ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Book Review| ವಾಗರ್ಥದಲ್ಲಿ ಅಡಗಿರುವ ಸತ್ಯಗಳು

Last Updated 10 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ವಿಮರ್ಶಕ,ನಾಟಕಕಾರ ಡಿ.ಎ.ಶಂಕರ್‌ ಅವರು ಬರೆದ ಲೇಖನಗಳು, ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು ಹಾಗೂ ಮಾಡಿದ ಭಾಷಣಗಳ ಸಂಗ್ರಹ ಗುಚ್ಛವೇ ಈ ಕೃತಿ. ಹೀಗಾಗಿ ಶಂಕರ್‌ ಅವರ ಅರ್ಧಶತಮಾನದ ಸಾಹಿತ್ಯಿಕ ಕೃಷಿಯ ಹಿನ್ನೋಟವನ್ನಾಗಿಯೂ ಈ ಕೃತಿಯನ್ನು ನೋಡಬಹುದು.

ಕೃತಿಯ ಆರಂಭದಲ್ಲೇ ಇರುವ ಎ.ಕೆ.ರಾಮಾನುಜನ್ನರ ಕಾವ್ಯ: ಒಂದು ವಿವೇಚನೆ’ ಮತ್ತು ‘ಕೆ.ಎಸ್‌.ನ ನಡೆದ ಹಾದಿ’ ಇವೆರಡೂ ಜಿ.ಎಸ್‌.ಶಿವರುದ್ರಪ್ಪ ಅವರು ಸಂಪಾದಿಸಿರುವ ‘ಪ್ರಾಯೋಗಿಕ ವಿಮರ್ಶೆ’ ಮತ್ತು ‘ಚಂದನ’ ಗ್ರಂಥಗಳಲ್ಲಿ ಪ್ರಕಟವಾಗಿವೆ. ಜೊತೆಗೆ 70ರ ದಶಕದಲ್ಲಿ ಪತ್ರಿಕೆಗಳಿಗೆ ಬರೆದ ಪುಸ್ತಕ ವಿಮರ್ಶೆಗಳ ಗುಚ್ಛವನ್ನೂ ಅವರಿಲ್ಲಿ ನೀಡಿದ್ದಾರೆ. ‘ಪ್ರಜಾವಾಣಿ’ಯ ದೀಪಾವಳಿ ವಿಶೇಷಾಂಕದಲ್ಲಿ ಬಂದ ಲೇಖನವೂ ಇಲ್ಲಿದೆ.ಹೀಗೆ ಕೃತಿಯಲ್ಲಿನ ಹಲವು ಲೇಖನಗಳು ಈಗಾಗಲೇ ಅಚ್ಚಾಗಿರುವಂಥವು ಅಥವಾ ವಿಚಾರ ಸಂಕಿರಣಗಳಲ್ಲಿ ಭಾಷಣದ ರೂಪದಲ್ಲಿ ಕೇಳಿದಂಥವು. ಇವುಗಳನ್ನೆಲ್ಲ ಒಟ್ಟಾಗಿ ಕಲೆ ಹಾಕಿ ಪುಸ್ತಕ ರೂಪ ನೀಡಿದ್ದಾರೆ ಶಂಕರ್‌. ಇಲ್ಲಿರುವ ಲೇಖನಗಳು ಕೇವಲ ಬರವಣಿಗೆಯಾಗಿರದೆ ಒಳಾರ್ಥಗಳನ್ನು ಹುಡುಕುವ ಪ್ರಯತ್ನಗಳಾಗಿವೆ.

ತಮ್ಮ ಈ ಪ್ರಯತ್ನದ ಬಗ್ಗೆ ಮುನ್ನುಡಿಯಲ್ಲಿ ಮಾತನಾಡಿರುವ ಲೇಖಕರು, ‘ವಿಮರ್ಶಾ ಕ್ಷೇತ್ರದಲ್ಲಿ ‘ವಾಗರ್ಥ’, ವಾಕ್‌ ಮತ್ತು ಅರ್ಥಗಳ ಸಂಬಂಧವನ್ನು ಕುರಿತು ವಿವೇಚಿಸಿರುವ ಬರವಣಿಗೆ ಈ ಸಂಪುಟದಲ್ಲಿದೆ. ಮಾತು, ಅರ್ಥಗಳ ಸಂಬಂಧ ವಿಸ್ತಾರವಾದದ್ದು, ನಿಗೂಢವಾದದ್ದು. ಅದರ ಹರಿವು, ಸೆಳೆವು, ಬೀಸುಗಳನ್ನು ತಿಳಿಯುವುದು, ನಿರ್ದೇಶಿಸುವುದು ಕಷ್ಟ. ಏಕೆಂದರೆ ಒಮ್ಮೆ ಅವನ್ನು ಕೂಡಿಸಿದರೆ ಅವು ಸ್ಫುರಿಸುವ ಅರ್ಥತರಂಗಗಳ ಪ್ರಪಂಚ ನಾವು ತಿಳಿದ, ಉದ್ದೇಶಿತ ಅರ್ಥ ಪ್ರಪಂಚವನ್ನು ದಾಟಿ ಹೋಗಿರುತ್ತವೆ’ ಎಂದಿದ್ದಾರೆ.

‘ಶ್ರೀ ರಾಮಾಯಣದರ್ಶನದಲ್ಲಿ ಕೆಲವು ಗ್ರಾಮೀಣ ಉಪಮೆ ಮಹೋಪಮೆಗಳು’, ‘ಯಶವಂತ ಚಿತ್ತಾಲರ ‘ಆಟ’: ಒಂದು ಅಧ್ಯಯನ’, ‘ಶೂನ್ಯ ಸಂಪಾದನೆಯಲ್ಲಿನ ಎರಡು ಪ್ರಸಂಗಗಳು’, ‘ತೆರೆದ ಮನದ ಚದುರಂಗ ಸಾಹಿತ್ಯ’, ‘ಭಾರತೀಯ ಶೂದ್ರ ಪುರಾಣ’, ‘ಏನಯ್ಯಾ ಇದೆ, ನಿಮ್ಮ ಕನ್ನಡದಲ್ಲಿ?’, ‘ನವೋದಯದ ವಸಂತ ವೈಭವ’, ‘ನಳ ಚರಿತ್ರೆ: ಒಂದು ಅನ್ವೇಷಣೆಯ ಕಥೆ’ ಮೊದಲಾದ ಬರಹಗಳ ಶೀರ್ಷಿಕೆಗಳೇ ಈ ಕೃತಿಯ ವೈವಿಧ್ಯವನ್ನು ಸಾರುತ್ತವೆ.

***

ಕೃತಿ: ವಾಗರ್ಥ– ಸಾಹಿತ್ಯ, ಸಾಮಾಜಿಕ ವಿಮರ್ಶಾ ಲೇಖನ ಸಂಪುಟ

ಲೇ: ಡಿ.ಎ. ಶಂಕರ್‌

ಪ್ರ: ಸಂವಹನ, ಮೈಸೂರು

ಸಂ: 082–2476019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT