ಶನಿವಾರ, ಜನವರಿ 16, 2021
28 °C
ವಿಮರ್ಶೆ

ಪುಸ್ತಕ ವಿಮರ್ಶೆ: ಹೊಸ ಪರಿಮಳದಲ್ಲಿ ಕುಮಾರವ್ಯಾಸ

ಎಂ.ಎಸ್‌. ಆಶಾದೇವಿ Updated:

ಅಕ್ಷರ ಗಾತ್ರ : | |

Prajavani

ಸರಸ ಸೌಗಂಧಿಕದ ಪರಿಮಳ
ಸಂ: ಕೃಷ್ಣಮೂರ್ತಿ ಹನೂರು
ಪ್ರ: ಅಹರ್ನಿಶಿ
ಮೊ: 9449174662
ಪುಟಗಳು: 448 ಬೆಲೆ: 400

ಕ್ಲಾಸಿಕಲ್ ಪಠ್ಯಗಳಿಗೆ ಹಲವು ಅಸಾಧಾರಣ ಗುಣಗಳಿರುತ್ತವೆ. ಯಾವುದೇ ಕಾಲಧರ್ಮಕ್ಕೂ ಅವು ಸ್ಪಂದಿಸುವ ಪರಿಯೇ ಅವುಗಳ ಜೀವಗುಣ ಎನ್ನುವವರಿದ್ದಾರೆ. ಮಾನವ ಸ್ವಭಾವದ ಮೂಲಾತಿಮೂಲಗಳನ್ನು ಅದರೆಲ್ಲ ಅಸಂಗತ ಮತ್ತು ತಾರ್ಕಿಕ ವಿವರಗಳಲ್ಲಿ, ಅನೂಹ್ಯ ಆಯಾಮಗಳಲ್ಲಿಹಿಡಿದಿಡುವ ಅವುಗಳ ಅನಂತ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಅವುಗಳಿಗೆ ನಾವು ತಾಯ ಮೊರೆಹೋಗುವ ಕಂದಗಳಂತೆ ಮರಳುತ್ತಲೇ ಇರುತ್ತೇವೆ. ಆ ಕಾವ್ಯಗಳು ಹೊಸ ಸ್ವರೂಪ ಮತ್ತು ಆಯಾಮದಲ್ಲಿ ಬಂದಾಗ ಸಂತೋಷ ಸಹಜವಾಗಿಯೇ ಹೆಚ್ಚಾಗುತ್ತದೆ.

ಕೃಷ್ಣಮೂರ್ತಿ ಹನೂರರು ಸಂಪಾದಿಸಿ, ಅಹರ್ನಿಶಿ ಪ್ರಕಟಿಸಿರುವ ‘ಸರಸ ಸೌಗಂಧಿಕದ ಪರಿಮಳ’ ಕುಮಾರವ್ಯಾಸನನ್ನು ಹೊಸ ಪರಿಮಳದಲ್ಲಿ ನಮಗೆ ಕಾಣಿಸಿ, ಕೇಳಿಸುತ್ತದೆ. ಆ ಕಾರಣಕ್ಕಾಗಿಯೇ ಸಂತೋಷವಾಗುತ್ತದೆ. ಹೊಸ ಬಟ್ಟೆ ಧರಿಸಿದ ಕುಮಾರವ್ಯಾಸ ಈ ತನಕ ಕಾಣುತ್ತಿದ್ದದ್ದಕ್ಕಿಂತ ತುಸು ಬೇರೆಯಾಗಿ, ಇನ್ನೂ ಮಹತ್ವದವನಾಗಿ ಕಾಣಿಸುತ್ತಾನೆ. ಕಲಿಯುಗ ದ್ವಾಪರವಾಗುವುದಕ್ಕಿಂತ, ದ್ವಾಪರದ ಕಲಿಯುಗವನ್ನು ಕಾಣಿಸುತ್ತದೆ. ಇದನ್ನು ಸಾಧ್ಯವಾಗಿಸಿರುವುದು ಇದಕ್ಕೆ ಹನೂರರು ಬರೆದಿರುವ ಒಳನೋಟಗಳ ದೀರ್ಘ ಪ್ರಸ್ತಾವನೆ.

ಪ್ರಸ್ತಾವನೆಯೊಂದನ್ನೇ ಪ್ರಕಟಿಸಿದ್ದರೆ ಸಾಕಿತ್ತಲ್ಲವೇ ಎನ್ನುವ ಭಾವವೂ ಹಾದುಹೋಗುತ್ತದೆ. ಆದರೆ, ಆ ದೀರ್ಘ ಪ್ರಸ್ತಾವನೆಯನ್ನು ಓದಿದ್ದಾದ ಮೇಲೆ, ಅದರ ಜೊತೆಯಲ್ಲಿಯೇ ಕಾವ್ಯವು ಇರುವುದು ಪೂರಕವಾಗಿಯೂ ಸಮಂಜಸವಾಗಿಯೂ ಇದೆ ಎನ್ನುವುದು ಮನದಟ್ಟಾಗುತ್ತದೆ. ಕಾವ್ಯರಸಿಕರ ದೃಷ್ಟಿಯಿಂದ ಹೇಳುವುದಾದರೆ, ಈಗಾಗಲೇ ನಮ್ಮ ಹತ್ತಿರ ಇರುವ ಕುಮಾರವ್ಯಾಸ ಭಾರತದ ಹಲವು ಪ್ರಕಟಣೆಗಳ ಜೊತೆ ಇದನ್ನು ಇರಿಸಿಕೊಳ್ಳುವುದು ನಿಜಕ್ಕೂ ಸಂತೋಷವನ್ನೇ ಕೊಡುತ್ತದೆ. ಮೂರ್ನಾಲ್ಕು ಕುಮಾರವ್ಯಾಸರು ನಮ್ಮ ಹತ್ತಿರ ಇದ್ದಾರೆ ಅನ್ನುವ ಕಾವ್ಯಜೀವಿಗಳಿಗೇ ಮೀಸಲಾದ ಆನಂದ ಇದು! ಇದರ ಮುಖಪುಟ ರಚಿಸಿರುವ ಭರತೇಶ್ ಅವರಿಗೆ ನಮ್ಮ ವಿಶೇಷ ಅಭಿನಂದನೆಗಳು ಸಲ್ಲಬೇಕು.

ಹನೂರರ ಪ್ರಸ್ತಾವನೆಯಲ್ಲಿ ಹಲವು ಮುಖ್ಯವಾದ ಅಂಶಗಳಿವೆ. ಕುಮಾರವ್ಯಾಸನನ್ನು ಕುರಿತು ಈ ತನಕ ಬಂದಿರುವ ಬಹುಮುಖಿ ಆಯಾಮಗಳ ಚರ್ಚೆಗಳಿಗಿಂತ ಭಿನ್ನವಾದ ಭಿತ್ತಿಯಲ್ಲಿ ಕುಮಾರವ್ಯಾಸನನ್ನು ನೋಡುವ ಪ್ರಯತ್ನ ಇಲ್ಲಿದೆ. ಮುಖ್ಯವಾಗಿ ಕುಮಾರವ್ಯಾಸನ ಕಾವ್ಯದ ಕೇಂದ್ರವನ್ನು ಇವರು ಗುರುತಿಸಿರುವ ಕ್ರಮ ಕುತೂಹಲಕರವಾಗಿದೆ. ಕುಮಾರವ್ಯಾಸ ಭಕ್ತಕವಿಯೂ ಆಗಿರುವ ಅಂಶದ ಕಾರಣಕ್ಕಾಗಿಯೇ ಅವನು ಜನಮಾನಸದ ಕವಿಯಾಗಿ ಉಳಿದಿರುವ ಅಂಶವನ್ನು ಇವರೂ ಒಪ್ಪುತ್ತಾರೆ. ಆದರೆ ಅಲ್ಲಿಂದ ಮುಂದೆ ಹಲವಾರು ನೆಲೆಗಳಲ್ಲಿ ಇವರು ಕುಮಾರವ್ಯಾಸ ಭಾರತದ ಅನನ್ಯ ಅಂಶಗಳನ್ನು ಗುರುತಿಸಿರುವ ಕ್ರಮದಲ್ಲಿ ಒಂದು ವಿನ್ಯಾಸವಿದೆ. ಅದು, ‘ಬಡವರ ಬಿನ್ನಪ’ವನ್ನು ಹೇಳುವ ಮತ್ತು ಕೇಳುವ ಧ್ವನಿಶಕ್ತಿ ಈ ಕಾವ್ಯಕ್ಕಿದೆ ಎನ್ನುವುದು.

ಉದಾಹರಣೆಗೆ, ವಿರಾಟ್ ಪರ್ವವನ್ನು ಹಳ್ಳಿಗಾಡುಗಳಲ್ಲಿ ಮಳೆ ಬರಲೆಂದು ಓದುವ ಪರಿಪಾಟವನ್ನು ಚರ್ಚಿಸುತ್ತಾ ಹನೂರರು ಇದಕ್ಕೆ ಇರುವ ಇನ್ನೂ ಕೆಲವು ಕಾರಣಗಳನ್ನು ಕೊಡುತ್ತಾರೆ. ಆಯುಧಗಳನ್ನು ಹೆಣದ ಹಾಗೆ ಸುತ್ತಿಡುವುದು ಅವುಗಳಲ್ಲೊಂದು. ಅಹಿಂಸೆಯನ್ನು ಅದು ಎತ್ತಿ ಹಿಡಿಯುತ್ತಿದೆ. ಜನಸಾಮಾನ್ಯರು ಎಂದಿಗೂ ಬಯಸುವುದು ಶಾಂತಿಯುತವಾದ ಸಹಬಾಳ್ವೆಯನ್ನು ಎನ್ನುವುದರ ಮೂಲಕ ಇಡೀ ಕುಮಾರವ್ಯಾಸ ಭಾರತವನ್ನು ನೋಡುವ ಹೊಸ ನೋಟವನ್ನು ಮುನ್ನೆಲೆಗೆ ತರುತ್ತಾರೆ.

ಕೃಷ್ಣಕಥೆಯನ್ನು ಇಳೆಯ ಜಾಣರು ಮೆಚ್ಚುವಂತೆ ಹೇಳಲು ಹೊರಟ ಕುಮಾರವ್ಯಾಸನು ಯಾರನ್ನು ಇಳೆಯ ಜಾಣರನ್ನಾಗಿ ನೋಡುತ್ತಾನೆ? ಅದು ಕೇವಲ ಕಾವ್ಯ ರಸಿಕರನ್ನು ಎನ್ನುವ ಸಾಮಾನ್ಯ ಅಭಿಪ್ರಾಯವು ಇಲ್ಲಿ ಪಲ್ಲಟವಾಗುತ್ತದೆ. ಎಲ್ಲ ಬಗೆಯ ದಮನಿತರನ್ನೂ ಈ ಗುಂಪಿಗೆ ಸೇರಿಸಬಹುದಾದ ಸಾಧ್ಯತೆಯೊಂದು ಇಲ್ಲಿ ತೆರೆಯುತ್ತದೆ. ಆ ಕೃಷ್ಣನಾದರೂ ಕೇವಲ ಪಾಂಡುತನಯರ ವಕೀಲನಾಗದೆ, ಬಡವರ ಬಿನ್ನಪವನ್ನು ಕೇಳುವ ಮನಃಸ್ಥಿತಿಯನ್ನು ಉಳಿಸಿಕೊಂಡವನೇ ಆಗಿದ್ದಾನೆ.

ಇದರ ಜೊತೆಗೆ ‘ಅಬಲಾವೃಂದ ಸಮಸುಖದುಃಖಿಗಳಲಾ’ ಎನ್ನುವ ಭಾಗವನ್ನೂ ಕಾವ್ಯದ ಕೊನೆಯಲ್ಲಿ ಹೆಣ್ಣುಮಕ್ಕಳು ಅರಮನೆಯ ಕಡೆಗೆ ಮಣ್ಣು ತೂರಿ ಹೋಗುವ ಪ್ರಸಂಗವನ್ನೂ ಜೋಡಿಸಿಕೊಂಡರೆ ಕುಮಾರವ್ಯಾಸ ಭಾರತದ ಒಳವೃತ್ತವೊಂದು ಸೃಷ್ಟಿಯಾಗುತ್ತದೆ. ಹೆಣ್ನೋಟದಲ್ಲಿ ಕುಮಾರವ್ಯಾಸ ಭಾರತ ನಿಜಕ್ಕೂ ಭಿನ್ನವಾಗಿಯೇ ಕಾಣಿಸುತ್ತದೆ. ಕೃಷ್ಣ ಮತ್ತು ದ್ರೌಪದಿಯರ ಸಂಬಂಧದ ಸ್ವರೂಪವೂ ಇದಕ್ಕೆ ಪುಷ್ಟಿಯೊದಗಿಸುತ್ತದೆ. ಕೃಷ್ಣನನ್ನು ವರಿಸಬಹುದಾದ ಸಂದರ್ಭದಲ್ಲಿ ದ್ರೌಪದಿ ಎನಗೀತನಲಿ ಗುರುಭಾವನೆಯ ಮತಿ ಎನ್ನುತ್ತಾಳೆ.

ಮುಂದೆ ಕಾವ್ಯದುದ್ದಕ್ಕೂ ಇವರಿಬ್ಬರ ಸಂಬಂಧ ಬೆಳೆಯುವ ಪರಿ ಗಂಡು ಹೆಣ್ಣಿನ ಸಖ್ಯದ ಆತ್ಯಂತಿಕ ಮಾದರಿಯಂತೆಯೇ ಕಾಣಿಸುತ್ತದೆ. ದಾಂಪತ್ಯದ ಸಖ್ಯಕ್ಕಿಂತ ಭಿನ್ನವಾದ ಆದರೆ ವಿಶ್ವಾಸ, ಗೆಳೆತನ, ಪರಸ್ಪರ ನಂಬಿಕೆ, ಗೌರವ, ಪ್ರೀತಿ ಈ ಎಲ್ಲದರಲ್ಲೂ ದೈವಿಕವೆನ್ನಬಹುದಾದ ಎತ್ತರವನ್ನು ಇವರಿಬ್ಬರ ಸಂಬಂಧ ಮುಟ್ಟುತ್ತದೆ. ತನ್ನ ಬದುಕಿನ ಯಾವುದೇ ವಿವರಗಳನ್ನು ನಿಸ್ಸಂಕೋಚವಾಗಿ ಕೃಷ್ಣನೊಂದಿಗೆ ಹಂಚಿಕೊಳ್ಳುವಷ್ಟು ಪಾರದರ್ಶಕ ಮಟ್ಟಕ್ಕೆ ಈ ಸಂಬಂಧ ಮುಟ್ಟುತ್ತದೆ. ಸ್ತ್ರೀಮತವನುತ್ತರಿಸಲಾಗದೆ ಎನ್ನುವ ದ್ರೌಪದಿಯ ಪ್ರಶ್ನೆಯನ್ನು ಹನೂರರು ಈ ಇಡೀ ದೃಷ್ಟಿಕೋನಕ್ಕೆ ಒಂದು ತಾತ್ವಿಕ ಚೌಕಟ್ಟಿನಂತೆ ಬಳಸುತ್ತಾರೆ.

ಈ ಸಂದರ್ಭದಲ್ಲಿ ವ್ಯಾಸ ಭಾರತವನ್ನು ತೌಲನಿಕವಾಗಿ ತಂದು ಹನೂರರು ವ್ಯಾಸ ಭಾರತವೇ ಕುಮಾರವ್ಯಾಸ ಭಾರತಕ್ಕಿಂತ ಉತ್ತಮ ಎನ್ನುವ ತೀರ್ಮಾನವನ್ನು ತಲುಪುತ್ತಾರೆ. ಅಲ್ಲಿ ಕೃಷ್ಣನ ಪ್ರವೇಶವನ್ನೇ ಮಾಡಿಸದೆ ಅದೊಂದು ಶುದ್ಧ ಮಾನವೀಯ ಪ್ರಸಂಗವನ್ನಾಗಿ ಉಳಿಯುವಂತೆ ಮಾಡುತ್ತಾರೆ. ಮಾತ್ರವಲ್ಲ ಆ ಹೊತ್ತಿನಲ್ಲಿ ಭೀಷ್ಮನು ದ್ರೌಪದಿಗೆ ಧರ್ಮದ ನಿಷ್ಠುರ, ಪ್ರಾಮಾಣಿಕ, ವಾಸ್ತವ ವ್ಯಾಖ್ಯಾನವನ್ನೇ ಕೊಡುತ್ತಾನೆ. ಅದು ಅಪ್ರಿಯವಾದ ಸತ್ಯವಾದರೂ ಅದನ್ನು ಹೇಳಲು ಭೀಷ್ಮ ಹಿಂಜರಿಯುವುದಿಲ್ಲ ಎನ್ನುವುದು ವ್ಯಾಸನ ಪ್ರತಿಭೆ ಮತ್ತು ಶಕ್ತಿಯ ನಿದರ್ಶನ.

ಕದನದಲ್ಲಿ ಬಲಿಷ್ಠನಾದವನು ಯಾವುದನ್ನು ಧರ್ಮವೆಂದು ತಿಳಿಯುತ್ತಾನೋ ಅದೇ ಧರ್ಮವಾಗಿ ನಿಲ್ಲುತ್ತದೆ. ಕುಮಾರವ್ಯಾಸ ಭಾರತವು ಈ ಅಂಶವನ್ನೇ ಕೆಲವೊಮ್ಮೆ ಮುಖ್ಯ ಪ್ರಶ್ನೆಯಾಗಿ ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ಚರ್ಚಿಸುತ್ತದೆ. ಆದರೆ ಇದಕ್ಕೆ ಎದುರಿನ ಆಯಾಮದಲ್ಲಿ, ಬಲಿಷ್ಠರ ಧರ್ಮದ ಎದುರು ಒದ್ದಾಡುವ ದುರ್ಬಲರನ್ನು ಇವನು ನಮಗೆ ಕಾಣಿಸುತ್ತಾನೆ. ಪ್ರಭುತ್ವದ ಕ್ರೌರ್ಯ ಮತ್ತು ಕುರುಡನ್ನು ಎಗ್ಗಿಲ್ಲದೇ ಕುಮಾರವ್ಯಾಸ ಟೀಕಿಸುತ್ತಾನೆ. ಈ ಪ್ರಸ್ತಾವನೆ ಕುಮಾರವ್ಯಾಸನನ್ನು ಕುರಿತ ಅತ್ಯುತ್ತಮ ಬರಹಗಳಲ್ಲಿ ಒಂದಾಗುವುದಕ್ಕೆ ಮುಖ್ಯ ಕಾರಣ ಹನೂರರು ಕುಮಾರವ್ಯಾಸನನ್ನು ಕುರಿತಂತೆ ಸಂಪಾದಿಸಿರುವ ಪಾಂಡಿತ್ಯ ಮತ್ತು ಅದನ್ನು ಸಾಂಗತ್ಯಗೊಳಿಸಿರುವ ಸೃಜನಶೀಲತೆ. ಮರಾಠಿಯೂ ಸೇರಿ ಇತರ ಯಾವುದೇ ಭಾಷೆಯಲ್ಲಿ, ಜನಪದಕಾವ್ಯಗಳಲ್ಲಿ ಬಂದಿರುವ ಎಲ್ಲ ವಿವರಗಳನ್ನೂ ಗಮನಿಸಿರುವುದರಿಂದ ಈ ಬರಹವು ಕುಮಾರವ್ಯಾಸನನ್ನು ಓದಲು ಬೇಕಾದ ಘನವಾದ ಪ್ರವೇಶಿಕೆಯನ್ನು ಒದಗಿಸಿಕೊಡುತ್ತದೆ. ಆದರೆ, ಯಾಕಾಗಿ ಹನೂರರು ಇದಕ್ಕೆ ‘ಸರಸ ಸೌಗಂಧಿಕದ ಪರಿಮಳ’ ಎನ್ನುವ ಶೀರ್ಷಿಕೆಯನ್ನು ಇಟ್ಟುಕೊಂಡರು ಎನ್ನುವುದಕ್ಕೆ ಮಾತ್ರ ಇಲ್ಲಿ ಉತ್ತರವಿಲ್ಲ. ಅದೊಂದನ್ನು ಕೊಡಬೇಕಿತ್ತು ಅನ್ನಿಸುತ್ತದೆ.

ಈ ತನಕ ಬಂದಿರುವ ಎಲ್ಲ ಸಂಪಾದನೆಗಳನ್ನು, ಗಮಕಿಗಳನ್ನು, ಹಸ್ತಪ್ರತಿಗಳ ವಿವರಗಳನ್ನು ಕೊಟ್ಟಿದ್ದಾರೆ (ಇದರಲ್ಲಿ ಮತ್ತೂರಿನ ರಾಮಾಶಾಸ್ತ್ರಿಗಳ ಹೆಸರಿಲ್ಲದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿತು). ಶಬ್ದಕೋಶವೂ ಇದೆ. ಹೀಗಾಗಿ ವಿದ್ಯಾರ್ಥಿಗಳಿಗೆ, ಸಾಹಿತ್ಯಾಸಕ್ತರಿಗೆ ಇದೊಂದು ಪೂರ್ಣಪಠ್ಯ ಎಂದೇ ಹೇಳಬೇಕು. ಕುಮಾರವ್ಯಾಸನನ್ನು ಈ ನಮ್ಮ ಕಾಲಕ್ಕೆ, ನಮ್ಮ ಅಗತ್ಯ ಮತ್ತು ಸವಾಲುಗಳ ಉತ್ತರವಾಗಿ ತಂದುಕೊಟ್ಟ ಹನೂರರಿಗೆ ಅಭಿನಂದನೆಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು