ಗುರುವಾರ , ಸೆಪ್ಟೆಂಬರ್ 16, 2021
29 °C

ಒಳನೋಟ: ನಮ್ಮದೇ ಆಟ, ನಾವೇ ಬೇಟೆ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಕೃತಿ: ಬೇಟೆಯಲ್ಲ ಆಟವೆಲ್ಲ
ಲೇ: ಎಂ.ಎಸ್‌. ಶ್ರೀರಾಮ್‌
ಪ್ರ: ಅಕ್ಷರ ಪ್ರಕಾಶನ
ಸಂ: 9480280401
ಜಾಲತಾಣ: www.aksharaprakashana.com

 ***

ದೀರ್ಘ ಬರವಣಿಗೆ ಈ ಕಾಲಕ್ಕೆ ತಕ್ಕದ್ದಲ್ಲ ಎನ್ನುವ ನಂಬಿಕೆಯನ್ನು ಸುಳ್ಳು ಮಾಡುವವರಂತೆ, ಕನ್ನಡದ ಕಥೆಗಾರರೆಲ್ಲ ಕಾದಂಬರಿ ಪ್ರಕಾರವನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಹಿರಿಯ ಕಥೆಗಾರ ಎಂ.ಎಸ್‌. ಶ್ರೀರಾಮ್‌ ಅವರ ‘ಬೇಟೆಯಲ್ಲ ಆಟವೆಲ್ಲ’ ಕಾದಂಬರಿ ಪ್ರಕಟಗೊಂಡಿದೆ. ಬೇಟೆ ಮತ್ತು ಆಟ ಪರಸ್ಪರ ಬೆರೆತುಹೋಗಿರುವ ಈ ಕೃತಿ ಬರಹಗಾರನೊಬ್ಬನ ಪ್ರಯೋಗಶೀಲತೆಯ ಹಂಬಲದ ರೂಪದಲ್ಲಿ ಗಮನಸೆಳೆಯುತ್ತದೆ; ವರ್ತಮಾನದ ವಿದ್ಯಮಾನಗಳಿಗೆ ಸೃಜನಶೀಲ ಬರಹಗಾರನ ಪ್ರತಿಕ್ರಿಯೆಯ ರೂಪದಲ್ಲಿ ಮಹತ್ವ ಪಡೆದುಕೊಂಡಿದೆ.

‘ಬೇಟೆಯಲ್ಲ ಆಟವೆಲ್ಲ’ ಕೃತಿಯ ಭಾಗಗಳು ಕಥೆಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಅವುಗಳನ್ನೀಗ ಕಾದಂಬರಿಯ ಬಂಧದ ರೂಪದಲ್ಲಿ ಜೋಡಿಸಲಾಗಿದೆ. ‘ಬಿಡಿ ಕಥೆಗಳಾಗಿ ಉಳಿಯದೆ, ಒಂದಕ್ಕೊಂದು ಕೊಂಡಿ ಹಾಕಿ ಮುಂದುವರೆದು ಕಾದಂಬರಿಯ ರೂಪದಲ್ಲಿ ಓದಿಸಿಕೊಳ್ಳಬೇಕೆನ್ನುವುದು ನನ್ನ ಉದ್ದೇಶವಾಗಿತ್ತು’ ಎಂದು ಕಾದಂಬರಿಯ ಆರಂಭದಲ್ಲಿ ಶ್ರೀರಾಮ್ ಹೇಳಿಕೊಂಡಿದ್ದಾರೆ. ಅವರ ಮಾತನ್ನು ಮರೆತು ಓದಿದರೆ, ಸಣ್ಣಕಥೆಗಳ ಗುಚ್ಛ ಕಾದಂಬರಿಯಾಗಿ ಜೋಡಣೆಗೊಂಡಿರುವುದು ಮೇಲ್ನೋಟಕ್ಕೆ ತಿಳಿಯದಷ್ಟರ ಮಟ್ಟಿಗೆ ಈ ಕೊಲಾಜ್ ಯಶಸ್ವಿಯಾಗಿದೆ. ಪುನರ್ಮಿಲನ, ಆಗಂತುಕ, ಮಹಾನಗರ, ತಲೆಮಾರು, ಆಕ್ರಮಣ, ತ್ರಿಕೋನ, ದಾರಿಗಳು, ಬೇಟೆ, ಸಂಭಾಷಣೆ ಹಾಗೂ ಮುತ್ತಿಗೆ ಎನ್ನುವ ಶೀರ್ಷಿಕೆಗಳು ಕಥನದ ದಾರಿಯನ್ನು ಸೂಚಿಸುವುದರ ಜೊತೆಗೆ, ಆಧುನಿಕ ಕಾಲಘಟ್ಟದ ಸ್ವರೂಪ ಚಿತ್ರಣದ ಬೀಜಪದಗಳೂ ಆಗಿವೆ. ಇದೆಲ್ಲ ಕೃತಿ ಕಟ್ಟುವಿಕೆಗೆ ಸಂಬಂಧಿಸಿದ ಪ್ರಯೋಗಶೀಲತೆಯ ಮಾತಾಯಿತು. ಕಾದಂಬರಿಯ ಅಸಲಿ ತಾಕತ್ತಿರುವುದು ಭಾರತದ ವರ್ತಮಾನವನ್ನು ಓದುಗರಿಗೆ ಮುಖಾಮುಖಿ ಆಗಿಸುವಲ್ಲಿ.

ರಾಜಕಾರಣ ಮತ್ತು ಧರ್ಮದ ನಡುವಣ ಗೆರೆ ತೀರಾ ತೆಳುವಾಗಿ, ರಾಜಕಾರಣದಲ್ಲಿ ಧಾರ್ಮಿಕ ಚಹರೆಗಳನ್ನೂ ಧರ್ಮದಲ್ಲಿ ರಾಜಕಾರಣದ ಒಳಸುಳಿಗಳನ್ನೂ ಕಾಣುತ್ತಿರುವ ವೈರುಧ್ಯಗಳ ಸಂದರ್ಭ ಇಂದಿನದು. ಈ ಬದಲಾದ ಸನ್ನಿವೇಶದ ಕ್ಯಾನ್ವಾಸ್‌ನಲ್ಲಿ, ಕನ್ನಡ ಸಾಹಿತ್ಯಕ್ಕೆ ಅಷ್ಟೇನೂ ಪರಿಚಿತವಲ್ಲದ ಮೇಲ್ಮಧ್ಯಮ ಮತ್ತು ಶ್ರೀಮಂತ ಸಮಾಜದ ಬದುಕಿನ ತವಕತಲ್ಲಣಗಳನ್ನು ಚಿತ್ರಿಸುವ ಪ್ರಯತ್ನ ಕಾದಂಬರಿಯಲ್ಲಿದೆ. ಮೇಲ್ಮಧ್ಯಮ ಮತ್ತು ಶ್ರೀಮಂತ ಸಮಾಜದ ಬದುಕಿನ ಹಿತಾಸಕ್ತಿಗಳೇ ಜನಸಾಮಾನ್ಯರ ಬದುಕು ಹಾಗೂ ನಂಬಿಕೆಗಳನ್ನು ನಿರ್ದೇಶಿಸುತ್ತಿರುವುದನ್ನು ಅರ್ಥ ಮಾಡಿಕೊಂಡರೆ, ಕಾದಂಬರಿಯ ವಿಸ್ತಾರವೂ ಅರ್ಥವಾಗುತ್ತದೆ. ಕಥೆ ನಡೆಯುವ ಸಾಮಾಜಿಕ ಪರಿಸರ ಬೇರೆಯಾದರೂ, ಸಾಹಿತ್ಯದ ಪ್ರಮುಖ ಆಸಕ್ತಿಯಾಗಿರುವ ಕೇಡಿನ ಸ್ವರೂಪದ ವಿಶ್ಲೇಷಣೆ, ನೈತಿಕತೆ ಮತ್ತು ಅನೈತಿಕತೆಯ ಜಿಜ್ಞಾಸೆ ಇಲ್ಲಿಯೂ ಇದೆ.

ಕಾದಂಬರಿಯ ಕೇಂದ್ರವನ್ನು ಮುಖ್ಯವಾಗಿ ಎರಡು ನೆಲೆಗಳಲ್ಲಿ ಗುರ್ತಿಸಬಹುದು. ಸಾಮಾಜಿಕ ಜೀವನದಲ್ಲಿ ಧರ್ಮವನ್ನು ನಾವು ಪರಿಭಾವಿಸುತ್ತಿರುವ ರೀತಿಯಲ್ಲಿ ಆಗಿರುವ ಬದಲಾವಣೆಯನ್ನು ಹಾಗೂ ಉದ್ಯಮದಲ್ಲಿ ನೈತಿಕತೆಯ ಸ್ವರೂಪ ಯಾವ ಬಗೆಯದು ಎನ್ನುವುದನ್ನು ಕಾದಂಬರಿ ಚರ್ಚಿಸುತ್ತದೆ. ಇಲ್ಲಿನ ಅನಿರುದ್ಧ ಮತ್ತು ಅಖ್ತರ್‌ ಹುಸೇನ್‌, ಎರಡು ಧರ್ಮಗಳನ್ನಷ್ಟೇ ಪ್ರತಿನಿಧಿಸುತ್ತಿಲ್ಲ; ಬದಲಾದ ನಂಬಿಕೆಗಳನ್ನೂ ಪ್ರತಿನಿಧಿಸುತ್ತಿದ್ದಾರೆ. ಮೈಸೂರಿನ ಕಾಲೇಜು ದಿನಗಳಲ್ಲಿ, ಆಧುನಿಕ ಹಾಗೂ ವೈಚಾರಿಕ ವ್ಯಕ್ತಿಯಾಗಿದ್ದ ನೈರೋಬಿಯ ಅಖ್ತರ್‌ ಹಾಗೂ ಬೋಳೆ ವ್ಯಕ್ತಿತ್ವದ ಅನಿರುದ್ಧ ಈಗ ತಮ್ಮ ಪಾತ್ರಗಳನ್ನು ಬದಲಿಸಿಕೊಂಡಂತೆ ಕಾಣಿಸುತ್ತಿದ್ದಾರೆ. ಆಧುನಿಕ ಜೀವನಶೈಲಿ ಅನಿರುದ್ಧನ ಬದುಕಿನಲ್ಲಿ ಬದಲಾವಣೆ ತಂದಿದ್ದರೆ, ಅಖ್ತರ್‌ ಹೆಚ್ಚು ಧಾರ್ಮಿಕ ವ್ಯಕ್ತಿಯಾಗಿದ್ದಾನೆ. ಅಂತರಂಗದಲ್ಲಿ ಬದಲಾಗದಿದ್ದರೂ, ಬಾಹ್ಯಚಹರೆಯಲ್ಲಿನ ಬದಲಾವಣೆ ಹಾಗೂ ದಿನಕ್ಕೆ ಐದು ಸಲ ನಮಾಜು ಮಾಡುವ ಅಖ್ತರನ ಜೀವನವಿಧಾನ ಅನಿರುದ್ಧನಿಗೆ ಅಚ್ಚರಿ ಹುಟ್ಟಿಸುತ್ತದೆ.

ಅಖ್ತರನದು ಮತ್ತೊಂದು ಬಗೆಯ ಜಿಜ್ಞಾಸೆ. ತನ್ನ ಧಾರ್ಮಿಕ ಚಹರೆಗಳನ್ನು ಗುಮಾನಿಯಿಂದ ನೋಡುವ ವ್ಯವಸ್ಥೆ ಅವನನ್ನು ಖಿನ್ನನನ್ನಾಗಿಸುತ್ತದೆ. ಅಹಮದಾಬಾದ್‌ನ ಹೋಟೆಲ್‌ನಲ್ಲಿ ನಡೆಯುವ ವಿಚಾರಣೆಯಿಂದ, ಮತ್ತೊಮ್ಮೆ ಭಾರತಕ್ಕೆ ಬರುವುದೇ ಬೇಡ ಎನ್ನುವಮಟ್ಟಿಗೆ ಅವನು ವಿಚಲಿತನಾಗುತ್ತಾನೆ. ಪ್ರಸಕ್ತ ಸಾಮಾಜಿಕ ಸಂದರ್ಭದಲ್ಲಿ ವ್ಯಕ್ತಿಯ ಅಂತರಂಗಕ್ಕಿಂತಲೂ ಬಾಹ್ಯ ಚಹರೆಯೇ ಮುಖ್ಯವಾಗುತ್ತಿರುವ ಸ್ಥಿತಿಗೆ ರಾಜಕಾರಣ ಕಾರಣವಾಗಿರುವುದು ಹಾಗೂ ಆ ಬದಲಾವಣೆಯನ್ನು ನಾವು ಹೆಚ್ಚು ತಕರಾರಿಲ್ಲದೆ ಒಪ್ಪಿಕೊಂಡಿರುವುದನ್ನು ಕಾದಂಬರಿ ಸೂಚಿಸುತ್ತದೆ. ಎಲ್ಲರಂತಿರಲು ಅಖ್ತರನಿಗೆ ಸಮಸ್ಯೆಯೇನು ಎನ್ನುವುದು ಈ ಹೊತ್ತಿನ ಭಾರತದ ಬಹುಸಂಖ್ಯಾತರ ಪ್ರತಿನಿಧಿಯಂತಿರುವ ಅನಿರುದ್ಧನಿಗೆ ಕೊನೆಗೂ ಅರ್ಥವಾಗುವುದಿಲ್ಲ ಅಥವಾ ಅರ್ಥವಾಗುವುದು ಅವನಿಗೆ ಬೇಕಿಲ್ಲ ಎನ್ನುವುದೇ ‘ಬಹುತ್ವ ಭಾರತ’ದ ಪರಿಕಲ್ಪನೆಯಲ್ಲಿ ಆಗಿರುವ ಬದಲಾವಣೆಯನ್ನು ಕಾಣಿಸುತ್ತದೆ.

ಕಾದಂಬರಿಯ ಮತ್ತೊಂದು ಕೇಂದ್ರ ಕಾರ್ಪೊರೇಟ್‌ ಜಗತ್ತಿನದು. ತನ್ನ ಗಂಡ ಮುಕುಂದಸಾಗರನ ಕಂಪನಿಯನ್ನು ಬೆಳೆಸುವ ಸುಜಾತಾ, ಮಾನವೀಯ ಸ್ಪಂದನಗಳಿಗೆ ವ್ಯಾಪಾರದಲ್ಲೂ ಅವಕಾಶವಿರಬೇಕು ಎಂದು ನಂಬಿದವಳು. ಆದರೆ, ಕಂಪನಿಗೆ ನೌಕರಳಾಗಿ ಸೇರಿಕೊಂಡು, ನಂತರದ ದಿನಗಳಲ್ಲಿ ಇಡೀ ಸಂಸ್ಥೆಯನ್ನು ತನ್ನ ಅಧೀನಕ್ಕೆ ಪಡೆಯುವ ಶಿವಾನಿ, ವ್ಯಾಪಾರದಲ್ಲಿ ಯಶಸ್ಸಿಗಾಗಿ ಏನು ಮಾಡಿದರೂ ತಪ್ಪಲ್ಲ ಎನ್ನುವ ನಂಬಿಕೆಯುಳ್ಳ ಯುವತಿ. ಸುಜಾತಾ ಮತ್ತು ಶಿವಾನಿ ಭಿನ್ನ ಧ್ರುವಗಳಂತೆ, ವಿರುದ್ಧಾರ್ಥಕ ಮೌಲ್ಯಗಳಂತೆ, ತಲೆಮಾರುಗಳ ನಡುವಿನ ಅಂತರದಂತೆ ಕಾಣಿಸುತ್ತಾರೆ.

ಗಂಡನ ಸಾವಿನೊಂದಿಗೆ ಕಂಪನಿಯ ಮೇಲಿನ ಹಕ್ಕನ್ನೂ ಕಳೆದುಕೊಳ್ಳುವ ಸುಜಾತಾ, ಶಿವಾನಿಯ ವಿರುದ್ಧ ಹೋರಾಡಲು ಮುಂದಾಗುವುದು ನೈತಿಕ ಕಾರಣಗಳಿಂದಲೇ. ಸುಜಾತಾಳಿಗೆ ನೈತಿಕ ಬೆಂಬಲವಾಗಿ ಭಾರತಕ್ಕೆ ಬರುವ ಅಖ್ತರ್‌, ರಾಜಕೀಯ ಒತ್ತಡಗಳಿಂದಾಗಿ ಬಂಧನಕ್ಕೊಳಗಾಗುತ್ತಾನೆ. ಅಖ್ತರನ ಬಂಧನದೊಂದಿಗೆ ಸುಜಾತಾಳ ಹೋರಾಟದ ನಿರ್ಧಾರ ಮತ್ತಷ್ಟು ಬಲವಾಗುವ ಸೂಚನೆಯೊಂದಿಗೆ ಕಾದಂಬರಿ ಮುಗಿಯುತ್ತದೆ.

’ಬೇಟೆಯಲ್ಲ ಆಟವೆಲ್ಲ’ ಎಂದು ಕೃತಿಯ ಶೀರ್ಷಿಕೆ ಹೇಳುತ್ತಿದ್ದರೂ, ಆ ಶೀರ್ಷಿಕೆಯಲ್ಲಿ ಆಟ ಬೇಟೆಯೂ ಆಗಿರುವ ಧ್ವನಿಯಿದೆ. ಆಟಕ್ಕೆ ತನ್ನದೇ ಆದ ಸೌಂದರ್ಯ, ಅಂತಃಕರಣ, ಆಶಯ, ಮಾನವೀಯ ಕಟ್ಟುಪಾಡುಗಳಿರುತ್ತವೆ. ಆ ಕಟ್ಟುಪಾಡುಗಳು ಎಲ್ಲೆಮೀರಿದಾಗ, ಆಟ ಬೇಟೆಯಾಗುವ, ಆ ಬೇಟೆ ನಮ್ಮ ಇಂದಿನ ಬದುಕೇ ಆಗಿರುವ ವಿಪರ್ಯಾಸದ ಬಗ್ಗೆ ಚಿಂತಿಸಲು ಕಾದಂಬರಿ ಒತ್ತಾಯಿಸುವಂತಿದೆ.

ಶ್ರೀರಾಮ್‌ ಅವರ ಕಾದಂಬರಿ ರೋಚಕವಾಗಿದೆ; ಭಾಷೆ ಕೊಂಚ ಗಡುಸಾಗಿದೆ. ಆದರೆ, ರೋಚಕತೆ ಹಾಗೂ ಒರಟುತನ ಈ ಕಾಲದ ಲಕ್ಷಣಗಳೂ ಆಗಿರುವುದರಿಂದ, ಅವು ಕಾದಂಬರಿಗೆ ಪೂರಕವಾಗಿವೆ. ಕಥನದ ಸಮಕಾಲೀನತೆ ಹಾಗೂ ಬರವಣಿಗೆಯ ಪ್ರಯೋಗಶೀಲತೆಯ ಜೊತೆಗೆ ವಿಭಿನ್ನ ಮುಖಪುಟ ಹಾಗೂ ಯುನಿಕೋಡ್‌ ಫಾಂಟ್‌ ಒಳಗೊಂಡ ವಿನ್ಯಾಸದಿಂದಾಗಿ ಕೂಡ ಈ ಕಾದಂಬರಿ ಕನ್ನಡ ಕೃತಿಗಳ ಸಾಲಿನಲ್ಲಿ ವಿಭಿನ್ನವಾಗಿದೆ.

ಕನ್ನಡದ ಇತ್ತೀಚಿನ ಬಹುಚರ್ಚಿತ ಕಾದಂಬರಿಗಳು ಇತಿಹಾಸದ ಗತವೈಭವ ಅಥವಾ ಸಮುದಾಯಗಳ ಚರಿತ್ರೆಗೆ ಒಳಪಟ್ಟಿರುವಂತಹವು; ಸಾಂಸ್ಕೃತಿಕ ಸಾಮುದಾಯಿಕ ಸ್ಮೃತಿಗಳ ಹಂಗಿಗೆ ಒಳಪಟ್ಟಂತಹವು. ‘ಬೇಟೆಯಲ್ಲ ಆಟವೆಲ್ಲ’ ಕೃತಿ, ನಮ್ಮೊಳಗು ಹೊರಗನ್ನು ಪರಿಶೀಲಿಸಿಕೊಳ್ಳಲು ವರ್ತಮಾನಕ್ಕೆ ನೇರವಾಗಿ ಹಿಡಿದ ಕನ್ನಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು