ಮಂಗಳವಾರ, ಸೆಪ್ಟೆಂಬರ್ 28, 2021
22 °C

ಪುಸ್ತಕ ವಿಮರ್ಶೆ: ನೀರಿನ ಸಮಸ್ಯೆಯ ಮೂಲದ ಹುಡುಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಲಯುದ್ಧ
ಲೇ:
ಜಾಣಗೆರೆ ವೆಂಕಟರಾಮಯ್ಯ
ಪ್ರ: ಶಶಿ ಪಬ್ಲಿಕೇಷನ್ಸ್‌
ಸಂ: 9448747281
ಬೆಲೆ: 400 ಪುಟಗಳು: 468

**
ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ, ಓದುಗರಿಂದ ಸೈ ಎನಿಸಿಕೊಂಡಿರುವ ಲೇಖಕ ಜಾಣಗೆರೆ ವೆಂಕಟರಾಮಯ್ಯ. ಕಥೆ, ಕಾದಂಬರಿ, ಪ್ರವಾಸ ಕಥನ, ಜೀವನ ಸಂಕಥನ ಹೀಗೆ ಹಲವು ಪ್ರಕಾರಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ಅವರು, ದೇಶ ಮೊದಲ ಲಾಕ್‌ಡೌನ್‌ ಕಂಡ ಸಮಯದಲ್ಲಿ ಧೇನಿಸಿ ಬರೆದ ಮಹಾ ಕಾದಂಬರಿ ‘ಜಲಯುದ್ಧ’. ಹೆಸರೇ ಸೂಚಿಸುವಂತೆ ಈ ಕೃತಿ ನಮ್ಮನ್ನು ಕಾಡುತ್ತಿರುವ, ಹಿಂಸಿಸುತ್ತಿರುವ ಜಲ ವಿವಾದದ ಕಥಾವಸ್ತುವನ್ನು ಒಳಗೊಂಡಿದೆ. ವಾಸ್ತವದಲ್ಲಿ ನಿಂತುಕೊಂಡು ಚರಿತ್ರೆಯನ್ನೂ ಅವಲೋಕಿಸುವ ಈ ಕಾದಂಬರಿ, ಭವಿಷ್ಯದ ಕುರಿತು ಒಳನೋಟವನ್ನು ಸಹ ಬೀರುತ್ತದೆ.

ಜಾಣಗೆರೆ ಅವರ ಹೋರಾಟದ ಬದುಕಿನ ಹಿನ್ನೆಲೆಯೂ ಕಾದಂಬರಿ ಪಾತ್ರಗಳ ಸೃಷ್ಟಿಯಲ್ಲಿ ಪ್ರಭಾವ ಬೀರಿರುವುದು ಎದ್ದುಕಾಣುತ್ತದೆ. ದೇವರಾಜ ಎಂಬ ಚಳವಳಿಗಾರ ಹಾಗೂ ಅಶೋಕ ಎಂಬ ಸಮಾಜ ಸೇವಕನ ಪಾತ್ರಗಳಲ್ಲಿ ಆ ಛಾಪು ಢಾಳಾಗಿದೆ. ಮುನ್ನುಡಿಯಲ್ಲಿ ಬಂಜಗೆರೆ ಜಯಪ್ರಕಾಶ್‌ ಅವರು ಹೇಳುವಂತೆ, ‘ಕಾದಂಬರಿಯಲ್ಲಿ ವರ್ತಮಾನ ಹಾಗೂ ಇತಿಹಾಸದ ಎರಡು ಕಥಾ ಖಂಡಗಳಿವೆ. ಅವೆರಡೂ ವರ್ತಮಾನದ ಬದುಕಿನಲ್ಲಿ ಬೆಸೆದುಕೊಳ್ಳುವುದಕ್ಕೆ ನೀರಿನ ಸಮಸ್ಯೆಯ ಕೊಂಡಿಯಿದೆ. ಕಾದಂಬರಿ ಕಥೆಯಾಗಿ ಎರಡು ಖಂಡಗಳಂತೆ ಇದ್ದರೂ ವರ್ತಮಾನದ ಸಮಸ್ಯೆ ಇತಿಹಾಸದ ಕಥಾಖಂಡದೊಳಗಿನಿಂದಲೇ ಬೆಳೆದುಕೊಂಡು ಬಂದಿದೆ’.

ಕಾದಂಬರಿಯ ಕಥಾವಸ್ತುವಿನ ಆಳಕ್ಕೆ ಹೊಕ್ಕು ಹೇಳುವುದಾದರೆ ಇಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಕುರಿತಾದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಲಹವಿದೆ. ಆದರೆ, ನದಿಗಳ ಹೆಸರುಗಳು ಸೂಚ್ಯವಾಗಿ ಪ್ರಸ್ತಾಪವಾಗಿವೆ. ಜಲ ವಿವಾದ ಜನರ ಬದುಕಿನ ಮೇಲೆ ಬೀರಿರುವ ಪ್ರಭಾವವನ್ನೂ ಈ ಕೃತಿ ಬಿಂಬಿಸುತ್ತದೆ. ಕಾದಂಬರಿ ಗಾತ್ರದಲ್ಲಿ ದೊಡ್ಡದಾಗಿದ್ದರೂ ಪಾತ್ರಗಳ ಸಂಖ್ಯೆ ಕಡಿಮೆಯೇ. ಲಾಕ್‌ಡೌನ್‌ ಸಂಕಷ್ಟದ ಚಿತ್ರಗಳೂ ಇಲ್ಲಿ ಮೆರವಣಿಗೆ ಹೊರಡುತ್ತವೆ. ಹೀಗಾಗಿ ‘ಜಲಯುದ್ಧ’ ಕೊರೊನಾ ಸಂಕಷ್ಟದೊಂದಿಗೂ ತಳಕು ಹಾಕಿಕೊಂಡಿದೆ. ಸಹಜವಾಗಿಯೇ ರಾಜಕೀಯವೂ ಸಮಾಜದ ಇತರ ಸಮಸ್ಯೆಗಳ ಚುಂಗು ಹಿಡಿದುಕೊಂಡು ಬಂದು ಎಲ್ಲೆಡೆ ತನ್ನ ರಾಡಿಯನ್ನು ಹರಡಿದೆ.

ಶತಮಾನಗಳ ಹಿಂದೆ ದೇಶದಲ್ಲಿ ರಾಜಪ್ರಭುತ್ವವಲ್ಲದೆ ಬ್ರಿಟಿಷರ ಆಡಳಿತವಿದ್ದ ಕಾಲಘಟ್ಟದಲ್ಲೂ ನಮ್ಮ ನೆಲದಲ್ಲಿ ನಡೆಯುತ್ತಿದ್ದ ನೀರಿನ ಜಗಳದ ವಿವರಗಳು ಇಡುಕಿರಿದಿವೆ. ಆ ವಿವರಗಳು ಬೇರೆಯಾಗಿ ನಿಲ್ಲದೆ ಕಾದಂಬರಿಯ ಕಥಾವಸ್ತುವಿನೊಂದಿಗೆ ಸಾವಯವ ಸ್ವರೂಪದಲ್ಲಿ ಬೆರೆತುಹೋಗಿವೆ. ಯಾವುದೇ ಪ್ರದೇಶದಲ್ಲಿ ಉಗಮವಾಗುವ ನದಿಗಳು ಕೆಳಭಾಗದ ರಾಜ್ಯಗಳ ಗಡಿರೇಖೆಯನ್ನು ದಾಟಿ ಹರಿಯುತ್ತಾ ಸಮುದ್ರವನ್ನು ಸೇರುತ್ತವೆ. ಹಾಗೆ ಹರಿಯುವಾಗ ಮೂಲದವರಿಗೇ ನೀರಿಲ್ಲದಂತೆ ಮಾಡುವ ದಬ್ಬಾಳಿಕೆ, ತಮ್ಮ ಹಕ್ಕನ್ನು ಸ್ಥಾಪಿಸಿ ನೀರು ಪಡೆಯಲು ನಡೆಸುವ ಹುನ್ನಾರವನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ಚುರುಕಾದ ನಿರೂಪಣೆ ಓದಿನ ವೇಗಕ್ಕೆ ಪೂರಕವಾಗಿ ಒದಗಿದೆ. ಕಥೆಗೆ ಪೂರಕವಲ್ಲದ ಹೆಚ್ಚುವರಿ ವಿವರಗಳಿಗೆ ಹೋಗದಿದ್ದರೆ ಗಾತ್ರವನ್ನು ಕುಗ್ಗಿಸಬಹುದಿತ್ತೆ ಎಂಬ ಪ್ರಶ್ನೆ ಕಾಡುತ್ತದೆ. ‘ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಅನನ್ಯ ಕೃತಿ’ ಎಂದು ಎಲ್‌.ಎನ್‌. ಮುಕುಂದರಾಜ್‌ ಅವರು ಕೃತಿಯ ಕುರಿತು ಹೇಳುವಾಗ ಅತ್ಯುತ್ಸಾಹ ತೋರಿದಂತೆ ಗೋಚರಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು