ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲೋಕನ: ಶಿಕ್ಷಣ ಕ್ಷೇತ್ರದ ಹಲವು ಮುಖಗಳ ಅನಾವರಣ

Last Updated 23 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಶಿಕ್ಷಣತಜ್ಞರಾಗಿರುವ ಎಸ್‌.ವಿ. ಮಂಜುನಾಥ್‌ ಶಾಲೆ ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತು ಬರೆದ ಅನುಭವ ಕಥನ ‘ಕಲಿವ ಶಾಲೆಯ ಹಲವು ಮುಖಗಳು’. ಈ ಕೃತಿಯು, ಶಿಕ್ಷಣ ವಿಷಯವನ್ನಿಟ್ಟುಕೊಂಡು ಪತ್ರಿಕೆಗಳಿಗೆ ಬರೆದ ಅಂಕಣಗಳ ಸಂಕಲನವಾಗಿದೆ. ಅಂಕಣಗಳನ್ನು ವಿಷಯವಾರು ವಿಂಗಡಿಸಿ ಸುದೀರ್ಘವಾಗಿ ವಿವರಿಸಿ ಪ್ರಕಟಿಸಿರುವುದು ಕೃತಿಯ ವಿಶೇಷ.

ಕೃತಿಯು ಬಿಡಿಲೇಖನಗಳ ಸಂಗ್ರಹವಾದರೂ, ಶಿಕ್ಷಣರಂಗದ ಕುರಿತು ಲೇಖಕರು ಬೀರಿದ ಸ್ಥೂಲನೋಟ ಇದಾಗಿದೆ. ಹಳ್ಳಿಯಲ್ಲಿನ ಸರ್ಕಾರಿ ಶಾಲೆಯಿಂದ ಹಿಡಿದು, ಅಭಿವೃದ್ಧಿಹೊಂದಿದ ರಾಷ್ಟ್ರ ಅಮೆರಿಕದಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ‘ಮಿಷಿಗನ್‌ ಡೈರಿ’ ಎಂಬ ಲೇಖನದಲ್ಲಿ ಎರಡು ಭಾಗಗಳಲ್ಲಿ ವಿವರಣೆ ನೀಡಿರುವುದು ಕೃತಿಯ ವ್ಯಾಪ್ತಿಗೆ ಸಾಕ್ಷ್ಯ. ಇಲ್ಲಿನ ಬರಹಗಳು ಕೇವಲ ಉಲ್ಲೇಖವಲ್ಲ. ಬದಲಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಸಲಹೆಗಳೂ ಇಲ್ಲಿವೆ. ಆಧುನಿಕ ಮೂಲಸೌಕರ್ಯವಷ್ಟೇ ಮುಖ್ಯವಲ್ಲ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಹಾಗೂ ಅತ್ಯುತ್ತಮ ಬೋಧನೆಯ ವಾತಾವರಣವೂ ಮುಖ್ಯ ಎನ್ನುವುದನ್ನು ಪರಿಗಣಿಸಬೇಕು ಎನ್ನುವುದನ್ನು ಮಿಷಿಗನ್‌ ಡೈರಿ ಮೂಲಕ ಲೇಖಕರು ಒತ್ತಿಹೇಳುತ್ತಾರೆ.

ಕೇರಳದಲ್ಲಿ ಶಿಕ್ಷಕರು ಮತ್ತು ಪೋಷಕರ ಸಂಘ (ಪಿಟಿಎ) ಹೇಗೆ ಸರ್ಕಾರಿ ಶಾಲೆಗಳನ್ನು ಮುನ್ನಡೆಸುತ್ತಿವೆ ಎನ್ನುವ ಕುರಿತು ಇರುವ ಲೇಖನ ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲ ರಾಜ್ಯಗಳಿಗೂ ಮಾದರಿ. ‘ಕೇರಳದ ಶೈಕ್ಷಣಿಕ ವ್ಯವಸ್ಥೆಯಲ್ಲೂ ಸಮಸ್ಯೆಗಳಿಲ್ಲ ಎಂದಲ್ಲ. ಆದರೆ ಅವುಗಳು ಈ ಸವಾಲು ಎದುರಿಸಲು ತಂತ್ರಗಳನ್ನು ರೂಪಿಸಿ ಮುಂದಕ್ಕೆ ಸಾಗುತ್ತಿವೆ’ ಎಂದು ಉಲ್ಲೇಖಿಸುವ ಲೇಖಕರು ಇದೂ ಮಾದರಿಯಾಗಬೇಕು ಎನ್ನುತ್ತಾರೆ. ಶಿಕ್ಷಕರ ಮೇಲೆ ಸರ್ಕಾರ ಹೊರಿಸುವ ಶಿಕ್ಷಣೇತರ ಜವಾಬ್ದಾರಿ, ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಶೋಧನಾತ್ಮಕ ಲೇಖನವೂ ಇಲ್ಲಿದೆ. ಈಶಾನ್ಯ ಕರ್ನಾಟಕಕ್ಕೆ ಸಮಗ್ರ ಶೈಕ್ಷಣಿಕ ಯೋಜನೆಯನ್ನು ರೂಪಿಸಬೇಕಾದ ಅಗತ್ಯವನ್ನೂ ಇಲ್ಲಿ ವಿವರಿಸಲಾಗಿದೆ.

ಕೃತಿಯಲ್ಲಿನ ಬರಹ ಕೇವಲ ಲೇಖನವಾಗದೆ ಕ್ಷೇತ್ರಕಾರ್ಯದಲ್ಲಿ ಕಂಡುಬಂದ ಅನುಭವಗಳಾಗಿವೆ. ಅಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದ ಹಲವು ಆಯಾಮಗಳತ್ತ ದೃಷ್ಟಿಹರಿಸಿ ಆ ಕುರಿತು ವಿಶ್ಲೇಷಿಸುವ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಸಮಸ್ಯೆಗಳನ್ನು, ಸವಾಲುಗಳನ್ನು ಹಾಗೂ ಅದಕ್ಕಿರುವ ಪರಿಹಾರದ ಅಂಶವನ್ನೂ ಕಟ್ಟಿಕೊಟ್ಟಿದೆ. ಶೈಕ್ಷಣಿಕ ಸುಧಾರಣೆಗೆ ಅಗತ್ಯವಾಗಿ ಇಡಬೇಕಾದ ಹೆಜ್ಜೆಗಳು, ವ್ಯವಸ್ಥೆಯ ಕಾರಣದಿಂದ ಶಿಕ್ಷಕರೊಳಗೇ ಹುಟ್ಟುವ ಧ್ವಂದ್ವಗಳು, ಅಧಿಕಾರಿವರ್ಗ ಅನುಭವಿಸುವ ಒತ್ತಡ, ಶಿಕ್ಷಣ ವ್ಯವಸ್ಥೆಯಲ್ಲಿರುವ ವಾಸ್ತವವನ್ನು ಕೃತಿಯು ಉಲ್ಲೇಖಿಸಿದೆ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಹಲವು ವಿಷಯಗಳ ಕುರಿತು ಆರೋಗ್ಯಪೂರ್ಣ ಚರ್ಚೆಗೆ ಈ ಕೃತಿ ಕಾರಣವಾಗಲಿದೆ.

ಕೃತಿ: ಕಲಿವ ಶಾಲೆಯ ಹಲವು ಮುಖಗಳು

ಲೇ: ಎಸ್‌.ವಿ. ಮಂಜುನಾಥ್‌

ಪ್ರ: ಎಂ.ಎಂ.ಪಬ್ಲಿಕೇಷನ್‌, ಬೆಂಗಳೂರು

ಸಂ:9449353830

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT