ಸೋಮವಾರ, ಸೆಪ್ಟೆಂಬರ್ 21, 2020
27 °C

ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು

ವರದರಾಜು Updated:

ಅಕ್ಷರ ಗಾತ್ರ : | |

ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌

ಬೆಂಗಳೂರು ಚಾಮರಾಜಪೇಟೆ ಶ್ರೀರಾಮಸೇವಾ ಮಂಡಳಿಗೂ ಸಂಗೀತ ವಿದ್ವಾಂಸ ಕದ್ರಿ ಗೋಪಾಲನಾಥ್ ಅವರಿಗೂ ಸುಮಾರು 50 ವರ್ಷಗಳ ನಂಟು. ಈ ನಂಟು ನೆನಪಿಸಿಕೊಂಡಿದ್ದಾರೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ವರದರಾಜು.

ಬೆಂಗಳೂರು ಚಾಮರಾಜಪೇಟೆ ಶ್ರೀರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವವೆಂದರೆ ಅದರಲ್ಲಿ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್‌ ಕಛೇರಿ ಇರಲೇಬೇಕು. ಪಾಶ್ಚಾತ್ಯ ವಾದ್ಯದಲ್ಲಿ ಕರ್ನಾಟಕ ಸಂಗೀತ ನಾದವನ್ನು ಕೇಳಿ ಮನತುಂಬಿಕೊಳ್ಳಲು ಜನ ಕಾತರದಿಂದ ಕಾದಿರುತ್ತಿದ್ದರು. ಹಣೆಯ ಮೇಲೆ ದೊಡ್ಡ ಕುಂಕುಮ, ಮುಖದ ತುಂಬಾ ನಗುತುಳುಕಿಸುತ್ತಾ ಕದ್ರಿ ಗೋಪಾಲನಾಥ್ ಅವರು ವೇದಿಕೆ ಮೇಲೆ ಕುಳಿತು ವಾದ್ಯ ಹಿಡಿಯುತ್ತಿದ್ದಂತೆ ಸಭಿಕರಲ್ಲಿ ನಿಶ್ಯಬ್ದದ ಆನಂದ! ಕನಿಷ್ಠ ನಾಲ್ಕೈದು ಸಾವಿರ ಜನರು ಆ ಸಮಯವನ್ನೇ ಎದುರು ನೋಡುತ್ತಿದ್ದರು.

ಶ್ರೀರಾಮಸೇವಾ ಮಂಡಳಿ ನಗರದಲ್ಲಿ ಆಯೋಜಿಸುವ ರಾಮನವಮಿ ಸಂಗೀತೋತ್ಸವದಲ್ಲಿ ಪ್ರತಿ ವರ್ಷ ಕಾಣಸಿಗುವ ಅನುಭವವಿದು. ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ತಪ್ಪದೇ ಈ ಸಂಗೀತ ಕಾರ್ಯಕ್ರಮದಲ್ಲಿ ಕದ್ರಿ ಗೋಪಾಲನಾಥ್‌ ಅವರು ಕಛೇರಿ ನೀಡಿದ್ದಾರೆ. ಕನಿಷ್ಠ ಮೂರು ಗಂಟೆಯಾದರೂ ಅವರು ಸ್ಯಾಕ್ಸೋಫೋನ್‌ ಮೂಲಕ ಸಭಿಕರನ್ನು ರಂಜಿಸುತ್ತಿದ್ದರು. 

ಇದನ್ನೂ ಓದಿ: ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ

ಮದ್ರಾಸಿನ ಟಿ.ವಿ.ಗೋಪಾಲಕೃಷ್ಣನ್‌ ಅವರ ಸಂಪರ್ಕದಲ್ಲಿ ಕಲಿಕೆ ನಡೆಸುತ್ತಿದ್ದ ಕದ್ರಿ ಅವರು ತಮ್ಮ 14ನೇ ವಯಸ್ಸಿನಲ್ಲಿ ಬೆಂಗಳೂರಿನ ರಾಮನವಮಿ ಸಂಗೀತೋತ್ಸವದಲ್ಲಿ ಒಂದು ಗಂಟೆ ಕಾರ್ಯಕ್ರಮ ನೀಡಿದ್ದರು.  ಆ ಕಾಲದ ಹೆಚ್ಚಿನ ಜನರು ಸ್ಯಾಕ್ಸೋಫೋನ್‌ನ್ನು ಕಂಡಿದ್ದು ಅದೇ ಮೊದಲಾಗಿತ್ತು. ಬೆಳಗಿನ ಸಮಯದಲ್ಲಿ ರಾಮಾಯಣ ಉಪನ್ಯಾಸದ ಬಳಿಕ ಕದ್ರಿ ಅವರಿಗೆ ಸ್ಯಾಕ್ಸೋಫೋನ್‌ ನುಡಿಸಲು ಅವಕಾಶ ನೀಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಸಭಿಕರಿದ್ದರು.

ನಂತರ ವರ್ಷದಿಂದ ರಾಮನವಮಿ ಸಂಗೀತೋತ್ಸವ ಪ್ರಾರಂಭವೇ ‘ಮಂಗಳವಾದ್ಯ’ ಸ್ಯಾಕ್ಸೋಫೋನ್‌ ಕಛೇರಿ ಮೂಲಕ ಆಗುತ್ತಿತ್ತು. ಸಂಗೀತೋತ್ಸವದ ಮೊದಲ ದಿನ ಇಲ್ಲವೇ ಕೊನೆಯ ದಿನ ಕದ್ರಿ ಗೋಪಾಲನಾಥ್‌ ಅವರ ಕಾರ್ಯಕ್ರಮ ನಿಗದಿಯಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದಾಗಿ 80ರ ದಶಕದಲ್ಲಿ ಒಂದು ವರ್ಷ ಶ್ರೀರಾಮ ಸೇವಾ ಮಂಡಳಿಯಿಂದ ಕದ್ರಿ ಅವರನ್ನು ಆಹ್ವಾನಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಅವರು ‘ನೀವು ನನ್ನನ್ನು ಕರೆಯದೇ ಹೋದರೂ ಸರಿಯೇ; ಮುಂದಿನ ವರ್ಷದಿಂದ ನಾನೇ ಸಂಗೀತೋತ್ಸವ ಪ್ರವೇಶದ್ವಾರದಲ್ಲಿ ಸ್ಟೇಜ್‌ ಸಿದ್ಧಪಡಿಸಿಕೊಂಡು ಕಾರ್ಯಕ್ರಮ ಕೊಟ್ಟು ಹೋಗುತ್ತೇನೆ’ ಎಂದು ಅಪಾರ ಅಭಿಮಾನವನ್ನು ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು

ಶ್ರೀನಿವಾಸ್‌ ಅವರು ಮ್ಯಾಂಡೊಲಿನ್‌ ಪಾಶ್ಚಾತ್ಯ ವಾದ್ಯವನ್ನು ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿದರೆ, ಮತ್ತೊಂದು ಕಡೆ ಕದ್ರಿ ಅವರು ಸ್ಯಾಕ್ಸೋಫೋನ್‌ ಮೂಲಕ ವಿದೇಶಿಗರನ್ನೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಒಲವು ಬೆಳೆಸಿಕೊಳ್ಳುವಂತೆ ಮಾಡಿದರು. ಕಛೇರಿಗಾಗಿ ಯಾವತ್ತಿಗೂ ದಿನಾಂಕ ನಿಗದಿಯಲ್ಲಿ ವ್ಯತ್ಯಾಸವಾಗಿದ್ದೇ ಇಲ್ಲ; ಕೇಳಿದ ದಿನವನ್ನು ಕೂಡಲೇ ಒಪ್ಪಿಬಿಡುತ್ತಿದ್ದರು. ಪ್ರತಿ ಬಾರಿಯೂ ಸಾಮ್ರಾಟ್‌ ಹೊಟೇಲ್‌ನಲ್ಲಿಯೇ ಉಳಿದುಕೊಳ್ಳುತ್ತಿದ್ದ ಅವರು ಸದಾ ಸಂಗೀತ ಧ್ಯಾನದಲ್ಲಿಯೇ ಮುಳುಗಿರುತ್ತಿದ್ದರು. 

ಇದನ್ನೂ ಓದಿ: ವ್ಯಕ್ತಿತ್ವ | ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’

ಯಾವತ್ತಿಗೂ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇಟ್ಟವರಲ್ಲ. ಸಂಸ್ಥೆಯಿಂದ ನೀಡುವ ಗೌರವ ಧನವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. ರಾಮನವಮಿ ಸಂಗೀತೋತ್ಸವಕ್ಕೆ ಕದ್ರಿ ಅವರ ಸ್ಯಾಕ್ಸೋಫೋನ್‌ ಕಛೇರಿ ಕಳಶಪ್ರಾಯವಾಗಿತ್ತು. ಅನಾರೋಗ್ಯವಿದ್ದರೂ ಕಾರ್ಯಕ್ರಮವನ್ನು ಬಹಳ ಪರಿಣಾಮಕಾರಿಯಾಗಿ ನಡೆಸುತ್ತಿದ್ದರು. ಮುಂದಿನ ವರ್ಷದ ಕಾರ್ಯಕ್ರಮದ ಬಗ್ಗೆಯೂ ಮಾತನಾಡಿದ್ದರು.

ಏನು ಮಾಡುವುದು ಮುಂದಿನ ವರ್ಷದಿಂದ ಕದ್ರಿ ಅವರ ಸ್ಯಾಕ್ಸೋಫೋನ್ ಕಛೇರಿ ಕೇವಲ ನೆನಪು ಮಾತ್ರ...

(ನಿರೂಪಣೆ: ಹೇಮಂತ್‌ ಕುಮಾರ್ ಎಸ್‌.)

 

 

ಇನ್ನಷ್ಟು...

ಕುವೈತ್‌ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ 
ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು