ಮಂಗಳವಾರ, ಸೆಪ್ಟೆಂಬರ್ 21, 2021
21 °C

ಗ್ರಾಮ ಭಾರತದ ಆರ್ದ್ರ ಚಿತ್ರಣ

ಎಸ್‌.ಆರ್‌.ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

‌‘ಕಂಡಷ್ಟು ಕಡೆದಷ್ಟು’

ಲೇ: ಕೆ.ಪಿ. ಸುರೇಶ

ಪ್ರ: ಸಂಕಥನ, ಉದಯಗಿರಿ,
ಮಂಡ್ಯ 571401

ಮೊ: 95382 26543

***

ಗ್ರಾಮ ಭಾರತದ ಬದುಕು ಹಾಗೂ ಕೃಷಿಮೂಲ ಆರ್ಥಿಕತೆಯ ಬಗ್ಗೆ ಸತತ ಅಧ್ಯಯನಗಳಲ್ಲಿ ತೊಡಗಿರುವ ಕೆ.ಪಿ. ಸುರೇಶ ಅವರ ಪ್ರಬಂಧಗಳ ಸಂಕಲನ ‘ಕಂಡಷ್ಟು ಕಡೆದಷ್ಟು’. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಲೇಖಕರು, ತಮ್ಮ ಸರ್ಕಾರಿ ಉದ್ಯೋಗ ತ್ಯಜಿಸಿ, ಕೃಷಿಕರಾಗಿ ಹಳ್ಳಿಯಲ್ಲಿ ವಾಸಿಸುತ್ತಾ ಕಂಡು ಅನುಭವಿಸಿದ ಸುತ್ತಲಿನ ಜನಜೀವನದ ಒಳನೋಟಗಳೇ ಇಲ್ಲಿನ ಪ್ರಬಂಧಗಳಾಗಿವೆ. ಗ್ರಾಮೀಣ ಭಾರತದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಅಲ್ಲಿನ ಅಧಿಕಾರಿಗಳೊಡನೆ ವ್ಯವಹರಿಸಬೇಕಾದ ಅನಿವಾರ್ಯತೆ, ಕೃಷಿಮೂಲ ಆರ್ಥಿಕತೆಯಲ್ಲಿ ಜನ, ಆಸೆಯೆಂಬ ತೆಪ್ಪಗಳ ಮೇಲೆ ಕೈಕಾಲು ಬಡಿದುಕೊಂಡು, ಸಾಲದಲ್ಲಿ ಮುಳುಗಿ ಸಾಯದಂತೆ ತೇಲಲು, ಒದ್ದಾಡುತ್ತಿರುವ ಅವಸ್ಥೆಗಳನ್ನು ಈ ಬರಹಗಳು ಚಿತ್ರಿಸುತ್ತವೆ.

ರಾಜಕೀಯ, ಸುತ್ತಲಿನ ಕ್ಷುದ್ರತೆ, ಭ್ರಮನಿರಸನ, ಬದುಕಿನ ದುರಂತ, ಮರುಟಿ ಹೋಗುವ ಸಣ್ಣಪುಟ್ಟ ಆಸೆ ಮತ್ತು ಇವುಗಳ ನಡುವೆಯೇ ಹುಟ್ಟಿ ಬೆಳೆಯುವ ಉದಾತ್ತ, ಉದಾರ ಮಾನವೀಯತೆ ಎಲ್ಲವೂ ಇಲ್ಲಿನ ಹದಿನಾರು ಪ್ರಬಂಧಗಳಲ್ಲಿ ಅನಾವರಣಗೊಳ್ಳುತ್ತವೆ. ಒಳ ಹರಿವಾಗಿರುವ ಅವುಗಳಲ್ಲಿನ ತಣ್ಣಗಿನ ವಿನೋದ ಪ್ರಜ್ಞೆ ಹರಿತ ವ್ಯಂಗ್ಯದಲ್ಲಿ ಇರಿಯುತ್ತದೆ.

‘ಗಣರಾಜ್ಯೋತ್ಸವ–ನಮ್ಮೂರ ನೆನಪು’ ಪ್ರಬಂಧದಲ್ಲಿ ಸ್ವಾತಂತ್ರ್ಯ ಬಂದಂದಿನಿಂದ ಊರ ಶಾಲೆಯಲ್ಲಿ ಧ್ವಜಾರೋಹಣ ಮಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಮಿತ್ತಮಜಲು ಅಯ್ಯನವರನ್ನು ಸೂಕ್ಷ್ಮ ರಾಜಕೀಯ ತಂತ್ರಗಾರಿಕೆಯಿಂದ ಪಕ್ಕಕ್ಕಿರಿಸಿ ಹೊಸ ನಾಯಕತ್ವವು ಧ್ವಜಾರೋಹಣ ಮಾಡುತ್ತದೆ.

ಮಾಂಕು, ಕೊರಗಪ್ಪ, ರಾಮಚಂದ್ರ ಭಟ್ರು ಎಲ್ಲರೂ ಇರುವ ಸಾಲಂಕೃತ ಸಾವಧಾನದ ಸ್ವಾತಂತ್ರ್ಯ ಗೀತೆಗಳ ಕಾರ್ಯಕ್ರಮದ ಬದಲು ಹೊಸ ಭಕ್ತಿ ಸಂಗೀತದ ಕ್ಯಾಸೆಟ್‌ ಹಾಡುಗಳು, ತಿನ್ನಲು ವಿದ್ಯಾರ್ಥಿಗಳಿಗೆ ಮಾಮೂಲಿ ಅವಲಕ್ಕಿ ಬದಲು ಹೋಟೆಲ್‌ ಖಾರದ ಪ್ಯಾಕೆಟ್‌, ಗಾಂಧಿ ಪಟಕ್ಕೆ ಹೂವಿರಿಸಿ ಕಾಯುತ್ತಿದ್ದ ಮಿತ್ತಮಜಲು ಅಯ್ಯನವರು ಪ್ರತಿಪಾದಿಸುತ್ತಿದ್ದ ನೈತಿಕತೆ ಬದಲಾದದ್ದು ಮಾತ್ರ ಜನರ ಗಮನಕ್ಕೆ ಬರುವುದೇ ಇಲ್ಲ.

‘ಚಿಕೂನ್‌ ಗುನ್ಯ’ ರೋಗಕ್ಕೆ ತುತ್ತಾದ ಗ್ರಾಮ ತತ್ತರಿಸಿಹೋದ ಕತೆ. ಪ್ರಜ್ಞಾವಂತ ಜಿಲ್ಲಾಧಿಕಾರಿ ಸರ್ಕಾರದ ಕಾರ್ಯಕ್ರಮದಲ್ಲಿದ್ದ ಉಚಿತ ಅಕ್ಕಿಯನ್ನು ಸಮಯಕ್ಕೆ ಸರಿಯಾಗಿ ವಿತರಿಸಿದ್ದರಿಂದ ಜನರೇನೋ ಹೊಟ್ಟೆಗಿಲ್ಲದೆ ಸಾಯವುದಿಲ್ಲ. ಆದರೆ, ಜನವಿರೋಧಿ ಅಧಿಕಾರ ಶಾಹಿ, ಅವರನ್ನು ಮನುಷ್ಯರಂತೆ ಬದುಕಿ ಪುನರ್‌ ಚೇತನಗೊಳ್ಳಲು ಸಹಕರಿಸುವುದಿಲ್ಲ. ‘ಸಬ್ಸಿಡಿ ಸಬ್ಸಿಡಿ’ಯಲ್ಲಿ ಕೊಳೆರೋಗದ ಔಷಧಿಯಾಗಿ ಮೈಲುತುತ್ತ (ಕಾಪರ್‌ ಸಲ್ಫೇಟು) ಔಷಧಿಗೆ ನೀಡಿದ ಸರ್ಕಾರಿ ಸಬ್ಸಿಡಿಯ ಪ್ರಹಸನವನ್ನು ವಿವರಿಸುತ್ತಾ, ಯೋಚನೆಗಳಲ್ಲಿ ಮಾತ್ರ ಉತ್ತಮ
ವಾಗಿರುವ ಸರ್ಕಾರಿ ಯೋಜನೆಗಳು ಜನರಿಗೆ ನಿಷ್ಪ್ರಯೋಜಕವಾಗುವ ರೀತಿಯನ್ನು ಲೇಖಕರ ಸ್ವಂತ ಅನುಭವಗಳ ಮೂಲಕವೇ ಕಾಣಿಸುತ್ತದೆ.

‘ಹರಿಯಪ್ಪ ಎಂಬ ಕಾಮ್ರೇಡ್‌’ ಪ್ರಬಂಧವು ಹೈಸ್ಕೂಲು ಓದಿರುವ ಗುಡ್ಡೆಮೂಲೆ ಮನೆಯ ಶಿವಣ್ಣಗೌಡರ ಮಗ ಹರಿಯಪ್ಪನಲ್ಲಿ ಮುಗ್ಧ ರಾಜಕೀಯ ವೈಚಾರಿಕತೆ ಹಾಗೂ ಪ್ರಾಮಾಣಿಕ ಪ್ರಯತ್ನಗಳು ಇದ್ದರೂ ಕಾರ್ಮಿಕರು, ಶೋಷಿತರ ನಡುವೆ ಎಡಪಂಥೀಯ ಚಿಂತನೆ ಬೆಳೆಯದೆ ಕ್ರಮೇಣ ಹಿಂದುತ್ವದ ಚಿಂತನೆ ಸಹಜವೆಂಬಂತೆ ಹುಟ್ಟಿಬೆಳೆದ ಕ್ರಮಗಳನ್ನು ವಿವರಿಸುತ್ತದೆ. ಬಾಡಿಗೆ ಜೀಪು ಇಟ್ಟ ಜತ್ತಪ್ಪ ಕಷ್ಟಪಟ್ಟು ಒಂದು ತುಂಡು ಭೂಮಿ ಖರೀದಿಸಿ, ಮನೆ ಮಾಡಿಕೊಳ್ಳುವ ಹೊತ್ತಿಗೆ ಹೃದಯಾಘಾತದಿಂದ ಸತ್ತು, ಉಳಿದವರಿಗೆ ಮತ್ತೆ ಮೊದಲಿನ ಜೀತವೇ ಗತಿಯಾಗುತ್ತದೆ.

ಇಲ್ಲಿನ ಎಲ್ಲ ಪ್ರಬಂಧಗಳೂ ಸುರೇಶ ಇದ್ದ ಕಂಜರ್ಪಣೆ ಹಾಗೂ ಅಲ್ಲಿನ ಗ್ರಾಮಕೇಂದ್ರಗಳಾದ ಕುಕ್ಕುಜಡ್ಕ, ಚೊಕ್ಕಾಡಿಗಳ ಸುತ್ತಮುತ್ತಲಿನ ಅನಾಮಿಕ ಗ್ರಾಮೀಣ ಪ್ರಜೆಗಳ ಕಥನ. ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪರಿಸರ. ಅಮೆರಿಕಕ್ಕೆ ಹೋಗಿ ನೆಲೆ ನಿಂತವರೂ ಇದ್ದಾರೆ. ಹಳ್ಳಿಯಲ್ಲೇ ಉಳಿದು ಎರಡು ಹೊತ್ತಿನ ಊಟಕ್ಕೂ ಕಷ್ಟಪಡುವವರೂ ಇದ್ದಾರೆ.

ಅಸೌಖ್ಯದಲ್ಲಿದ್ದರೂ ದಾನವಾಗಿ ದುಡ್ಡು ಪಡೆಯದೆ ಕೈಲಾದಷ್ಟು ಕೆಲಸ ಮಾಡಿ ಋಣ ಬೇಡ ಎನ್ನುವ ಕೂಲಿಕಾರರು; ಬ್ರಾಹ್ಮಣರ ಬೆಂದ ಅನ್ನ ಬೇಡ, ನಮ್ಮ ಹಸಿವಿನ ಬೆಂಕಿ ಎಂಥದ್ದು ಎಂದರೆ ‘ಅನ್ನ ಕಲ್ಲಿನ ಹಾಗಿರಬೇಕು, ಅರ್ಧ ಒಲೇಲಿ, ಇನ್ನರ್ಧ ಹೊಟ್ಟೇಲಿ ಬೇಯಬೇಕು’ ಎನ್ನುವ ಪೋಡಿ’, ಮನೆಕಟ್ಟುವ ಚನಿ’, ಮಗ ಸತ್ತು ಇಳಿವಯಸ್ಸಲ್ಲಿ ಮೊಮ್ಮಗನನ್ನು ಸಾಕಬೇಕಾದ ಕೂಸಪ್ಪ– ಹೀಗೆ ಗ್ರಾಮ ಭಾರತದ ವ್ಯಕ್ತಿ ಕಥನಗಳ ಮೂಲಕ ರಾಷ್ಟ್ರಕಥನದ ಒಳಸತ್ಯಗಳನ್ನು ಹೇಳುವ ಪ್ರಬಂಧಗಳಿವು. ಗ್ರಾಮೀಣ ಅನುಭವಗಳೇ ಪ್ರಧಾನವಾಗಿರುವ ಇಲ್ಲಿನ ನೆನಪುಗಳಲ್ಲಿ ಲೇಖಕರು ಕ್ಷೇತ್ರಕಾರ್ಯಗಳಿಗಾಗಿ ಸುತ್ತಿದ ನೂರಾರು ಹಳ್ಳಿಗಳ ಸ್ಥಿತಿಗತಿ ಪ್ರತಿಫಲಿಸುತ್ತದೆ. ಸಮಾಜಶಾಸ್ತ್ರ ಅಧ್ಯಯನದ ಮೂಲಕ ಗ್ರಾಮೀಣ ನೆನಪನ್ನು ದಾಖಲಿಸಿದ ಎ.ಎಸ್‌. ಶ್ರೀನಿವಾಸರ ‘ನೆನಪಿನಹಳ್ಳಿ’ ಕೃತಿ ರೀತಿಯ ಅಧ್ಯಯನಗಳಿಂದ ಸಂಪೂರ್ಣ ಭಿನ್ನವಾದ ಕೃತಿ ಇದು.

ಕೆ.ಪಿ. ಸುರೇಶರ ಈ ಪ್ರಬಂಧಗಳು ಒಂದು ರೀತಿಯಲ್ಲಿ ಶಿವರಾಮ ಕಾರಂತರ ‘ಹಳ್ಳಿಯ ಹತ್ತು ಸಮಸ್ತರು’ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ಹಳ್ಳಿಯ ರಸಿಕರು’ ಕೃತಿಗಳ ‍ಪರಂಪರೆಯನ್ನು ಮುಂದುವರಿಸುತ್ತದೆ. ‘ಹಳ್ಳಿಯ ಹತ್ತು ಸಮಸ್ತರು’ ಕೃತಿಯಲ್ಲಿ ಕೋಟ ಸುತ್ತಲಿನ ಜನಜೀವನದ ಬಗ್ಗೆ ಹದಿನಾರು ಪ್ರಬಂಧಗಳಿವೆ. ನಮ್ಮ ಸಮಾಜದ ವಿವಿಧ ಜಾತಿಗಳ ಸಂಬಂಧ, ವ್ಯಕ್ತಿತ್ವ, ಸಂಘರ್ಷ, ವೃತ್ತಿ ವಿವರಗಳ ಮೂಲಕ 1944ರಲ್ಲಿ ಕಾರಂತರು ಚಿತ್ರಿಸಿದ ಗ್ರಾಮೀಣ ಭಾರತ ಇಂದು ಹೇಗಿದೆ ಎಂಬುದನ್ನು ಕೆ.ಪಿ. ಸುರೇಶ ಮುಂದುವರಿಸಿ ಹೇಳಿದಂತೆ ಭಾಸವಾಗುತ್ತದೆ.

ಸಣ್ಣ ತೆರನ ಬಂಡವಾಳ, ಬಡತನ, ಕುಯುಕ್ತಿ, ರಾಜಕೀಯ ಆದರ್ಶ ಹಾಗೂ ಗ್ರಾಮೀಣ ಅನುಷ್ಠಾನದಲ್ಲಿನ ಅಲ್ಪತನ– ಹೀಗೆ ಗ್ರಾಮೀಣ ಭಾರತ, ಸ್ವಾತಂತ್ರ್ಯಾನಂತರ ಯಾಕೆ ಬದಲಾಗಿಲ್ಲ ಎಂಬ ವಿಷಾದ ಮೂಡುತ್ತದೆ. ‘ಕಂಡಷ್ಟು ಕಡೆದಷ್ಟು’ ಇಂದಿನ ಕಾಲದ ನೂತನ ಗ್ರಾಮ ಭಾರತದ ಚಿತ್ರಣ ನೀಡುತ್ತದೆ. ಹಾಗೆಯೇ ಸಹನೆಯ ಕಟ್ಟೆಯಾಗಿ, ತೇಜಸ್ವಿಯವರ ಹಾಸ್ಯ ದರ್ಶನದಂತೆ ನವಿರಾದ ವಿನೋದ ಪ್ರಜ್ಞೆಯೂ ಇಲ್ಲಿ ಜೀವದಾಯಿನಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು