ್ರಮಪಟ್ಟಿರಬೇಕು; ಹಲವು ಶತಮಾನಗಳನ್ನೇ ಅದಕ್ಕಾಗಿ ಅವನು ಕಳೆದಿರಬಹುದು. ಮಾತ್ರವಲ್ಲ, ಅನ್ನವನ್ನು ಮಾಡುವ ವಿಧಾನವನ್ನು ಒಬ್ಬನೇ ವ್ಯಕ್ತಿ ಆವಿಷ್ಕರಿಸಿದನೋ? ಅಥವಾ ಹಲವರ ಸಾಮೂಹಿಕ ಪ್ರಯತ್ನದಿಂದ ಇದು ಸಾಧ್ಯವಾಯಿತೋ?  ಹೀಗೇ – ಎಂದು ನಿರ್ಧಾರದಿಂದ ಹೇಳುವುದು ಕಷ್ಟ. ಎಷ್ಟೋ ಶತಮಾನಗಳಿಂದ ನಮ್ಮ ಪೂರ್ವಜರು ಅನ್ನವನ್ನು ತಿನ್ನುವುದನ್ನಂತೂ ರೂಢಿಸಿಕೊಂಡಿದ್ದಾರೆ. ನಮ್ಮೆಲ್ಲರ ನಿತ್ಯವಿಧಿಯೇ ಆಗಿದೆ. ಆದರೆ ಮೊದಲಿಗೆ ಅನ್ನವನ್ನು ಮಾಡಿದವರು ಯಾರು? ನಮಗೆ ಗೊತ್ತಿಲ್ಲ. ಏಕೆ ಗೊತ್ತಿಲ್ಲ ಎಂದರೆ ಅದನ್ನು ಯಾರೂ ಲೆಕ್ಕ ಇಟ್ಟಿಲ್ಲ!

ಅನ್ನದಂತೆಯೇ ನಮಗೆ ಇಂದು ನಿತ್ಯದ ಅನಿವಾರ್ಯವಾಗಿರುವುದು ಎಂದರೆ ‘ಅಕ್ಷರ’. ನಮ್ಮ ಜೀವನವನ್ನು ಪೂರ್ಣವಾಗಿ ಆವರಿಸಿಕೊಂಡಿರುವ ಸಂಗತಿ ಎಂದರೆ ಅಕ್ಷರಜ್ಞಾನ. ಓದು–ಬರಹ ಇಲ್ಲದೆ ನಮ್ಮ ಜೀವನವೇ ಇಲ್ಲ. ನಮ್ಮ ಜೀವನದ ಎಲ್ಲ ಆಯಾಮಗಳಲ್ಲೂ ಅವುಗಳ ಬಳಕೆ ಅನಿವಾರ್ಯವಾಗಿದೆ. ಅಷ್ಟೇಕೆ, ನಮ್ಮ ಅಸ್ತಿತ್ವ ಕೂಡ ಅಕ್ಷರಕ್ಕೆ ಅಧೀನವಾಗಿದೆ. ಬರಹ ಇಲ್ಲದ ಜೀವನವನ್ನು ನಾವು ಊಹಿಸಿಕೊಳ್ಳಲೂ ಅಸಾಧ್ಯ. ಇಂದು ನಾವು ಬಳಸುತ್ತಿರುವ ಲಿಪಿ, ಅದು ಯಾವ ಭಾಷೆಯ ಲಿಪಿಯಾದರೂ, ಈಗಿನ ಸ್ವರೂಪದಲ್ಲಿದ್ದಂತೆಯೇ ಆರಂಭದಿಂದಲೂ ಇತ್ತು ಎನ್ನಲಾಗದು. ಪ್ರತಿಭಾಷೆಯ ಲಿಪಿಯಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಲೇ ಬಂದು, ಇಂದಿನ ರೂಪಕ್ಕೆ ಬಂದು ನಿಂತಿದೆ. ಅದು ಸರಿ, ಮೊದಲ ಬಾರಿಗೆ ಅಕ್ಷರವನ್ನು ಕಂಡುಹಿಡಿದವರು ಯಾರು? ಅದನ್ನು ಮೊದಲಿಗೆ ಬಳಸಿದವರು ಯಾರು? ನಮಗೆ ಗೊತ್ತಿಲ್ಲ! ಕಾರಣ, ಯಾರೂ ಅದರ ಲೆಕ್ಕ ಇಟ್ಟಿಲ್ಲ!

ನಮ್ಮ ಮೂಲಭೂತ ಆವಶ್ಯಕತೆಗಳನ್ನು ಕೊಡುಗೆಗಳಾಗಿ ನೀಡಿದವರನ್ನೇ ಈ ಜಗತ್ತು ಇಂದು ಜ್ಞಾಪಿಸಿಕೊಳ್ಳುತ್ತಿಲ್ಲ. ಹೀಗಿರುವಾಗ ನಮ್ಮ ಸಾಧನೆಯನ್ನು ಗುರುತಿಸಿ, ಅದನ್ನು ಎಲ್ಲರೂ ಪ್ರಶಂಸಿಸಿ, ನೆನಪಿನಲ್ಲಿರಿಸಿಕೊಳ್ಳಬೇಕೆಂದು ಹಂಬಲಿಸುವುದು ಎಷ್ಟು ಸರಿ?

ಹೀಗೆಂದು ನಮ್ಮ ಯಾವ ಸಾಧನೆಯನ್ನು ಯಾರೂ ಗುರುತಿಸುವುದಿಲ್ಲ. ಸ್ಮರಿಸಿಕೊಳ್ಳುವುದಿಲ್ಲ – ಎಂದೇನೂ ಇಲ್ಲ; ಎಷ್ಟೋ ವಿಜ್ಞಾನಿಗಳನ್ನು, ಸಂಶೋಧಕರನ್ನು ನಾವಿಂದು ಗೌರವದಿಂದಲೇ ನೆನಪಿಸಿಕೊಳ್ಳುತ್ತಿದ್ದೇವೆ. ಆದರೆ ಈ ವಿಜ್ಞಾನಿಯ ಸಾಧನೆಗೆ ಕೇವಲ ಅವನೊಬ್ಬನ ಪರಿಶ್ರಮವೇ ಕಾರಣವಾಗಿರುವುದಿಲ್ಲ; ಹತ್ತುಹಲವರ  ಸಾಧನೆ–ಕೊಡುಗೆಗಳ ಮೆಟ್ಟಿಲುಗಳನ್ನು ಏರಿ ಬಂದೇ ಅವನು ಮಹಾಸೌಧದ ಶಿಖರವನ್ನು ಏರಿರುತ್ತಾನೆ. ಈ ಅರಿವು ಅವನಿಗೆ ಇರಬೇಕು, ಅಷ್ಟೆ! ಇದನ್ನೇ ಕಗ್ಗ ನಮಗೆ ಹೇಳುತ್ತಿರುವುದು. ಆದುದರಿಂದಲೇ ‘ನಾನು ಕರ್ತೃ ಅಲ್ಲ’ ಎಂಬ ಮನೋಧರ್ಮವನ್ನು ರೂಢಿಸಿಕೊಳ್ಳಬೇಕೆಂದು ಪರಂಪರೆ ಹೇಳುತ್ತಬಂದಿರುವುದು. ನಾವು ಮಾಡುವ ಎಲ್ಲ ಕೆಲಸಕ್ಕೂ ಆಧಾರವಾಗಿ ಮಹಾತತ್ತ್ವವೊಂದು ಇರುತ್ತದೆ. ಇದನ್ನೇ ಕೆಲವರು ‘ದೇವರು’ ಎಂದರು, ಮತ್ತೆ ಕೆಲವರು ‘ಆತ್ಮ’ ಎಂದರು, ಮತ್ತೆ ಕೆಲವರು ‘ಚೈತನ್ಯ’ ಎಂದರು. ಒಟ್ಟಿನಲ್ಲಿ ಎಲ್ಲದಕ್ಕೂ ಮೂಲಕಾರಣವೊಂದು ಇದೆ ಎಂದಾಯಿತು. ಆದಕಾರಣ ನಾವು ಮಾಡುವ ಎಲ್ಲ ಕಾರ್ಯಗಳಿಗೂ ಇನ್ನೊಂದು ‘ಅಗೋಚರ’ಶಕ್ತಿ ಕಾರಣವಾಗಿರುತ್ತದೆ. ಈ ಶಕ್ತಿ ಸೃಷ್ಟಿಯ ಹಿನ್ನೆಲೆಯಲ್ಲಿ ದೇವರು, ಚೈತನ್ಯ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುತ್ತದೆ. ಈ ಸಂಗತಿಯನ್ನು ತುಂಬ ವ್ಯಾವಾಹರಿಕವಾಗಿಯೂ ವಿಶ್ಲೇಷಿಸಬಹುದು. ನಾವು ಮಾಡಿದ ಸಾಧನೆಗೆ ನಾವಷ್ಟೆ ಕಾರಣರೇ? ನಮ್ಮನ್ನು ಹೆತ್ತವರು, ಗುರುಗಳು, ಸ್ನೇಹಿತರು, ಬಂಧುಗಳು –  ಹೀಗೆ ಹಲವರ ನೆರವಿನಿಂದಲೇ ಅಲ್ಲವೆ ನಮ್ಮ ಸಾಧನೆ ಸಾಧ್ಯವಾಗಿರುವುದು? ಹೀಗಿರುವಾಗ ನಮ್ಮ ಸಾಧನೆಯ ಬಗ್ಗೆ ಯಾರು, ಯಾರನ್ನು ಪ್ರಶಂಸಿಸಬೇಕು – ಒಮ್ಮೆ ಯೋಚಿಸಿ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !