ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಮೋಹಿ ನೆಲದಲ್ಲಿ ನುಡಿಸಂಭ್ರಮ

Last Updated 29 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಗಿಡಮರಗಳೂ ಹಕ್ಕಿಗಳೂ ಹಾಡುಕಟ್ಟಿ ನಲಿಯುವ ಈ ನೆಲದಲ್ಲಿ ಸಾಹಿತಿಗಳಿಗೆ ಬರವಿಲ್ಲ. ಕವಿಗಳು, ಸಂತರು, ಶರಣರು, ಅನುಭಾವಿಗಳು, ಸಂಗೀತಕಾರರು, ಚಿತ್ರ ಕಲಾವಿದರು, ಶಿಕ್ಷಣ ತಜ್ಞರು, ತತ್ವಜ್ಞಾನಿಗಳು, ರಂಗಕರ್ಮಿಗಳು ಹಾಗೂ ನಾಡಿನ ಏಕತೆಗಾಗಿ ಚಳವಳಿಗಳನ್ನು ರೂಪಿಸಿದ ಹೋರಾಟಗಾರರ ಈ ನೆಲ ತಂಪೂ ಹೌದು; ಕೆಂಪೂ ಹೌದು.

ಅನ್ನ- ಅಕ್ಷರ ದಾಸೋಹ ನಿರಂತರವಾಗಿರುವ ಇಲ್ಲಿ ಬೇವು-ಬೆಲ್ಲ ಮಿಶ್ರಣದ ಆರೋಗ್ಯಕಾರಿ ಗುಣವಿದೆ. ಬರಹಗಾರರನ್ನು ರೂಪಿಸಿ ಸಾಹಿತ್ಯದ ರಸದಾನಂದವನ್ನು ಉಣಬಡಿಸುವುದರ ಜೊತೆಗೆ, ಬರಹವನ್ನು ನಿಕಷಕ್ಕೆ ಒಡ್ಡುವ ವಿಮರ್ಶಕರನ್ನೂ ನೀಡಿ ಭಾವ-ಬುದ್ಧಿಗಳೆರಡನ್ನೂ ಜಾಗೃತ ಸ್ಥಿತಿಯಲ್ಲಿಟ್ಟಿದೆ.

‘ಜ್ಞಾನಪೀಠ’ ಪುರಸ್ಕೃತರಾದ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಈ ನೆಲದ ಘಮ ಉಂಡು ಬೆಳೆದವರು, ಹರಡಿದವರು ಎಂಬುದು ಧಾರವಾಡದ ಹೆಮ್ಮೆ.

ರೆವರೆಂಡ್ ಕಿಟೆಲ್, ಡೆಪ್ಯುಟಿ ಚನ್ನಬಸಪ್ಪ, ಆಲೂರು ವೆಂಕಟರಾಯರು, ಡಾ. ಎಸ್. ಎಸ್. ಭೂಸನೂರಮಠ, ಡಾ. ಡಿ.ಸಿ. ಪಾವಟೆ, ಅದರಗುಂಚಿ ಶಂಕರಗೌಡರು, ಅಂದಾನೆಪ್ಪ ದೊಟ್ಟಮೇಟಿ, ಹಳ್ಳಿಕೇರಿ ಗುದ್ಲೆಪ್ಪ, ಶಂ. ಬಾ. ಜೋಶಿ, ರಾ. ಹ. ದೇಶಪಾಂಡೆ, ಡಾ. ಬೆಟಗೇರಿ ಕೃಷ್ಣಶರ್ಮ, ಡಾ. ಕೀರ್ತಿನಾಥ ಕುರ್ತಕೋಟಿ, ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ಡಾ. ಎಂ.ಎಂ ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ, ಪಂಚಾಕ್ಷರಿ ಹಿರೇಮಠ, ಸಿದ್ಧಲಿಂಗ ಪಟ್ಟಣಶೆಟ್ಟಿ, ವೀಣಾ ಶಾಂತೇಶ್ವರ, ಮಾಲತಿ ಪಟ್ಟಣಶೆಟ್ಟಿ, ವಿ.ಸಿ. ಐರಸಂಗ ಹೀಗೆ ನಾಡು-ನುಡಿಗಾಗಿ ದುಡಿದ ಚೇತನಗಳು ಇಲ್ಲಿನ ಕನ್ನಡ ಮನಸ್ಸುಗಳ ಹೋರಾಟದ ಶಕ್ತಿಯಾಗಿ ನಿಂತಿವೆ.

ಕನ್ನಡ ಕಟ್ಟುವ ಮಾತು ಬಂದಾಗ, ಧಾರವಾಡ ಅಷ್ಟೇ ಅಲ್ಲ ಇಡೀ ನಾಡೇ ಕೃತಜ್ಞ ಆಗಿರಬೇಕಾದ ಮಹನೀಯರು ಧಾರವಾಡದಲ್ಲಿ ಆಗಿ ಹೋಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚೆನ್ನಬಸಪ್ಪನವರು ಇಂಗ್ಲಿಷ್ ಕಲಿಕೆಯ ಹಂಬಲದಿಂದ ಊರು ತೊರೆದು, ಎಂಜಿನಿಯರಿಂಗ್ ಓದಿದವರು. ಎಂಜಿನಿಯರ್‌ ಕೆಲಸ ಮಾಡದೇ ಕನ್ನಡ ನಾಡು ಕಟ್ಟುವ ನಿಟ್ಟಿನಲ್ಲಿ ಎಂಜಿನಿಯರ್‌ ಆಗಿ ದುಡಿದವರು. ಅದಕ್ಕಾಗಿ ಅವರು ಧಾರವಾಡದಲ್ಲಿ ನೆಲೆನಿಂತಿದ್ದು ನಾಡಿನ ಸೌಭಾಗ್ಯವೇ ಆಯಿತು. ಅವರ ಒತ್ತಾಸೆಯಿಂದ ಧಾರವಾಡದಲ್ಲಿ 1857ರಲ್ಲಿ ಆರಂಭವಾದ ನಾರ್ಮಲ್ ಸ್ಕೂಲ್, ಮುಂದೆ ಗಂಡುಮಕ್ಕಳ ಟ್ರೈನಿಂಗ್ ಕಾಲೇಜಾಗಿ, ಇದೀಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಎಂದು ಹೆಸರಾಗಿದೆ.

ನಾಡುನುಡಿಯ ಪ್ರೀತಿಯಿಂದ ಶಿಕ್ಷಣ ಇಲಾಖೆ ಸೇರಿದ ಅವರು, ಈ ಭಾಗದಲ್ಲಿ ಕನ್ನಡ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಿದರು. ಡೆಪ್ಯುಟಿ ಚನ್ನಬಸಪ್ಪ ಎನಿಸಿಕೊಂಡು ಅನ್ನ-ಅಕ್ಷರ ದಾಸೋಹಕ್ಕೆ ಹೊಸ ವ್ಯಾಖ್ಯಾನ ನೀಡಿದರು.
ಕನ್ನಡ ಶಾಲೆಗಳ ಅಳಿವು–ಉಳಿವಿನ ಪ್ರಶ್ನೆ ಎದುರಾದ ಈ ಹೊತ್ತಿನಲ್ಲಿ, ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಮಹಾದ್ವಾರಕ್ಕೆ ಡೆಪ್ಯುಟಿ ಚನ್ನಬಸಪ್ಪನವರ ಹೆಸರು ಇಟ್ಟಿರುವುದು ಅತ್ಯಂತ ಸೂಕ್ತವೂ ಆಗಿದೆ.

ಮರಾಠಿ, ಉರ್ದು, ಇಂಗ್ಲಿಷ್‌ ಭಾಷೆಗಳ ನಡುವೆ ಹುಡುಕಬೇಕಾಗಿದ್ದ ಕನ್ನಡವನ್ನು ಮತ್ತು ಕೀಳರಿಮೆಯಲ್ಲಿ ಬದುಕಿದ್ದ ಕನ್ನಡಿಗರನ್ನು ಬಡಿದೆಬ್ಬಿಸಲು ಈ ಟ್ರೈನಿಂಗ್‌ ಕಾಲೇಜು ಮೊದಲ ಮೆಟ್ಟಿಲಾಯಿತು ಎಂಬುದರಲ್ಲಿ ಎರಡು ಮಾತಿಲ್ಲ. ಗಳಗನಾಥರು, ಮಿರ್ಜಿ ಅಣ್ಣಾರಾಯರಂಥವರು ಈ ಕಾಲೇಜಿನಲ್ಲಿ ಓದಿದವರು ಎಂಬುದು ಒಂದು ಹೆಮ್ಮೆಯಾದರೆ, ಡೆಪ್ಯುಟಿ ಚನ್ನಬಸಪ್ಪನವರ ನಂತರ ಕಾಲೇಜಿನ ಪ್ರಾಚಾರ್ಯರಾಗಿ ಬಂದವರು ರಾ. ಹ. ದೇಶಪಾಂಡೆ ಅವರೊಂದಿಗೆ ಸೇರಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಗೆ ಕಾರಣೀಭೂತರಾದರು ಎಂಬುದು ಮತ್ತೊಂದು ಹೆಮ್ಮೆ. ಮುಂದೆ, ಇದೇ ವಿದ್ಯಾವರ್ಧಕ ಸಂಘ ಕರ್ನಾಟಕ ಸಾಹಿತ್ಯ ಪರಿಷತ್ತಿನ ಹುಟ್ಟಿಗೂ ಕಾರಣವಾಗುತ್ತದೆ.

ಬಾಸೆಲ್‌ ಮಿಶನ್‌ನ ಕ್ರೈಸ್ತ್ ಮಿಶನರಿಯಾಗಿ, ಜರ್ಮನಿಯಿಂದ ಬಂದ ಕಿಟೆಲ್‌ರು ಕನ್ನಡ– ಇಂಗ್ಲಿಷ್‌ ಶಬ್ದಕೋಶ ರಚಿಸಲು ಮುಂದಾಗಿದ್ದು ಕೂಡ ಇದೇ ನೆಲದಲ್ಲಿ ಎಂಬುದು ಧಾರವಾಡದ ಅಗ್ಗಳಿಕೆ.

ಗಡಿ, ಭಾಷೆಯನ್ನು ಮೀರಿ ಕನ್ನಡತನವನ್ನು ಪ್ರೀತಿಸಿದ ಮನಸ್ಸುಗಳು ಇಲ್ಲಿಯವು. ಏಳು ಗುಡ್ಡದ ಊರು, ಏಳು ಕೆರೆಯ ಊರೆಂದೆನಿಸಿದ ಇಲ್ಲಿಯ ಈ ಮನಸ್ಸುಗಳಿಗೆ ಮುರುಘಾಮಠದ ಅನ್ನ ದಾಸೋಹದ ಸಂಸ್ಕಾರವಿದೆ. ಬಸವರಾಜ ರಾಜಗುರು, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್, ಪಂ. ಎಂ. ವೆಂಕಟೇಶಕುಮಾರ, ಮಾಧವ ಗುಡಿ, ರಹಿಮತ್‌ ಖಾನ್‌, ವೆಂಕಟೇಶ ಗೋಡಖಿಂಡಿ, ಸಂಗೀತಾ ಕಟ್ಟಿ, ಕೈವಲ್ಯಕುಮಾರ ಗುರವ, ಪ್ರವೀಣ ಗೋಡಖಿಂಡಿ ಹೀಗೆ ಸಂಗೀತ ದಿಗ್ಗಜರ ಮೂಲಕ ಹಿಂದೂಸ್ತಾನಿ ಸಂಗೀತದ ತವರೂರೆನಿಸಿಕೊಂಡು ಸ್ವರ ಸಂಸ್ಕಾರದಿಂದ ನೆಲ ವಿನೀತಗೊಂಡಿದೆ. ‘ಸಮರಸವೇ ಜೀವನ’ ಎಂದು ಹಾಡುತ್ತಲೇ, ಆಯಾ ಕಾಲಘಟ್ಟದಲ್ಲಿ ಪ್ರತಿರೋಧದ ಬೀಜ ಬಿತ್ತಿ ಹೋರಾಟ ಕಟ್ಟುವ ಬಂಡಾಯದ ಗುಣವನ್ನೂ ಮೇಳೈಸಿಕೊಂಡಿದೆ.

ಕವಿ ಕುವೆಂಪು, ಕನ್ನಡ ನಾಡು ಒಗ್ಗೂಡಿದ ಸಂದರ್ಭದಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಆದರೆ, ಇದು ನಾಡು ಒಡೆಯುವ ಮಾತು ಕೇಳಿಬರುತ್ತಿರುವ ಹೊತ್ತು! ಅನ್ನಕ್ಕಾಗಿ ಭಾಷೆಯನ್ನು ಬದಿಗಿಡಬೇಕಾದ ಹೊತ್ತು. ಕನ್ನಡ ಶಾಲೆಗಳಿಗೆ ಬೀಗ ಬೀಳುತ್ತಿರುವ ಹೊತ್ತು! ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗೆ ರೂಪ ನೀಡಿದ ಧಾರವಾಡವು, ದೇಸಿ ಕಸುವಿನ ಪ್ರತಿಪಾದಕ ಡಾ. ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ತನ್ನ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನದ ಮೂಲಕ, ಏನೋ ಪರಿಹಾರದ ಸುಳಿವು ನೀಡುತ್ತದೆ ಎಂಬ ದೊಡ್ಡ ನಿರೀಕ್ಷೆಯಂತೂ ಇದ್ದೇ ಇದೆ.

ನೂರೆಂಟು ದುಗುಡಗಳನ್ನು ದೂರ ಮಾಡುವ ಶಕ್ತಿ ಇಲ್ಲಿದೆಯಂದೇ ಬೇಂದ್ರೆ ಅಜ್ಜನ ಮೂಲಕ ಧಾರವಾಡ ಕರೆಯುತ್ತಿದೆ;
‘..... ಗಾಳಿ ಎಲ್ಲೂ ಆಡಿದೆ

ದುಗುಡ ಇಲ್ಲಿಂದೋಡಿದೆ
ಬಾರೋ ಸಾಧನಕೇರಿಗೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT