ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಕನ್ನಡದ ವಿವೇಕ’ದೊಂದಿಗೆ ನಡಿಗೆ–ಕೊಡುಗೆ

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೆವರು ಮತ್ತು ದೇವರು ಎನ್ನುವ ವಿರುದ್ಧಾರ್ಥಕ ಪದಗಳು ಕೂಡಿಕೊಂಡ ‘ಬೆವರು ನನ್ನ ದೇವರು’ ಎನ್ನುವ ಶೀರ್ಷಿಕೆ, ಬರಗೂರು ರಾಮಚಂದ್ರಪ್ಪನವರ ಒಟ್ಟಾರೆ ಬರವಣಿಗೆಯ ಆಶಯವನ್ನು ಅರ್ಥ ಮಾಡಿಕೊಳ್ಳಲು ಲೇಖಕರೇ ಒದಗಿಸಿಕೊಟ್ಟಿರುವ ಸನ್ನೆಗಳಂತಿವೆ. ಬೆವರದಿರುವುದು ದೇವರ ಲಕ್ಷಣಗಳಲ್ಲೊಂದಷ್ಟೇ. ಆದರೆ, ಬರಗೂರರು ಪ್ರತಿಪಾದಿಸುವ ದೇವರು ಬೆವರಿನ ಸ್ವರೂಪಿ. ಈ ದೇಶದ ಸಂಸ್ಕೃತಿ ಮತ್ತು ಬೆವರು ನಿಂತಿರುವುದು ಬೆವರಿನ ಧರ್ಮದ ಮೇಲೆ ಎನ್ನುವ ವಿಶಿಷ್ಟ ತಿಳಿವಳಿಕೆ ಬರಗೂರರ ಒಟ್ಟಾರೆ ಸಾಹಿತ್ಯದ ಹಿಂದಿರುವ ತಾತ್ವಿಕತೆ. ಕಾಯಕವೇ ಕೈಲಾಸ ಎನ್ನುವ ಶರಣಪ್ರಜ್ಞೆ, ಬೆವರು ಮತ್ತು ದೇವರನ್ನು ಪ್ರತ್ಯೇಕವಾಗಿ ನೋಡದೆ, ಬೆವರು ಮತ್ತು ದೇವರನ್ನು ಏಕರೂಪದಲ್ಲಿ ನೋಡುವ ‘ಬೆವರೇ ನನ್ನ ದೇವರು’ ಎನ್ನುವ ಪರಿಕಲ್ಪನೆಯಲ್ಲೂ ಇದೆ. ಬದುಕಿನ ನಂಬಿಕೆ ಹಾಗೂ ಕಾಯಕಕ್ಕೆ ತಕ್ಕಂತೆ ದೇವರನ್ನು ಪರಿಭಾವಿಸುವ ಈ ಕ್ರಮ ಗಾಂಧಿ ಹಾಗೂ ಶಿವರಾಮ ಕಾರಂತರ ಚಿಂತನೆಗಳಿಗೆ ಸಮೀಪವಾದುದು.

ಶ್ರಮದ ಶಕ್ತಿಯನ್ನು, ಶ್ರಮಿಕರ ಮಹತ್ವವನ್ನು ಬಿಂಬಿಸುತ್ತಿರುವ ಬರಗೂರರ ಬರವಣಿಗೆ ‘ಶ್ರಮಿಕ ಭಾರತ’ವನ್ನು ತನ್ನ ಪ್ರಧಾನ ಕಾಳಜಿಯನ್ನಾಗಿಸಿಕೊಂಡಿದೆ. ‘ಬೆವರಿನ ಇಂಡಿಯಾ’ ಕವಿತೆಯಲ್ಲಿ – ‘ಬೆವರಲಿ ಬರೆದ ಸಮತೆಯ ಭಾರತ’ ಎನ್ನುವ ಸಾಲು, ‘ಜನ ಕನ್ನಡ’ ಗೀತೆಯ ‘ಬಡವರ ಬೆವರಲ್ಲಿ ಉರಿಯುವ ಕನ್ನಡ’ ಎನ್ನುವ ಮಾತು – ಬೆವರನ್ನು ಸಮಾನತೆ ಮತ್ತು ರಾಷ್ಟ್ರಪ್ರಜ್ಞೆಯ ರೂಪದಲ್ಲಿ ಕಾಣುವ ಪ್ರಯತ್ನಗಳಾಗಿವೆ. ಕಥೆ, ಕವಿತೆ, ಕಾದಂಬರಿ, ಲೇಖನ, ಸಿನಿಮಾ – ಬರಗೂರರ ಎಲ್ಲ ಕೃತಿಗಳಲ್ಲಿಯೂ ಬೆವರನ್ನು ನೆಚ್ಚಿಕೊಂಡ ಜನಪದರೇ ಮುಂಚೂಣಿಯಲ್ಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಬೆವರನ್ನು ಒಂದು ಮೌಲ್ಯವನ್ನಾಗಿ ಪ್ರಧಾನವಾಗಿ ಚಲಾವಣೆಗೆ ತಂದ ಮುಖ್ಯ ಲೇಖಕರು ರಾಮಚಂದ್ರಪ್ಪನವರು ಎನ್ನುವುದರಲ್ಲಿ ಅನುಮಾನವಿಲ್ಲ.

14 ಸಂಪುಟಗಳ ಐದು ಸಾವಿರಕ್ಕೂ ಹೆಚ್ಚು ಪುಟಗಳ ಬರಗೂರರ ಬರವಣಿಗೆಯನ್ನು ಎರಡು ರೂಪಗಳಲ್ಲಿ ಗುರ್ತಿಸಬಹುದು. ಒಂದು, ಸೃಜನಶೀಲ ಬರಹಗಾರನ ಅಭಿವ್ಯಕ್ತಿಯ ರೂಪ. ಮತ್ತೊಂದು, ಸಾಮಾಜಿಕ ಕಾಳಜಿಯ ಚಿಂತಕನ ಅಭಿವ್ಯಕ್ತಿ. ಈ ಎರಡೂ ರೂಪಗಳ ಬರವಣಿಗೆ ಸಂಖ್ಯೆಯ ದೃಷ್ಟಿಯಿಂದ ಹೆಚ್ಚೂಕಡಿಮೆ ಸಮ ಪ್ರಮಾಣದಲ್ಲಿ ಇದೆಯಾದರೂ, ಈ ಸಮಗ್ರ ಸಾಹಿತ್ಯ ಓದುಗರ ಮನಸ್ಸಿನಲ್ಲಿ ಬರಗೂರರನ್ನು ನಿಲ್ಲಿಸುವುದು ಚಿಂತಕರನ್ನಾಗಿಯೇ. ಕಥೆ, ಕಾದಂಬರಿ, ಕವಿತೆಗಳನ್ನು ಬರಗೂರರು ಸಾಕಷ್ಟು ಸಂಖ್ಯೆಯಲ್ಲಿ ರಚಿಸಿದ್ದಾರಾದರೂ, ಆ ಕೃತಿಗಳು ಹಾಗೂ ಸಿನಿಮಾಗಳು ಕೂಡ ಅವರ ಸಾಮಾಜಿಕ ಚಿಂತನೆಯ ರೂಪಗಳೇ ಆಗಿವೆ. ತಮ್ಮ ಚಿಂತನೆಗಳ ಅಭಿವ್ಯಕ್ತಿಗಾಗಿ ಬರಗೂರರು ಭಿನ್ನ ಮಾಧ್ಯಮಗಳನ್ನು ಬಳಸಿಕೊಂಡಿದ್ದರೂ, ಮಾಧ್ಯಮದ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಒಳಗೊಳ್ಳುವುದಕ್ಕಿಂತಲೂ ಮುಖ್ಯವಾಗಿ ಅವರ ಪ್ರಧಾನ ಕಾಳಜಿ ಜನಪರ ಚಿಂತನೆಯೇ ಆಗಿದೆ. ಅಂದರೆ, ಬರಗೂರರ ಕೃತಿಗಳು ಕಲಾಕೃತಿಗಳಾಗಿ ಯಶಸ್ವಿಯಾಗಿಲ್ಲ ಎಂದರ್ಥವಲ್ಲ. ಬಿಡಿ ಬಿಡಿಯಾಗಿ ಕಲಾಕೃತಿಗಳಾಗಿ ಕಾಣಿಸುವ ಆ ಕೃತಿಗಳು, ಒಟ್ಟಂದದಲ್ಲಿ ಬರಗೂರರ ಚಿಂತನಶೀಲತೆಯನ್ನೇ ಧ್ವನಿಸುತ್ತಿವೆ ಎನ್ನುವುದನ್ನು ಗಮನಿಸಬೇಕು.

ಗಾಂಧಿ, ಬರಗೂರರನ್ನು ಮತ್ತೆ ಮತ್ತೆ ಕಾಡಿರುವ ಕಾಡುತ್ತಿರುವ ಚೈತನ್ಯ. ವೈಚಾರಿಕ ಬರಹಗಳು, ಕಾದಂಬರಿ, ಸಿನಿಮಾ – ಹೀಗೆ ಹಲವು ರೂಪಗಳಲ್ಲಿ ಕಾಣಬಹುದಾದ ಗಾಂಧಿಯೊಂದಿಗಿನ ಅನುಸಂಧಾನವನ್ನು, ಬರಗೂರರ ಒಟ್ಟಾರೆ ಬರವಣಿಗೆಯಲ್ಲಿರುವ ಶಿಸ್ತು–ಸಂಯಮ–ಅಧ್ಯಯನದಲ್ಲೂ ಕಾಣಬಹುದು. ರಾಜ್‌ಕುಮಾರ್‌ ಬರಗೂರರನ್ನು ಸೆಳೆದಿರುವ ಮತ್ತೊಂದು ವ್ಯಕ್ತಿತ್ವ. ಗಾಂಧಿ, ಅಂಬೇಡ್ಕರ್‌, ರಾಜ್‌ರಂಥ ವ್ಯಕ್ತಿತ್ವಗಳು ಬರಗೂರರನ್ನು ಆಕರ್ಷಿಸಲಿಕ್ಕೆ ಕಾರಣ, ಆ ವ್ಯಕ್ತಿತ್ವಗಳ ಸಾಧನೆ ಹಾಗೂ ಬದುಕಿನ ದಾರಿಗಳಾಗಿರುವಂತೆಯೇ ಅವರು ಶ್ರಮ ಸಂಸ್ಕೃತಿಗೆ ಹತ್ತಿರವಾಗಿರುವುದೂ ಆಗಿದೆ.

ಸಾಮಾಜಿಕ ವಿದ್ಯಮಾನಗಳ ಬಗ್ಗೆ ಸಮಕಾಲೀನ ಸಂದರ್ಭದಲ್ಲಿ ಕನ್ನಡದ ಬಹುಮುಖ್ಯ ಸೃಜನಶೀಲ ಸ್ಪಂದನ–ಪ್ರತಿಕ್ರಿಯೆಯ ರೂಪದಲ್ಲಿ ಬರಗೂರರನ್ನು ಗುರ್ತಿಸಬಹುದು ಎನ್ನುವುದಕ್ಕೆ ಅವರ ಅಂಕಣಗಳು, ಸಾಮಾಜಿಕ–ರಾಜಕಾರಣ–ಭಾಷೆ–ಶಿಕ್ಷಣ–ಸಂಸ್ಕೃತಿಗೆ ಸಂಬಂಧಿಸಿದ ಬರಹಗಳು ಉದಾಹರಣೆಯಂತಿವೆ. ಈ ಬರಹಗಳನ್ನು ಸಾಂದರ್ಭಿಕ ಚೌಕಟ್ಟಿನಾಚೆಗೂ, ಕರ್ನಾಟಕದ ಚರಿತ್ರೆ–ವರ್ತಮಾನಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನಿಸಬಹುದಾಗಿದೆ. ಒಳನೋಟ, ಮಾಹಿತಿ ಹಾಗೂ ವಿಮರ್ಶೆ–ವಿಶ್ಲೇಷಣೆಗಳ ಹದವಾದ ಸಮೀಕರಣ ಸಾಧ್ಯವಾಗಿರುವುದು ಬರಗೂರರ ಬರಹಗಳಿಗೆ ವಿಶಿಷ್ಟ ಹೊಳ‍ಪನ್ನು ತಂದುಕೊಟ್ಟಿದೆ.

ಇಲ್ಲಿನ ಹದಿನಾಲ್ಕು ಸಂಪುಟಗಳು ಬರಗೂರರ ಬರವಣಿಗೆಯ ಸಾಮರ್ಥ್ಯವನ್ನು ಸೂಚಿಸುವಂತೆಯೇ ಬಹುಮುಖಿ ಆಸಕ್ತಿ ಮತ್ತು ಪ್ರಯೋಗಶೀಲತೆಯ ಹಂಬಲವನ್ನೂ ಕಾಣಿಸುವಂತಿವೆ. ಸಾಹಿತ್ಯ–ಸಂಸ್ಕೃತಿ (2 ಸಂಪುಟ), ಸಾಮಾಜಿಕ–ರಾಜಕಾರಣ, ಭಾಷೆ–ಶಿಕ್ಷಣ–ಸಿನಿಮಾ, ಅಂಕಣ ಬರಹಗಳು (2 ಸಂಪುಟ), ಪುಸ್ತಕಾವಲೋಕನ (2 ಸಂಪುಟ), ಕಥೆ–ನೀಳ್ಗತೆ, ಕಿರು ಕಾದಂಬರಿಗಳು, ಕಾದಂಬರಿಗಳು (3 ಸಂಪುಟ) ಹಾಗೂ ಕವಿತೆಗಳು – ಹೀಗೆ ಒಂಬತ್ತು ವಿಷಯಗಳಿಗೆ ಸಂಬಂಧಿಸಿದ ಹದಿನಾಲ್ಕು ಸಂಪುಟಗಳ ಮೂಲಕ ಓರ್ವ ಮೇಷ್ಟ್ರು, ವಿಮರ್ಶಕ, ವಿಶ್ಲೇಷಕ, ಸಿನಿಮಾ ನಿರ್ದೇಶಕ, ಅಂಕಣಕಾರ, ಭಾಷಣಕಾರನ ರೂಪದಲ್ಲಿ, ಸಾಹಿತ್ಯ–ಸಂಸ್ಕೃತಿ ಸಂವಹನದ ಅನೇಕ ಸಾಧ್ಯತೆಗಳನ್ನು ದುಡಿಸಿಕೊಂಡ ವಿಶಿಷ್ಟ ಮನಸ್ಸು ಸಹೃದಯರಿಗೆ ಎದುರಾಗುತ್ತದೆ. ಈ ಕಾಲದ ಬಹುದೊಡ್ಡ ವಿಶ್ಲೇಷಕರಾಗಿ, ಸೂಕ್ಷ್ಮ ಸಂವೇದನೆಯ ಮನಸ್ಸಾಗಿ, ಚಿಂತನಾಶಕ್ತಿಯಾಗಿ ಬರಗೂರರ ವ್ಯಕ್ತಿತ್ವ ಮತ್ತು ಬದುಕು ರೂಪುಗೊಂಡಿರುವುದಕ್ಕೆ ಅವರ ಸಮಗ್ರ ಸಾಹಿತ್ಯ ಕನ್ನಡಿಯಂತಿದೆ.

ಮಾತು, ವಿಚಾರ, ಕೃತಿಗಳ ಮೂಲಕ ಅಸಾಂಪ್ರದಾಯಿಕವಾದ ಜೀವನ ವೃತ್ತಾಂತವೊಂದನ್ನು ಕಟ್ಟಿಕೊಳ್ಳಬಹುದು ಎನ್ನುವುದಾದರೆ, ‘ಬೆವರು ನನ್ನ ದೇವರು’ ಸಂಪುಟಗಳ ಮೂಲಕ ಲೇಖಕರ ಜೀವನವೃತ್ತಾಂತವೊಂದನ್ನು ರೂಪಿಸಿಕೊಳ್ಳಬಹುದು. ಜಾಲಿ ಮರಗಳು ಮತ್ತು ಬೆವರಿನ ಗಮಲಿನ ಆ ಕಥನ, ಪ್ರತಿಭೆ ಮತ್ತು ಸ್ವಂತ ಸಾಮರ್ಥ್ಯದ ಬಗ್ಗೆ ನಂಬಿಕೆಯುಳ್ಳವರಿಗೆ ‍ಪ್ರೇರಣೆ ನೀಡುವಂತಹದ್ದು, ಸ್ವಾಭಿಮಾನ ತುಂಬುವಂತಹದ್ದು.

ಹದಿನಾಲ್ಕು ಸಂಪುಟಗಳು ಸೊಗಸಾಗಿ ರೂಪುಗೊಳ್ಳುವುದರ ಹಿಂದಿರುವ ‘ಅಭಿರುಚಿ ಪ್ರಕಾಶನ’ ಬಳಗದ ಶ್ರಮ ಎದ್ದುಕಾಣುವಂತಿದೆ. ಸಮಗ್ರ ಸಾಹಿತ್ಯದ ಪ್ರಕಟಣೆಯಾದರೂ, ಸಂಪುಟಗಳ ಮುಖಪುಟದಲ್ಲಿ ಲೇಖಕರ ಫೋಟೊ ಮುಖ್ಯವಾಗದೆ, ಬರವಣಿಗೆಯ ಆಶಯದ ಕಲಾಕೃತಿಯೇ ಪ್ರಮುಖ ಸ್ಥಾನ ಪಡೆದಿರುವುದೂ ವಿಶೇಷ ಸಂಗತಿಯೇ. ಸಂಪುಟಗಳನ್ನು ವಿಷಯವಾರು ವಿಂಗಡಿಸಿರುವ ಕ್ರಮವೂ ಒಪ್ಪವಾಗಿದೆ. ಆದರೆ, ಸಂಪುಟಗಳಲ್ಲಿ ಒಟ್ಟುಗೂಡಿರುವ ವೈಚಾರಿಕ ಬರಹಗಳು ಈ ಮೊದಲು ಪುಸ್ತಕರೂಪದಲ್ಲಿ ಪ್ರಕಟಗೊಂಡ ಉಲ್ಲೇಖಗಳು ಎಲ್ಲಿಯೂ ನಮೂದಾಗಿಲ್ಲ. ಆ ಉಲ್ಲೇಖಗಳೊಂದಿಗೆ ಅಂಕಣದ ಹೆಸರು ಮತ್ತು ಪ್ರಕಟವಾದ ಪತ್ರಿಕೆಗಳ ವಿವರಗಳನ್ನು ಒಳಗೊಳ್ಳಬೇಕಾಗಿದ್ದುದು ಅಕಡೆಮಿಕ್‌ ಅಗತ್ಯವಾಗಿತ್ತು.

ರಾಮಚಂದ್ರಪ್ಪ ಎನ್ನುವ ಗ್ರಾಮೀಣ ಪ್ರತಿಭೆ ತನ್ನ ಶ್ರಮ ಹಾಗೂ ತಿಳಿವಳಿಕೆಯಿಂದ ಕಟ್ಟಿಕೊಂಡ ಸೃಜನಶೀಲ ಜಗತ್ತು ಕನ್ನಡ ಜಗತ್ತಿನ ಭಾಗವಾಗಿ, ಕನ್ನಡದ ವಿವೇಕವನ್ನು ಒಳಗೊಂಡು ಅದನ್ನು ವಿಸ್ತರಿಸಿದ ರೂಪವಾಗಿ ‘ಬೆವರು ನನ್ನ ದೇವರು’ ಸಂಪುಟಗಳು ಮುಖ್ಯವೆನ್ನಿಸುತ್ತವೆ.

ಕೃತಿ: ಬೆವರು ನನ್ನ ದೇವರು

(ಬರಗೂರು ರಾಮಚಂದ್ರಪ್ಪನವರ ಸಮಗ್ರ ಸಾಹಿತ್ಯದ 14 ಸಂಪುಟಗಳು)

ಪ್ರ: ಅಭಿರುಚಿ ಪ್ರಕಾಶನ, ಮೈಸೂರು

ಸಂ: 99805 60013

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT