ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯಕ್ಕೆ ಅನನ್ಯವಾದ ‘ರಾಶಿ’ ಕೊಡುಗೆ

Last Updated 29 ಡಿಸೆಂಬರ್ 2019, 9:10 IST
ಅಕ್ಷರ ಗಾತ್ರ

ರಾ.ಶಿ. ಎಂದು ಕನ್ನಡಸಾಹಿತ್ಯ ಪ್ರಪಂಚದಲ್ಲಿ ಹೆಸರಾದವರು ಡಾ. ಎಂ. ಶಿವರಾಂ (1905–1984).ಕನ್ನಡಸಾರಸ್ವತಲೋಕವನ್ನು ಹಾಸ್ಯಬರಹಗಳಿಂದಲೂ ಗಂಭೀರಸಾಹಿತ್ಯದಿಂದಲೂ ಶ್ರೀಮಂತ ಗೊಳಿಸಿದವರು. ತಂದೆ–ತಾಯಿ ಇಟ್ಟ ಹೆಸರು ಶಿವರಾಮ; ಇದರಲ್ಲಿ ಎರಡು ಪದಗಳಿವೆಯಷ್ಟೆ. ಮೊದಲಿನ ‘ಶಿವ’ದಿಂದ ‘ಶಿ’ ಮತ್ತು ಎರಡನೆಯ ‘ರಾಮ’ದಿಂದ ‘ರಾ’ – ಇವೆರಡನ್ನೂ ತಿರುಗುಮುರುಗು ಮಾಡಿ ‘ರಾಶಿ’ ಎಂಬ ಹೆಸರನ್ನು ಸ್ವೀಕರಿಸಿ, ಆ ಮೂಲಕ ಅವರು ಕನ್ನಡದಲ್ಲಿ ಹಾಸ್ಯಸಾಹಿತ್ಯಕ್ಕೆ ವಸಂತದ ಕಳೆಯನ್ನು ತುಂಬಿದರು. ಕಾವ್ಯನಾಮದ ಮೂಲಕವೇ ಹಾಸ್ಯರಸದ ಲಕ್ಷಣಕ್ಕೆ ಧ್ವನಿಯನ್ನು ಒದಗಿಸಿದರು.

ಕೇಂದ್ರ ಸಾಹಿತ್ಯ ಅಕಾದೆಮಿಯ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಮಾಲಿಕೆಯಲ್ಲಿಇದೀಗ ರಾ. ಶಿ. ಅವರ ಜೀವನ–ಸಾಧನೆಯ ಬಗ್ಗೆ ಪುಸ್ತಕ ಪ್ರಕಟವಾಗಿದೆ. ಇದರ ಲೇಖಕರಾದ ಜೆ. ಶ್ರೀನಿವಾಸ ಮೂರ್ತಿ ಅವರು ರಾ. ಶಿ. ಅವರನ್ನು ಕಂಡಿದ್ದವರು. ಸಂಸ್ಕೃತ ಅಧ್ಯಾಪಕರಾಗಿದ್ದವರು; ರಂಗಭೂಮಿಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು.

ರಾ. ಶಿ. ಅವರು ವೃತ್ತಿಯಿಂದ ವೈದ್ಯರಾಗಿದ್ದವರು. ಜನರ ಆರೋಗ್ಯವನ್ನು ಅವರು ವೈದ್ಯ–ಸಾಹಿತಿಯಾಗಿ ಕಾಪಾಡಿದವರು. ಹಾಸ್ಯಸಾಹಿತ್ಯ ಎಂದೂ ಕೂಡ ಅಪರೂಪದ ಬೆಳೆಯೇ. ಸಮಾಜದ ಸ್ವಾಸ್ಥ್ಯಕ್ಕೆ ಹಾಸ್ಯ ತುಂಬ ಮುಖ್ಯವಾದುದು ಎಂದು ಮನಗಂಡ ರಾ. ಶಿ., ತಾವಷ್ಟೆ ಹಾಸ್ಯಸಾಹಿತ್ಯವನ್ನು ರಚಿಸಲಿಲ್ಲ; ಹಲವರನ್ನು ಈ ಅಭಿಯಾನದಲ್ಲಿ ಯಶಸ್ವಿಯಾಗಿ ತೊಡಗಿಸಿದರು. ಅವರ ‘ಕೊರವಂಜಿ’ ಪತ್ರಿಕೆ ಕನ್ನಡಸಾಹಿತ್ಯಲೋಕಕ್ಕೆ ನೀಡಿದಕೊಡುಗೆಅಪೂರ್ವಾದುದು. ಇದು ಹಲವರು ಹಾಸ್ಯಸಾಹಿತಿಗಳನ್ನು ಹುಟ್ಟುಹಾಕಿದ್ದು ಮಾತ್ರವಲ್ಲ, ಮುಂದೆ ಜಗತ್ಪ್ರಸಿದ್ಧ ವ್ಯಂಗಚಿತ್ರಕಾರರಾದ ಆರ್‌. ಕೆ. ಲಕ್ಷ್ಮಣ್ ಅವರನ್ನೂ ಲೋಕಕ್ಕೆ ಪರಿಚಯಿಸಿತು.ಕನ್ನಡಹಾಸ್ಯಸಾಹಿತ್ಯ ಚರಿತ್ರೆಯಲ್ಲಿ ಮರೆಯಬಾರದ ಮತ್ತೊಂದು ಹೆಸರು ನಾ. ಕಸ್ತೂರಿ. ಅವರಿಗೂ ಕೊರವಂಜಿಗೂ ಇದ್ದ ನಂಟು ಕೂಡ ಸ್ಮರಣಿಯವಾದುದು.

ರಾ. ಶಿ. ಅವರುಕನ್ನಡಪ್ರಹಸನ ಪಿತಾಮಹ ಕೈಲಾಸಂ ಅವರಲ್ಲಿ ತಮ್ಮ ಗುರುವನ್ನು ಕಂಡುಕೊಂಡವರು. ಈ ಗುರು–ಶಿಷ್ಯರ ಸಂವಾದದಲ್ಲಿ ಹಾಸ್ಯರಸದ ತಾತ್ವಿಕತೆಯ ಬಗ್ಗೆ ಹಲವು ಮಹತ್ವದ ಮಾತುಗಳು ಕಾಣಿಸಿಕೊಂಡಿವೆ. ಈ ಮೀಮಾಂಸೆ ಇಂದಿಗೂ ಪ್ರಸ್ತುತವೇ ಹೌದು. ಸಮಾಜದ ಓರೆಕೋರೆಗಳಿಗೆ ಆರೋಗ್ಯವಂತ ಮನಸ್ಸಿನ ಕನ್ನಡಿಯಂತೆ ಹಾಸ್ಯ ಒದಗಿಬರುತ್ತದೆ ಎಂದು ನಂಬಿದ್ದವರುರಾ.ಶಿ. ಬೇಂದ್ರೆ ಅವರ ಪ್ರಸಿದ್ಧ ಕವನ ‘ಶ್ರಾವಣ ಬಂತು ಕಾಡಿಗೆ’ಯ ಅಣಕವಾಡಿ ಅವರು ಮಾಡಿದ ‘ಚುನಾವಣಾ ಬಂತು ನಾಡಿಗೆ’ ಇಂದಿನ ಸಂದರ್ಭಕ್ಕೂ ಹೊಂದುತ್ತದೆ.

ರಾ. ಶಿ. ಅವರು ತಮ್ಮನ್ನು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತಮಾಡಿಕೊಳ್ಳಲಿಲ್ಲ. ಬೆಂಗಳೂರು ಮೆಡಿಕಲ್‌ ಕಾಲೇಜಿನ ಸ್ಥಾಪನೆಯಲ್ಲೂ ಅವರು ಮಹತ್ವದ ಪಾತ್ರವನ್ನು ವಹಿಸಿದವರು; ಬೆಂಗಳೂರು ಕ್ಯಾನ್ಸರ್‌ ಸೊಸೈಟಿಯ ಸ್ಥಾಪನೆಯಲ್ಲೂ ಅವರ ಯೋಗದಾನವಿದೆ. ಕನ್ನಡದಲ್ಲಿ ವೈಜ್ಞಾನಿಕ ಬರವಣಿಗೆಯನ್ನು ಮಾಡಲು ಆವಶ್ಯಕವಾದ ಭಾಷೆ–ಭಾವಗಳನ್ನು ಸಿದ್ಧಗೊಳಿಸಿದ ಆದ್ಯರಲ್ಲಿ ಅವರೂ ಸೇರುತ್ತಾರೆ. ಹಾಸ್ಯಸಾಹಿತ್ಯ, ಕಥೆ–ಕಾದಂಬರಿ, ವ್ಯಕ್ತಿಚಿತ್ರಗಳನ್ನು ಮಾತ್ರವಲ್ಲದೆ, ದೈಹಿಕ–ಮಾನಸಿಕ ಆರೋಗ್ಯವನ್ನು ಕುರಿತು ಅವರು ಬರೆದರು. ಅವರ ಮನೋನಂದನ ಮತ್ತು ಮನಮಂಥನ – ಕೃತಿಗಳು ಇಲ್ಲಿ ಉಲ್ಲೇಖಾರ್ಹವಾದವು. ಅಧ್ಯಾತ್ಮದ ಬಗ್ಗೆಯೂ ಗಂಭೀರವಾದ ಕೃತಿಗಳನ್ನು ಇಂಗ್ಲಿಷ್‌ನಲ್ಲಿ ರಚಿಸಿ ಗಮನ ಸೆಳೆದರು.

ಕನ್ನಡಸಾಹಿತ್ಯವನ್ನು ಹಲವು ನೆಲೆಗಳಲ್ಲಿ ಶ್ರೀಮಂತಗೊಳಿಸಿದ ರಾ. ಶಿ. ಅವರ ಕೃತಿಗಳನ್ನೂ ಅವರ ಜೀವನ–ಪರಿಸರವನ್ನೂ ಈ ಕೃತಿ ಪರಿಚಯಿಸುತ್ತದೆ. ಆದರೆ ಇಲ್ಲಿಯ ಭಾಷೆ ಇನ್ನೂ ಹದವಾಗಬೇಕಿತ್ತು; ನಿರೂಪಣೆಯೂ ಅಚ್ಚುಕಟ್ಟುತನವನ್ನು ಸಾಧಿಸಬೇಕಿತ್ತು. ‘ಔಟ್‌ ಆಫ್‌ ಸಿಲೆಬಸ್‌’ನಂತೆ ಕಾಣುವ ಮಾತುಗಳೂ ಕಡಿಮೆಯಾಗಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT