ಗುರುವಾರ , ಜನವರಿ 20, 2022
15 °C

ಮೈಲ್ಯಾಂಗ್‌‌ ಬುಕ್‌ನಲ್ಲಿ ಕರ್ವಾಲೊ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ಣಚಂದ್ರ ತೇಜಸ್ವಿ

ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಖುಷಿಪಡುವ ಸಂಗತಿಯೊಂದು ಇಲ್ಲಿದೆ. ಎರಡು ತಲೆಮಾರಿನ ಕನ್ನಡಿಗರನ್ನು ಕನ್ನಡದ ಪುಸ್ತಕಗಳ ಓದಿನತ್ತ ಕರೆತಂದ ಮತ್ತು ಸಾಹಿತ್ಯಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯಂತ ಜನಪ್ರಿಯ ಕಾದಂಬರಿ ‘ಕರ್ವಾಲೊ’ವನ್ನು ಈಗ #MyLangBooks ಆಪ್‌ನಲ್ಲೂ ಓದಬಹುದು. ಈ ಕಾದಂಬರಿ ಎಷ್ಟೊ ಜನರ ಬದುಕನ್ನು ಗಾಢವಾಗಿ ಪ್ರಭಾವಿಸಿಯೂ ಇದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಈ ಕೃತಿಯನ್ನು ಈಗ ಮೊಟ್ಟ ಮೊದಲ ಬಾರಿ ಇಬುಕ್ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಜಗತ್ತಿಗೆ ಪರಿಚಯಿಸುತ್ತಿದೆ. ಮೈಲ್ಯಾಂಗ್‌ಬುಕ್‌ ತಂಡದ ಪ್ರಯತ್ನವನ್ನು ‘ನಾತಿಚರಾಮಿ’ ಚಿತ್ರ ಖ್ಯಾತಿಯ ನಿರ್ದೇಶಕ ಮಂಸೋರೆ, ‘ಬೆಲ್ ಬಾಟಂ’ ಚಿತ್ರ ಖ್ಯಾತಿಯ ನಿರ್ದೇಶಕ ಜಯತೀರ್ಥ, ನಟರಾದ ಡಾಲಿ ಧನಂಜಯ, ಅಚ್ಯುತ್‌ಕುಮಾರ್‌ ಅವರು ಪ್ರಶಂಸಿಸಿದ್ದಾರೆ. 

ಕಥಾನಾಯಕ ಹಾಗೂ ವಿಜ್ಞಾನಿ ಕರ್ವಾಲೊ ಅವರು ಮಂದಣ್ಣ, ಪ್ರಭಾಕರ, ಕರಿಯಪ್ಪ, ಎಂಕ್ಟ ಅವರ ಜೊತೆಗೂಡಿ ಹಾರುವ ಓತಿಯೊಂದನ್ನು ಹುಡುಕಾಡುವುದು ಈ ಕಾದಂಬರಿಯ ಕಥಾಹಂದರ. ನವಿರು ಹಾಸ್ಯದ ನಿರೂಪಣೆ, ಪಾತ್ರಗಳ ಕಟ್ಟುವಿಕೆಯ ಕುಸುರಿ, ಭಾಷೆಯ ಸೊಗಡು, ಪ್ರಕೃತಿಯ ಕೌತುಕ, ದೇವರು ಎಂಬ ನಂಬಿಕೆ ಮತ್ತು ವಿಜ್ಞಾನದ ನಡುವಿನ ಹೊಯ್ದಾಟ ಎಲ್ಲವನ್ನು ಹದವಾಗಿ ಬೆರೆಸಿ ತೇಜಸ್ವಿ ಓದುಗರಿಗೆ ಉಣಬಡಿಸಿದ ಈ ಕಾದಂಬರಿ ಬಲು ಅಪರೂಪದ ಮತ್ತು ಬಹು ಮುಖ್ಯವಾದ ಕಾದಂಬರಿ ಎನಿಸಿಕೊಂಡಿದೆ. www.mylang.in ಲಿಂಕ್‌ನಲ್ಲಿ ಕಾದಂಬರಿ ಡೌನ್‌ಲೋಡ್‌ ಮಾಡಿ ಓದಿಕೊಳ್ಳಲು ₹95 ನಿಗದಿಪಡಿಸಲಾಗಿದೆ.

ಕನ್ನಡದ ಅತ್ಯುತ್ತಮ ‍ಪುಸ್ತಕಗಳನ್ನು ಡಿಜಿಟಲ್‌ ವೇದಿಕೆಯಲ್ಲಿ ಓದುವವರಿಗೆ ತಲುಪಿಸುವ ಉದ್ದೇಶದಿಂದ ಮೈಲ್ಯಾಂಗ್‌ಬುಕ್ ಆ್ಯಪ್‌ ರೂಪುಗೊಂಡಿದೆ. ಕರ್ವಾಲೊ ಇ ಪುಸ್ತಕವಾಗಿ ಡಿಜಿಟಲ್‌ ಜಗತ್ತಿಗೆ ಪರಿಚಯಿಸುವ ಯೋಜನೆಯಲ್ಲಿ ಮೈಲ್ಯಾಂಗ್‌ಬುಕ್‌ ಸಂಸ್ಥಾಪಕ ಮತ್ತು ಸಂಪಾದಕ ಪವಮಾನ ಪ್ರಸಾದ್‌ ಹಾಗೂ ನನ್ನ ಪುತ್ರಿಯರಾದ ಸುಸ್ಮಿತಾ ಮತ್ತು ಈಶಾನ್ಯೆ ಅವರ ಪರಿಶ್ರಮ ಸಾಕಷ್ಟಿದೆ ಎನ್ನುತ್ತಾರೆ ರಾಜೇಶ್ವರಿ ತೇಜಸ್ವಿ. 

'ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಎಲ್ಲವೂ ಬೆರಳ ತುದಿಯಲ್ಲೇ ಸಿಗುತ್ತಿದೆ. ತೇಜಸ್ವಿ ಅವರ ಕೃತಿಗಳ ಡಿಜಿಟಲೀಕರಣ ಈ ಹಿಂದೆಯೇ ಆಗಬೇಕಿತ್ತು. ಹಲವು ಮಂದಿ ಡಿಜಿಟಲ್‌ ವೇದಿಕೆಗೆ ತೇಜಸ್ವಿ ಕೃತಿಗಳನ್ನು ಪರಿಚಯಿಸಲು ಅನುಮತಿ ಕೇಳಿದ್ದರು. ಪುಸ್ತಕಗಳು ಹೆಚ್ಚು ಜನರಿಗೆ ತಲುಪಬೇಕೆನ್ನುವುದು ತೇಜಸ್ವಿಯವರ ಆಶಯವೂ ಆಗಿತ್ತು. ಈಗ ಅವರಿದ್ದರೆ ತುಂಬಾ ಖುಷಿಪಡುತ್ತಿದ್ದರು. ಪವಮಾನ ಪ್ರಸಾದ್‌ ಅವರ ಮೂಲಕ ತೇಜಸ್ವಿ ಕನಸು ಈಗ ಸಾಕಾರವಾಗುತ್ತಿದೆ’ ಎನ್ನುವ ಮಾತು ಸೇರಿಸಿದರು ರಾಜೇಶ್ವರಿ ತೇಜಸ್ವಿ.

ಇದು ಬೆಂಗಳೂರು ಮೂಲದ ಡಿಜಿಟಲ್‌ ವೇದಿಕೆ. ತೇಜಸ್ವಿ ಅವರ ‘ಕಾಡಿನ ಕತೆಗಳು’, ‘ಕಿರಗೂರಿನ ಗಯ್ಯಾಳಿಗಳು’, ‘ಜುಗಾರಿ ಕ್ರಾಸ್’ ಹಾಗೂ ‘ಅಣ್ಣನ ನೆನಪು’ ಸೇರಿದಂತೆ ಪ್ರಮುಖ ಕೃತಿಗಳು ಸದ್ಯದಲ್ಲೇ ಡಿಜಿಟಲ್ ಜಗತ್ತಿಗೆ ಪರಿಚಯಿಸುವ ಸುಳಿವನ್ನು ಮೈಲ್ಯಾಂಗ್ ಡಿಜಿಟಲ್‌ ಆ್ಯಪ್‌ ತಂಡ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು