ಪುಸ್ತಕ ವಿಮರ್ಶೆ | ಸಹೃದಯಿ ಮೇಷ್ಟ್ರ ವೃತ್ತಿ ವೃತ್ತಾಂತ

ಸಹೃದಯಿ ಮೇಷ್ಟ್ರೊಬ್ಬರು ತರಗತಿ ಕೋಣೆಯಲ್ಲಿ ಮತ್ತು ಕೊಠಡಿಯಿಂದಾಚೆ ಏನೆಲ್ಲಾ ಮಾಡಬಹುದು? ಹಾಗೆ ಏನನ್ನಾದರೂ ಮಾಡಬೇಕು ಎಂದು ಹೊರಟವರ ಹಾದಿ ಹೇಗಿರುತ್ತದೆ ಎಂಬುದನ್ನು ವಿವರವಾಗಿ ಹೇಳಿದ್ದಾರೆ ಡಾ. ಉದಯ ಕುಮಾರ ಇರ್ವತ್ತೂರು. ಸರ್ಕಾರಿ ಕಾಲೇಜಿನಲ್ಲಿ ವ್ಯವಸ್ಥೆಯೊಡನೆ ಹೊಂದಿಕೊಂಡೂ, ಸಾತ್ವಿಕವಾಗಿ ಎದುರಿಸುತ್ತಲೂ, ಕಾಲೆಳೆಯುವಿಕೆಯನ್ನು ಸಹಿಸುತ್ತಲೂ ಮಾನವೀಯ ಅಂತಃಕರಣವಷ್ಟನ್ನೇ ಇಟ್ಟುಕೊಂಡು ಮುಂದುವರಿದ ಕತೆಗಳು ಇಲ್ಲಿವೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜನ್ನು ದೂರದಿಂದ ನೋಡಿ ಹೋಗುವವರಿಗೆ ಆ ಕಾಲೇಜಿನ ಆಳ, ಅಗಲದ ವಿಸ್ತಾರವನ್ನು ತೆರೆದು ತೋರಿಸಿದ್ದಾರೆ ಲೇಖಕರು.
ವಿದ್ಯಾರ್ಥಿಗಳಿಗೆ ಬೆಳಗಿನ ಆಹಾರ ಪೂರೈಸುವ ಸಲುವಾಗಿ ಹುಟ್ಟಿಕೊಂಡ ಕ್ಯಾಂಟೀನು ಎಂಬ ದಾಸೋಹ ಕೇಂದ್ರ ‘ಕೈಗೂ ಬಂದು ಮತ್ತೆ ಬಾಯಿಗೂ ಬಂದ ತುತ್ತು’ ಒದಗಿಸಿದ್ದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ರೂಪಿಸಿದ್ದು, ಹರಸಾಹಸ ಮಾಡಿ ಬಯಲು ರಂಗಮಂದಿರ ಕಟ್ಟಿದ್ದು, ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ ರಸ್ತೆ ಉಬ್ಬು ಹಾಕಲು ಸಾಹಸಪಟ್ಟಿದ್ದು, ಕಾಲೇಜಿಗೆ 150 ವರ್ಷಗಳ ಸಂಭ್ರಮಾಚರಣೆಗೆ ನಿಂತಿದ್ದು... ಹೀಗೆ ಇದು ಪ್ರಾಂಶುಪಾಲರೊಬ್ಬರ ವೃತ್ತಿ ಬದುಕಿನ ದಾಖಲೆಯೂ ಹೌದು, ಅವಲೋಕನವೂ ಹೌದು. ಹೇಳಿಕೊಳ್ಳಲೇಬೇಕೆನಿಸಿದ ಆತ್ಮ ವೃತ್ತಾಂತದಂತೆಯೂ ಈ ಕೃತಿಯ ಲೇಖನಗಳು ಓದಿಸಿಕೊಂಡು ಹೋಗುತ್ತವೆ. ನಿರೂಪಣೆಯೂ ಚೆನ್ನಾಗಿದೆ. ಅನೇಕ ಬಾರಿ ಇಂಥ ಸಾಹಸಗಳಲ್ಲಿ ಗೆದ್ದೂ ವ್ಯವಸ್ಥೆಯ ನಡುವೆ ‘ದುಃಖ’ ಅನುಭವಿಸಿದ ಛಾಯೆಯೂ ಅಲ್ಲಲ್ಲಿ ಇಣುಕಿದೆ.
ಕೊನೆಯಲ್ಲಿ ಒಂದಿಷ್ಟು ಚಿತ್ರಗಳು ಅನುಭವದ ದಾರಿಗೆ ದೃಶ್ಯಗಳನ್ನು ಕಟ್ಟಿಕೊಟ್ಟಿವೆ. ಪ್ರಾಂಶುಪಾಲರು ತಮ್ಮ ಬದುಕಿನಲ್ಲಿ ಸಿಕ್ಕಿದ ಆತ್ಮತೃಪ್ತಿ, ವಿದ್ಯಾರ್ಥಿಗಳ ಮತ್ತು ಪೋಷಕರ ಕೃತಜ್ಞತೆಯ ಮುಗುಳ್ನಗೆಯಲ್ಲಿ ಖುಷಿಯಾಗಿ ಕೃತಿಯನ್ನು ಮುಗಿಸಿದ್ದಾರೆ. ಅಧ್ಯಾಪಕರು, ವಿದ್ಯಾರ್ಥಿಗಳು, ಮಂಗಳೂರಿನ ಹಂಪನಕಟ್ಟೆಯ ಕೆಂಪು ಕಟ್ಟಡದ ವಿಶ್ವವಿದ್ಯಾಲಯ ಕಾಲೇಜಿನ ಬಗ್ಗೆ ತಿಳಿದುಕೊಳ್ಳಲು ಆಸಕ್ತರಿಗೆ ಅಗತ್ಯವಾದ ಕೃತಿ.
***
ಕೃತಿ: ಗೆಲುವಿನ ದುಃಖ ಮತ್ತು ಸೋಲಿನ ಸುಖ
ಲೇ: ಡಾ.ಉದಯ ಕುಮಾರ ಇರ್ವತ್ತೂರು
ಪ್ರ: ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು
ಬೆಲೆ: ₹ 250
ಪುಟಗಳು: 240
ಮೊ. 9449772996
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.