ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ: ತುಳು ಸಂಸ್ಕೃತಿಯ ಅನನ್ಯ ದರ್ಶನ

Last Updated 20 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ತುಳುವ ದರ್ಶನ
ಲೇ: ಪೀಟರ್‌ ಜೆ ಕ್ಲಾಸ್‌
ಕನ್ನಡಕ್ಕೆ: ಪ್ರೊ ಎ.ವಿ. ನಾವಡ, ಪ್ರೊ. ಸುಭಾಶ್ಚಂದ್ರ
ಪ್ರ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ

ಕಡಲ ತಡಿಯಲ್ಲಿರುವ ತುಳುಭಾಷಾ ಪ್ರದೇಶಕ್ಕೆ ಅದರ ಭೌಗೋಳಿಕ ಕಾರಣದಿಂದಾಗಿ ಕಡಲಾಚೆಯ ಸಂಪರ್ಕ ಹಲವು ಶತಮಾನಗಳಿಂದಲೂ ಇತ್ತು. ಟಿಪ್ಪುವಿನ ಪತನದ (1799) ನಂತರ ಅದು ಕ್ಷಿಪ್ರವಾಗಿ ವಸಾಹತೀಕರಣಕ್ಕೆ ಒಳಪಟ್ಟಿತು. ಇದು ಉಂಟುಮಾಡಿದ ಅನೇಕ ಪರಿಣಾಮಗಳಲ್ಲಿ ತುಳು ಅಧ್ಯಯನಗಳಿಗೆ ಸಿಕ್ಕ ಅಂತರರಾಷ್ಟ್ರೀಯ ಮನ್ನಣೆಯೂ ಒಂದು. ಪ್ರಸ್ತುತ ಅನುವಾದಿತ ಕೃತಿ ‘ತುಳುವ ದರ್ಶನ’ ಅದಕ್ಕೊಂದು ಒಳ್ಳೆಯ ಉದಾಹರಣೆ.

ಈ ಪುಸ್ತಕದ 14 ಲೇಖನಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಬರೆದ ಪ್ರೊ. ಪೀಟರ್‌ ಜೆ ಕ್ಲಾಸ್‌ ಅವರು ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿಯ ಮಾನವಶಾಸ್ತ್ರದ ಪ್ರಾಧ್ಯಾಪಕರು ಹಾಗೂ ಜಾನಪದ ವಿದ್ವಾಂಸರು. ಎ.ಕೆ. ರಾಮಾನುಜನ್‌ ಅವರ ಪ್ರೇರಣೆಯಿಂದ 1967ರಷ್ಟು ಹಿಂದೆ ತುಳುನಾಡಿಗೆ ಬಂದ ಪೀಟರ್‌, ಸುಮಾರು 35 ವರ್ಷಗಳ ಕಾಲ ತುಳು ಭಾಷೆ ಮತ್ತು ಸಂಸ್ಕೃತಿಯೊಡನೆ ನಿರಂತರವಾಗಿ ಸಂವಾದಿಸುತ್ತ, ಅದರ ಸೂಕ್ಷ್ಮಗಳನ್ನು ಮತ್ತು ಅನನ್ಯತೆಯನ್ನು ವಿದ್ವತ್‌ ಲೋಕಕ್ಕೆ ಪರಿಚಯಿಸುತ್ತಲೇ ಹೋದರು.

ತುಳುವಿನ ಬಗೆಗೆ ಅವರು ಬರೆದ ಲೇಖನಗಳ ಒಟ್ಟು ಸಂಖ್ಯೆ ಐವತ್ತನ್ನು ಮೀರಬಹುದು ಎಂದು ಊಹಿಸಲಾಗಿದೆ. ಆದರೆ, ಆ ಎಲ್ಲಾ ಲೇಖನಗಳುಳ್ಳ ಪುಸ್ತಕವೊಂದನ್ನು ಅವರೂ ಪ್ರಕಟಿಸಲಿಲ್ಲ, ಇತರರೂ ಪ್ರಕಟಿಸುವ ಉತ್ಸಾಹ ತೋರಿಸಲಿಲ್ಲ. ಈ ಕೊರತೆಯನ್ನು ಹಿರಿಯ ವಿದ್ವಾಂಸ ಪ್ರೊ. ಎ.ವಿ. ನಾವಡರು ಇದೀಗ ನೀಗಿಸಿದ್ದಾರೆ. ಅವರು ತುಂಬ ಶ್ರಮವಹಿಸಿ, ಎಲ್ಲೆಲ್ಲೋ ಹರಡಿಹೋಗಿದ್ದ ಮೂಲ ಲೇಖನಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಮುಖ್ಯವಾದವುಗಳನ್ನು ಅಯ್ದು, ಸುಲಲಿತವಾಗಿ ಕನ್ನಡಕ್ಕೆ ಅನುವಾದಿಸಿ ಪ್ರಸ್ತುತ ಸಂಪುಟವನ್ನು ಸಿದ್ಧಪಡಿಸಿದ್ದಾರೆ. ಅವರ ಪರಿಶ್ರಮದಿಂದಾಗಿ ನಮಗಿವತ್ತು ಪೀಟರ್‌ ಅವರ ಪ್ರಮುಖ ಲೇಖನಗಳು ಒಂದೆಡೆ ಸಿಗುವಂತಾಗಿದೆ. ಅವರ ಮೂಲ ಲೇಖನಗಳೂ ಒಂದು ಸಂಪುಟವಾಗಿ ಬರಬೇಕಾದ್ದು ಕೂಡ ಬಹಳ ಅವಶ್ಯಕ.

ತುಳು ಸಂಸ್ಕೃತಿಯ ಅನೇಕ ಮುಖಗಳಲ್ಲಿ ಪೀಟರ್‌ ಅವರಿಗಿದ್ದ ಆಸಕ್ತಿ ಪಾಡ್ದನಗಳ ಕುರಿತಾದುದು. ಮಾನವ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ತುಳು ಜಾನಪದದ ವಿಷಯಕ್ಕೆ ಬಂದಾಗ ರಾಚನಿಕ ಶಾಸ್ತ್ರದಿಂದ ಪ್ರೇರಣೆ ಪಡೆಯುತ್ತಾರೆಯಾದರೂ ‘ತುಳುವ ಸಂಶೋಧನೆಯು ಮುಂದಿನ ದಿನಗಳಲ್ಲಿ ಮಾನವ ಶಾಸ್ತ್ರೀಯ ಹಿನ್ನೆಲೆಯಲ್ಲಿ ಸಾಗುವುದು ಅವಶ್ಯವೆಂದು ನಾನು ಭಾವಿಸುತ್ತೇನೆ’ (ಪುಟ: 287) ಎಂದೇ ಹೇಳುತ್ತಾರೆ. ಈ ಮಾತಿನ ಔಚಿತ್ಯ ಮತ್ತು ಉಪಯುಕ್ತತೆಯನ್ನು ಸಾರುವಂತೆ ಇಲ್ಲಿನ ಲೇಖನಗಳನ್ನು ಅವರು ಬರೆದಿದ್ದಾರೆ. ಮಾನವ ಕುಲ ವಿವರಣ ಶಾಸ್ತ್ರವು (ಎತ್ನೋಗ್ರಫಿ) ಜಾನಪದ ಅಧ್ಯಯನಕಾರರಿಗೆ ಎಷ್ಟೊಂದು ಒಳನೋಟಗಳನ್ನು ಕೊಡಬಲ್ಲುದು ಎಂಬುದು ಸ್ಪಷ್ಟವಾಗಬೇಕಾದರೆ ಸಂಶೋಧಕರು ಇಲ್ಲಿನ ಲೇಖನಗಳನ್ನು ಓದಬೇಕು. ದೈವಾವೇಶ, ದೈವ ಪಾತ್ರಿತ್ವ, ದೈವ ಮಾಧ್ಯಮ, ಮತಾಚರಣೆ, ಅರಸು ಆರಾಧನೆ, ಜೋಗ (ಲೌಕಿಕ), ಮಾಯ (ಅಲೌಕಿಕ), ವೀರತ್ವ, ದೈವಗಳ ಶಿಕ್ಷಕ-ರಕ್ಷಕ ಗುಣಗಳು, ತುಳು ಪುರಾಣಗಳು, ತುಳು ಬಂಧುತ್ವ, ಭಿನ್ನ ಪಠ್ಯಗಳ ಪರಿಕಲ್ಪನೆ ಮತ್ತಿತರ ವಿಷಯಗಳ ಕುರಿತು ಇಲ್ಲಿ ಆಳವಾದ ಮತ್ತು ಗಂಭೀರವಾದ ವಿಶ್ಲೇಷಣೆಗಳಿವೆ.

ಜೊತೆಗೆ ಮೈಂದಲ, ಸಿರಿ, ಪರ್ಮಲೆ ಬಲ್ಲಾಳ, ಬಿರ್ಮೆರ್‌ ಮೊದಲಾದ ತುಳು ದೈವಗಳ ಕುರಿತು ಅಪೂರ್ವ ಮಾಹಿತಿಗಳಿವೆ. ಪೀಟರ್‌ ಅವರಿಗೆ ಈ ಮಾಹಿತಿಗಳ ಅನನ್ಯತೆಯನ್ನು ಭಾರತದ ಮಾರ್ಗ ಪರಂಪರೆಯ ಜೊತೆಗೂ, ಜಗತ್ತಿನ ಇತರೆಡೆಯ ಮೌಖಿಕ ಪರಂಪರೆಗಳ ಜೊತೆಗೂ ತೌಲನಿಕವಾಗಿ ಪರಿಶೀಲಿಸಲು ಸಾಧ್ಯವಾಗಿರುವುದರಿಂದ ತುಳು ಸಂಸ್ಕೃತಿಯ ಅನನ್ಯತೆಯ ಬಗೆಗೆ ನಮಗೆ ಅನೇಕ ಒಳನೋಟಗಳು ಸಿಗುತ್ತವೆ.

ಇವತ್ತು ತುಳು ಸಂಸ್ಕೃತಿ ವೇಗವಾಗಿ ಬದಲಾಗುತ್ತಿದೆ. ಸಂಶೋಧನೆಗಳು ಕಳೆಗುಂದುತ್ತಿವೆ. ಇಂಥ ಸಂದರ್ಭದಲ್ಲಿ ‘ತುಳುವ ದರ್ಶನ’ದಂತಹ ಕೃತಿಯನ್ನು ಓದುವುದು ಬಹಳ ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT