ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಹಿ’ಯಲ್ಲಿ ಕಳರಿ ಮಿಂಚು

Last Updated 4 ಜನವರಿ 2019, 20:00 IST
ಅಕ್ಷರ ಗಾತ್ರ

ಹಂಪಿಯ ಸುಂದರ ಸ್ಮಾರಕಗಳ ನಡುವೆ ಕತ್ತಿ, ಗುರಾಣಿ ಝಳಪಿಸುತ್ತ ಕಳರಿಪಯಟ್ಟು ಸಮರ ಕಲೆಯನ್ನು ಕಲಿಯುವ ಆ ಯುವತಿಗೆ ಒಮ್ಮೆ ದುಷ್ಟರಿಂದ ರಕ್ಷಣೆ ಪಡೆಯಲು ಅದೇ ಕಲೆ ನೆರವಾಗುತ್ತದೆ. ಬಳ್ಳಿಯಂತೆ ದೇಹವನ್ನು ಬಾಗಿಸುತ್ತ, ಚಿಗರೆಯಂತೆ ಜಿಗಿದು ಕಳರಿಪಯಟ್ಟು ಕಸರತ್ತುಗಳನ್ನು ಪ್ರದರ್ಶಿಸುವ ದೃಶ್ಯ ಮೈಜುಮ್ಮೆನ್ನುವಂತೆ ಮಾಡುತ್ತದೆ.

ಕಳರಿಪಯಟ್ಟು ಕಲೆಯನ್ನು ಆಧರಿಸಿ ನಿರ್ಮಿಸಲಾಗಿರುವ ‘ದೇಹಿ’ ಚಿತ್ರದ ಟ್ರೇಲರ್‌ನಲ್ಲಿ ಕಂಡು ಬರುವ ದೃಶ್ಯಗಳಿವು. ಬೆಂಗಳೂರಿನ ಚಿಕ್ಕಗುಬ್ಬಿಯಲ್ಲಿರುವ ಕಳರಿ ಗುರುಕುಲಂನ ವಿದ್ಯಾರ್ಥಿಗಳು ಕ್ರೌಡ್‌ ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ನಿರ್ಮಿಸಿರುವುದು ಮತ್ತೊಂದು ವಿಶೇಷ. ಮೈಸೂರಿನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕಳರಿಪಯಟ್ಟು ಚಾಂಪಿಯನ್‌ಷಿಪ್‌ ಸಮಾರಂಭದಲ್ಲಿ ‘ದೇಹಿ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು.

ಈ ಸಿನಿಮಾದಲ್ಲಿ ಕಳರಿ‍ಪಯಟ್ಟು ಗುರುವಾಗಿ ನಟ ಕಿಶೋರ್‌, ಮುಖ್ಯಪಾತ್ರದಲ್ಲಿ ಉಪಾಸನಾ ಗುರ್ಜರ್‌ ಕಾಣಿಸಿಕೊಂಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಗುರುಕುಲಂನ ಸುಮಾರು 50 ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಕಳರಿಪಯಟ್ಟು ಸಮರ ಕಲೆಯನ್ನು ಹಲವಾರು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿದೆ. ಆದರೆ ಪೂರ್ಣ ಪ್ರಮಾಣದ ಚಿತ್ರ ಇದುವರೆಗೂ ಬಂದಿಲ್ಲ ಎಂಬುದು ನಟ ಕಿಶೋರ್‌ ಮಾತು.

‘ಸಿನಿಮಾ ಮಾಡುವ ಮುಂಚೆ ನಾನು ಹಾಗೂ ವಿಜಯ ರಾಘವೇಂದ್ರ ಕಳರಿಪಯಟ್ಟು ಕಲಿಯಲು ಕಳರಿ ಪರ್ಫಾರ್ಮಿಂಗ್‌ ಆರ್ಟ್ಸ್‌ ಶಾಲೆಗೆ ಹೋಗಿದ್ದೆವು. ಆರಂಭದಲ್ಲಿ ಸ್ವಲ್ಪ ದಿನ ಹೋಗಿ ಸುಮ್ಮನಾದೆ. ವಿಜಯ್‌ ಕೊನೆಯವರೆಗೂ ಹೋದರು. ಕೊನೆಗೂ ಸಿಕ್ಕಿಹಾಕಿಕೊಂಡೆ’ ಎಂದು ಮುಗುಳ್ನಕ್ಕರು.

‘ಕಳರಿ ಕೇವಲ ಕಸರತ್ತು ಅಲ್ಲ. ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಸಾಧಿಸುವ ವಿದ್ಯೆ. ಚಿತ್ರದಲ್ಲಿ ಕಳರಿಪಯಟ್ಟು ಕಲೆಯ ಹಿಂದಿನ ಫಿಲಾಸಫಿ ಬಗ್ಗೆ ಹೇಳಲಾಗಿದೆ. ಇಂಥ ಸಾಹಸ ಕಲೆಯನ್ನು ಸಿನಿಮಾ ಮೂಲಕ ತೋರಿಸಿದರೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಸಾಹಸ ದೃಶ್ಯಗಳ ಜೊತೆಗೆ ಕೊಂಚ ಹಾಸ್ಯವಿದೆ. ಮುಖ್ಯವಾಗಿ ಸ್ತ್ರೀ ಸಬಲೀಕರಣದ ಕಥಾ ಹಂದರವಿದೆ. ಗುರುಕುಲಂನ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ’ ಎಂದು ‘ದೇಹಿ’ ಬಗ್ಗೆ ಕಿಶೋರ್ ವಿವರಣೆನೀಡುತ್ತಾರೆ.

ಕೇರಳದ ಮೂಲ ಕಲೆಯನ್ನು ಏಳೆಂಟು ವರ್ಷಗಳಿಂದ ಕಲಿಸುತ್ತಿರುವ ಗುರುಕುಲಂನ ರಂಜನ್‌ ಮುಲ್ಲಾರತ್‌ ಅವರು ಈ ಚಿತ್ರದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳರಿಪಯಟ್ಟು ಕಲೆಯನ್ನು ಪ್ರಚುರಪಡಿಸುವ ಹಾಗೂ ಅದರ ಮಹತ್ವವನ್ನು ಜಗತ್ತಿಗೆ ಸಾರುವ ದೃಷ್ಟಿಯಿಂದ ಸಿನಿಮಾ ಮಾಡುವ ಪ್ರಯತ್ನಕ್ಕೆ ಅವರು ನಾಂದಿ ಹಾಡಿದ್ದಾರೆ.

ಈಗಾಗಲೇ ದೇಹಿ ಚಿತ್ರ, ಹಂಪಿ, ಬೇಲೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು, ನಿರ್ಮಾಣೋತ್ತರ ಹಂತವನ್ನೂ ಪೂರೈಸಿದೆ. ಮಾರ್ಚ್‌ ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳುತ್ತಾರೆ ರಂಜನ್‌ ಮುಲ್ಲಾರತ್‌.

ಈ ಸಿನಿಮಾವನ್ನು ಪಡೈವಿರನ್‌ ಖ್ಯಾತಿಯ ನಿರ್ದೇಶಕ ಧನಶೇಖರ್‌ ನಿರ್ದೇಶಿಸಿದ್ದಾರೆ. ರಂಜನ್‌ ಮುಲ್ಲಾರತ್‌ ಈ ಚಿತ್ರದಲ್ಲಿ ಸಮರ ಕಲೆಯ ನಿರ್ದೇಶಕ ಹಾಗೂ ಕೊರಿಯೋಗ್ರಾಫರ್‌ ಚಿತ್ರಕತೆ ಹಾಗೂ ಸಂಭಾಷಣೆ ಬಿ.ಜಯಮೋಹನ್‌ ಅವರದ್ದು.

ಅಂದಾಜು ₹3 ಕೋಟಿ ಬಜೆಟ್‌ನಲ್ಲಿ ಚಿತ್ರೀಕರಣಗೊಂಡಿರುವ ದೇಹಿ ಚಿತ್ರವು ಕನ್ನಡ ಮಾತ್ರವಲ್ಲದೇ ಮಲಯಾಳಂ ಹಾಗೂ ತಮಿಳಿನಲ್ಲೂ ತೆರೆಗೆ ಬರುತ್ತಿದೆ. ಬ್ರೂಸ್‌ ಲೀ ಅವರ ಸಮರ ಕಲೆ ಆಧರಿಸಿದ ‘ಎಂಟರ್‌ ದಿ ಡ್ರ್ಯಾಗನ್‌’ ಚಿತ್ರದಂತೆ ಇದು ಯಶಸ್ಸಿನ ತುದಿ ತಲುಪಲಿದೆ ಎಂಬ ವಿಶ್ವಾಸ ರಂಜನ್‌ ಮುಲ್ಲಾರತ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT