ಭಾನುವಾರ, ಸೆಪ್ಟೆಂಬರ್ 26, 2021
27 °C

ಮರಾಠಿ ಕಥಾಲೋಕ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥಾ ಸಂಕಲನ: ‘ಹತ್ತು ಹವಳ ಮುತ್ತು'
ಕನ್ನಡಕ್ಕೆ: ಜೆ.ದಾಜೀಬಾ
ಪ್ರಕಾಶನ: ರವಿಕಿರಣ ಪ್ರಕಾಶನ, ಬಾದಾಮಿ
ಪುಟ: 102
ಮೊಬೈಲ್‌ ಸಂಖ್ಯೆ: 9986416814

ಮರಾಠಿ ಕಥಾಲೋಕವನ್ನು ಶ್ರೀಮಂತಗೊಳಿಸಿದ ಐವರು ಲೇಖಕರ ತಲಾ ಎರಡು ಕಥೆಗಳನ್ನು ಜೆ.ದಾಜೀಬಾ ಅವರು ಕನ್ನಡೀಕರಿಸಿದ್ದಾರೆ. ಅನುವಾದದ ಚೌಕಟ್ಟಿನಲ್ಲಿಯೇ ಮನಮುಟ್ಟುವಂತೆ ಹೇಳುವ ಎಲ್ಲ ಸಾಧ್ಯತೆಗಳನ್ನೂ ಲೇಖಕರು ಬಳಸಿಕೊಂಡಿದ್ದಾರೆ. ಹತ್ತೂ ಕಥೆಗಳು ಮಾನವತಾವಾದದ ಭಿನ್ನ ಸ್ವರೂಪಗಳಂತೆ ಇವೆ. ಆದರೆ ಹಿನ್ನೆಲೆ ಮತ್ತು ಪಾತ್ರಗಳು ಮಾತ್ರ ಬೇರೆ ಬೇರೆ ಅಷ್ಟೇ...

ತಂದೆಯ ಸಾವಿನ ದುಃಖದ ನಡುವೆಯೂ ವೈದ್ಯ ವೃತ್ತಿಯನ್ನು ಮರೆಯದೇ ತಾಯಿ, ಮಗುವನ್ನು ಬದುಕಿಸಿದ ವೈದ್ಯೆಯ ಕಥೆ ‘ತೋಲ’, ಇಡೀ ಕಥಾ ಸಂಕಲನಕ್ಕೆ ಮುನ್ನುಡಿ ನೀಡುತ್ತದೆ.

ಸಂಗೀತದ ಹಿನ್ನೆಲೆ ಇಲ್ಲದಿದ್ದರೂ ಪ್ರತಿಷ್ಠೆಗಾಗಿ ಕಛೇರಿಯ ಟಿಕೆಟ್‌ ಕೊಳ್ಳುವವರು ಒಂದು ಕಡೆಯಾದರೆ, ಸ್ವಂತ ಗುರುವಿನ ಸಂಗೀತ ಕಛೇರಿ ಕೇಳಲು ದುಡ್ಡಿಲ್ಲದ ಬಾಲಕಿಯ ಉತ್ಸಾಹ ಇನ್ನೊಂದೆಡೆ ಅನಾವರಣಗೊಂಡಿರುವುದು ‘ಒಂದು ವಿಶಿಷ್ಟ ಯಮನ’ ಕಥೆಯಲ್ಲಿ. ಹಣದ ಮುಂದೆ ಭಾವನೆ ಹಾಗೂ ಸಂಬಂಧಗಳು ಯಾವ ದಿಕ್ಕಿನಲ್ಲಿ ಚಲಿಸುತ್ತವೆ? ಎಂಬುದನ್ನು ಇಡೀ ಸಂಕಲನ ಕಣ್ಣಿಗೆ ಕಟ್ಟುತ್ತದೆ. ಕನ್ನಡದ ಕೆಲವು ಪದಗಳನ್ನು ಭಿನ್ನವಾಗಿ ಬಳಸಿರುವುದು ಸರಾಗವಾಗಿ ಓದುವಲ್ಲಿ ತೊಡಕು ಮಾಡುತ್ತದೆ. 

**
ಕೃತಿ: ಗೋಮುಖ (ಕಾದಂಬರಿ)
ಲೇಖಕ: ಡಾ.ಬಿ.ಎಲ್. ವೇಣು
ಪ್ರಕಾಶನ: ಸಹ್ಯಾದ್ರಿ ಪಬ್ಲಿಕೇಷನ್, ಶಿವಮೊಗ್ಗ
ಬೆಲೆ: ₹ 80
ಪುಟ: 104
ಮೊಬೈಲ್: 94498 86390

ಸತ್ಯಘಟನೆ ಆಧಾರಿತವಾಗಿರುವ ಕಾದಂಬರಿ ‘ಗೋಮುಖ’ ಸರಳ ಭಾಷೆಯ ಮೂಲಕವೇ ಕಾದಂಬರಿ ಪ್ರಿಯರನ್ನು ಹಿಡಿದಿಡುತ್ತದೆ. ಸಿನಿಮಾ ಸಂಭಾಷಣೆಕಾರರಾಗಿ ಹೆಸರು ಮಾಡಿರುವ ಡಾ.ಬಿ.ಎಲ್. ವೇಣು ಅವರು, ಕಾದಂಬರಿಯನ್ನು ಸಿನಿಮೀಯ ಶೈಲಿಯಲ್ಲೇ ಬರೆದಿದ್ದಾರೆ. ಬಲಪಂಥೀಯ ಒಲವಿರುವ ನಾಯಕ ಪ್ರವೀಣ್ ಕುಮಾರ್ ಹಾಗೂ ಪ್ರಗತಿಪರ ಚಿಂತನೆಯ ನಾಯಕಿ ಪರಿಮಳಾ ಹೇಗೆ ರಾಜಕಾರಣಿಗಳ ದಾಳವಾಗುತ್ತಾರೆ ಎಂಬುದೇ ಕಾದಂಬರಿಯ ಹೂರಣ. ಮೇಲ್ಜಾತಿಯ ನಾಯಕಿ, ಕೆಳಜಾತಿಯ ನಾಯಕನ ಬದುಕಿನ ವೈರುಧ್ಯಗಳ ಜತೆಗೆ ಅಧಿಕಾರ ದಾಹಿ ರಾಜಕಾರಣಿಯ ವಿಕೃತ ಮನಸೂ ಇಲ್ಲಿ ಅನಾವರಣಗೊಂಡಿದೆ. ‘ಗೋಮುಖ’ ಕಾದಂಬರಿ ಗೋವಿನ ಮುಖವಾಡ ತೊಟ್ಟ ಸಮಾಜಘಾತುಕರ ಚಿತ್ರಣವನ್ನು ನೀಡುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಕನ್ನಡಿಯಂತಿರುವ ‘ಗೋಮುಖ’ ದುರಂತದಲ್ಲಿ ಮುಕ್ತಾಯ ಕಾಣುತ್ತದೆ.

**

ಕೃತಿ: ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ
ಲೇಖಕ: ಪ್ರೊ.ಜಿ.ಅಬ್ದುಲ್‌ ಬಷೀರ್‌
ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು–560018
ಪುಟ: 272
ಬೆಲೆ: 190

ವಚನ ಸಾಹಿತ್ಯ, ಹರಿದಾಸ ಸಾಹಿತ್ಯ, ಇಸ್ಲಾಂ ಸಾಹಿತ್ಯ, ತತ್ವಪದ ಸಾಹಿತ್ಯ ಹಾಗೂ ತಳ ಸಮುದಾಯದ ಸಾಹಿತ್ಯಕ್ಕೆ ಸಂಬಂಧಿಸಿದ 25 ವೈವಿಧ್ಯಮಯ ಲೇಖನಗಳು ಈ ಕೃತಿಯಲ್ಲಿವೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಚಾರಗೋಷ್ಠಿಗಳಲ್ಲಿ ಲೇಖಕರು ಮಂಡಿಸಿದ ಪ್ರಬಂಧಗಳು ಮತ್ತು ಸಾಹಿತ್ಯಕ ಪತ್ರಿಕೆ, ಅಭಿನಂದನ ಗ್ರಂಥ ಹಾಗೂ ಸಂಸ್ಮರಣ ಸಂಪುಟಗಳಲ್ಲಿ ಪ್ರಕಟವಾದ ವಿಮರ್ಶಾ ಲೇಖನಗಳನ್ನು ಒಟ್ಟು ಸೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ಕೃತಿ ರೂಪದಲ್ಲಿ ಹೊರ ತಂದಿದೆ. ಮುಂಗೋಳಿ ಕೊಂಡಗುಳಿ ಕೇಶಿರಾಜ, ದಸರಯ್ಯ, ಚಂದಿಮರಸ, ಕೊಟ್ಟಣದ ಸೋಮಮ್ಮ ಅವರಂತಹ ವಚನ ಸಾಹಿತಿಗಳ ಅಪರೂಪದ ಮಾಹಿತಿ ಇದರಲ್ಲಿವೆ. ಪ್ರತಿ ಲೇಖನಗಳು ಚಿಂತನೆಗೆ ಒರೆಹಚ್ಚುತ್ತವೆ. 

**
ಕೃತಿ: ಪೂರ್ಣ ತೆರೆಯದ ಪುಟಗಳು
ಲೇಖಕ: ಗೋಪಾಲಕೃಷ್ಣ ಕುಂಟಿನಿ
ಪ್ರಕಾಶನ: ಕಥೆಕೂಟ ಪ್ರಕಾಶನ, ದಕ್ಷಿಣ ಕನ್ನಡ
ಪುಟ: 112
ಬೆಲೆ: ₹120
ಮೊ: 90363 12786

ಮೂರು ದಶಕಗಳಿಂದ ಬರೆಯುತ್ತಿರುವ ಕುಂಟಿನಿಯವರ ನಾಲ್ಕನೇ ಕಥಾಸಂಕಲನವಿದು. ಈ ಕಥಾ ಸಂಕಲನದಲ್ಲಿ 13 ಕಥೆಗಳಿವೆ. ಸಂಕಲನದ ಶೀರ್ಷಿಕೆಗೆ ತಕ್ಕಂತೆಯೇ ಕಥೆಗಳನ್ನು ಕಟ್ಟುವ ಶೈಲಿ ಲೇಖಕರದು. ಅವರ ಕತೆಯೊಳಗೆ ಪೂರ್ತಿಯಾಗಿ ಇಳಿಯಲು ಓದುಗನಿಗೊಂದು ಸಣ್ಣ ಸಿದ್ಧತೆ ಬೇಕಾಗಬಹುದೆಂದು ಕಥೆ ಬಗೆಯುವ ಕುರಿತು ಬರಹಗಾರರಿಂದ ಟಿಪ್ಪಣಿ ಬರೆಸಿ ಈ ಕಥೆಗಳ ಬೆನ್ನಿಗೆ ನೀಡಿದ್ದಾರೆ. ಇಲ್ಲಿರುವ ಕಥೆಗಳ ತೀವ್ರತೆ, ಆಳದ ಬಿಸುಪು ಮತ್ತು ಈ ಕಥೆಗಳ ವೇಗಕ್ಕೆ ಓದುಗ ಬೆರಗಾಗದೆ ಇರಲಾರ. ಪ್ರತಿ ಕಥೆಯೂ ಓದಿನ ಸುಖವನ್ನು ಕೊಡಬಲ್ಲವಾಗಿವೆ. ಇಲ್ಲಿರುವ ಕಥೆಗಳ ಪೈಕಿ ‘ಇಬ್ಬಂದಿ’, ‘ಹಿತ್ತಿಲು’, ‘ನಿಜದರಾಜ’, ‘ನಾತಿಚರಾಮಿ’, ‘ಮರಳ ಮೇಲಿನ ದೋಣಿಗೆ ಬಿಗಿದ ಹಗ್ಗ’ ಹಾಗೂ ‘ಸಂಚಯನ’ ಕಥೆಗಳು ಮನಸಿನಲ್ಲಿ ಧೀರ್ಘಕಾಲ ಉಳಿದುಬಿಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು