ಮಂಗಳವಾರ, ಜೂನ್ 2, 2020
27 °C

ಕಂಡುಂಡ ಘಟನೆಗಳ ಕಣ್ಣೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕಣ ಬರಹಗಾರರಿಗೆ ಇರುವ ಸ್ವಾತಂತ್ರ್ಯವೆಂದರೆ ಅದಕ್ಕೆ ದಿನಾಂಕದ ಸೀಲು ಬೇಕೆಂದಿಲ್ಲ. ಬಾಲ್ಯದಲ್ಲೂ ಕಂಡದ್ದು, ಗೆಳೆಯರು ಹೇಳಿದ್ದು, ಟಿವಿಯಲ್ಲಿ ನೋಡಿದ್ದು– ಎಲ್ಲವೂ ಅದರಲ್ಲಿ ಬರಬಹುದು. ಸಿ.ಪಿ.ನಾಗರಾಜ ಅವರು ತಾವು ಹೀಗೆ ಕಂಡುಂಡ ಮತ್ತು ಗೆಳೆಯರು ಕಂಡು ಹೇಳಿದ ಘಟನೆಗಳನ್ನೇ ಇಟ್ಟುಕೊಂಡು ಅದಕ್ಕೆ ಅಂಕಣವೊಂದನ್ನು ಕಟ್ಟಿಕೊಟ್ಟಿದ್ದಾರೆ. ಹಾಗೆ ಬರೆಯುವಾಗಲೂ ಅವರ ಕಣ್ಣೋಟ ನೆಟ್ಟಿರುವುದು ದುಡಿದು ತಿನ್ನುವವರು ಮತ್ತು ದುರ್ಬಲರ ಕಡೆಗೇ. ದುರ್ಬಲರು ಎಂದರೆ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ. ಹೆಣ್ಣುಮಕ್ಕಳ ಬದುಕು ಎಷ್ಟೊಂದು ಕಠೋರವಾಗಿದೆ ಎನ್ನುವುದನ್ನು ಇಲ್ಲಿಯ ಹಲವು ಬರಹಗಳು ಸೂಚಿಸುತ್ತಿವೆ.

ಒಂದು ರೀತಿಯ ನಿರ್ಲಿಪ್ತತೆಯಿಂದ ಕೆಲವು ಘಟನೆಗಳನ್ನು ಬರೆಯುವ ಲೇಖಕರು, ಇನ್ನು ಕೆಲವು ಬರಹಗಳಲ್ಲಿ ಲಘು ವಿನೋದದ ಮುಳ್ಳು ಚುಚ್ಚಿ ಕಿರುನಗೆಗೆ ಕಾರಣರಾಗುತ್ತಾರೆ. ಅಧ್ಯಾಪಕರಾಗಿದ್ದ ಹಿನ್ನೆಲೆಯಲ್ಲಿ  ಇಂತಹ ಬರಹಗಳಲ್ಲಿ ಸ್ವಲ್ಪ ವಾಚಾಳಿತನವಿದ್ದರೂ, ಲಘುಹಾಸ್ಯ ಓದುಗರಿಗೆ ಕಚಗುಳಿ ಇಡುತ್ತದೆ. ಆದರೆ ಕೆಲವು ಬರಹಗಳಲ್ಲಿ ಈ ಕುರಿತು ಅವರ ಅಭಿಪ್ರಾಯವನ್ನು ಇನ್ನಷ್ಟು ವಿಸ್ತರಿಸಬೇಕಿತ್ತು ಅನ್ನಿಸುವುದೂ ಸುಳ್ಳಲ್ಲ. ಪತ್ರಿಕೆಗಳಿಗೆ ಬರೆಯುವಾಗ ಅಂಕಣ ಬರಹಗಳಿಗೆ ಶಬ್ದಮಿತಿಯೂ ಇರುವುದರಿಂದ ಇಲ್ಲಿನ ಕೆಲವು ಲೇಖನಗಳು ಹಠಾತ್ತನೆ ನಿಂತುಬಿಟ್ಟಿರುವುದು ಸಹಜ ಎನ್ನಬಹುದು.

ಸಮಾಜದಲ್ಲಿ ಅನಿವಾರ್ಯ ಎಂಬಂತೆ ಹೂತುಕೊಂಡಿರುವ ಜಾತಿ ಪದ್ಧತಿ, ಪಾಳೇಗಾರಿಕೆ, ಬಡತನ, ದೈವಭಕ್ತಿ ಹಾಗೂ ಹಲವು ಸಾಮಾಜಿಕ ಸಮಸ್ಯೆಗಳ ಕಡೆಗೆ  ಹೆಚ್ಚಿನ ಬರಹಗಳು ಗಮನ ಸೆಳೆಯುತ್ತವೆ. ಈ ಲೇಖನಗಳು ಇಪ್ಪತ್ತು ವರ್ಷಗಳ ಹಿಂದಿನದ್ದು ಎಂದರೂ, ಇವತ್ತಿಗೂ ಸಮಕಾಲೀನ ಸ್ಪರ್ಶ ಇರುವುದು ಗಮನಿಸಬೇಕಾದ ಅಂಶ. ಅಥವಾ ನಮ್ಮ ಸಮಾಜ ಇನ್ನೂ ಬದಲಾಗಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತಿರಬಹುದು. ಸರಳ ಭಾಷೆಯ ನಿರೂಪಣೆಯ ಜೊತೆಗಿರುವ ಕಲಾವಿದ ಎಂ.ಎಲ್‌.ಸೋಮವರದ ಅವರ ರೇಖಾಚಿತ್ರಗಳು ಓದನ್ನು ಇನ್ನಷ್ಟು ಆಪ್ತವಾಗಿಸುತ್ತವೆ. 

ಮುದ್ದೆಗಂಟು
ಲೇಖಕ: ಸಿ.ಪಿ.ನಾಗರಾಜ
ಪ್ರಕಾಶಕ: ನಾಗು ಸ್ಮಾರಕ ಪ್ರಕಾಶ, ಬೆಂಗಳೂರು
ಮೊಬೈಲ್: 9986347521
ಪುಟ: 248
ಬೆಲೆ: ₹200

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು