ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ ಎಂದರೇನು?

ತತ್ವಶಾಸ್ತ್ರ
Last Updated 14 ಜೂನ್ 2019, 19:30 IST
ಅಕ್ಷರ ಗಾತ್ರ

‘ದರ್ಶನ’ (ತತ್ತ್ವಶಾಸ್ತ್ರ) ಶಬ್ದದ ಇಂಗ್ಲಿಷ್‌ ಅನುವಾದವನ್ನು ಸಾಮಾನ್ಯವಾಗಿ ‘ಫಿಲಾಸಫಿ’ (Philosophy) ಎಂದು ಮಾಡಲಾಗುತ್ತಿದೆ. ಇದು ‘ಫಿಲಾಸ್‌’ (Philos) ಮತ್ತು ‘ಸೋಫಿಯಾ’ (Sophia) - ಎಂಬ ಎರಡು ಗ್ರೀಕ್ ಪದಗಳಿಂದಾಗಿದ್ದು, ಅದರ ಅರ್ಥವು ಕ್ರಮವಾಗಿ ‘ಪ್ರೇಮ’ ಮತ್ತು ‘ವಿದ್ಯೆ’ (ಜ್ಞಾನ) ಎಂದಾಗುತ್ತದೆ. ಈ ದೃಷ್ಟಿಯಿಂದ ಫಿಲಾಸಫಿಯ ಅರ್ಥವು ವಿದ್ಯಾಪ್ರೇಮ ಅಥವಾ ಜ್ಞಾನಾನುರಾಗ ಎಂದಾಯಿತು.

ಮಾನವನ ಮನಸ್ಸಿನಲ್ಲಿ ತನ್ನನ್ನು ಮತ್ತು ಬಾಹ್ಯ ಪ್ರಪಂಚವನ್ನು ಅರಿಯುವ ಸಹಜ ಪ್ರವೃತ್ತಿ ಇರುತ್ತದೆ. ಬಾಹ್ಯ ಪ್ರಪಂಚದಲ್ಲಿಯೇ ಮನುಷ್ಯನ ಉತ್ಪತ್ತಿ, ಸ್ಥಿತಿ, ಲಯಗಳುಂಟಾಗುತ್ತಿದ್ದರೂ ಮನುಷ್ಯನು ಕೇವಲ ಶರೀರ, ಇಂದ್ರಿಯ, ಪ್ರಾಣವಾಗಿರದೇ ಇನ್ನೂ ಏನೇನೋ ಆಗಿರುತ್ತಾನೆ. ಈ ‘ಇನ್ನೂ ಏನೇನೋ’ ಎಂಬುದರ ಜಿಜ್ಞಾಸೆಯೂ ಸ್ವಾಭವಾವಿಕವಾದುದು. ದಾರ್ಶನಿಕ ಚಿಂತನೆಯು ಮನುಷ್ಯನ ಮೂಲಪ್ರವೃತ್ತಿಯಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಜೀವನದೃಷ್ಟಿ, ಜೀವನಮೌಲ್ಯ ಮತ್ತು ದರ್ಶನಗಳಿರುತ್ತವೆ.

ಸಾಮಾನ್ಯವಾಗಿ ಪಾಶ್ಚಾತ್ಯ ತತ್ತ್ವಶಾಸ್ತ್ರವು ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿದ್ದರೂ, ಕೆಲವು ಪಾಶ್ಚಾತ್ಯ ತತ್ತ್ವಜ್ಞಾನಿಗಳು ಇಂದ್ರಿಯಜ್ಞಾನದ ಮಹತ್ವವನ್ನು ಒಪ್ಪಿದ್ದಾರೆ. ಭಾರತೀಯ ತತ್ತ್ವಶಾಸ್ತ್ರವು ವಿಶೇಷವಾಗಿ ಅಪರೋಕ್ಷಾನುಭೂತಿ(ಯೋಗಪ್ರತ್ಯಕ್ಷ)ಗೆ ಬೌದ್ಧಿಕ ಚಿಂತನೆಗಿಂತಲೂ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ‘ದರ್ಶನ’ ಶಬ್ದದ ಅರ್ಥವೂ ಕೂಡ ಸಾಕ್ಷಾತ್ಕಾರ, ಅಂದರೆ ಪರಮತತ್ತ್ವದ ಸಾಕ್ಷಾತ್ಕಾರ ಅಥವಾ ಅನುಭಾವ ಎಂದಾಗುತ್ತದೆ. ‘ದರ್ಶನ’ ಶಬ್ದವು ಸಾಕ್ಷಾತ್ಕಾರದ ಸಾಧನಗಳನ್ನೂ ಒಳಗೊಳ್ಳುತ್ತದೆ. ಈ ಸಾಧನಗಳೆಂದರೆ ಶ್ರುತಿ ಮತ್ತು ತರ್ಕ. ಆತ್ಮನನ್ನು ಅರಿ – ಇದು ಭಾರತೀಯ ತತ್ತ್ವಶಾಸ್ತ್ರದ ಘೋಷಣೆಯಾಗಿದೆ.

(‘ಭಾರತೀಯ ತತ್ತ್ವಶಾಸ್ತ್ರ: ವಿಮರ್ಶಾತ್ಮಕ ಅಧ್ಯಯನ’; -ಚಂದ್ರಧರಶರ್ಮಾ; ಅನುವಾದ -ಸಿದ್ಧರಾಮಸ್ವಾಮಿಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT