ಪುಸ್ತಕ ಪರಿಚಯ: ಕೈ ಚಾಚುತಿವೆ ಕಂದಮ್ಮಗಳು, ವೈದೇಹಿ ಕಥೆಗಳು

7

ಪುಸ್ತಕ ಪರಿಚಯ: ಕೈ ಚಾಚುತಿವೆ ಕಂದಮ್ಮಗಳು, ವೈದೇಹಿ ಕಥೆಗಳು

Published:
Updated:

ಈಗಷ್ಟೇ ಪ್ರಪಂಚ ನೋಡುತ್ತಿರುವ ಅದೆಷ್ಟೋ ಮಕ್ಕಳು ಕಾಮುಕರ ಕೈವಶವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಕಾಣುವ ಮುಖವಾಡ ಹೊತ್ತ ಅನೇಕರು ಕಾಮತೃಷೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಾಲ್ಯದಲ್ಲಿ ಆಗುವ ಮಾನಸಿಕ ಆಘಾತಕ್ಕೆ ಸರಿಯಾದ ಸಮಯದಲ್ಲಿ ಸಾಂತ್ವನ, ಮಾರ್ಗದರ್ಶನ ಸಿಗದೇ ಹೋದರೆ ದೌರ್ಜನ್ಯಕ್ಕೊಳಗಾದವರ ಜೀವನವೇ ಕಮರಿ ಹೋಗುತ್ತದೆ. ಹುಡುಕುತ್ತ ಹೋದರೆ ಇಂತಹ ನಾನಾ ಕಥೆಗಳು ತೆರೆದುಕೊಳ್ಳುತ್ತವೆ. ಇದನ್ನು ‘ಕೈ ಚಾಚುತಿವೆ ಕಂದಮ್ಮಗಳು’ ಪುಸ್ತಕದಲ್ಲಿ ಬರಹ ರೂಪಕ್ಕೆ ಇಳಿಸಿದ್ದಾರೆ ಲೇಖಕಿ ರೂಪ ಹಾಸನ. 

ಲೇಖಕಿ, ಶಿಕ್ಷಣ ತಜ್ಞೆ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ರೂಪ ಅವರು, ಪ್ರೇರಣಾ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ದೌರ್ಜನ್ಯಕ್ಕೊಳಗಾದ ಮಕ್ಕಳು, ಮಹಿಳೆಯರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ದೌರ್ಜನ್ಯ, ಕಿರುಕುಳಕ್ಕೊಳಗಾದವರ ನೋವುಗಳನ್ನು ಹತ್ತಿರದಿಂದ ಕಂಡಿರುವ ಇವರು ಅವರದೇ ದನಿಯಾಗಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. 

ಒಂದೊಂದು ಕಥೆಯೂ ಸಮಾಜದ ಘೋರ ಪರಿಸ್ಥಿತಿಯ ದರ್ಶನ ಮಾಡಿಸುತ್ತದೆ. ಪ್ರಪಂಚ ಎಷ್ಟು ಸುಂದರ. ಆದರೆ, ಅದನ್ನು ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಕ್ರೂರವಾಗಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿ ದೊರಕುತ್ತವೆ. 

ದೌರ್ಜನ್ಯದ ಹಲವು ಮಜಲುಗಳ ಅನಾವರಣ ಜೊತೆಗೆ ಮಕ್ಕಳ ಲೋಕವನ್ನು ಸುಂದರವಾಗಿಸುವುದು ಹೇಗೆ ಎಂಬುದಕ್ಕೂ ಸಾಕಷ್ಟು ಮಾಹಿತಿ ಇದರಲ್ಲಿದೆ. ‘ಮಕ್ಕಳಿಗೆ ಸಾಹಿತ್ಯದ ಆಸಕ್ತಿ ಮೂಡಿಸುವುದು ಹೇಗೆ?’, ‘ಮಗು ಬಣ್ಣ ಮತ್ತು ಚಿತ್ರಕಲೆ’, ‘ಕುವೆಂಪು ರಚಿತ ಮಕ್ಕಳ ನಾಟಕಗಳು...’ ಹೀಗೆ ಮಕ್ಕಳನ್ನು ಉತ್ತಮ ಪ್ರಜೆಯಾಗಿಸಲು ಅಗತ್ಯವಾದ ಮಾಹಿತಿಗಳು ಪೋಷಕರಿಗೆ ನೆರವಾಗಬಲ್ಲವು. 

18– 20 ವರ್ಷಗಳಿಂದ ವಿವಿಧ ಪತ್ರಿಕೆ, ಪಾಕ್ಷಿಕ, ಅಂತರ್ಜಾಲ ತಾಣಗಳಲ್ಲಿ ಕೂಡ ಬರೆದ ಲೇಖನಗಳ ಸಂಗ್ರಹ ಈ ಪುಸ್ತಕದಲ್ಲಿದೆ.
ಪ್ರಕಟಣೆ: ಅಭಿರುಚಿ ಪ್ರಕಾಶನ 
ಪುಟಗಳು: 248
ಬೆಲೆ: ₹225
***

ಶಬ್ದದ ಆಡಂಬರದ ಹಂಗಿಲ್ಲದೆ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು (ಮನೆ ಮತ್ತು ಮನದೊಳಗೆ ಹೊಕ್ಕು ಎಂದು ಹೇಳುವುದು ಸೂಕ್ತವಾದೀತು) ಆಪ್ತವಾಗಿ ಹೇಳುವ ಪರಿಯೇ ವೈದೇಹಿ ಅವರ ಕಥೆಗಳತ್ತ ಸೆಳೆಯಲು ಪ್ರಮುಖ ಕಾರಣ. ವೈದೇಹಿ ಕಥೆಗಳು 1979- 2016 ಪುಸ್ತಕದ ಮೂಲಕ ಕಥಾ ಪ್ರಪಂಚವನ್ನು ಹೊಕ್ಕ ಖುಷಿಯನ್ನು ಅನುಭವಿಸಿಯೇ ತಿಳಿಯಬೇಕು. ‘ಕ್ರೌಂಚ ಪಕ್ಷಿ’, ‘ಅಮ್ಮಚ್ಚಿಯೆಂಬ ನೆನಪು’, ‘ಅಕ್ಕು’, ‘ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು’, ‘ವಾಣಿಮಾಯಿ’ ಹೀಗೆ ಒಂದಷ್ಟು ಕಥೆಗಳನ್ನು ಓದಿದ್ದರೂ ಹಲವು ಕಾಲಘಟ್ಟದಲ್ಲಿ ಬರೆದ ಎಲ್ಲ ಕಥೆಗಳು ಒಟ್ಟಿಗೆ ದಕ್ಕಿದ್ದು ದೊಡ್ಡ ಖುಷಿ.

ವಿವಿಧ ಕಾಲಘಟ್ಟದಲ್ಲಿ ಬರೆದ ಕಥೆಗಳು ಇಲ್ಲಿರುವುದರಿಂದ ಪುಟಗಳು ತಿರುವುತ್ತಿದ್ದಂತೆ ಅವರವರ ಭಾವಕ್ಕೆ ಖುಷಿಕೊಡುತ್ತಾ ಹೋಗುತ್ತವೆ. ಸಪ್ಪಳ ಮಾಡದ ಹೆಜ್ಜೆಗಳು, ಕಾಣೆಯಾದವರು, ಯಾರಿದ್ದಾರೆ ಎಲ್ಲಿ? ಕಾಡುತ್ತವೆ. ಹುಟ್ಟಿದ ಊರನ್ನು ಬಿಟ್ಟು ಬಂದು ದೂರದ ಊರಲ್ಲಿರುವವರಿಗೆ ಇಲ್ಲೊಂದು ನಾಸ್ಟಾಲ್ಜಿಯಾ ಇದೆ, ನಮ್ಮದು ಎಂಬ ಆಪ್ತಭಾವ ಅದು.

ವೈದೇಹಿ ಅವರ ಕಥೆಗಳು ಸ್ತ್ರೀ ಸಂವೇದನೆಯ ಸೂಕ್ಷ್ಮ ಲೋಕದ ಕದ ತಟ್ಟಿ ಬೆರಗು ಮೂಡಿಸುತ್ತವೆ. ನಮ್ಮ ದೈನಂದಿನ ಆಗುಹೋಗುಗಳು ಲೇಖಕಿಯ ಸೂಕ್ಷ್ಮ ನೋಟಕ್ಕೆ ಸಿಕ್ಕಿ ಕಥೆಯಾದ ಕಥೆಗಳು ಇಲ್ಲಿವೆ. ಅರೇ ಇದು ನಮ್ಮದೇ ಕಥೆ ಅಥವಾ ಪಕ್ಕದ್ಮನೆಯ ಕಥೆ ಎಂಬ ಆಪ್ತತೆಯನ್ನು ಇಲ್ಲಿ ಕಾಣಬಹದು. ಇಲ್ಲಿ ಬರುವ ಕಥಾಪಾತ್ರಗಳು ನಮ್ಮೊಂದಿಗೆ ಮಾತನಾಡುತ್ತಾ, ನಮ್ಮೊಳಗೊಂದಾಗಿ ಬಿಡುವ ಆ ಕ್ಷಣವನ್ನು ಅನುಭವಿಸಿಯೇ ತೀರಬೇಕು. ಬರಹದ ಸರಳತೆ, ಪಾತ್ರಗಳ ಮುಗ್ಧತೆ, ಸಹಜ ಮಾತುಗಳಲ್ಲಿ ಎಲ್ಲವನ್ನೂ ಹೇಳುವಾಗ ದೊರಕುವ ಆ ಭಾವವು ಓದುವ ಸುಖವನ್ನು ಹೆಚ್ಚಿಸಿದೆ.

ಅಚ್ಚ ಕುಂದಾಪ್ರಗನ್ನಡದ ಸೊಗಸು, ಭಾವನೆಗಳ ಮೆರುಗಿನಿಂದ ಆಪ್ತವಾಗುವ ವೈದೇಹಿ ಅವರ ಕಥೆಗಳೆಂದರೆ ಅದೊಂದು ಭಾವ ಪ್ರಪಂಚ. ನಾನು ಎಲ್ಲೋ ಕಳೆದುಹೋಗಿದ್ದೇನೆ ಎಂದು ಭಾವಿಸುವ ಸಾದಾ ಮನುಷ್ಯನೊಬ್ಬನನ್ನು ಇಲ್ಲಿ ನೋಡು ಬಾ ಎಂದು ಕೈ ಹಿಡಿದು ಕರೆದೊಯ್ಯುವ ಕೂಸು. ವಾಸ್ತವದ ಲೋಕದಲ್ಲಿ ಗಟ್ಟಿಯಾಗಿ ಕಿರುಚಿ ಹೇಳಬೇಕೆಂದೆನಿಸುವುದನ್ನೂ ಮೃದುವಾಗಿ ಹೇಳಿ ಎಲ್ಲರಿಗೂ ಕೇಳಿಸುವಂತ ಕಲೆ ಅವರ ಕಥೆಗಳಲ್ಲಿ ಕಂಡು ಬರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಭಾವನೆಗಳ ಹರಿವು ಮುಚ್ಚಿಡಲಾಗದೆ ಬಿಚ್ಚಿಟ್ಟ ಪಿಸುಮಾತುಗಳಿವೆ. ಸರಿದು ಹೋದ ಗಳಿಗೆಗಳ ನೆನಪಿನ ಕೊಂಡಿಯೇ ಅವರ ಕಥೆಗಳತ್ತ ಸೆಳೆತ ಉಂಟು ಮಾಡಿದೆ ಎಂದು ಹೇಳುವುದೇ ಸರಿ ಎಂದೆನಿಸುತ್ತಿದೆ.
ಪ್ರಕಟಣೆ: ಅಕ್ಷರ ಪ್ರಕಾಶನ
ಪುಟಗಳು: 804
ಬೆಲೆ: ₹700

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !