ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೇಟರನ ಭಾಷಾಂತರ ಪುಸ್ತಕ

Last Updated 14 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ಕನ್ನಡ-ಇಂಗ್ಲಿಷ್ ಮೊದಲನೇ ಭಾಷಾಂತರ ಪುಸ್ತಕವು’ - First Canarese-English Translator – A course of 42 Excercises- ಕೃತಿಯನ್ನು ರಚಿಸಿದವನು ಆಲ್ಬರ್ಟ್ ಗ್ರೇಟರ್. 93 ಪುಟಗಳ ಈ ಕೃತಿಯನ್ನು 1868ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್‍ನಲ್ಲಿ ಸ್ಟೋಲ್ಷ್ ಮತ್ತು ರ‍್ಯೂದರ್ ಛಾಪಿಸಿರುತ್ತಾರೆ. ಈ ಕೃತಿಯನ್ನಲ್ಲದೆ ಗ್ರೇಟರ್ ಕೊಡಗು ದೇಶದ ವಿವರಣ (1869), ಕನ್ನಡ ಕವಿತಾ ಮಾಲಿಕೆ, ಕ್ರೈಸ್ತ ಸ್ತೋತ್ರಗಳ ಪುಸ್ತಕವು, ಕೊಡಗರ ಹಾಡುಗಳು (1969) ಮುಂತಾದ ಕೃತಿಗಳನ್ನು ಗ್ರೇಟರ್‌ ರಚಿಸಿದ್ದಾನೆ.

ಕೊಡಗು ಹಾಗೂ ಮಂಗಳೂರಿನಲ್ಲಿ ಅಧ್ಯಾಪಕನಾಗಿದ್ದ ಗ್ರೇಟರ್ ಕೊಡಗು-ಮೈಸೂರು ಜಿಲ್ಲೆಗಳ ಹಲವು ಶಾಸನಗಳುಹಾಗೂ ಗಂಗ-ಚೇರ ವಂಶದ ರಾಜಮನೆತನಗಳನ್ನು ಕುರಿತ ಚಾರಿತ್ರಕ ಹಾಗೂ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾನೆ. ಪ್ರಸ್ತುತ ‘ಕನ್ನಡ–ಇಂಗ್ಲಿಷ್ ಮೊದಲನೇ ಭಾಷಾಂತರ ಪುಸ್ತಕವು’ ಕೃತಿ ಅಂದಿನ ಕಾಲಘಟ್ಟದಲ್ಲಿ ಹಲವಾರು ವರ್ಷಗಳ ಕಾಲ ಪಠ್ಯಪುಸ್ತಕವಾಗಿತ್ತು. ಬೈಬಲ್ ಗೀತೆಗಳು ಮತ್ತು Tables of Canarese Grammar (1884) ಕೃತಿಗಳನ್ನು ರಚಿಸಿದ ಗ್ರೇಟರ್ ಹಾಗೂ ಪ್ರಸ್ತುತ ಕೃತಿಕಾರ ಗ್ರೇಟರ್ ಇಬ್ಬರೂ ಬೇರೆ ಬೇರೆ. ಇವನ ಕವಿತಾ ಸಾಮರ್ಥ್ಯಕ್ಕೆ ಕೊಡಗರ ಹಾಡುಗಳು ಕೃತಿಯಲ್ಲಿ ಬರುವ ‘ಕೊಡಗು ಸ್ವದೇಶವು| ಎಷ್ಟೊ ಚಂದವಾದುದು| ಬೆಟ್ಟ ಗುಡ್ಡ ತುದಿಯೊ| ಮಲೆನಾಡು ತೀರವೊ| ನೀಲಬಣ್ಣ ಸಾಗರ| ಸುತ್ತು ಎಲ್ಲು ಕಾಣ್ಬುದು|’ ಎನ್ನುವ ಸಾಲುಗಳನ್ನು ಗಮನಿಸಬಹುದು.

ದೇಶಾಂತರ, ಭಾಷಾಂತರ ಮತ್ತು ವೇಷಾಂತರಗಳು ಮನುಷ್ಯನ ಮೂಲಭೂತ ಪ್ರವೃತ್ತಿಯಲ್ಲೇ ಅಡಗಿವೆ. ದೇಶಾಂತರ ಮತ್ತು ಭಾಷಾಂತರ ಒಂದಕ್ಕೊಂದು ಪೂರಕವಾಗಿರುತ್ತವೆ. ಅದರಲ್ಲೂ ಭಾರತದಂತಹ ರಾಷ್ಟ್ರವು ವಸಾಹತುಷಾಹಿಗಳ ಆಳ್ವಿಕೆಗೆ ಒಳಗಾದಾಗ ಭಾಷಾಂತರ ಅನಿವಾರ್ಯವಾಯಿತು. ಇಂತಹ ಭಾಷಾಂತರಗಳು ಭಾರತೀಯ ಭಾಷೆಗಳ ವ್ಯಾಪಕ ಚಲಾವಣೆಗೆ ಕಾರಣವಾದದ್ದು ಮಾತ್ರವಲ್ಲದೆ ಭಾರತೀಯ ಬಹುಸಂಸ್ಕೃತಿಗಳ ಜಾಗತಿಕ ಪ್ರಸರಣಕ್ಕೂ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ ಕನ್ನಡ ಗುರಿ ಭಾಷೆಯಾಗಿಯೋ ಆಕರ ಭಾಷೆಯಾಗಿಯೋ ಭಾಷಾಂತರ ಕಾರ್ಯಪ್ರಕ್ರಿಯೆಯಲ್ಲಿ ತನಗೆ ತಾನು ತೆರೆದುಕೊಂಡಾಗ ಹಾಗೂ ಹತ್ತೊಂಬತ್ತನೆಯ ಶತಮಾನದ ವಿದೇಶೀ ಭಾಷಾ ವಿದ್ವಾಂಸರು ಕನ್ನಡವನ್ನು ತಮ್ಮ ಭಾಷಾಂತರ ಪ್ರಕ್ರಿಯೆಗಳಲ್ಲಿ ತೊಡಗಿಸಿದಾಗ ಕನ್ನಡ ಭಾಷೆ ಹಾಗೂ ಸಾಹಿತ್ಯವು ಒಂದು ಅಪೂರ್ವ ಹೊಸ ಕಾಂತಿ ಹಾಗೂ ತೇಜಸ್ಸುಗಳನ್ನು ಪಡೆದುಕೊಂಡದ್ದನ್ನು ನಾವು ಗುರುತಿಸಬೇಕಿದೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿ ಗ್ರೇಟರನ ಈ ಮಹತ್ವದ ಕೃತಿಯನ್ನು ಗಮನಿಸಬೇಕು.

ಈ ಕೃತಿಯಲ್ಲಿ ಒಟ್ಟು 42 ಭಾಷಾಂತರಗಳ ಮಾದರಿ ಅಭ್ಯಾಸ ಪಾಠಗಳಿದ್ದು ಪರಿಶಿಷ್ಠದಲ್ಲಿ ಸಂಖ್ಯಾವಾಚಕಗಳು, ಸಂಖ್ಯಾಪೂರಣಗಳು, irregular verbs, ಇಂಗ್ಲಿಷ್ ಮತ್ತು ಕನ್ನಡ ಶಬ್ದಕೋಶ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಶಬ್ದಕೋಶಗಳನ್ನು ನೀಡಿರುವುದು ನಿಜಕ್ಕೂ ಉಪಯುಕ್ತವಾಗಿದೆ. ಒಂದು ದೃಷ್ಟಿಯಿಂದ ದ್ವಿಭಾಷಾ ಮತ್ತು ಬಹುಭಾಷಾ ಶಬ್ದಕೋಶಗಳು ಕೂಡಾ ಭಾಷಾಂತರವೇ. ಆದರೆ ಅದು ಶಬ್ದದ ನೆಲೆಯಲ್ಲಿ ಇರುತ್ತದೆ.

ಇಲ್ಲಿನ 42 ಅಧ್ಯಾಯಗಳು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಿಗೆ ಭಾಷಾಂತರಗಳಾಗಿದ್ದು ಇಂಗ್ಲಿಷ್ ಆಕರ ಭಾಷೆಯಾಗಿಯೂ ಕನ್ನಡ ಗುರಿ ಭಾಷೆಯೂ ಆಗಿದೆ. ಅಷ್ಟೂ ಅಧ್ಯಾಯಗಳು ವ್ಯಾಕರಣದ ವಿವಿಧ ಪರಿಕಲ್ಪನೆಗಳಾದ ನಾಮಪದ, ಕ್ರಿಯಾಪದ, ಗುಣವಾಚಕ, ಸರ್ವನಾಮ, ವಿಭಕ್ತಿ ಪ್ರತ್ಯಯಗಳು ಮುಂತಾದ ಶೀರ್ಷಿಕೆಗಳ ಅಡಿಯಲ್ಲಿ ಕ್ರಮಬದ್ಧವಾದ ವಿಧಾನಶಾಸ್ತ್ರದ (Methodology) ಹಿನ್ನೆಲೆಯಲ್ಲಿ ಸಾಂಗೋಪಾಂಗವಾಗಿ ಭಾಷಾಂತರದ ಪಾಠಗಳನ್ನು ವಿವೇಚಿಸಿದೆ.

ಪದ, ಪದವೃಂದಗಳ (ಶಬ್ದಸಮುಚ್ಛಯ) ನೆಲೆಯಲ್ಲಿ ಇಂಗ್ಲಿಷ್ ಹಾಗೂ ಕನ್ನಡದ ಭಾಷಾಂತರದ ಪಾಠಗಳು ಇವೆ. ವಾಕ್ಯವೃಂದ (Paragraph) ನೆಲೆಯಲ್ಲಿ ಮಾತ್ರ ಇಂಗ್ಲಿಷಿನ Paragraph ಮತ್ತು ಕನ್ನಡದ ವಾಕ್ಯವೃಂದಗಳನ್ನು ನೀಡಲಾಗಿದೆ. ಆದರೆ ಕನ್ನಡದ ವಾಕ್ಯವೃಂದಗಳು ಇಂಗ್ಲಿಷ್ ಪ್ಯಾರಾಗ್ರಾಫಿನ ಭಾಷಾಂತರಗಳಲ್ಲ. ಪ್ರತ್ಯೇಕ ಹಾಗೂ ಸ್ವತಂತ್ರ ಭಾಗಗಳು. ಅವು ವಿದ್ಯಾರ್ಥಿಗಳು ಇಂಗ್ಲಿಷಿನಿಂದ ಕನ್ನಡಕ್ಕೂ ಕನ್ನಡದಿಂದ ಇಂಗ್ಲಿಷಿಗೂ ಭಾಷಾಂತರ ಮಾಡಬೇಕಾದ ಅಭ್ಯಾಸ ಪಾಠಗಳಾಗಿವೆ.
ನಿದರ್ಶನಕ್ಕಾಗಿ ಒಂದು ಪಾಠವನ್ನು ಗಮನಿಸಬಹುದು:

14ನೇ ಪಾಠ

Present Tense ವರ್ತಮಾನ ಕಾಲ.
Singular
I am ನಾನಿದ್ಧೇನೆ, Thou art ನೀನಿದ್ಧೀ, He is ಅವನು ಇದ್ಧಾನೆ... ಹೀಗೇ ಸಾಗುತ್ತದೆ. ಇಲ್ಲಿನ ನಿದರ್ಶನಗಳಲ್ಲಿ ಗ್ರೇಟರ್ ಅಂದು ಬಳಕೆಯಲ್ಲಿದ್ದ ಇಧೆ (ಇದೆ-ಸರಿಯಾದ ರೂಪ) ಎನ್ನುವ ಬಳಕೆಯಲ್ಲಿದ್ದ ರೂಪವನ್ನು ನೀಡಿದ್ದಾನೆ.

ಮುಂದೆ ವಿದ್ಯಾರ್ಥಿಗಳು ಮಾಡಬೇಕಾದ ಅಭ್ಯಾಸ ಪಾಠಗಳನ್ನು ನೀಡುತ್ತಾನೆ. ಅವುಗಳಲ್ಲಿ ಕೆಲವು ಇಂತಿವೆ (ಇಂಗ್ಲಿಷ್‌ನಿಂದ ಕನ್ನಡಕ್ಕೆ):
Is this river deep? It is deep. It is not very deep. Who are you? Are you my friend? I am. Is this man your servant? He is my servant. Are you sick?

(ಕನ್ನಡದಿಂದ ಇಂಗ್ಲಿಷ್‌ಗೆ)
ಈ ಕತ್ತಿಗಳು ಒಳ್ಳೇವೋ? ಅವು ಅಷ್ಟು ಒಳ್ಳೇವಲ್ಲ. ಈ ನೀರು ಒಳ್ಳೇದೋ? ಅದು ಒಳ್ಳೇದಲ್ಲ. ಈ ಮಕ್ಕಳಿಗೆ ಹಾಲು ಉಂಟೋ? ಅವರಿಗೆ ಸ್ವಲ್ಪ ಹಾಲು ಉಂಟು. ಅವರಿಗೆ ಅಷ್ಟು ಹಾಲು ಇಲ್ಲ. ನಿಮಗೆ ಪುಸ್ತಕಗಳುಂಟೋ? ನಮಗೆ ಪುಸ್ತಕಗಳು ಇಲ್ಲ. ನೀವು ಯಾರು?... ಹೀಗೇ ಸಾಗುತ್ತದೆ.

ಅಂದಿನ ಕಾಲಘಟ್ಟದಲ್ಲಿ ಇದೇ ರೀತಿಯ ಭಾಷಾಂತರ, ನಿಘಂಟು ಹಾಗೂ ವ್ಯಾಕರಣದ ಪ್ರಕ್ರಿಯೆಗಳಿಂದ ಕೂಡಿ ರಚನೆಗೊಂಡ ಇನ್ನೊಂದು ಪುಸ್ತಕ ಎಂದರೆ 1846ರಲ್ಲಿ ಮೊದಲ ಆವೃತ್ತಿ ಹಾಗೂ 1864ರಲ್ಲಿ ಪರಿಷ್ಕೃತ ಆವೃತ್ತಿಯಾಗಿ ಪ್ರಕಟಗೊಂಡ ಅಡಕಿ ಸುಬ್ಬರಾವ್ ಅವರ A selection of Stories and Revenue Papers in the Karnataca Language with Translations and Grammatical Analysis, to whom is added Dialogues in Karnataca and English ಎಂಬ ಅಮೂಲ್ಯ ಕೃತಿ. 1864ರ ಆವೃತ್ತಿಯನ್ನು ಪರಿಷ್ಕರಣಗೊಳಿಸಿದ್ದು ವಾಲ್ಟರ್ ಎಲಿಯಟ್ ಎನ್ನುವ ವಿದ್ವಾಂಸ.

ಗ್ರೇಟರ್ ಹಾಗೂ ಅಡಕಿ ಸುಬ್ಬರಾವ್ ಅವರ ಈ ಎರಡು ಭಾಷಾಂತರ ಕೃತಿಗಳನ್ನು ಸಂಶೋಧಕರು ತೌಲನಿಕವಾಗಿ ಅಧ್ಯಯನ ಮಾಡಿ ಭಾಷಾಂತರಗಳ ಪ್ರಕ್ರಿಯೆಗಳನ್ನು ಕುರಿತ ಅನೇಕ ಕುತೂಹಲ ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT