ಮಂಗಳವಾರ, ಮೇ 18, 2021
31 °C

ಒಳನೋಟ: ಕನ್ನಡದ ಶಾಸ್ತ್ರ ಕೃತಿಗಳು ಇಂಗ್ಲಿಷ್‌ಗೆ

ಪುರುಷೋತ್ತಮ ಬಿಳಿಮಲೆ Updated:

ಅಕ್ಷರ ಗಾತ್ರ : | |

ಬೇರೆ ಭಾಷೆಗಳಿಂದ ಕೃತಿಗಳು ಅನುವಾದಗೊಂಡು ಕನ್ನಡಕ್ಕೆ ಬಂದಷ್ಟು ಸಂಖ್ಯೆಯಲ್ಲಿ ಕನ್ನಡದಿಂದ ಬೇರೆ ಭಾಷೆಗಳಿಗೆ ಅನುವಾದಗೊಂಡು ಹೋಗದಿರುವುದರಿಂದ ಕನ್ನಡದ ಮಹತ್ವ ಕನ್ನಡೇತರರಿಗೆ ತಿಳಿಯದೇ ಹೋಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ನಾನು ಜೆಎನ್‌ಯು ಕನ್ನಡ ಪೀಠದಿಂದ  ಕವಿರಾಜಮಾರ್ಗ (The way of the King of poets), ವಡ್ಡಾರಾಧನೆ (Veneration to the elders) ಮತ್ತು ಗದಾಯುದ್ಧದ (The duel of the Maces) ಜೊತೆಗೆ ಇತರ ಕೆಲವು ಕೃತಿಗಳನ್ನು ವಿದ್ವಾಂಸರಿಂದ ಅನುವಾದಿಸಿ ದೆಹಲಿಯ ಮಹತ್ವದ ಪ್ರಕಾಶಕರ ಮೂಲಕ ಪ್ರಕಟಿಸಿದೆ. ರೌಟ್ಲೆಜ್ ಇದೀಗ ಅವುಗಳನ್ನು ಮರು ಮುದ್ರಣ ಮಾಡಿದೆ.

ಈ ಕೃತಿಗಳು ದೇಶ ವಿದೇಶಗಳ ವಿದ್ವಾಂಸರ ಗಮನ ಸೆಳೆದಿವೆ. ಆದರೂ ಈ ನಿಟ್ಟಿನಲ್ಲಿ ನಾವು ಚಲಿಸಬೇಕಾದ ಹಾದಿ ಬಹಳ ದೂರ. ಯಾಕೋ ನಮ್ಮ ಅನುವಾದದ ಕೆಲಸಗಳು ಸೃಜನಶೀಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿವೆ. ಕನ್ನಡದಲ್ಲಿ ಸೃಜನೇತರ ಪ್ರಕಾರಗಳಿಗೆ ಸೇರಿದ ಮಹತ್ವದ ಕೃತಿಗಳು ಹಲವಿವೆ. ಸಮುದಾಯಗಳನ್ನು ಆಧರಿಸಿ ನಾಡಿನ ಚರಿತ್ರೆಯನ್ನು ಬರೆಯಬಹುದೆಂದು ತೋರಿಸಿದ ಶಂ.ಬಾ. ಜೋಶಿ, ಬಾಳ್ವೆಯೇ ಬೆಳಕು ಬರೆದ ಶಿವರಾಮ ಕಾರಂತ, ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು, ದೇಸಿ ಆಕರಗಳ ಮೂಲಕವೇ ಸಂಶೋಧನೆಗೆ ಹೊಸ ಹಾದಿ ತೋರಿಸಿದ ಎಂ.ಎಂ. ಕಲಬುರ್ಗಿ ಮೊದಲಾದವರೆಲ್ಲಾ ಕನ್ನಡದೊಳಗೇ ಉಳಿದುಬಿಟ್ಟರು.

ಕನ್ನಡವನ್ನು ಶಾಸ್ತ್ರಕಾರರು ಕೂಡ ಗಮನಾರ್ಹವಾಗಿ ಬೆಳೆಸಿದ್ದಾರೆ ಎಂಬುದನ್ನು ಕನ್ನಡಿಗರೇ ಮರೆತಿರುವ ಕಾಲವಿದು. ಒಂದನೆಯ ನಾಗವರ್ಮನ ಛಂದೋಂಬುಧಿ, ಎರಡನೆಯ ನಾಗವರ್ಮನ ಕಾವ್ಯಾವಲೋಕನ, ಕವಿಕಾಮನ ಶೃಂಗಾರ ರತ್ನಾಕರ, ಸಾಳ್ವನ ರಸರತ್ನಾಕರ, ಭಟ್ಟಾಕಳಂಕನ ಶಬ್ದಾನುಶಾಸನ, ಮಂಗರಾಜನ ಖಗೇಂದ್ರ ಮಣಿದರ್ಪಣ, ರಾಜಾದಿತ್ಯನ ವ್ಯವಹಾರಗಣಿತ ಮೊದಲಾದುವು ಮಹತ್ವದ ಶಾಸ್ತ್ರ ಕೃತಿಗಳಾಗಿವೆ. ಈ ಎಲ್ಲಾ ಕೃತಿಗಳಿಗೆ ಶಿಖರ ಪ್ರಾಯವಾಗಿರುವುದು ಕೇಶಿರಾಜನು 1260ರ ಸುಮಾರಿನಲ್ಲಿ ರಚಿಸಿದ ಶಬ್ದಮಣಿದರ್ಪಣ.

ಇಂಥ ಕೃತಿಗಳು ಸಾಮಾನ್ಯವಾಗಿ ವಿಮರ್ಶಕರ ಮತ್ತು ಅನುವಾದಕರ ಕಣ್ಣಿಗೆ ಬೀಳುವುದಿಲ್ಲ. ಶಾಸ್ತ್ರ ಕೃತಿಗಳಿಗೆ ಆರೋಪಿಸಲಾದ ಕ್ಲಿಷ್ಟತೆಯೇ ಅದಕ್ಕೆ ಮುಖ್ಯಕಾರಣ. ಕನ್ನಡದ ಪುಣ್ಯ, ಇಂಥ ಕೃತಿಗಳ ಬಗ್ಗೆ ಕರಾರುವಾಕ್ಕಾಗಿ ಮಾತಾಡಬಲ್ಲ ಹಂಪ ನಾಗರಾಜಯ್ಯ,  ಟಿ.ವಿ. ವೆಂಕಟಾಚಲ ಶಾಸ್ತ್ರಿ, ಆರ್.ವಿ.ಎಸ್ ಸುಂದರಂ, ಬಿ.ಎ. ವಿವೇಕ ರೈ ಮೊದಲಾದ ಕೆಲವರಾದರೂ ಹಿರಿಯರು ನಮ್ಮ ನಡುವೆ ಇದ್ದಾರೆ. ಅಂಥವರ ತಿಳಿವಳಿಕೆಗಳ ಪೂರ್ಣ ಪ್ರಯೋಜನ ಪಡೆಯುವ ವಿವೇಕವನ್ನು ಕನ್ನಡಿಗರು ತ್ವರಿತವಾಗಿ ತೋರಿಸಬೇಕಾಗಿದೆ.

ಮೇಲಿನ ಮಾತಿಗೆ ಅಪವಾದವೆಂಬಂತೆ ಕನ್ನಡ ಛಂದಸ್ಸಿನ ಬಗೆಗೆ ಆಂಗ್ಲ ಭಾಷೆಯಲ್ಲಿ ಇದೀಗ ಎರಡು ಪುಸ್ತಕಗಳು ಪ್ರಕಟವಾಗಿವೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಈ ಎರಡೂ ಕೃತಿಗಳನ್ನು ಪ್ರಕಟಿಸಿ ಉಪಕಾರ ಮಾಡಿದೆ.

ಇದರಲ್ಲಿ ಮೊದಲನೆಯದಾದ A Handbook of Kannada prosodyಯನ್ನು ಸಿದ್ಧಪಡಿಸಿದವರು ಕಾವ್ಯಶಾಸ್ತ್ರ ಪರಿಣತರಾದ ವಿವೇಕ ರೈ. ಕನ್ನಡ ಛಂದಸ್ಸಿನ ಬಗೆಗೆ ಇದೊಂದು ಉಪಯುಕ್ತ ಕೈಪಿಡಿ. ಕನ್ನಡೇತರರು ಕನ್ನಡ ಛಂದಸ್ಸಿನ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗುವ ಹಾಗೆ ಉಚಿತವಾದ ಉದಾಹರಣೆಗಳ ಮೂಲಕ ಅವುಗಳನ್ನು ವಿವರಿಸಲಾಗಿದೆ. ಇದನ್ನು ಬರೆಯಲು ರೈ ಅವರು ನಾಗವರ್ಮನ ಛಂದೋಂಬುಧಿಯನ್ನು (10ನೇ ಶತಮಾನ) ಪ್ರಮುಖ ಆಧಾರವಾಗಿ ಬಳಸಿಕೊಂಡಿದ್ದಾರೆ. ಹಳಗನ್ನಡ ಮತ್ತು ನಡುಗನ್ನಡದ ಪ್ರಮುಖ ಮತ್ತು ಜನಪ್ರಿಯವಾದ ಛಂದೋ ರೂಪಗಳು ಈ ಕೈಪಿಡಿಯಲ್ಲಿ ಸ್ಥಾನ ಪಡೆದಿವೆ.

ಉದಾಹರಿತ ಪದ್ಯಗಳ ಮೂಲ ಪಠ್ಯಗಳನ್ನೂ, ಅವುಗಳ ಇಂಗ್ಲಿಷ್ ಅನುವಾದವನ್ನೂ ಕೊಟ್ಟದ್ದರಿಂದಾಗಿ ಅನುಮಾನಕ್ಕೆ ಎಡೆಯಿಲ್ಲದಂತೆ ಇವುಗಳನ್ನು ಓದಿಕೊಳ್ಳಬಹುದು. ತಾಂತ್ರಿಕ ಪದಗಳನ್ನು ಅನುವಾದದಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮಾತ್ರಾಗಣ, ಅಂಶಗಣ, ಕಂದ, ರಗಳೆ, ಷಟ್ಟದಿ, ವಚನಗಳನ್ನು ಇಂಗ್ಲಿಷಿನಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ವಿವರಿಸುವ ಕೆಲಸ ಸುಲಭವಲ್ಲ. ಕಳೆದ ಕೆಲವು ವರ್ಷಗಳಿಂದ ಯುರೋಪಿನ ಹಲವು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುತ್ತಿರುವ ರೈಯವರು ‘ಕಷ್ಟ’, ‘ಅರ್ಥವಾಗುವುದಿಲ್ಲ’  ಎಂಬಿತ್ಯಾದಿ ಆರೋಪಗಳಿಗೆ ಗುರಿಯಾಗಿರುವ ಛಂದಸ್ಸನ್ನು ಎಷ್ಟು ಸರಳವಾಗಿ ಮತ್ತು ಸಂಶಯಗಳಿಗೆ ಎಡೆಯಿಲ್ಲದಂತೆ ಬರೆಯಬಹುದು ಎಂದು ತೋರಿಸುವ ಹಾಗೆ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ರೈ ಅವರ ಅನುಭವವು ಇಲ್ಲಿ ಅವರ ಸಹಾಯಕ್ಕೆ ಬಂದದ್ದಲ್ಲದೆ, ಕನ್ನಡೇತರರಿಗೆ ಉಪಯುಕ್ತವಾಗುವ ಹಾಗೆ ಮಾಡಿದೆ.

ಇಂಗ್ಲಿಷಿನಲ್ಲಿ ಪ್ರಕಟವಾದ ಇನ್ನೊಂದು ಕೃತಿ The Ocean of Prosodyಯು ನಾಗವರ್ಮನ ಛಂದೋಂಬುಧಿಯ ಅನುವಾದ. ಹಿರಿಯ ವಿದ್ವಾಂಸರಾದ ಆರ್.ವಿ.ಎಸ್. ಸುಂದರಂ ಮತ್ತು ಸಂಶೋಧಕಿ ಅಮ್ಮೆಲ್ ಶೇರೋನ್ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕನ್ನಡ, ತೆಲುಗು, ಸಂಸ್ಕೃತ ಗೊತ್ತಿರುವ ಸುಂದರಂ ಮತ್ತು ಇಂಗ್ಲಿಷ್ ಚೆನ್ನಾಗಿ ಗೊತ್ತಿರುವ ಶೇರೋನ್ ಜೊತೆಯಾಗಿ ಮಾಡಿರುವ ಈ ಅನುವಾದವು ಕನ್ನಡವನ್ನು ಜಾಗತಿಕಗೊಳಿಸುವ ನಿಟ್ಟಿನಲ್ಲಿ ಹಾಕಿದ ಮಹತ್ವದ ಹೆಜ್ಜೆ.

ಛಂದೋಂಬುಧಿಯನ್ನು ಇಂಗ್ಲಿಷಿಗೆ ಅನುವಾದಿಸಲು ಸಾಕಷ್ಟು ತಯಾರಿ ಬೇಕೆಂಬುದು ನಿರ್ವಿವಾದ. ಬಾಣಭಟ್ಟನ ಅಮೋಘವಾದ ಗದ್ಯವನ್ನು ಓದಿ, ಕರ್ನಾಟಕ ಕಾದಂಬರಿಯಂಥ ಮಹಾಕಾವ್ಯವನ್ನು ಬರೆದ ಒಂದನೆಯ ನಾಗವರ್ಮನ (10ನೇ ಶತಮಾನ) ಪ್ರತಿಭೆ ಬಹಳ ವಿಶಿಷ್ಟವಾದುದು. ಆ ಕಾಲದಲ್ಲಿ ನಡೆಯುತ್ತಿದ್ದ ಕನ್ನಡ ಮತ್ತು ಸಂಸ್ಕೃತಗಳ ನಡುವಣ ಸಂಘರ್ಷ ಮತ್ತು ಹೊಂದಾಣಿಕೆಗಳನ್ನು ನಾಗವರ್ಮ ಸೂಕ್ಷ್ಮವಾಗಿ ಗ್ರಹಿಸಿ, ಛಂದಸ್ಸಿಗೆ ಅನ್ವಯವಾಗುವಂತೆ ಛಂದೋಂಬುಧಿ ಬರೆದ. ಇದರ ಜೊತೆಗೆ ಅವನುಕನ್ನಡಕ್ಕೆ ಸಹಜವಾದ ಛಂದೋ ರೂಪಗಳನ್ನೂ ಗ್ರಹಿಸಿಕೊಳ್ಳಬೇಕಾಗಿತ್ತು.  ಅಂಶ ಗಣಪ್ರಧಾನವಾದ ಈ ರೂಪಗಳಿಗೆ ಹಾಡುವಿಕೆ ಮುಖ್ಯವಾದ್ದರಿಂದ ಅದಕ್ಕೆ ಸಂಗೀತವೂ ಸೇರಿಕೊಂಡಿತ್ತು.

ನಾಗವರ್ಮನು ಅಕ್ಕರ ತ್ರಿಪದಿ, ಏಳೆ, ಚೌಪದಿ, ಛಂದೋವತಂಸ, ಅಕ್ಕರಿಕೆ, ಮದನವತಿ, ಗೀತಿಕೆ, ಉತ್ಸಾಹ, ಮತ್ತು ಷಟ್ಟದಿಗಳನ್ನು ಛಂದೋಂಬುಧಿಯಲ್ಲಿ ವಿವರಿಸುತ್ತಾನೆ. ಹೀಗಾಗಿ ಅನುವಾದಕನಿಗೆ ಸಂಸ್ಕೃತ ಛಂದಸ್ಸಿನ ಜೊತೆಗೆ ದ್ರಾವಿಡ ಚಂದಸ್ಸಿನ ಗುಣಗಳೂ  ತಿಳಿದಿರಬೇಕಾಗುತ್ತದೆ. ಬಹುಭಾಷಾ ವಿದ್ವಾಂಸರಾದ ಸುಂದರಂ ಅವರಿಗೆ ಇವೆಲ್ಲವೂ ತಿಳಿದಿರುವುದರಿಂದಲೇ ಛಂದೋಂಬುಧಿಯ ಎಲ್ಲ ಆರು ಅಧಿಕರಣಗಳನ್ನು ಅವರಿಗೆ ಸುಲಭವಾಗಿ ಅನುವಾದ ಮಾಡಲು ಸಾಧ್ಯವಾಗಿದೆ. ಅನುವಾದದಲ್ಲಿ ಮೂಲ ಪಠ್ಯದ ಜೊತೆಗೆ ಲಿಪ್ಯಂತರ ಮತ್ತು ಅನುವಾದವನ್ನೂ ಕೊಡಲಾಗಿದೆ.

ಈ ಎರಡೂ ಪುಸ್ತಕಗಳು ಕನ್ನಡದ ಸಮಕಾಲೀನ ಅಗತ್ಯವೊಂದನ್ನು ಸಮರ್ಥವಾಗಿ ಪೂರೈಸಿವೆ. ಪುಸ್ತಕಗಳು ಕನ್ನಡೇತರರಿಗೆ ತಲುಪ
ಬೇಕಾಗಿರುವುದರಿಂದ ಪುಸ್ತಕದ ಮುದ್ರಣವು ಅಂತರರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಬಹಳ ಅಗತ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು