ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನದಲ್ಲಿ ಬೆರೆತ ನಾದ ಲಹರಿ

Last Updated 28 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ನೀವೆಲ್ಲಾ ನನ್ನ ಸಂಗೀತವನ್ನು ಮೆಚ್ಚಿ, ಖುಷಿಪಟ್ಟಿರಿ. ಆದರೆ, ಸಂಗೀತವನ್ನು ಬೆಳೆಸುವುದೆಂದರೆ ಹೀಗೆ ಕಾರ್ಯಕ್ರಮ ನೀಡುವುದು ಮಾತ್ರವಲ್ಲ; ಬದಲಾಗಿ, ಇಲ್ಲಿ ಮುಂದೆ ಕೂತಿರುವ ಸಹೋದರಿಯರಂತೆ (ಅಪೂರ್ವಾ ಗೋಖಲೆ ಹಾಗೂ ಪಲ್ಲವಿ ಜೋಶಿ) ಸಂಗೀತದ ಕೆಲಸ ಮಾಡಬೇಕು. ಆಗಮಾತ್ರ ಕಲೆ ಬೆಳೆಯುತ್ತದೆ’ ಇದು, ಚಪ್ಪಾಳೆಯ ಸುರಿಮಳೆಯ ಮಧ್ಯೆ ತುಸು ಅವಕಾಶ ಮಾಡಿಕೊಂಡು, ಪಂ.ವೆಂಕಟೇಶ್ ಕುಮಾರ್ ಅವರು ಹೇಳಿದ ಮಾತು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಔಂಧ್ ಎಂಬ ಪುಟ್ಟಹಳ್ಳಿಯಲ್ಲಿ ನಡೆದ ‘ಔಂಧ್ ಸಂಗೀತ ಸಮ್ಮೇಳನ-2019’ರಲ್ಲಿ ಅವರು ಹಾಡಿ, ಜನಸ್ತೋಮವನ್ನು ನಲಿದಾಡಿಸಿಬಿಟ್ಟಿದ್ದರು.

ಈ ಬಾರಿ, ಮೊನ್ನೆ ನವೆಂಬರ್ 22ರಂದು, ಬೆಳಗಿನಿಂದ ಸಂಜೆಯವರೆಗೆ ನಡೆದ 80ನೆಯ ಔಂಧ್ ಸಂಗೀತ ಸಮ್ಮೇಳನವನ್ನು ಫೇಸ್‍ಬುಕ್‌ನಲ್ಲಿ ಕೇಳಿದ ನಂತರ ಹಿಂದಿನ ವರ್ಷದ ಸಂಭ್ರಮ ಕಣ್ಮುಂದೆ ಬಂತು.

ಪಂ.ಅನಂತ ಮನೋಹರ ಜೋಶಿಯವರು ಗ್ವಾಲಿಯರ್ ಘರಾಣೆಯ ಶ್ರೇಷ್ಠ ಸಂಗೀತಗಾರರು. ವಿದ್ವತ್‌ಪೂರ್ಣ ಗಾಯನಕ್ಕೆ ಹೆಸರಾಗಿದ್ದ ಅವರು, ಔಂಧ್‍ನ ಶಿವಾನಂದ ಸ್ವಾಮಿಯವರನ್ನು ತಮ್ಮ ಆಧ್ಯಾತ್ಮಿಕ ಗುರುಗಳನ್ನಾಗಿ ಪಡೆದಿದ್ದರು. ಅನಂತ ಅವರ ಮಗ ಪಂ.ಗಜಾನನ ಬುವಾ ಜೋಶಿ ಮುಂದೆ ಶಿವಾನಂದ ಸ್ವಾಮಿ ಟ್ರಸ್ಟ್ ಸ್ಥಾಪಿಸಿದರು ಹಾಗೂ ಅದರ ಮೂಲಕ ಪ್ರತಿವರ್ಷ ಈ ಪುಟ್ಟ ಊರಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದರು. ಗಜಾನನ ಬುವಾ ಅವರ ಮಕ್ಕಳು ಹಾಗೂ ಶಿಷ್ಯಂದಿರು ಸೇರಿ ಈ ಪರಂಪರೆಯನ್ನು ಮುಂದುವರಿಸಿದರು. ಯುವ ಪೀಳಿಗೆಯ ಗಾಯಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡು, ತಮ್ಮ ಪಾಂಡಿತ್ಯಪೂರ್ಣ ಪ್ರಸ್ತುತಿಯಿಂದಾಗಿ ಸಂಗೀತ ಲೋಕದ ಗಮನಸೆಳೆದ ಹಾಗೂ ಗಜಾನನ ಬುವಾ ಅವರ ಮೊಮ್ಮಕ್ಕಳಾದ ಅಪೂರ್ವಾ ಹಾಗೂ ಅವರ ತಂಗಿ ಪಲ್ಲವಿ ಈಗ ಸಮ್ಮೇಳನದ ಹೊಣೆ ಹೊತ್ತಿದ್ದಾರೆ.

2019ರ ಅಕ್ಟೋಬರ್‌ನಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದೆ. ಹಳ್ಳಿಯೊಂದರಲ್ಲಿ ನಡೆಯಬಹುದಾದ ಅದ್ಧೂರಿ ಸಂಗೀತ ಕಾರ್ಯಕ್ರಮದ ರೂಪುರೇಷೆ ಹಾಗೂ ಗಹನತೆಯ ಸೂಚನೆಯೂ ಇಲ್ಲದ ನಾನು, ಒಂದಷ್ಟು ಒಳ್ಳೆಯ ಸಂಗೀತವನ್ನಾದರೂ ಕೇಳಬಹುದು ಅಂದುಕೊಂಡು ಮೈಸೂರಿನಿಂದ ಬಸ್ ಹತ್ತಿದ್ದೆ. ಸತಾರಾದಲ್ಲಿ ಇಳಿದು ದಾರಿಯಲ್ಲಿನ ಹಸಿರು ತುಂಬಿದ ಹೊಲ, ಗುಡ್ಡಗಳ ನೋಟವನ್ನು ಸವಿಯುತ್ತಾ ಸಾಗಿ, ಔಂಧ್‍ನ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳ ಪ್ರವೇಶಿಸುತ್ತಿದ್ದಂತೆ, ಅಲ್ಲೊಂದು ಬೇರೆಯದೇ ಗಂಧರ್ವ ಲೋಕ ನಿರ್ಮಾಣವಾಗಿರುವುದನ್ನು ಕಂಡೆ.

ಹಿಂದಿನ ದಿನ ರಾತ್ರಿಯಿಡೀ ಮಳೆಬಿದ್ದ ಕಾರಣ, ವ್ಯವಸ್ಥೆಯಲ್ಲಿ ಸ್ವಲ್ಪ ಅಸ್ತವ್ಯಸ್ತವಾಗಿದ್ದರೂ ಅದಕ್ಕೆಲ್ಲಾ ಅಂಜದೆ ಮುಂಬೈ-ಪುಣೆಗಳಿಂದ ಅಲ್ಲಿಗೆ ಬಂದಿದ್ದವರು ಸ್ನಾನ, ಶೌಚಗಳಿಗೆ ಸರತಿ ಸಾಲಿನಲ್ಲಿ ನಿಂತಿರುವುದು, ಹೊರಗಡೆ ಸ್ನಾನಕ್ಕೆ ದೊಡ್ಡ ಕಡಾಯಿಯಲ್ಲಿ ಕಾದ ನೀರನ್ನು ಬಕೆಟ್‍ನಲ್ಲಿ ಬಗ್ಗಿಸಿ ಕೊಡುತ್ತಿರುವುದು, ಸ್ವಯಂಸೇವಕರು ಊಟ-ಉಪಚಾರದ ವ್ಯವಸ್ಥೆಗಾಗಿ ಓಡಾಡುತ್ತಿರುವುದು, ಪಕ್ಕದಲ್ಲೇ ಒಲೆಹೂಡಿ ಅಡುಗೆ ತಯಾರಿಸುತ್ತಿರುವುದು, ದತ್ತಮಂದಿರದಲ್ಲಿ ಪೂಜೆಯ ತಯಾರಿ ನಡೆದಿರುವುದು, ವೇದಿಕೆಯನ್ನು ಕಾರ್ಯಕ್ರಮಕ್ಕಾಗಿ ಸಜ್ಜುಗೊಳಿಸುತ್ತಿರುವುದು, ಯಾವ್ಯಾವುದೋ ದೂರದ ಊರಿನಿಂದ ಕಾರ್ಯಕ್ರಮ ನೀಡಲು ಬರುತ್ತಿರುವ ಕಲಾವಿದರನ್ನು ಎದುರುಗೊಳ್ಳುವುದು – ಇವೆಲ್ಲವೂ ಏಕಕಾಲದಲ್ಲಿ ಸಂಭ್ರಮದಿಂದ, ಆದರೆ, ಯಾವುದೇ ಗೌಜು ಗಲಾಟೆಗಳಿಲ್ಲದೆ ಸಾಗಿದ್ದವು. ಅಪೂರ್ವಾ ಹಾಗೂ ಪಲ್ಲವಿ ಸಹೋದರಿಯರು ತಾವು ಕಲಾವಿದರೆಂಬುದನ್ನು ಪಕ್ಕಕ್ಕಿರಿಸಿ, ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ, ಕಸ ಗುಡಿಸುವುದರಿಂದ ಆರಂಭಿಸಿ ಎಲ್ಲಾ ಕೆಲಸಗಳಲ್ಲಿ ತೊಡಗಿದ್ದರು.

ಆ ವರ್ಷದ ಸಂಗೀತ ಕಾರ್ಯಕ್ರಮವು, ಈ ಸಹೋದರಿಯರ ಗಾಯನದ ಮೂಲಕವೇ ಆರಂಭವಾಯಿತು. ಯಾವುದೇ ಆಯಾಸವಿಲ್ಲದ ನಗುಮುಖದಿಂದ ವೇದಿಕೆಯೇರಿ ಇವರಿಬ್ಬರು ಬೆಳಗಿನ ರಾಗಗಳಾದ ಬೈರಾಗಿ ಭೈರವ್ ಹಾಗೂ ತೋಡಿಗಳನ್ನು ಪ್ರಸ್ತುತಪಡಿಸಿದರು. ಆ ಬಳಿಕ ಉಸ್ತಾದ್ ಫರೂಕ್ ಲತೀಫ್‌, ಅಲಕಾ ದೇವ್ ಮಾರೂಲ್ಕರ್ ಇವರ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನದ ಊಟದ ವಿರಾಮದ ಬಳಿಕ ಗಜಾನನ ಬುವಾ ಅವರ ಇಬ್ಬರು ಹಿರಿಯ ಶಿಷ್ಯರಾದ ವಿ.ಶುಭದಾ ಪರಾಡ್ಕರ್ ಹಾಗೂ ಪಂ.ಅರುಣ್ ಕಶಾಲ್ಕರ್ ಅವರ ಕಛೇರಿ. ಈ ಎರಡು ಕಾರ್ಯಕ್ರಮಗಳಲ್ಲೂ ವಿಪರೀತವಾಗಿ ಸುರಿಯುತ್ತಿದ್ದ ಮಳೆ, ಹಾಡುಗಾರರು ಹಾಗೂ ಕೇಳುಗರಿಗೆ ಸವಾಲೊಡ್ಡುತ್ತಲೇ ಇದ್ದರೂ ಸಂಗೀತದ ಮೇಲಿನ ಪ್ರೀತಿ ಎಲ್ಲರನ್ನೂ ಬಂಧಿಸಿಟ್ಟದ್ದು ಗೋಚರವಾಗುತ್ತಿತ್ತು.

ರಾತ್ರಿ ಊಟದ ಬಿಡುವಿನಲ್ಲಿ, ಅಲ್ಲೇ ಭೇಟಿಯಾಗಿ ಸ್ನೇಹಿತರಾದವರೊಂದಿಗಿನ ಚರ್ಚೆ, ಮಾತುಕತೆಗಳಲ್ಲಿ ಮುಂದೆ ಹಾಡಲಿರುವ ಪಂ.ವೆಂಕಟೇಶ್ ಕುಮಾರ್ ಅವರ ಬಗ್ಗೆ, ಅವರ ಗಾಯನದ ಬಗ್ಗೆ ಕಾತರತೆ, ಉದ್ವೇಗ ಎದ್ದು ಕಾಣುತ್ತಿತ್ತು. ಹಿಂದೊಮ್ಮೆ ಪಂ.ರಾಜೀವ ತಾರಾನಾಥ ಸರ್, ‘ನಮ್ಮ ವೆಂಕಟೇಶ್ ಕುಮಾರ್, ಅಲ್ಲಿ ಆರಾಧ್ಯ ದೈವ’ ಅಂದಿದ್ದರು. ಆ ಮಾತು ಕೇಳಿ, ಹೆಮ್ಮೆ ಎನಿಸಿದ್ದರೂ ಅದು ಏನೆಂಬುದು ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಔಂಧ್‍ನಲ್ಲಿ ಅವರ ಹೆಸರು ಹೇಳಿದ ಮಾತ್ರಕ್ಕೇ ಜನ ತೋರುವ ಆಸಕ್ತಿ, ಪ್ರೀತಿ, ಗೌರವಗಳನ್ನು ನೋಡಿ ಸಂತೋಷಪಟ್ಟೆ.

ರಾತ್ರಿ 10 ಗಂಟೆಗೆ ಸಭಾಂಗಣ ಹೊಕ್ಕಿ ನೋಡಿದರೆ, ಅರ್ಧಕ್ಕಿಂತ ಹೆಚ್ಚು ಜನ, ಟೋಪಿ, ಕಚ್ಚೆ ಪಂಚೆ ಧರಿಸಿದ ಸಾಮಾನ್ಯರು. ಜೊತೆಯಲ್ಲಿ ಮುಂಭಾಗದಲ್ಲಿ ಸಂಗೀತ ಬಲ್ಲ ‘ಗುಣೀಜನ’ರು. ವೆಂಕಟೇಶ್ ಕುಮಾರ್ ಅವರು, ರಾಗ ಬಿಹಾಗ್‌ ಹಾಡುತ್ತಿದ್ದರೆ, ಅವರು ಹಾಡುವ ಪ್ರತಿಯೊಂದು ಸಂಗತಿ, ಸ್ವರವಾಕ್ಯ, ತಾನ್‌ಗಳಿಗೆ ಸಭಾಂಗಣವಿಡೀ ‘ವ್ಹಾ ವ್ಹಾ, ಕ್ಯಾ ಬಾತ್’ ಎಂದೆಲ್ಲಾ ಆಲಾಪ ತೆಗೆಯುತ್ತಿತ್ತು.

ಗಜಾನನ ಬುವಾ ಹಾಗೂ ಅವರ ಶಿಷ್ಯವೃಂದದವರೆಲ್ಲರೂ ಹೆಚ್ಚಾಗಿ ಹಾಡುವ ತಾಳವಾದ ತಿಲವಾಡದಲ್ಲಿ ಮುಂದಿನ ರಾಗವಾದ ರಾಗೇಶ್ರೀಯನ್ನು ಹಾಡಿ, ವೆಂಕಟೇಶ್ ಕುಮಾರ್ ಅವರು ಏಳಲು ಹೊರಟರೆ, ಜನ ಬಿಡಲೇ ಇಲ್ಲ. ಮತ್ತೆ ಅವರು ರಾಗ ತಿಲಕ್‍ ಕಾಮೋದ್‌ನಲ್ಲಿ ಒಂದು ಬಂದಿಶ್ ಹಾಡಿ, ಕೈ ಮುಗಿದರೆ, ಹಿಂದಿನಿಂದ ಒಂದು ಕೂಗು ಕೇಳಿ ಬಂತು, ‘ಕನ್ನಡ್ ಪದ್....’. ಮತ್ತೆ ‘ಮಂತ್ರಾಲಯ ನಿವಾಸ’ ಹಾಡಿ ಒಂದೆರಡು ತಾನ್‍ಗಳನ್ನು ಹಾಡಿದ ಮೇಲೆಯೇ ಅವರಿಗೆ ಮುಗಿಸಲು ಅನುಮತಿ ಸಿಕ್ಕಿದ್ದು. ಆಗ ಆರಂಭವಾದ ಚಪ್ಪಾಳೆ ಮುಗಿಯಲೊಲ್ಲದು. ಮೂರು ಮೂರು ಬಾರಿ ಅವರು ಕೈ ಮುಗಿದು, ‘ನನಗೆ ನೀವು ನೀಡುವ ಸಹಕಾರವನ್ನು ಇಲ್ಲಿ ನಡೆಯುತ್ತಿರುವ ದೊಡ್ಡ ಸಂಗೀತ ಸೇವೆಗೂ ಕೊಡಿ’ ಎನ್ನುತ್ತಾ ಎದ್ದರು. ಶ್ರೇಷ್ಠವಾದ ಸಂಗೀತದೊಂದಿಗೆ, ಅವರಲ್ಲಿರುವ ಸರಳತೆ, ಅಲ್ಲಿನ ಜನ ವೆಂಕಟೇಶ್ ಕುಮಾರ್ ಅವರನ್ನು ಆರಾಧಿಸುವ ರೀತಿ, ಹಳ್ಳಿ ಜನರ ನಿಷ್ಕಲ್ಮಶ ಸಂಗೀತ ಪ್ರೀತಿ ಇವೆಲ್ಲವೂ ಬಹಳ ವಿಶೇಷವಾಗಿ ಕಂಡವು.

ಆ ಬಳಿಕ ಅನುರಾಧಾ ಕುಬೇರ್, ಪಾಂಡುರಂಗ ಪವಾರ್, ರೂಪಕ್ ಕುಲಕರ್ಣಿ ಇವರ ಕಾರ್ಯಕ್ರಮ ನಡೆಯಿತು. ಗಾಯನ ಮಾತ್ರವಲ್ಲದೆ ಕಥಕ್ ನೃತ್ಯ, ವಾದ್ಯ ಸಂಗೀತ, ತಬಲಾ ಸೋಲೊ ಕಾರ್ಯಕ್ರಮಗಳನ್ನೂ ಅಲ್ಲಿ ನೆರೆದ ಎಲ್ಲರೂ ತಾಳ ಹಾಕುತ್ತಾ ಕೇಳಿ, ಮೆಚ್ಚುಗೆ ಸೂಸುವುದನ್ನು ನಾನು ಗಮನಿಸಿದೆ. ಆ ಬಾರಿಯ ‘ಔಂಧ್ ಸಂಗೀತ ಸಮ್ಮೇಳನ’ವು, ಕೊನೆಗೊಂಡದ್ದು ಇತ್ತೀಚೆಗೆ ನಿಧನರಾದ ಜೈಪುರ್ ಘರಾಣೆಯ ಮೇರು ಸಂಗೀತಗಾರರಾದ ಪಂ.ದಿನಕರ್ ಪಣಶೀಕರ್ ಅವರ ಗಾಯನದೊಂದಿಗೆ. ಇವರು, ಅಪ್ರಚಲಿತ ರಾಗಗಳಿಗೆ ಹೆಸರಾದ ಜೈಪುರ್ ಘರಾಣೆಯ ವಿರಾಟ್ ಭೈರವ್, ಕಾಲಿಂಗಡಾ, ಜೌನ್ ಬಹಾರ್ ರಾಗಗಳನ್ನು ಹಾಡಿ ಪ್ರಫುಲ್ಲಗೊಳಿಸಿದರು.

ಕಾರ್ಯಕ್ರಮದುದ್ದಕ್ಕೂ ಸಾಥ್ ನೀಡಿದ ಸಹಕಲಾವಿದರನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ತಾವು ನುಡಿಸುವ ಪ್ರಧಾನ ಕಲಾವಿದರ ಸಂಗೀತದ ಮನೋಧರ್ಮವನ್ನನುಸರಿಸಿ, ಎಲ್ಲೂ ತಮ್ಮ ಹೆಚ್ಚುಗಾರಿಕೆ ಇಲ್ಲದೆ ಆದರೆ, ತಮ್ಮ ನಿಪುಣತೆಗೆ ಕುಂದಾಗದಂತೆ ನುಡಿಸುವ ಆಯ್ದ, ಅತ್ಯುತ್ತಮ ಕಲಾವಿದರು ಅವರು. ಈ ಬಾರಿಯ ಆನ್‍ಲೈನ್ ಸಮ್ಮೇಳನದಲ್ಲಿ ಹೇಮಂತ ಪೆಂಡಸೆ, ಸಾವನಿ ಶೆಂಡೆ, ಯಜ್ನೇಶ್ ರಾಯ್‍ಕರ್, ವಿಶ್ವೇಶ ಸರದೇಶಪಾಂಡೆ, ವಿಶ್ವನಾಥ ಜೋಶಿ ಅವರ ಕಾರ್ಯಕ್ರಮವು ಸಮರ್ಥವಾಗಿ ಮೂಡಿಬಂತು.

ಔಂಧ್ ಸಂಗೀತ ಸಮ್ಮೇಳನದ ವಿಶೇಷ ಎಂದರೆ ಇಲ್ಲಿನ ಗುಣಾತ್ಮಕ ಕಾರ್ಯಕ್ರಮ ಮಾತ್ರವಲ್ಲ, ಪ್ರತಿಯೊಬ್ಬ ಹಿರಿಯ-ಕಿರಿಯ ಸಂಗೀತಗಾರರೆಲ್ಲರೂ ಇಲ್ಲಿ ಹಾಡಲು ಅವಕಾಶ ದೊರಕುವುದೇ ತಮಗೆ ಸಿಗುವ ಗೌರವ ಎಂಬಂತೆ ಭಾವಿಸಿರುವುದು. ಇಂಥ ವಾತಾವರಣದಲ್ಲಿ ಸಂಗೀತ ಕೇಳುವುದೂ ವಿಭಿನ್ನ ಅನುಭವ ಕೊಡುತ್ತದೆ.

ಗ್ರಾಮೀಣ ಪ್ರದೇಶವೊಂದರಲ್ಲಿ 500-600 ಸಂಖ್ಯೆಯ ಶ್ರೋತೃಗಳು ಹಗಲಿನಲ್ಲೂ ರಾತ್ರಿಯಲ್ಲೂ ಹಾಜರಿದ್ದು ಶಾಸ್ತ್ರೀಯ ಸಂಗೀತವನ್ನು ಕೇಳುವುದು ತುಂಬಾ ಮಹತ್ವದ್ದಾಗಿ ಕಾಣುತ್ತದೆ. ಇಲ್ಲಿ ಕುಳಿತು ಸಂಗೀತ ಕೇಳುವಾಗ, ಶಾಸ್ತ್ರೀಯ ಸಂಗೀತವನ್ನು ಕೂಡ ಇಷ್ಟೆಲ್ಲಾ ಪ್ರೀತಿಸುವ ಈ ಜನರಿಂದ ನಾವೇ ಅದನ್ನು ದೂರದ ನಗರಕ್ಕೆ ಒಯ್ದು, ಎ.ಸಿ ರೂಮಿನಲ್ಲಿ ಬಂಧಿಸಿಟ್ಟಿದ್ದೇವೆಯೋ ಎಂದು ಒಂದು ಕ್ಷಣ ಅನಿಸಿದ್ದು ಸುಳ್ಳಲ್ಲ.

ಸಂಗೀತವನ್ನು ಅದರ ಬೇರಿನಿಂದಲೇ ದೂರಮಾಡುವುದು ಎಷ್ಟು ಸರಿ, ಹಾಗೆ ಮಾಡಿದಲ್ಲಿ ಬೇರಿನಿಂದ ದೂರವಾದಾಗ ಕಲೆ, ತಾನು ಅರಳಲು ಸಾಧ್ಯವೇ ಎಂಬೆಲ್ಲಾ ಪ್ರಶ್ನೆಗಳು ನುಸುಳತೊಡಗಿದವು. ಜೊತೆಗೆ ನಾವು ಕಲಿತ ಶಾಸ್ತ್ರೀಯ ಸಂಗೀತವನ್ನು ಕೇಳುವ ಶ್ರೋತೃ ಎಂಥವನಿರಬೇಕು, ಶಾಸ್ತ್ರವನ್ನು ಅರಿತು, ಗಾಯಕನು ಹಲವಾರು ವರ್ಷಗಳ ಕಾಲ ಕಠಿಣವಾಗಿ ಅಭ್ಯಾಸ ಮಾಡಿದ ಕಲೆಯನ್ನು ಅರ್ಥ ಮಾಡಿಕೊಂಡು, ಅದರಲ್ಲಿನ ಕೆಲಸವನ್ನು ಅರಿಯುವವನಾಗಿರಬೇಕೇ ಅಥವಾ ನಿರ್ವಾಜ ಪ್ರೇಮದಿಂದ ಕೇಳಿ, ಕಣ್ಣೀರು ಮಿಡಿದು ಸುಖಿಸುವ ಸಹೃದಯನಾಗಿದ್ದರೆ ಸಾಕೇ ಎಂಬ ಹಳೆಯ ಪ್ರಶ್ನೆ ಮತ್ತೆ ಕಾಡಿತು.

ನಗರಗಳ ಆಡಿಟೋರಿಯಂಗಳಲ್ಲಿ, 2-3 ಗಂಟೆಗಳಲ್ಲಿ ಮುಗಿದು ಹೋಗುವ ಸಂಗೀತ ಕಾರ್ಯಕ್ರಮಗಳ ನಡುವೆ ಔಂಧ್ ಸಮ್ಮೇಳನವು ಏನೂ ವ್ಯವಸ್ಥೆ ಇರದ ಹಳ್ಳಿಯೊಂದರಲ್ಲಿ, ಸಾಮಾನ್ಯ ಜನರನ್ನು ಒಳಗು ಮಾಡಿಕೊಂಡು, ತಳಮಟ್ಟದಿಂದ ಪ್ರತಿಯೊಂದು ಸಿದ್ಧತೆಗಳನ್ನು ಮಾಡಿಕೊಂಡು, ಗುಣಮಟ್ಟದ ಸಂಗೀತ ಕಾರ್ಯಕ್ರಮ ನೀಡುವ ಅಪರೂಪದ ಸಮ್ಮೇಳನವಾಗಿ ಕಾಣುತ್ತದೆ. ಸಂಗೀತದ ಕೆಲಸವು ಈ ರೀತಿಯಾಗಿ ಬಹುಮುಖಿಯಾಗಿ ನಡೆದಾಗ ಮಾತ್ರ ನಿಜವಾದ ಸಂಗೀತದ ಬೆಳವಣಿಗೆ ಆಗುತ್ತದೆ.

ಸಮ್ಮೇಳನದ ಹಿಂದಿನ ಶಕ್ತಿ... ಪಲ್ಲವಿ ಜೋಶಿ ಮತ್ತು ಅಪೂರ್ವಾ ಗೋಖಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT