ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಗಾಂಧಿ ಬಳ್ಳಿ’ಯಲ್ಲಿ ಹೊಸ ಹೂವು

Last Updated 18 ಜೂನ್ 2022, 19:30 IST
ಅಕ್ಷರ ಗಾತ್ರ

ಕ್ರಾಂತಿಯ ಪರಿಭಾಷೆಯಲ್ಲಿ ನಡೆಯುವ ಬದಲಾವಣೆಗಳು ಹಿಂಸೆಯೊಂದಿಗೆ ತಳುಕು ಹಾಕಿಕೊಂಡಿರುವುದನ್ನು ಚರಿತ್ರೆಯುದ್ದಕ್ಕೂ ಕಾಣಬಹುದು. ಇದಕ್ಕೆ ಅಪವಾದ ಗಾಂಧಿಮಾರ್ಗ. ಸತ್ಯ ಮತ್ತು ಅಹಿಂಸೆಗಳನ್ನು ಭಾರತದ ಸ್ವಾತಂತ್ರ್ಯದ ಚಳವಳಿಯ ಕೇಂದ್ರವಾಗಿಸಿಕೊಂಡು ಯಶಸ್ಸು ಸಾಧಿಸಿದ ಹಿರಿಮೆ ಗಾಂಧೀಜಿಯದು. ಈ ಸತ್ಯ ಮತ್ತು ಅಹಿಂಸೆಗಳು ಗಾಂಧಿ ಅವರ ಒಳಗೂ ಹೊರಗೂ ಆವರಿಸಿಕೊಂಡಿದ್ದುದು ಹೇಗೆ ಎನ್ನುವುದರ ವಿಶ್ಲೇಷಣೆ – ಪಾಸ್ಕಲ್ ಆಲೆನ್ ನಜರತ್‌ರ ‘ಗಾಂಧಿ: ಆತ್ಮಶಕ್ತಿಯ ಯೋಧ’ ಕೃತಿ. ‘ಕ್ರಾಂತಿಯನ್ನೇ ಕ್ರಾಂತಿಕಾರಕವಾಗಿಸಿ ಅದನ್ನು ಅಧ್ಯಾತ್ಮೀಕರಣಗೊಳಿಸಿದ’ ಎನ್ನುವ ಶೀರ್ಷಿಕೆಯ ಅಡಿಟಿಪ್ಪಣಿ, ಪುಸ್ತಕದ ಹೂರಣದ ಕುರಿತ ಹೇಳಿಕೆಯೂ ಆಗಿದೆ.

ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿ ದೇಶವಿದೇಶಗಳಲ್ಲಿ ಕಾರ್ಯ ನಿರ್ವಹಿಸಿರುವ ಪಾಸ್ಕಲ್‌ ಅಲೆನ್‌ ಅವರ ತೀರದ ಆಸಕ್ತಿಗಳಲ್ಲೊಂದಾದ ‘ಗಾಂಧಿಪ್ರೇಮ’ದ ಅಭಿವ್ಯಕ್ತಿಯಾಗಿ ಈ ಕೃತಿಯನ್ನು ನೋಡಬಹುದು. ಈ ಪುಸ್ತಕಕ್ಕೆ ಟಿಪ್ಪಣಿ ರೂಪದ ಪುಟ್ಟ ಮುನ್ನುಡಿ ಆಭರಣ ತೊಡಿಸಿರುವ ದಲಾಯಿ ಲಾಮ – ‘ಪ್ರಾಮಾಣಿಕವಾದ ಸಹಾನುಭೂತಿ ಎಂದರೆ ಗಾಂಧಿ ಮಾಡಿದ ಹಾಗೆ ಇತರರೊಂದಿಗೆ ಸಾಮೀಪ್ಯದ ಭಾವ ಬೆಳೆಸಿಕೊಳ್ಳುವುದು. ಅದರೊಂದಿಗೆ ಅವರ ಕಲ್ಯಾಣದ ಹೊಣೆಗಾರಿಕೆಯ ಭಾವ ಹೊಂದಿರುವುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮಾತನ್ನು ಓದುಗರಿಗೆ ಮನದಟ್ಟು ಮಾಡಿಸುವ ಪ್ರಾಂಜಲ ಪ್ರಯತ್ನ ಪಾಸ್ಕಲ್‌ರ ಗಾಂಧಿ ಕೃತಿ.

ಅಂಜುಬುರುಕ ಬಾಲಕನೊಬ್ಬ ಆತ್ಮಶಕ್ತಿಯೊಂದಿಗೆ ದಿಟ್ಟತನ ರೂಢಿಸಿಕೊಳ್ಳುವುದು ಹಾಗೂ ಮನುಕುಲದ ಏಳ್ಗೆಗಾಗಿ ತನ್ನ ಬದುಕನ್ನೇ ಮುಡಿಪಾಗಿಡುವ ಕಥನವನ್ನು ಪಾಸ್ಕಲ್‌ ಪಕ್ಷಿನೋಟದಲ್ಲಿ ಚಿತ್ರಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿಯ ಪಾತ್ರವನ್ನು ಹೇಳುವುದಷ್ಟೇ ಈ ಕೃತಿಯ ಉದ್ದೇಶವಲ್ಲ. ಸ್ವಾತಂತ್ರ್ಯಾನಂತರ ವಿಶ್ವದ ಕೆಲವು ದೇಶಗಳು ಪ್ರಜಾಪ್ರಭುತ್ವ ಮಾದರಿಯ ಬಗ್ಗೆ ಕುತೂಹಲ ತಳೆಯಲಿಕ್ಕೆ ಗಾಂಧಿ ಒದಗಿಸಿದ ಪ್ರೇರಣೆಯನ್ನು ವಿಶ್ಲೇಷಿಸುವುದು ಲೇಖಕರ ಉದ್ದೇಶವಾಗಿದೆ. ಪುಸ್ತಕದ ಶೀರ್ಷಿಕೆಯಲ್ಲಿನ ‘ಯೋಧ’ ವಿಶೇಷಣದೊಂದಿಗೆ ನೆನಪಾಗುವ ಕ್ಷಾತ್ರವ್ಯಕ್ತಿತ್ವವನ್ನು ಲೇಖಕರು ಆರ್ದ್ರಗೊಳಿಸಿ ಅಧ್ಯಾತ್ಮ ಸ್ಪರ್ಶ ನೀಡಿರುವುದು ಗಮನಾರ್ಹ.

ಹಿಂದೂಧರ್ಮದ ಅತಿ ಮುಖ್ಯ ಗುಣಗಳಲ್ಲಿ ಸತ್ಯ ಮತ್ತು ಅಹಿಂಸೆಗಳಿದ್ದರೂ, ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು ಎನ್ನುವ ಲೇಖಕರು, ಸತ್ಯ ಮತ್ತು ಅಹಿಂಸೆಯನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಮೊದಲು ಜೋಡಿಸಿದವರು ಗಾಂಧಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ನಿಲುವಿಗೆ ಕೃತಿಯ ಉದ್ದಕ್ಕೂ ಸಮರ್ಥನೆಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ. ವಿಶ್ವದ ಮಹಾನ್‌ ಚೇತನಗಳ ಟೀಕೆ–ಟಿಪ್ಪಣಿಗಳ ಮೂಲಕ ಗಾಂಧಿ ತಾವು ಬದುಕಿದ ಕಾಲದ ಮೇಲೆ ಬೀರಿದ ಪ್ರಭಾವವನ್ನು ಕಟ್ಟಿಕೊಡುವ ಪ್ರಯತ್ನ ಕೃತಿಯಲ್ಲಿದೆ.

ಗಾಂಧೀಜಿ ತನ್ನನ್ನು ತಾನು ‘ಸನಾತನಿ ಹಿಂದೂ’ ಎಂದು ಕರೆದುಕೊಂಡರೂ, ಆ ಸನಾತನಿಯ ವ್ಯಕ್ತಿತ್ವದ ಮೇಲೆ ವಿವಿಧ ಧರ್ಮಗಳು ಬೀರಿದ್ದ ಪ್ರಭಾವವನ್ನು ಪಾಸ್ಕಲ್‌ ಪುಟ್ಟದಾಗಿಯಾದರೂ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ‘ನೈತಿಕತೆಯೊಂದಿಗೆ ಹೊಂದಿಕೊಳ್ಳದ ಹಾಗೂ ವೈಚಾರಿಕತೆಗೆ ಒಪ್ಪಿಗೆಯಾಗದ ಯಾವುದೇ ಧಾರ್ಮಿಕ ತತ್ವವನ್ನು ನಾನು ನಿರಾಕರಿಸುತ್ತೇನೆ’ ಎನ್ನುವ ಮಾತು, ಧರ್ಮದ ಕುರಿತು ಗಾಂಧಿ ಮಹಾತ್ಮನ ನಿಲುವನ್ನಷ್ಟೇ ಹೇಳುವುದಿಲ್ಲ; ಎಲ್ಲ ಕಾಲಕ್ಕೂ ನಮಗೆ ಅಗತ್ಯವಾದ ‘ಧರ್ಮ ವಿವೇಕ’ ಯಾವುದೆನ್ನುವುದನ್ನೂ ಮನಗಾಣಿಸುತ್ತದೆ.

ಗಾಂಧಿ ಅನ್ವೇಷಣೆ ಎಂದಿಗೂ ಬರಿದಾಗದ ಅಕ್ಷಯಗಣಿ. ಆ ಗಣಿಯಿಂದ ಪಾಸ್ಕಲ್‌ ಅವರು ಮೊಗೆದು ದಾಖಲಿಸಿರುವ ಬೊಗಸೆನೋಟಗಳನ್ನು ಪ್ರೊ. ಮೀನಾ ದೇಶಪಾಂಡೆ ಕನ್ನಡಕ್ಕೆ ತಂದಿದ್ದಾರೆ. ಬಹುತ್ವ ಭಾರತದ ಆಶಯಗಳು ಗಾಸಿಗೊಂಡಂತೆ ಕಾಣಿಸುತ್ತಿರುವ ವರ್ತಮಾನದಲ್ಲಿ, ಹೊಸ ತಲೆಮಾರಿಗೆ ಗಾಂಧಿಯನ್ನು ಮತ್ತೆ ಮತ್ತೆ ನೆನಪಿಸುವ ಮೂಲಕ ‘ಭಾರತೀಯ ನಡೆ–ನುಡಿ’ ಯಾವುದಾಗಿರಬೇಕೆಂದು ಸೂಚಿಸುವ ಇಂಥ ಕೃತಿಗಳಿಗೆ ವಿಶೇಷ ಮಹತ್ವವಿದೆ.

ಕೃತಿ: ಗಾಂಧಿ: ಆತ್ಮಶಕ್ತಿಯ ಯೋಧ

ಮೂಲ: ಪಾಸ್ಕಲ್ ಆಲೆನ್ ನಜರತ್, ಕನ್ನಡಕ್ಕೆ: ಪ್ರೊ. ಮೀನಾ ದೇಶಪಾಂಡೆ

ಪು: 198; ಬೆ: ರೂ. 170

ಪ್ರ: ಗಾಂಧೀ ಸೆಂಟರ್‌ ಆಫ್‌ ಸೈನ್ಸ್‌ ಅಂಡ್‌ ಹ್ಯೂಮನ್ ವ್ಯಾಲ್ಯೂಸ್‌, ಬೆಂಗಳೂರು. ಫೋನ್: 080–22266525

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT