ಮಂಗಳವಾರ, ಆಗಸ್ಟ್ 16, 2022
30 °C

Interview| ಅನುಭವಕ್ಕೆ ತೆರೆದುಕೊಳ್ಳದೆ ಧ್ವನಿ ಹುಟ್ಟಲ್ಲ: ಕೈವಲ್ಯಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತದ ಸಂಗ್ತಿ... ಇವೋ ನಾಕುತಂತಿ

ಅಂತರ್ಜಾಲಮಯವಾಗಿರುವ ಜಗತ್ತಿನಲ್ಲಿ ಸಂಗೀತದ ಧಾರೆ ಈಗ ಎತ್ತ ಹರಿಯುತ್ತಿದೆ? ಗುರು–ಶಿಷ್ಯರ ಸಂಬಂಧಗಳಲ್ಲಿ ಆಗಿರುವ ಬದಲಾವಣೆಗಳೇನು? ಶಾಸ್ತ್ರೀಯ ಸಂಗೀತದ ಭವಿಷ್ಯದ ನೆಲೆ ಯಾವುದು? ಇವೇ ಮೊದಲಾದ ಸಂಗತಿಗಳ ಕುರಿತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಎರಡು ತಲೆಮಾರುಗಳ ಪ್ರಮುಖ ಕೊಂಡಿಯಂತಿರುವ ಪಂ. ಕೈವಲ್ಯಕುಮಾರ್ ಗುರುವ ಅವರೊಂದಿಗೆ ನಡೆಸಿದ ಒಂದು ಆತ್ಮೀಯ ಸಂವಾದ...

ಹೇಗಿತ್ತು, ಹೇಗಿದೆ ಈ ಒಂಬತ್ತು ತಿಂಗಳ ಆನ್‍ಲೈನ್‍ಮಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಜಗತ್ತು?

ಒಂಬತ್ತು ತಿಂಗಳುಗಳಿಂದ ಕಲಾವಿದರಷ್ಟೇ ಅಲ್ಲ ಯಾರ ಪರಿಸ್ಥಿತಿಯನ್ನೂ ಕೇಳುವ ಹಾಗಿಲ್ಲ. ದೇಶಾದ್ಯಂತ ಸಾವಿರಾರು ವೃತ್ತಿಪರ ಸಂಗೀತ ಕಲಾವಿದರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಆನ್‍ಲೈನ್‍ನಲ್ಲಿ ಸಂಗೀತ ಪಾಠ ಮಾಡುತ್ತಿರುವುದು ಜೀವನೋಪಾಯಕ್ಕೆ. ಆದರೆ ಇಲ್ಲಿ ಗುರು-ಶಿಷ್ಯ ಸಂಬಂಧದೊಳಗೆ ಪರಸ್ಪರ ಚೈತನ್ಯಶಕ್ತಿ ಪ್ರವಹಿಸುವುದೇ ಇಲ್ಲ.

ಈ ತನಕ ಮೂರು ಆನ್‍ಲೈನ್‍ ಕಛೇರಿ ಕೊಟ್ಟೆ. ಕ್ಯಾಮೆರಾನೇ ಶ‍್ರೋತೃವರ್ಗ. ಸಭಿಕರನ್ನು ನೋಡುತ್ತಿರುವಂತೆ ನಟಿಸಬೇಕು. ಕಣ್ಣುಮುಚ್ಚಿ ಹಾಡುವ ಹಾಗಿಲ್ಲ, ಸಮಯದ ಗಂಟೆ ಎದುರಿಗಿರುತ್ತದೆ. ಹೀಗಿದ್ದಾಗ ಸಮಾಧಾನ, ಸುಖ, ಉತ್ಸಾಹದ ಅನುಭವವಾಗುವುದಾದರೂ ಹೇಗೆ? ಒಟ್ಟಿನಲ್ಲಿ ಆತ್ಮವೇ ಇರುವುದಿಲ್ಲ ಇಲ್ಲಿ. ಇರಲಿ ಇನ್ನೊಂದು ಆರು ತಿಂಗಳಿಗೆ ಈ ಪರಿಸ್ಥಿತಿ ತಿಳಿಯಾದೀತು.

ನಷ್ಟ-ಕಷ್ಟ-ನೋವು ಎಲ್ಲರಿಗೂ ಒಂದೇ. ಆದರೆ ಕಲಾವಿದರಿಗೆ ಇದು ಹೆಚ್ಚು ಅನ್ನಿಸುವುದಿಲ್ಲವೆ?

ಡಾರ್ಕ್ ಶೇಡ್ ಆಫ್ ಲೈಫ್. ಮೊದಲೇ ಕಲಾವಿದರದು ಅಪಾಯದ ಜೀವನ. ಯಾವ ಹೊತ್ತಿನಲ್ಲಿ ಏನಾಗುತ್ತದೆ ಎಂಬ ಆತಂಕದಲ್ಲೇ ಇರುತ್ತಾರೆ. ಸಾಕಷ್ಟು ಸಲ ಸಾಮಾನ್ಯರಂತೆ ಅವರಿಗೆ ಬದುಕು ಸಾಗಿಸಲು ಆಗದು. ಆದರೆ, ಪ್ರತಿಯೊಬ್ಬರಿಗೂ ಒಳ್ಳೆಯ ಕಾಲ ಬಂದೇ ಬರುತ್ತದೆ. ಆಗ ಹಣದ ಉಳಿತಾಯಕ್ಕೆ ಗಮನ ಕೊಡಬೇಕು. ಆದರೆ ನಮ್ಮ ಬಹುಪಾಲು ಕಲಾವಿದರದು ಲ್ಯಾವಿಷ್ ಲೈಫ್‍ಸ್ಟೈಲ್. ಇಂಥ ಪರಿಸ್ಥಿತಿ ಬಂದರೆ… ಎನ್ನುವ ಪ್ರಜ್ಞೆ ಇರಬೇಕಾಗುತ್ತದೆ.

ಚಟ ದೂರವಿಟ್ಟು ಶಿಸ್ತು ರೂಢಿಸಿಕೊಳ್ಳಬೇಕು. ಯಾವ ಸುಖಕ್ಕೂ ಮಿತಿ ಇರಬೇಕು. ನಾವು ಹೀಗೆ ನಮ್ಮೊಳಗೇ ಒಂದು ಗೆರೆ ಎಳೆದುಕೊಳ್ಳದಿದ್ದರೆ ಯಶಸ್ಸು ಗಳಿಸುವುದಾದರೂ ಹೇಗೆ? ಎಷ್ಟು ಬೇಗ ಮೇಲೇರುತ್ತೇವೋ ಉಳಿದ ವಿಷಯಗಳಿಂದಾಗಿ ಬೇಗ ಕೆಳಗಿಳಿದುಬಿಡುತ್ತೇವೆ. ಆಗ ನಿತ್ಯಜೀವನ ನೀಗಿಸುವುದೇ ಒಂದು ಶಾಪದಂತಾಗಿಬಿಡುತ್ತದೆ. ನಮ್ಮ ಪರಿಸ್ಥಿತಿಗೆ ನಾವೇ ಹೊಣೆ. ದೇವರು ಕೊಟ್ಟ ದೇಣಿಗೆಗೆ ಸರಿಯಾಗಿ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವಾ? ಇದೆಲ್ಲ ನಮಗೆ ನಾವೇ ಕೇಳಿಕೊಳ್ಳುವಂಥದ್ದು. ಇಲ್ಲವಾದರೆ ಈಗ ಹೀಗೆ ಪ್ರಕೃತಿಯೇ ನಮ್ಮನ್ನು ಪ್ರಶ್ನಿಸುತ್ತದೆ.

ಇಂಥ ಬ್ಯಾಡ್ ಪ್ಯಾಚ್ ನಲ್ಲಿ ಕಲಾವಿದರು ತಮ್ಮನ್ನು ತಾವು ಖುಷಿಯಾಗಿಟ್ಟುಕೊಳ್ಳಲು ಸಾಧ್ಯವೇ?

ಕಲಾವಿದ ಸಾಧ್ಯವಾದಷ್ಟು ಸಂತೋಷದಿಂದ ಇರಬೇಕು. ಅಸಂತೋಷ ಇದೆಯೆಂದರೆ ಅದಕ್ಕೆ ಅವರ ಮನಸ್ಥಿತಿಯೇ ಕಾರಣ. ಯಾವತ್ತೂ ಸಂಗೀತದೊಳಗೆ ಇದ್ದುಬಿಟ್ಟರೆ ಅಸಂತೋಷ ಕಾಡುವುದೇ ಇಲ್ಲ. ಈ ಒಂಬತ್ತು ತಿಂಗಳು ನಾನು ಧ್ಯಾನ, ಯೋಗ, ಸಂಗೀತದಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದರಿಂದ ಸಂತೋಷವಾಗಿಯೇ ಇದ್ದೇನೆ. ಜೀವನದಲ್ಲಿ ಎಲ್ಲಾ ಹಂತಗಳೂ ಬರುತ್ತವೆ. ಆದರೆ ಅದನ್ನೂ ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು ಅನ್ನುವುದು ಗೊತ್ತಿರಬೇಕು. ಕಛೇರಿಗಳಿರದಿದ್ದರೆ ಕುಸಿಯುತ್ತೇವೆ ನಿಜ. ಆದರೆ ಆಗಲೂ ನನ್ನನ್ನು ನಾನು ಸಮತೋಲನಗೊಳಿಸಿಕೊಳ್ಳುವ ಬಗೆ ಹೇಗೆ ಅನ್ನುವುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಮಲ್ಲಿಕಾರ್ಜುನ ಮನ್ಸೂರರು ಇದಕ್ಕೆ ಒಳ್ಳೆಯ ಉದಾಹರಣೆ. ಹಿರಿಯರಿಂದ ಒಳ್ಳೆಯ ಆದರ್ಶಗಳನ್ನು ರೂಢಿಸಿಕೊಳ್ಳಬೇಕು. ಅವರಿಗೆ ಬೆಂಗಳೂರಿನಲ್ಲಿ ಡಯಾಲಿಸಿಸ್ ಮಾಡಿದ ನಂತರ, ಹದಿನೈದು ದಿನ ಪೂರ್ಣವಿಶ್ರಾಂತಿ ಬೇಕು ಅಂತ ಡಾಕ್ಟರ್ ಹೇಳಿದರು. ಆದರೆ ತಾಸಿನ ನಂತರ ಎರಡು ತಾಸುಗಟ್ಟಲೆ ಹಾಡಿದರು. ಎಲ್ಲಾ ಡಾಕ್ಟರುಗಳು ಎದ್ದು ನಿಂತು ಕೇಳಿದರು. ನಂತರ ಬೆಂಗಳೂರು ಕಿಡ್ನಿ ಫೌಂಡೇಶನ್ ಶುರು ಆಯ್ತು. ಇದು ಆತ್ಮವಿಮರ್ಶೆಯ ಕಾಲ. ಧೈರ್ಯವಾಗಿ ನಿಂತರೆ ಏನೂ ಆಗುವುದಿಲ್ಲ.

ಅಷ್ಟಕ್ಕೂ ವೇದಿಕೆಯ ಮೇಲೆ ಮಾತ್ರ ಕಲಾವಿದರು. ರಸ್ತೆಗೆ ಬಂದರೆ ಅವರೂ ಒಬ್ಬ ಸಾಮಾನ್ಯ ಮನುಷ್ಯರು. ಯಾರೊಂದಿಗೂ ನಗಬಹುದು ಮಾತನಾಡಬಹುದು ಅವರವರ ಕ್ಷೇತ್ರದ ಹೊರತಾಗಿಯೂ! ಬಹಳಷ್ಟು ಕಲಾವಿದರು ಮಾಡುವ ತಪ್ಪು ಇಲ್ಲಿಯೇ. ನಾನು ಎಲ್ಲರಿಗಿಂತ ಭಿನ್ನ ನನ್ನ ದಾರಿ ಬೇರೆ ಎಂದು ತೋರಿಸಲು ಹೋಗುತ್ತಾರೆ. ಹೀಗಿದ್ದರೆ ಯಾರು ಕೇರ್ ಮಾಡುತ್ತಾರೆ? ಸರಳವಾಗಿ ಇರ್ರಿ. ಖುಷಿಯಾಗಿ ಇರ್ರಿ, ನೀವು ಕಟ್ಟಿಕೊಂಡ ದಂತಗೋಪುರದಿಂದ ಆಚೆ ಬನ್ನಿ. ಇಲ್ಲಾ, ನಾನು ಇರುವುದೇ ಹೀಗೆ ಅಂದುಕೊಂಡರೆ ಕಷ್ಟಗಳು ಶುರುವಾಗುತ್ತವೆ; ಎದುರಿಸೋಕೆ ತಯಾರಾಗಿ. ಪ್ರತೀ ವ್ಯಕ್ತಿತ್ವಕ್ಕೂ ಅವರವರ ಆಯ್ಕೆ ಇದ್ದೇ ಇರುತ್ತದೆ. ಆದರೆ ಯಾರಿಗೂ ಯಾರನ್ನೂ ದೂರುವ ಹಕ್ಕಿಲ್ಲ. 

ಯುವಜನರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆಯಿಸಲು ಗುರುಬಂಧುಗಳು ಈವತ್ತು ಅವಶ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಾದ ಅಂಶಗಳು ಯಾವುವು?

ಮಕ್ಕಳಿಗೆ ಹಾಲುಡಿಸುವಾಗ, ಉಣ್ಣಿಸುವಾಗ ಭಕ್ತಿಗೀತೆ ಭಾವಗೀತೆಯನ್ನು ನಾವು ಕೇಳಿಸಿದ್ದೆವೆಯೇ? ಹೋಗಲಿ, ಹತ್ತು ತಾಸು ಕೇಳಲು, ಹತ್ತುತಾಸು ರಿಯಾಝ್ ಮಾಡಲು ಯಾರಿಗೆ ಪುರಸೊತ್ತಿದೆ? ಅದರಲ್ಲೂ ಕಡಿಮೆ ಸಮಯದಲ್ಲಿ ಯಶಸ್ಸು ಬೇಕು. ಸಂಗೀತ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಹಾಗಾಗಿಯೇ ನಾನು ‘ಧ್ವನಿ ಸಂಸ್ಕಾರ’ ತಂತ್ರವನ್ನು ಕಂಡುಹಿಡಿದಿದ್ದು. ನೀವು ಸಂಗೀತ ಕಲಾವಿದರಾಗಬೇಕೆಂಬ ದೃಢ ಸಂಕಲ್ಪ ಮಾಡಿದ್ದರೆ, ನಿಮ್ಮ ಜೀವನದ ಐದು ವರ್ಷಗಳನ್ನು ನನಗೆ ಕೊಡಿ, ಅಷ್ಟರೊಳಗೆ ನಿಮ್ಮನ್ನು ಒಳ್ಳೆಯ ಪ್ರದರ್ಶನ ಕಲಾವಿದರನ್ನಾಗಿ ರೂಪಿಸುತ್ತೇನೆ. ಯೋಗ-ಪ್ರಾಣಾಯಾಮದ ತಳಹದಿಯ ಮೇಲೆಯೇ ಈ ತಂತ್ರ ನಿಂತಿರುವುದು. ಆದರೆ ಎಷ್ಟು ಜನ ನನ್ನ ಬಳಿ ಬರಲು ಸಾಧ್ಯ?

ಕಲೆಯಲ್ಲಿ ಆಸಕ್ತಿ ಇದ್ದರೆ ಶರಣಾಗುತ್ತೀರಿ. ಶರಣಾಗದಿದ್ದರೆ ಅದರ ಆಳ ಗೊತ್ತೇ ಆಗುವುದಿಲ್ಲ, ಕಲ್ಪನೆಗೂ ಬರುವುದಿಲ್ಲ. ಬಹಳಷ್ಟು ಜನರಿಗೆ ಪ್ರತಿಭೆ ಇದೆ. ಆದರೆ ಬೆರಳೆಣಿಕೆಯಷ್ಟು ಜನ ಆಳವಾಗಿ ಸಾಧಿಸಿಕೊಂಡಿದ್ದಾರೆ. ಉಳಿದವರದು ಬರೀ ಗಿಮಿಕ್. ಹಣಬಲದಿಂದ ಕಛೇರಿ ಗಿಟ್ಟಿಸಿಕೊಳ್ಳುವುದು, ಸಿ.ಡಿ ಮಾಡುವುದು, ಪದವಿ ಪಡೆದುಕೊಳ್ಳವುದು, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನೂ ಗಳಿಸಿಕೊಳ್ಳುವುದು. ಹಣಬಲದಿಂದ ಬಂದಿದ್ದು ಕಲೆಯೆ?

ನಮ್ಮ ಶಾಸ್ತ್ರೀಯ ಸಂಗೀತವನ್ನು ಕಲಿಸುವ ವಿಧಾನದಲ್ಲೇ ತಪ್ಪುಗಳಿವೆ. ರಾಗವನ್ನು ಕಲಿಸುತ್ತೇವೆ ಆದರೆ ಅದನ್ನು ಹೇಗೆ ಪ್ರಸನ್ನ ಮಾಡಿಕೊಳ್ಳಬೇಕು, ಯಾವ ಯಾವ ಕೋನಗಳಿಂದ ಅದನ್ನು ಸ್ಪರ್ಶಿಸಬೇಕು ಎನ್ನುವ ಹೊಳಹುಗಳನ್ನೇ ಹೇಳಿಕೊಡುವುದಿಲ್ಲ. ಸುಮ್ಮನೇ ನೀ ನನ್ನನ್ನು ಹಿಂಬಾಲಿಸು ಅಂದರೆ ಹೇಗೆ? ಅನುಕರಿಸಿದ್ದು ಕಲೆಯೇ ಅಲ್ಲ. ಶಿಷ್ಯರ ಪ್ರತಿಭೆ ಹೊಮ್ಮಲು ಕೇವಲ ಸಹಕರಿಸುತ್ತಿರಬೇಕು, ಹೀಗೇ ಮಾಡು ಅಂತ ಹೇಳುವಹಾಗಿಲ್ಲ. ಬಂದಿಶ್ ಹೇಳಿಕೊಡಿ, ರಾಗದ ಸ್ವರೂಪ ಹೇಳಿಕೊಡಿ. ಮುಂದೆ ಅವರ ಹಾದಿಯಲ್ಲೇ ಅವರನ್ನು ಹೋಗಲು ಬಿಡಿ. ಗೊಂದಲವೆನ್ನಿಸಿದಾಗ ಬಂದು ಕೇಳಿಯೇ ಕೇಳುತ್ತಾರೆ. ನಮ್ಮಲ್ಲಿ ಹಾಗಿಲ್ಲ, ತಾಸುಗಟ್ಟಲೇ ಗುರು ಹೇಳಿದ್ದನ್ನೇ ಪುನರುಚ್ಚರಿಸುತ್ತಿರಬೇಕು. ಇಂಥ ಮುಂತಾದ ನಕಾರಾತ್ಮಕ ವಿಚಾರಗಳು ಶಿಷ್ಯನಿಗೂ ವರ್ಗಾಯಿಸಲ್ಪಡುತ್ತವೆ. ಇದರ ಬಗ್ಗೆ ಗುರುವಿಗೆ ಅರಿವಿರುತ್ತದೆ ಆದರೆ ಶಿಷ್ಯನಿಗೆ ಈ ಪ್ರಕ್ರಿಯೆಯ ಬಗ್ಗೆ ಗೊತ್ತೇ ಆಗುವುದಿಲ್ಲ. ಶಿಷ್ಯನೊಳಗಿರುವ ಶೈಲಿ ಗುರುತಿಸಿ ಹೇಳಬೇಕು. ಆಗ ಅವನ ವ್ಯಕ್ತಿತ್ವ ಹೊರಹೊಮ್ಮುತ್ತದೆ.

ಗುರುವಾದವನು ಉನ್ನತ ಮಟ್ಟದಲ್ಲಿ ಯೋಚಿಸಬೇಕು. ಶಿಷ್ಯನಿಗೆ ಸ್ವಲ್ಪ ಯಶಸ್ಸು ಸಿಗುತ್ತಿದ್ದಂತೆಯೇ ಅಭದ್ರತೆಗೆ ಬೀಳುವ ಗುರು ಅನ್ಯಾಯದ ಮಾರ್ಗವನ್ನು ಹಿಡಿಯುತ್ತಾನೆ; ತಪ್ಪಾಗಿ ಕಲಿಸುವುದು, ತಪ್ಪು ದಾರಿ ಹಿಡಿಸುವುದು ಹೀಗೆ. ವಿದ್ಯೆಯನ್ನು ಮುಕ್ತವಾಗಿ ದಾನ ಮಾಡುವುದನ್ನು ಕಲಿಯಬೇಕು. ಇದನ್ನು ಯಾವ ವಿಶ್ವವಿದ್ಯಾಲಯಗಳು, ಸಂಘ-ಸಂಸ್ಥೆಗಳೂ ಕಲಿಸುವುದಿಲ್ಲ.

ಮನಸಿನ ಮಾತು ಕೇಳುವುದೆಂದರೇನು, ಕಲಾವಿದರಿಗೆ ಸದ್ಯದ ಪರಿಸ್ಥಿತಿಯಲ್ಲಿ ಇದು ಎಷ್ಟು ಮುಖ್ಯ?

ಕಲಾವಿದರ ಮನಸ್ಸಿಗೆ ಹೆಚ್ಚು ನೆಮ್ಮದಿ, ಶಾಂತಿ, ತೃಪ್ತಿ ಬೇಕು. ಅದು ಬೇಕೆಂದರೆ ಹೊರಜಗತ್ತಿನ ಆಕರ್ಷಣೆಗಳಿಗೆ ಶರಣಾಗುವುದನ್ನು ಕಡಿಮೆ ಮಾಡಬೇಕು. ಈ ಕುರಿತಾಗಿ ನಮ್ಮ ಒಳಮನಸ್ಸಿನ ಪ್ರಜ್ಞೆ ಎಚ್ಚರಿಸುತ್ತಲೇ ಇರುತ್ತದೆ. ಆದರೆ ನಾವು ಅದರ ಮಾತು ಕೇಳುವುದಿಲ್ಲ! ಉತ್ತುಂಗದಲ್ಲಿದ್ದಾಗ ಮನಬಂದಂತೆ ವರ್ತಿಸುತ್ತೇವೆ. ಮರುಕ್ಷಣವೇ ಅದರ ಫಲಾಫಲವನ್ನೂ ಅನುಭವಿಸುತ್ತೇವೆ. ಆದರೆ ದೇವರು ಬುದ್ಧಿವಂತ, ಹೆಜ್ಜೆಹೆಜ್ಜೆಗೂ ವಿಧವಿಧವಾಗಿ ಎಚ್ಚರಿಸುತ್ತಿರುತ್ತಾನೆ. ಕಿವಿಗೊಡಬೇಕು. ಇಲ್ಲಿ ನಸೀಬಿನ ಆಟ ಏನೂ ಇಲ್ಲ. ಎಲ್ಲವನ್ನೂ ನಾವೇ ಸೃಷ್ಟಿಸಿಕೊಳ್ಳುವುದು.

ಗುರುವಾದವನು ಇಂಥ ಸೂಕ್ಷ್ಮಗಳೊಂದಿಗೆ ಜೀವನ ನಿರ್ವಹಣೆಯ ಕಲೆಯ ಬಗ್ಗೆಯೂ ಆಗಾಗ ಕಲ್ಪನೆ ಕೊಡುತ್ತಿರಬೇಕು. ಅದು ಅವನ ಜವಾಬ್ದಾರಿ.

ಶಾಸ್ತ್ರೀಯ ಸಂಗೀತ ಸೀಮಿತ ವರ್ಗದವರಿಗೆ ಮಾತ್ರ ಎಂದು ನಿರ್ಧರಿಸಿರುವಲ್ಲಿ ಯಾರ ಪಾತ್ರ ಹೆಚ್ಚು?

ಮೂವತ್ತು ವರ್ಷ ದೇಶ-ವಿದೇಶ ಸುತ್ತಿ ಬಂದೆ. ನಮ್ಮ ಶಾಸ್ತ್ರೀಯ ಸಂಗೀತ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕೆಂದರೆ, ಗುರುವಾದವನು ಸಂಗೀತ ಕಲಿಕೆಯ ವಿಧಾನವನ್ನು ಸರಳಗೊಳಿಸಿ ಕಲಿಸಬೇಕಿದೆ. ಅದಕ್ಕಾಗಿ ಸ್ವಂತ ವಿಚಾರ ಮಾಡಬೇಕು. ಶಬ್ದೋಚ್ಛಾರ, ಆಲಾಪದ ವಿಧಾನ, ತಾನ್ ವಿನ್ಯಾಸ, ಮುಖಭಾವ ಎಲ್ಲವೂ ಬದಲಾಗಬೇಕು. ಬದಲಾವಣೆಗೆ ಒಗ್ಗಟ್ಟು ಬೇಕು. ನಮ್ಮದೇ ಶ್ರೇಷ್ಠ ಘರಾಣಾ ಅಂತ ಕುಳಿತರೆ ಈಗಿನ ಹುಡುಗರು ಯಾವ ಘರಾಣೆಯೂ ಬೇಡ ಅನ್ನುತ್ತಾರೆ.

ನಮ್ಮಲ್ಲಿ ಶಿಸ್ತಿಲ್ಲ. ಅದಕ್ಕೇ ಹಿಂದೆ ಬಿದ್ದಿದ್ದೇವೆ. ಶಾಸ್ತ್ರೀಯ ಸಂಗೀತ ಜನಸಾಮಾನ್ಯರಿಗೆ ತಿಳಿಯುವುದಿಲ್ಲ ಅಂತೇನಿಲ್ಲ, ನಮಗೆ ಮನಸೆಳೆಯುವಂತೆ ಹಾಡಲು ಬರುವುದಿಲ್ಲ ಅದಕ್ಕೆ ಜನ ಸೇರುವುದಿಲ್ಲ ಹೀಗೆಂದು ಒಬ್ಬ ಕಲಾವಿದರಾದರೂ ಧೈರ್ಯದಿಂದ ಹೇಳಲಿ? ನಮ್ಮ ಗುಂಗಿನೊಳಗೆ ನಾವು ಹಾಡುತ್ತೇವೆ ಬೇಕಾದರೆ ಕೇಳಿ, ಬೇಡವಾದರೆ ಬಿಡಿ ಅನ್ನುವ ಧೋರಣೆಯನ್ನು ಶಾಸ್ತ್ರೀಯ ಸಂಗೀತ ಕಲಾವಿದರು ಇನ್ನಾದರೂ ಬದಲಾಯಿಸಿಕೊಳ್ಳಬೇಕು. ಒಂದು ವೇದಿಕೆಯ ಶಿಸ್ತನ್ನು ಪಾಲಿಸಬೇಕು. ಸಂಗೀತದೊಂದಿಗೆ ನಿಮ್ಮ ವ್ಯಕ್ತಿತ್ವವನ್ನೂ ಹೇಗೆ ಬಿಂಬಿಸಿಕೊಳ್ಳುತ್ತೀರಿ ಅನ್ನುವುದನ್ನು ಯೋಚಿಸಬೇಕು. ಧ್ಯಾನಿಸಿ ನಿಮ್ಮೊಳಗಿನ ಚೈತನ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ? ಸಭಿಕರಲ್ಲಿ ಯಾರಿಗೆ ಏನು ಬೇಕು? ಕಣ್ಣು ಹಾಯಿಸಿದ ತಕ್ಷಣ ನಿಮಗದು ಗೊತ್ತಾಗುವಂತಿರಬೇಕು. ನಮ್ಮ ಪ್ರಸ್ತುತಿ ಕೇಳುಗರನ್ನು ತಣಿಸುತ್ತಿದೆಯೋ ಇಲ್ಲವೋ ಅದಕ್ಕಾಗಿ ಹೇಗೆ ವಿನ್ಯಾಸ, ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಅನ್ನುವ ಪ್ರಜ್ಞೆ ಇರಬೇಕು. ಇದು ಹೊರಗೂ ಒಳಗೂ ಏಕಕಾಲಕ್ಕೆ ನಡೆಯುವ ಪ್ರಕ್ರಿಯೆ.  

ನಮ್ಮೊಳಗಿನ ದೇವರು ಮೆಚ್ಚುವುದೇ ಪ್ರೋತ್ಸಾಹವಲ್ಲವೆ? ಕಲಾವಿದರಿಗೆ ಯಾಕೆ ಪ್ರಶಸ್ತಿ-ಪುರಸ್ಕಾರಗಳು ಬೇಕು, ಅದರಲ್ಲೂ ಅರ್ಜಿ ಹಾಕುವುದು ಇತ್ಯಾದಿ…

ಐವತ್ತು ವರ್ಷಗಳ ತನಕ ತಯಾರಿಯೊಳಗೆ ಕಲಾವಿದನ ವಯಸ್ಸು ಕಳೆಯುತ್ತದೆ. ಐವತ್ತರ ನಂತರ ಸಂಗೀತದ ಪ್ರತಿಯೊಂದು ಅಂಶಗಳೂ ಅವನಿಗೆ ಅರ್ಥವಾಗುತ್ತಾ ಹೋಗುತ್ತವೆ. ಅರವತ್ತರಿಂದ ಎಪ್ಪತ್ತರೊಳಗೆ ಅವನ ಪ್ರಸ್ತುತಿಯಲ್ಲಿ ಪ್ರಬುದ್ಧತೆ ಪ್ರಜ್ವಲಿಸುತ್ತಿರುತ್ತದೆ. ಕಲಾವಿದ ತನ್ನ ಮಾನಸಿಕ, ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆ, ಶಕ್ತಿಯನ್ನು ಕಾಪಾಡಿಕೊಂಡಿದ್ದರೆ ಐವತ್ತರಿಂದ-ಅರವತ್ತು ಉಚ್ರಾಯ ಕಾಲ. ಈ ಹಂತದಲ್ಲಿ ಪ್ರೋತ್ಸಾಹ ಕೊಟ್ಟರೆ ಇನ್ನೂ ಕೊಡುಗೆ ಕೊಡಬಹುದು. ಪ್ರಶಸ್ತಿ ವಿಚಾರಗಳಲ್ಲಿ ತಜ್ಞರ ಕಮೀಟಿ ಮಾಡಿ, ಮಾನದಂಡಗಳಲ್ಲಿ ತಿದ್ದುಪಡಿ ತರಬೇಕು. ಕ್ರಿಡೆ, ಸಿನೆಮಾ ಮುಂತಾದ ಕ್ಷೇತ್ರಗಳವರಿಗೆ ಮೂವತ್ತು ತಲುಪುವುದರೊಳಗೆ ಭಾರತರತ್ನ, ಪದ್ಮಶ್ರೀ. ಭೀಮಸೇನ ಜೋಶಿಯವರಿಗೆ ಭಾರತರತ್ನ ಸಂದ ಸಂದರ್ಭವನ್ನು ನೆನಪಿಸಿಕೊಳ್ಳಿ.

ಶಾಸ್ತ್ರೀಯ ಸಂಗೀತ ಕಲಾವಿದರು ಹಗಲೂ ರಾತ್ರಿ ಸಾಧನೆ ಮಾಡಿರುವುದಕ್ಕೆ ಬೆಲೆ ಇಲ್ಲವಾ? ಸಮಯಕ್ಕೆ ತಕ್ಕಂತೆ ನಮಗೂ ಮೆಚ್ಚುಗೆ ಬೇಕು. ಸಿನೆಮಾ ಸಂಗೀತ ಕ್ಷೇತ್ರದವರು ನಮ್ಮ ಮೇಲೆ ಬದುಕುತ್ತಿದ್ದಾರೆ. ನಮ್ಮ ಬಳಿ ಪಾಠ ಹೇಳಿಸಿಕೊಂಡು ಅದನ್ನೇ ರೀಪ್ರೊಡ್ಯೂಸ್ ಮಾಡಿ ಒಂದು ಹಾಡಿಗೆ ಒಂದು ಕೋಟಿ ಸಂಭಾವನೆ ಪಡೆಯುತ್ತಾರೆಂದರೆ…

ನಮ್ಮ ಸರ್ಕಾರ ಕೊಡುವಷ್ಟು ಪ್ರಶಸ್ತಿಗಳನ್ನು ಯಾವ ರಾಜ್ಯದ ಸರ್ಕಾರಗಳೂ ಕೊಡುವುದಿಲ್ಲ. ಮೊದಲ ಸ್ಥಾನದಲ್ಲಿ ನಾವಿದ್ದೇವೆ ನಂತರ ಮಧ್ಯಪ್ರದೇಶ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ ಆದರೆ ಸ್ಕೋಪ್ ಇಲ್ಲ. ದುರ್ದೈವವೆಂದರೆ ಕಲಾವಿದ ಕೊನೇದಿನಗಳನ್ನು ಎಣಿಸುತ್ತಿರುವಾಗ ಪ್ರಶಸ್ತಿ ಕೊಡುತ್ತೇವೆ. ಆಗ ಯಾಕೆ ಬೇಕು?

ಬರೀ ಕಲಾರಾಧನೆ ಮಾಡಿಕೊಂಡು ಬೆಳೆಯಲು ನಮ್ಮ ದೇಶದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ?

ನಮ್ಮ ದೇಶದಲ್ಲಿ ಎಲ್ಲವೂ ಪ್ರತಿಷ್ಠೆ ಹೆಸರಲ್ಲಿ! ಬೇರೆ ದೇಶದಲ್ಲಿ ಯಾವ ಕೆಲಸ ಮಾಡಿಕೊಂಡೂ ಅವನು ಕಲೆಯಲ್ಲಿ ಸಾಧನೆ ಮಾಡಬಹುದು. ಈ ಸಂದರ್ಭದಿಂದಲಾದರೂ ನಾವು ಸಮಾಜವನ್ನು ನಿರ್ಲಕ್ಷಿಸುವುದನ್ನು ಕಲಿಯಬೇಕು. ಎಸ್‍ಎಸ್‍ಎಲ್‍ಸಿ ನಂತರ ನಮ್ಮ ಬದುಕು ನಮ್ಮದು. ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಷ್ಟೋ ಜನರು ಹಾಲು ಹಾಕಿ, ಪೇಪರ್ ಹಾಕಿ ಜೀವನ ಮಾಡಿದ ಉದಾಹರಣೆಗಳಿಲ್ಲವಾ? ಈ ‘ಮಾನ’ ಬಿಡಲೇಬೇಕು ಯಶಸ್ಸು ಬೇಕೆಂದರೆ. ಜನ ಮೂರು ದಿನ ಮಾತ್ರ ಮಾತನಾಡುತ್ತಾರೆ. ಐದನೇ ದಿನ ಎಲ್ಲರೂ ಮರೀತಾರೆ. ಬೇಕಾದಷ್ಟು ಒಳ್ಳೆಯದಿರಲಿ ಕೆಟ್ಟದಿರಲಿ. ಇದು ಸಮಾಜದ ರೀತಿನೀತಿ!

ಮನೆತನದ ಮರ್ಯಾದೆಯ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳಬೇಡಿ. ಸಣ್ಣಪುಟ್ಟ ಕೆಲಸ ಮಾಡಿ ಸಂಗೀತ ಸಾಧನೆಗೆ ಸಮಯ ಕೊಟ್ಟುಕೊಳ್ಳಿ. ಇನ್ನಾದರೂ ನಿಮ್ಮ ಸಲುವಾಗಿ ಬದುಕುವುದನ್ನು ರೂಢಿಸಿಕೊಳ್ಳಿ. ಮರ್ಯಾದೆ ಬಿಡಲೇಬೇಕು. ಈಗ ಎಲ್ಲಿಯೂ ಆನ್‍ಲೈನ್‍ ಶಿಕ್ಷಣ ಲಭ್ಯ. ಜೀವನೋಪಾಯಕ್ಕೆ ನಿಮಗೆ ಬೇಕಾದ ಕೋರ್ಸ್ ಮಾಡಲು ಮನಸ್ಸು ಮಾಡಿ.

ಗಂಡಾಗಲಿ ಹೆಣ್ಣಾಗಲಿ ಕಲೆಯ ನಿಯಮಗಳು ಒಂದೇ. ಆದರೂ …

ಆತ್ಮವಿಶ್ವಾಸ, ಸ್ವಯಂ ನಿಯಂತ್ರಣ ಕಲೆಯ ಕ್ಷೇತ್ರದಲ್ಲಿ ವಿಶೇಷವಾಗಿ ಬೇಕು. ನಿಧಾನ ಚಲಿಸುವವರೇ ಇಲ್ಲಿ ಗೆಲ್ಲುವವರು. ಕಲೆಯ ವಿಷಯದಲ್ಲಿ ಗಂಡೂ ಹೆಣ್ಣೂ ಒಂದೇ. ತನಗೆ ಬೇಕಾದಂಥ ಸ್ವಾತಂತ್ರ್ಯವನ್ನು ರೂಢಿಸಿಕೊಳ್ಳುವ ವಿಷಯದಲ್ಲಿಯೂ, ಸಂಗಾತಿಗಳ ಆಯ್ಕೆಯ ವಿಷಯದಲ್ಲಿಯೂ.  ಆದರೂ ಕೌಟುಂಬಿಕ ಚೌಕಟ್ಟಿನಲ್ಲಿ ನಿರೀಕ್ಷೆಗಳು ಸಮಸ್ಯೆಗಳು ಉದ್ಭವಿಸುತ್ತವೆ. ಅದನ್ನು ಸರಿದೂಗಿಸಿಕೊಂಡು ಹೋಗುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಅಪಾಯಕ್ಕೆ ಒಡ್ಡಿಕೊಳ್ಳಬೇಕು, ದೃಢ ಮನಸ್ಸು ಬೇಕು ಕುಟುಂಬ, ಸಮಾಜಕ್ಕಿಂತ ಕಲೆ ಮುಖ್ಯ. ಚೌಕಟ್ಟು ಎಲ್ಲರಿಗೂ ಅನ್ವಯ. ಅದೇ ಚೌಕಟ್ಟಿನಿಂದ ಹೊರಗೆ ಹೋಗಲೂ ಬರುತ್ತದೆ ಹಾಗೇ ಒಳಗೆ ಬರಲೂ. ಸಂದರ್ಭಕ್ಕೆ ತಕ್ಕಂತೆ ಹೊರಗೆ ಹೋದಹಾಗೆ ಮಾಡಬೇಕು, ಮತ್ತೆ ಒಳಗೆ ಬಂದಿರಬೇಕು. ಎಲ್ಲಾ ಸ್ವಂತದ ಮೇಲಿದೆ. ನಾನು ಕಲೆಯನ್ನೂ ಸಂಸಾರವನ್ನೂ ಸರಿದೂಗಿಸಿಕೊಳ್ಳುತ್ತೇನೆ ಎನ್ನುವ ದೃಢಮನಸ್ಸು ಬೇಕು. ಆದರೆ ನಾವು ಯಾವ ವರ್ಗದಲ್ಲಿ ಬದುಕುತ್ತಿದ್ದೇವೆ ಅನ್ನುವುದು ಮುಖ್ಯ. ಕೆಲವೊಮ್ಮೆ ಆ ವರ್ಗದಿಂದ ಹೊರಗೆ ಬರಬೇಕಾಗುತ್ತದೆ. ನಿಮ್ಮ ಕುಟುಂಬ ಅಥವಾ ಸಮಾಜದ ಆಲೋಚನೆಗಳು ಕೆಳಸ್ಥರದಲ್ಲಿದ್ದಾಗ ನಿಮ್ಮ ಕಲೆಗೆ ಪ್ರಾಧಾನ್ಯ ಎಲ್ಲಿ ಸಿಗುತ್ತದೆ? ಆಗ ಆ ವಾರಾವರಣದಿಂದ ಹೊರಬರಲೇಬೇಕಾಗುತ್ತೆ.  ಸಮಾಜದಿಂದ ಹೊರಬಂದರೆ ನಮಗೆ ಮಾನ್ಯತೆ ಇಲ್ಲ ಎನ್ನುವುದನ್ನೆಲ್ಲ ಬಿಡಿ. ನೀವು ಸಂಗೀತದೊಂದಿಗೆ ಬದುಕಬೇಕು ಅಂತ ನಿರ್ಧಾರ ಮಾಡಿದ್ದೀರಿ ಅಂದ ಮೇಲೆ ಅದು ಒಳ್ಳೆಯದೇ. ನಿಮ್ಮ ಅಸ್ತಿತ್ವ ಯಾವುದರಲ್ಲಿದೆ ಅನ್ನುವ ಸ್ಪಷ್ಟತೆ ಇರಬೇಕು. ಅದಕ್ಕೆ ತಕ್ಕಂತೆ ಒಮ್ಮೆ ನೀವು ರಿಸ್ಕ್ ತೆಗೆದುಕೊಂಡರೆ ಬದುಕು ಸರಳವಾಗುತ್ತದೆ. ಆಗ ನಿಮ್ಮ ಸಾಧನೆಗೆ ಸಮಾಜವೇ ತಲೆಬಾಗುತ್ತೆ. ಬಯ್ಯುವ ಸಮಾಜವೇ ನಿಮ್ಮನ್ನು ಎತ್ತಿ ಹಿಡಿಯುತ್ತದೆ. ಸಮಾಜಕ್ಕೆ ಒಂದೇ ಮುಖ ಇಲ್ಲ ಹಲವಾರು ಮುಖಗಳಿವೆ. ಸಮಯಕ್ಕೆ ತಕ್ಕಂತೆ ಅದರ ಮುಖಗಳು ಬದಲಾಗುತ್ತಿರುತ್ತವೆ. ಆದ್ದರಿಂದ ಸಮಾಜ ಹೀಗೇ ಇದೆ ಅಂತ ಹೇಳೋದಕ್ಕೂ ಸಾಧ‍್ಯವಿಲ್ಲ. ನೀವು ಏನಾಗಬೇಕು ಅನ್ನೋದರ ಬಗ್ಗೆ ಮಾತ್ರ ಗಮನ ಇರಬೇಕು. ಧೈರ್ಯಕ್ಕೆ ಲಕ್ಷ್ಮೀ ಮಾಲೆ ಹಾಕುತ್ತಾಳೆ ಹೊರತು ಅಧೈರ್ಯಕ್ಕೆ ಎಂದೂ ಹಾಕುವುದಿಲ್ಲ.

ಅನುಭವಕ್ಕೆ ತೆರೆದುಕೊಳ್ಳದೆ ಧ್ವನಿ ಹುಟ್ಟುವುದಾದರೂ ಹೇಗೆ? ಕಲಾವಿದರು ಮುಕ್ತವಾಗಿ ವಿಚಾರ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ನಮ್ಮ ಧ್ವನಿಯಲ್ಲಿ ಸ್ಪಷ್ಟತೆ ಬರೋದಕ್ಕೆ ಸಾಧ್ಯ.

ಕೇಳಿದ ಪ್ರಶ್ನೆಗಳು

1  ಅಂತರ್ಜಾಲಮಯ ಜಗತ್ತಿನಲ್ಲಿ ಶಾಸ್ತ್ರೀಯ ಸಂಗೀತದ ಆನ್‍ಲೈನ್ ಕಲಿಕೆ, ಪ್ರಸ್ತುತಿಯ ಬಗ್ಗೆ ನಿಮ್ಮ ಅನುಭವ-ಅಭಿಪ್ರಾಯವೇನು?

2 ಸಂಗೀತದಲ್ಲಿ ಗುರು–ಶಿಷ್ಯ ಸಂಬಂಧದ ಮಹತ್ವವೇನು? ಯುವಜನರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಮೊಳೆಯಿಸಲು ಏನು ಮಾಡಬೇಕು?

3 ಸಂಗೀತದ ಮುಂದೆ ಯಾವ ಲಿಂಗವೂ ಒಂದೇ. ನಮ್ಮಲ್ಲಿ ಇಷ್ಟು ಪ್ರತಿಭಾವಂತ ಕಲಾವಿದೆಯರಿದ್ದರೂ ಮುನ್ನೆಲೆಗೆ ಬರುವಲ್ಲಿ ತೊಡಕಾಗುತ್ತಿರುವ ಸಂಗತಿಗಳು ಯಾವುವು?

4 ನಮ್ಮ ರಾಜ್ಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಪರಿಸರ ನಿರ್ಮಾಣ ಮಾಡುವಲ್ಲಿ ನಾವು ಸೋಲುತ್ತಿರುವುದೆಲ್ಲಿ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು