ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಎದೆಯ ನೋವನ್ನು ಹಾಡುವ ಕವಿತೆ

Last Updated 10 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕಾವ್ಯಜಗತ್ತಿಗೆ ಪದಾರ್ಪಣೆ ಮಾಡಿರುವ ಹೊಸ ಕವಿಗಳ ಪೈಕಿ ಭರವಸೆ ಮೂಡಿಸಿರುವ ಹೆಸರುಗಳಲ್ಲಿ ಬಿದಲೋಟಿ ರಂಗನಾಥ್‌ ಅವರದೂ ಒಂದು. ಈಗಾಗಲೇ ‘ಮಣ್ಣಿಗೆ ಬಿದ್ದ ಹೂಗಳು’, ‘ಬದುಕು ಸೂಜಿ ಮತ್ತು ನೂಲು’ ಎಂಬ ಎರಡು ಸಂಕಲನಗಳನ್ನು ಕೊಟ್ಟಿರುವ ಈ ಕವಿ, ಈಗ ‘ಉರಿವ ಕರುಳ ದೀಪ’ವನ್ನು ಹಿಡಿದು ಓದುಗರ ಮುಂದೆ ಬಂದಿದ್ದಾರೆ.

ಒಡಲಾಳದಲ್ಲಿ ನೋವನ್ನು ತುಂಬಿಕೊಂಡಿದ್ದರೂ ಹೊಸ ಭವಿಷ್ಯದ ಬಗೆಗೆ ಬೆರಗಿನಿಂದ ನೋಡುವ ‘ದೀಪ’ದ ಕವಿತೆಗಳು, ನೆಲದ ಸೊಡರನ್ನು ತುಂಬಿಕೊಂಡು ನಳನಳಿಸುತ್ತಿವೆ. ಸಮಕಾಲೀನ ವಿದ್ಯಮಾನಗಳಿಗೂ ಸ್ಪಂದಿಸುತ್ತಿವೆ. ವಿವೇಕವನ್ನು ಸಹ ಕಟ್ಟಿಕೊಡುತ್ತವೆ. ಉರಿಯುವ ಹೃದಯಗಳ ಮೇಲೆ ತಂಗಾಳಿ ಬೀಸುವ ಉಮೇದನ್ನು ಕೂಡ ಅವುಗಳು ಪ್ರಕಟಿಸುತ್ತವೆ.

‘ಮೌನದ ಎಳೆ ಬಿಸಿಲ ಮೇಲೆ/ ಒಡಲುರಿಯ ದನಿಯೊಂದು ಕೈ ಚಾಚಿ/ ಭಾವ ಬಿಂದುವಿನ ಹೆಗಲ ಹಕ್ಕಿ/ ಬೆರಳ ಮೇಲೆ ಹಾರಿ ಕುಳಿತು/ ಎದೆಯೊಳಗೆ ಬಲೆ ನೇಯ್ದ ದಾರಿ ಕಂಡಿತು’ ಎಂಬ ಸಾಲುಗಳು ಓದುಗನಲ್ಲೂ ಆರ್ದ್ರ ಭಾವವನ್ನು ಮೂಡಿಸುವಷ್ಟು ಸಶಕ್ತವಾಗಿವೆ. ಇಂತಹ ನೋವನ್ನು ನುಂಗಿದ ಕಾರಣಕ್ಕಾಗಿಯೋ ಏನೋ ಒಡಲ ಉರಿ ಸಹ ಹೆಚ್ಚಿದೆ. ಹೀಗಾಗಿ ನಿಂತ ನೆಲದ ತುಂಬ ಕವಿಗೆ ಬೆಂಕಿ ಕಂಡಿದೆ. ಹೀಗಿದ್ದರೂ ದೂರದಲ್ಲಿ ಎಲ್ಲೋ ಒಂದು ಭರವಸೆ ಇದೆ. ‘ಸಣ್ಣಗೆ ಬೆಳಗುವ ಚುಕ್ಕಿಗೂ ಒಂದು ಕನಸಿದೆ’ ಎಂದು ಸಮಾಧಾನವನ್ನೂ ಇಲ್ಲಿನ ಕಾವ್ಯ ಹೇಳಿಕೊಳ್ಳುತ್ತದೆ. ರೂಪಕ – ಇಲ್ಲಿನ ಕವಿತೆಗಳ ಶಕ್ತಿಯೂ ಹೌದು, ಮಿತಿಯೂ ಕೂಡ. ಕೆಲವು ಕವಿತೆಗಳಲ್ಲಿ ಬಳಕೆಯಾದ ಪ್ರತಿಮೆ–ರೂಪಕಗಳು ಬೆರಗು ಮೂಡಿಸಿದರೆ, ಇನ್ನು ಕೆಲವು ಕವಿತೆಗಳಲ್ಲಿ ಅವುಗಳು ಭಾರ ಎನಿಸುವಷ್ಟು ಅತಿಯಾಗಿ ಬಳಕೆಯಾಗಿವೆ. ಈ ಭಾರದಿಂದ ಹಗುರವಾದರೆ ಬಿದಲೋಟಿ ಅವರ ಕಾವ್ಯ ಇನ್ನೂ ಎತ್ತರಕ್ಕೆ ಹಾರಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT