ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Book Review| ಅಭಿಮಾನದಿಂದ ಬಿಡಿಸಿದ ವ್ಯಕ್ತಿಚಿತ್ರ

Last Updated 10 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಇದ್ದುಕೊಂಡು ದೇಶ-ಭಾಷೆಗಳ ಗಡಿ ದಾಟಿ ತಮ್ಮ ಎತ್ತರ-ಬಿತ್ತರಗಳನ್ನು ಹರಹಿ, ಚುಂಬಕದಂತೆ ಬಾಳಿ ಬೆಳಗಿದ ಪಂ. ತಾರಾನಾಥರ ಜೀವನಚರಿತ್ರೆಯ ಕೃತಿಯಿದು. ಈ ಕೃತಿಯು ಒಟ್ಟು ಆರು ಅಧ್ಯಾಯಗಳಲ್ಲಿ ವಿಭಾಗೀಕರಣಗೊಂಡಿದೆ. ಮೊದಲ ಅಧ್ಯಾಯವು ತಾರಾನಾಥರ ಜೀವನ ಚರಿತ್ರೆಯಾಗಿದ್ದರೆ, ಎರಡು, ಮೂರು, ನಾಲ್ಕನೇ ಅಧ್ಯಾಯಗಳಲ್ಲಿ ಕ್ರಮವಾಗಿ ಈ ಬರೆಹಕ್ಕೆ ಆಧಾರ ಒದಗಿಸಿದ ಅಪರೂಪದ ದಾಖಲೆಗಳು, ಸಂಬಂಧಿಕರ ಸಂದರ್ಶನಗಳು, ಗುರು-ಹಿರಿಯರು ಮತ್ತು ಒಡನಾಡಿಗಳ ಅಭಿಪ್ರಾಯಗಳು ಇವೆ.

ಮಂಗಳೂರಿನಲ್ಲಿ ಹುಟ್ಟಿ, ಹೈದರಾಬಾದ್‌ನಲ್ಲಿ ಬೆಳೆದು, ಬೀದರ್‌ನಲ್ಲಿ ಉದ್ಯೋಗ ಮಾಡಿ, ರಾಯಚೂರಿನಲ್ಲಿ ಹಮ್‍ದರ್ದ್ ಶಾಲೆ ಹುಟ್ಟುಹಾಕಿ, ಆಂಧ್ರ ಗಡಿಯ ತುಂಗಭದ್ರಾದಲ್ಲಿ ಪ್ರೇಮಾಯತನ ಆಶ್ರಮ ಸ್ಥಾಪಿಸಿ, ಬೆಂಗಳೂರಿನಲ್ಲಿ ನಿಧನರಾದ ಪಂ. ತಾರಾನಾಥರು ಜೀವಿಸಿದ್ದು ಕೇವಲ 51 ವರ್ಷ! ಈ ಅರೆಶತಮಾನದಲ್ಲೂ ಅವರು ಒಂದು ಶತಮಾನಕ್ಕಾಗುವಷ್ಟು, ಒಂದು ವಿಶ್ವವಿದ್ಯಾಲಯ ಮಾಡುವಷ್ಟು ಕೆಲಸ ಮಾಡಿದ್ದಾರೆ.

ಕಾವ್ಯ, ಕಥೆ, ನಾಟಕ, ವೈಚಾರಿಕ ಪ್ರಕಾರಗಳಲ್ಲಿ ಅದೂ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೃಷಿ ಮಾಡಿದ ಸಾಹಿತಿಯಾಗಿ; ಇಂಗ್ಲಿಷ್, ಹಿಂದಿ, ಮರಾಠಿಗಳಿಂದ ಕನ್ನಡಿಸಿದ ಅನುವಾದಕರಾಗಿ; ವಾಗ್ಮಿ, ನಟ, ಗಾಯಕ, ತಬಲಾಪಟು, ನಾಟ್ಯಶಾಸ್ತ್ರ ಕೋವಿದ, ಪತ್ರಕರ್ತ, ಶಿಕ್ಷಣತಜ್ಞ, ಆಯುರ್ವೇದ ವೈದ್ಯ, ಯೋಗಗುರು, ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ, ಅಧ್ಯಾತ್ಮ ಚಿಂತಕ ಹಾಗೂ ತಂತ್ರಮಾರ್ಗದ ಸಾಧಕರಾಗಿ ಅವರ ಪ್ರತಿಭಾವೃಕ್ಷದ ಬಿಳಲುಗಳು - ಯಾದಗಿರಿ, ಬಳ್ಳಾರಿ, ಬೀದರ್, ರಾಯಚೂರು, ನವಲಗುಂದ, ಧಾರವಾಡ ಊರುಗಳಲ್ಲಿ; ಆಂಧ್ರ, ಮಹಾರಾಷ್ಟ್ರ, ಕೇರಳ, ಬಂಗಾಲ ರಾಜ್ಯಗಳಲ್ಲಿ; ಇಂಗ್ಲೆಂಡ್, ಫ್ರಾನ್ಸ್, ಪೋಲೆಂಡ್, ನೆದರ್ಲೆಂಡ್‌ ಮುಂತಾದ ದೇಶಗಳಲ್ಲಿ ಹರಡಿಕೊಂಡಿವೆ.

ಭಾರತದಲ್ಲಿ ಗುರು ರವೀಂದ್ರರಂತೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನಪ್ರಭುತ್ವ ಹೊಂದಿ ಕೆಲಸ ಮಾಡಿದ ಮತ್ತೊಂದು ಉದಾಹರಣೆಯೆಂದರೆ ಪ್ರಾಯಶಃ ಅದು ತಾರಾನಾಥರದೇ ಇದ್ದಿರಬಹುದು. ಆಯುರ್ವೇದ, ಹಟಯೋಗ, ತಂತ್ರಸಾಧನ ಮಾರ್ಗಗಳನ್ನು ಉಪ ಆಸಕ್ತಿಗಳಾಗಿಯಷ್ಟೇ ಉಳಿಸಿಕೊಂಡು ಸಾಹಿತ್ಯವನ್ನೇ ಅವರು ಪ್ರಧಾನ ಆಸಕ್ತಿಯಾಗಿಸಿಕೊಂಡಿದ್ದರೆ ಅವರ ವ್ಯಕ್ತಿತ್ವವು ಇನ್ನೂ ಉಜ್ವಲವಾಗಿ ಬೆಳಗಿ, ತನ್ನ ಬೆಳಕಿನ ಕಿರಣಗಳನ್ನು ಕುಳಿತಲ್ಲಿಂದಲೇ ಎಲ್ಲೆಡೆ ಸೂಸಬಹುದಿತ್ತೇನೋ ಎಂಬ ಭಾವವನ್ನು ಒಡೆದು ಹೇಳದೆಯೂ ಓದುಗನಲ್ಲಿ ಮೂಡಿಸುವಂತೆ ಈ ಕೃತಿಯು ಮೂಡಿಬಂದಿದೆ.

ಇಷ್ಟಾಗಿಯೂ ಈ ಕೃತಿಯನ್ನು ಒಳಹೂರಣದ ದೃಷ್ಟಿಯಿಂದ ಇನ್ನೂ ಚೆನ್ನಾಗಿ ಮತ್ತು ಹೊರಆವರಣದ ದೃಷ್ಟಿಯಿಂದ ಮತ್ತಷ್ಟು ವೃತ್ತಿಪರವಾಗಿ ರೂಪಿಸುವ ಸಾಧ್ಯತೆಗಳು ಸಾಕಷ್ಟಿದ್ದವು. ಉದಾಹರಣೆಗೆ ಹೇಳುವುದಾದರೆ ಆರಂಭದಲ್ಲಿರುವ ಹಾರೈಕೆ-ಅಭಿಪ್ರಾಯಗಳು, ಸಣ್ಣಪುಟ್ಟ ಕಾಯಿಲೆಗಳ ಲಕ್ಷಣಗಳನ್ನು ವಿವರಿಸುವ ಬಾಕ್ಸ್ ಬರಹಗಳು ಮತ್ತು ಕೊನೆಯಲ್ಲಿರುವ ಹಮ್‍ದರ್ದ್ ಶಾಲೆಯ ಶತಮಾನೋತ್ಸವದ ಸ್ಮರಣ ಸಂಚಿಕೆಯಲ್ಲಿನ ಲೇಖಕಿಯ ಲೇಖನಗಳು ಓದುಗನೊಂದಿಗೆ ಯಾವ ವಿಧವಾದ ಸಂಬಂಧವನ್ನೂ ಸ್ಥಾಪಿಸಿಕೊಳ್ಳದೆ ಹೊರಗುಳಿದಿವೆ. ಐದನೆಯ ಅಧ್ಯಾಯದಿಂದ ಮುಂದಿನ ಎಲ್ಲ ಮಾಹಿತಿಯನ್ನು ಪ್ರಾಸಂಗಿಕವಾಗಿ ಅಲ್ಲಲ್ಲೇ ಸೇರಿಸಿಬಿಟ್ಟಿದ್ದರೆ ಪ್ರತ್ಯೇಕ ಅಧ್ಯಾಯ ಮಾಡುವ ಅಗತ್ಯವೇ ಬೀಳುತ್ತಿರಲಿಲ್ಲ. ಅಲ್ಲಲ್ಲಿ ಮುದ್ರಣ ದೋಷಗಳು ಮತ್ತು ಪುನರುಕ್ತಿಗಳು ಹಾಗೆಯೇ ಉಳಿದುಬಿಟ್ಟಿವೆ.

ಹಮ್‍ದರ್ದ್ ಶಾಲೆಯಲ್ಲಿ ಅಧ್ಯಾಪಕರಾಗಿ ದುಡಿದ ಏಕೈಕ ಅಭಿಮಾನಕ್ಕಾಗಿ ಲೇಖಕಿಯು ತಮ್ಮ ಎಪ್ಪತ್ತರ ಇಳಿವಯಸ್ಸಿನಲ್ಲಿ, ಮೂರು ವರ್ಷಗಳ ಕಾಲ ಮಗನನ್ನು ಬೆನ್ನಿಗೆ ಹಾಕಿಕೊಂಡು, ಹತ್ತಾರು ಊರುಗಳನ್ನು ಸುತ್ತಿ, ಅಪರೂಪದ ಮಾಹಿತಿಗಳನ್ನು ಸಂಗ್ರಹಿಸಿ, ಸ್ವಂತ ಹಣದಿಂದ ಪ್ರಕಟ ಮಾಡಿದ್ದಾರೆ. ಈ ಅಭಿಮಾನವೇ ಒಂದರ್ಥದಲ್ಲಿ ಈ ಕೃತಿಯ ಸಾಹಿತ್ಯಿಕ ಸ್ವರೂಪವನ್ನು ನಿಯಂತ್ರಿಸಿ, ಒಂದು ಚೌಕಟ್ಟಿನ ಮಿತಿಯನ್ನು ಹೇರಿದೆ. ಆದರೆ
ಈ ಅಗಾಧ ಕ್ಷೇತ್ರ ಕಾರ್ಯದಿಂದ ಸಂಗ್ರಹಿಸಿದ ಅಪರೂಪದ ಆಧಾರಗಳು ಕೃತಿಯ ಈ ಮಿತಿಯನ್ನು ಗೌಣವಾಗಿಸಿವೆಯಲ್ಲದೆ ಅಧಿಕೃತತೆಯ ಮೊಹರನ್ನು ಒತ್ತುವ ಮೂಲಕ ಅದರ ಘನತೆಯನ್ನು ಹೆಚ್ಚಿಸಿವೆ.

ವಿಚಿತ್ರವಾದ ಸಾಮಾಜಿಕ ವಿಸ್ಮೃತಿಗೆ ಪಕ್ಕಾಗಿದ್ದ ಮಹೋನ್ನತ ವ್ಯಕ್ತಿತ್ವದ ಮಸುಕು ಮಸುಕಾದ ಚಿತ್ರದ ಮೇಲಿದ್ದ ದೂಳನ್ನು ಕೊಡವಿ ಒಂದು ಸ್ಫಟಿಕಸ್ಪಷ್ಟ ಜೀವನಚರಿತ್ರೆಯನ್ನು ಕಟ್ಟಿಕೊಟ್ಟಿರುವುದು ಈ ಕೃತಿಯ ಹೆಗ್ಗಳಿಕೆ. ಆದರೆ ಗುಣಪಡಿಸಲು ಸಾಧ್ಯವೇ ಇರದ ಕಾಯಿಲೆಗಳನ್ನೂ ಗುಣಪಡಿಸಿ ಎಷ್ಟೋ ಜೀವಗಳನ್ನು ಉಳಿಸಿದ ಪಂ.ತಾರಾನಾಥರು ಅರ್ಧಾಯುಷ್ಯದಲ್ಲೇ ತೀರಿಕೊಂಡದ್ದರ ಕಾರಣದ ಬಗ್ಗೆ ಮಾತ್ರ ಎಲ್ಲಿಯೂ ಸ್ಪಷ್ಟವಾದ ಮಾಹಿತಿಯಿಲ್ಲದಿರುವುದು ಈ ಕೃತಿಯ ಒಂದು ಪ್ರಮುಖ ಕೊರತೆ. ತಂತ್ರಸಾಧನೆಯಲ್ಲಾದ ಏರುಪೇರೇ ಸಾವಿಗೆ ಕಾರಣ ಎಂದು ಮುನ್ನುಡಿಕಾರರು ಊಹಿಸಿದ್ದರೆ, ಲೇಖಕರು ಒಂದೆರಡು ಕಡೆ ತೀವ್ರ ಅನಾರೋಗ್ಯವೇ ಕಾರಣವೆಂದು ಅಸ್ಪಷ್ಟ ಕಾರಣ ನೀಡಿದ್ದಾರೆ.

ಒಟ್ಟಂದದಲ್ಲಿ ಅನೂಹ್ಯ ಸಿನಿಮೀಯ ತಿರುವುಗಳ ಪಂ.ತಾರಾನಾಥರ ಜೀವನವು ‘ಅವರ ವ್ಯಕ್ತಿತ್ವಕ್ಕೆ ಹೊರತಾದ ಕ್ಷೇತ್ರಗಳು ಯಾವುವಾದರೂ ಉಳಿದಿದ್ದವಾ ಎಂದು ಅನುಮಾನ ಮೂಡಿಸುವಷ್ಟು ವೈವಿಧ್ಯಮಯ ಆಯಾಮಗಳನ್ನು ಹೊಂದಿದೆ’ ಎಂಬುದನ್ನು ಈ ಕೃತಿಯು ಸಾಧಾರಪೂರ್ವಕವಾಗಿ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.

ಕೃತಿ: ಕರ್ನಾಟಕದ ಯುಗಪುರುಷ ಪಂ.ತಾರಾನಾಥರು

ಲೇ: ಲಕ್ಷ್ಮೀದೇವಿ ಶಾಸ್ತ್ರಿ

ಪ್ರ: ವಿಶ್ವ ಪ್ರಕಾಶನ

ಸಂ: 8197195027

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT