ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಡಿತ್ ಜಸರಾಜ್ ನೆನಪು: ನಾದಲೋಕ ಸ್ತಬ್ಧವಾದರೂ ನಿಲ್ಲದ ನಾದದಲೆಯ ಅನುರಣನ

ಸಂಗೀತ ಮಾರ್ತಾಂಡ
Last Updated 19 ಆಗಸ್ಟ್ 2020, 8:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತದ ಅಸಾವರಿ ಥಾಟ್‌ನಲ್ಲಿ ಬರುವ ‘ಅಢಾಣ ಕಾನಡ’ ರಾಗದ ‘ಮಾತಾ ಕಾಲಿಕಾ...’ ಬಂದೀಶ್‌ ವಿಶ್ವಪ್ರಸಿದ್ಧ. ಇದನ್ನು ಜಗತ್ಪ್ರಸಿದ್ಧಗೊಳಿಸಿದವರು ಪಂ. ಜಸರಾಜ್‌ ಅವರೇ. ಇದೊಂದೇ ಅಲ್ಲ ಹಿಂದೂಸ್ತಾನಿ ಸಂಗೀತದ ಹಲವಾರು ರಾಗಗಳನ್ನು ಪಂ. ಜಸರಾಜ್‌ ವಿಶ್ವವೇದಿಕೆಗಳಲ್ಲಿ ಹಾಡಿ ‘ಸಂಗೀತ ಮಾರ್ತಾಂಡ’ ಎನಿಸಿಕೊಂಡವರು.

ಮೇವಟಿ ಘರಾಣದಲ್ಲಿ ಹಾಡುತ್ತಿದ್ದ ಪಂ. ಜಸರಾಜ್‌ ಅಗ್ರಮಾನ್ಯ ಗಾಯಕರೆನಿಸಿದ್ದರು. ಸುಮಾರು ಎಂಟು ದಶಕಗಳ ಕಾಲ ಸಂಗೀತ ಲೋಕದಲ್ಲಿ ಧ್ರುವತಾರೆಯಂತೆ ಮಿಂಚಿದ ಈ ಸಂಗೀತ ದಿಗ್ಗಜ ಶಾಸ್ತ್ರೀಯ ಸಂಗೀತವಷ್ಟೇ ಅಲ್ಲದೆ ಲಘು ಶಾಸ್ತ್ರೀಯ ಸಂಗೀತದಲ್ಲೂ ಮೇರುಶಿಖರ. ಸಿನಿಮಾ ಹಿನ್ನೆಲೆ ಗಾಯನ, ಹಿಂದಿ ಗಜಲ್‌, ಮರಾಠಿ ಗೀತೆಗಳನ್ನೂ ಹಾಡಿ ಸಂಗೀತ ಕ್ಷೇತ್ರದಲ್ಲಿ ‘ಗಟ್ಟಿಕುಳ’ ಎನಿಸಿಕೊಂಡವರು.

ಕಳೆದ ಜನವರಿಯಲ್ಲಿ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಈ ಮಹಾನ್‌ ಗಾಯಕ ತನ್ನ ಜೀವಿತದ ಅಷ್ಟೂ ವರ್ಷಗಳಲ್ಲಿ ‘ಸಂಗೀತವನ್ನೇ ಜೀವನದ ತಪಸ್ಸು’ ಎಂಬಂತೆ ಬದುಕಿದ್ದರು. ತನ್ನಲ್ಲಿರುವ ಅಪಾರ ಸಂಗೀತ ಜ್ಞಾನವನ್ನು ಪಂ. ಜಸರಾಜ್‌ ಭಾರತದಲ್ಲಷ್ಟೇ ಅಲ್ಲ, ಕೆನಡಾ, ಅಮೆರಿಕಗಳಲ್ಲೂ ಶಿಷ್ಯಂದಿರಿಗೆ ಧಾರೆ ಎರೆದು ಒಂದು ರೀತಿಯಲ್ಲಿ ‘ಸಂಗೀತ ದಾಸೋಹ’ವನ್ನೇ ಮಾಡಿದ್ದರು.

ಮನೆತನವೇ ಸಂಗೀತದ್ದು

ಹಾಗೆ ನೋಡಿದರೆ ಪಂ. ಜಸರಾಜ್‌ ಮನೆತನವೇ ಸಂಗೀತದ್ದು. ಹರಿಯಾಣದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜಸರಾಜ್‌ ಅವರ ತಂದೆ ಪಂ. ಮೋತಿರಾಮ್‌ ಶಾಸ್ತ್ರೀಯ ಗಾಯಕರೇ ಆಗಿದ್ದರು. ಆದರೆ ಜಸ್‌ರಾಜ್‌ ಅವರಿಗೆ ಕೇವಲ ನಾಲ್ಕು ವರ್ಷ ಆಗಿದ್ದಾಗಲೇ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಸಂಗೀತದ ಬಗ್ಗೆ ಅಪರಿಮಿತ ಆಸಕ್ತಿ ಹಾಗೂ ರಕ್ತಗತವಾಗಿಯೇ ಸಂಗೀತ ಸರಸ್ವತಿ ಒಲಿದಿರುವ ಕಾರಣ ಜಸರಾಜ್‌ ಆಸ್ಥಾನ ವಿದ್ವಾಂಸರಾಗಿದ್ದ ಉಸ್ತಾದ್‌ ಮಿರ್‌ ಓಸ್ಮಾನ್‌ ಅಲಿಖಾನ್‌ ಅವರ ಬಳಿ ಸಂಗೀತದ ರಿಯಾಜ್‌ ನಡೆಸಲಾರಂಭಿಸಿದರು. ತಮ್ಮ ಸಹೋದರರಾದ ಪಂ. ಮಣಿರಾಮ್‌ ಹಾಗೂ ಪಂ. ಪ್ರತಾಪ್‌ ನಾರಾಯಣ್‌ ಕೂಡ ಗಾಯಕರಾಗಿದ್ದು ಅವರ ಬಳಿಯೂ ಸಂಗೀತದ ಆರಂಭದ ಪಾಠಗಳನ್ನು ಕಲಿತಿದ್ದರು. ತಮ್ಮ ಸಹೋದರರ ಗಾಯನಕ್ಕೆ ತಬಲಾ ಸಾಥಿಯನ್ನೂ ನೀಡುತ್ತಿದ್ದರು. ಅಲ್ಲದೆ ಪುಟಾಣಿಯಾಗಿದ್ದಾಗಲೇ ರಾಗಗಳು, ತಾನ್‌ಗಳು, ಆಲಾಪ್ ಮಾಡುವ ತಂತ್ರಗಾರಿಕೆ, ಸರ್‌ಗಮ್‌ಗಳನ್ನು ರಾಗಗಳಲ್ಲಿ ಹೊಂದಿಸುವ ಪರಿ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದರು.

ಯುವಕರಾಗಿದ್ದಾಗ ಜಸರಾಜ್‌ ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಆದರೂ ಅವರಿಗೆ ಸಂಗೀತದ ಸೆಳೆತ ಎಷ್ಟಿತ್ತೆಂದರೆ ರಾಗಗಳ ಅಧ್ಯಯನಕ್ಕಾಗಿ ಅವರು ಗುಜರಾತ್‌ಗೆ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲಿ ಮಹಾರಾಜ ಜಯವಂತ್‌ ಸಿಂಗ್‌ ವಘೇಲಾ ಹಾಗೂ ಥಾಕೂರ್‌ ಸಾಹಿಬ್‌ ಅವರ ಬಳಿ ಸಂಗೀತದ ಕಟ್ಟುನಿಟ್ಟಿನ ರಿಯಾಜ್‌ ನಡೆಸಿ ಬಹುಬೇಗ ಪರಿಪಕ್ವ ಕಲಾವಿದರೆನಿಸಿಕೊಂಡರು. ಮುಂದೆ 1946ರಲ್ಲಿ ಜಸ್‌ರಾಜ್‌ ಕುಟುಂಬ ಕೋಲ್ಕತ್ತಾಕ್ಕೆ ಬಂದು ನೆಲೆಸಿತು. ಹಿಂದೂಸ್ತಾನಿ ಸಂಗೀತದ ಘಮಲು ಆಗ ಕೋಲ್ಕತ್ತಾದಲ್ಲಿ ಬಹಳ ಆವರಿಸಿತ್ತು. ಘಟಾನುಘಟಿ ಕಲಾವಿದರ ಜೊತೆಗೆ ಸಖ್ಯ ಬೆಳೆಸಿ ಜಸ್‌ರಾಜ್‌ ಸಂಗೀತದ ಮೇರು ಶಿಖರವಾಗಿ ರೂಪುಗೊಂಡರು. ಆಗೆಲ್ಲ ಆಕಾಶವಾಣಿ ಸಂಗೀತ ಬಹಳ ಜನಪ್ರಿಯವೂ ಆಗಿತ್ತು. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಿನ ಅವಕಾಶವೂ ಆಕಾಶವಾಣಿ ನೀಡುತ್ತಿದ್ದ ಕಾರಣ ಆಕಾಶವಾಣಿ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಹಲವಾರು ವರ್ಷ ಭಾಗವಹಿಸಿ ಸಂಗೀತದ ಕಂಪನ್ನು ರಾಷ್ಟ್ರದಾದ್ಯಂತ ಸಂಗೀತರಸಿಕರಿಗೆ ಉಣಬಡಿಸಿದ್ದರು.

ಸಂಗೀತ ಕ್ಷೇತ್ರದ ಅಪ್ರತಿಮ ಗಾಯಕರಾದ ಪಂ. ಭೀಮಸೇನ ಜೋಶಿ ಅವರೊಂದಿಗೆ, ವಿದುಷಿ ಕಿಶೋರಿ ಅಮೋನಕರ್‌ ಅವರ ಜೊತೆಗೆ ನೀಡುತ್ತಿದ್ದ ಜುಗಲ್‌ಬಂದಿ ಕಛೇರಿಗಳು ಸಂಗೀತಪ್ರಿಯರು ಎಂದಿಗೂ ಮರೆಯುವಂತೆಯೇ ಇಲ್ಲ. ಶಾಸ್ತ್ರೀಯ ಗಾಯನವಷ್ಟೇ ಅಲ್ಲದೆ ಹಿಂದಿ ಗಜಲ್‌, ಮರಾಠಿ ಗೀತೆಗಳನ್ನೂ ಮಧುರಾತಿಮಧುರವಾಗಿ ಹಾಡುತ್ತಿದ್ದರು.

ಪಂ. ಜಸ್‌ರಾಜ್‌ ಸಂಗೀತ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿದ್ದು ಅವರು 1962ರಲ್ಲಿ ಮಧುರಾ ಶಾಂತಾರಾಮ್‌ ಅವರನ್ನು ಮದುವೆಯಾದ ಬಳಿಕ. ಮಧುರಾ ಅವರು ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ವಿ. ಶಾಂತಾರಾಮ್‌ ಅವರ ಮಗಳು. ಅದಾಗಿ 1963ರಲ್ಲಿ ಮುಂಬಯಿಗೆ ಬಂದು ನೆಲೆಸಿದರು. ಮಕ್ಕಳಾದ ಶಾರಂಗ್‌ದೇವ್‌ ಪಂಡಿತ್‌ ಹಾಗೂ ದುರ್ಗಾ ಜಸರಾಜ್‌ ಇಬ್ಬರೂ ಉತ್ತಮ ಸಂಗೀತಗಾರರೇ. ಪತ್ನಿ ಮಧುರಾ ಅವರು ಜಸ್‌ರಾಜ್‌ ಸಂಗೀತ ಜೀವನದ ಮೇಲೆಯೇ 2009ರಲ್ಲಿ ‘ಸಂಗೀತ ಮಾರ್ತಾಂಡ ಪಂಡಿತ್‌ ಜಸರಾಜ್‌’ ಎಂಬ ಸಿನಿಮಾ ನಿರ್ಮಿಸಿದ್ದು ಸಂಗೀತ ಲೋಕದಲ್ಲಿ ಮಹತ್ವದ ಹೆಜ್ಜೆಗುರುತು ಆಗಿದೆ.

ಜೀವಿತದ ಕೊನೆ ಕ್ಷಣಗಳಲ್ಲಿ ಅಮೆರಿಕದಲ್ಲಿ ನೆಲೆಸಿದ್ದ ಪಂ. ಜಸರಾಜ್‌ ತಮ್ಮ 90ನೇ ವಯಸ್ಸಿನಲ್ಲೂ ಸ್ಕೈಪ್‌ನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು.

‘ಪಂ. ಜಸರಾಜ್‌ ಅವರು ರಾಗಗಳನ್ನು ವಿಸ್ತರಿಸುತ್ತಿದ್ದ ಪರಿ ಅನನ್ಯ. ಸ್ವರಗಳನ್ನು ಹೂವಿನ ಪಕಳೆಯನ್ನು ಮುಟ್ಟಿದಂತೆ ನಾಜೂಕಾಗಿ ಎತ್ತಿ ಷಡ್ಜ, ರಿಷಭ, ಗಾಂಧಾರ ಸ್ವರಗಳಿಗೆ ನ್ಯಾಯ ದೊರಕಿಸುತ್ತಿದ್ದ ರೀತಿಯೂ ಅವರ್ಣನೀಯ. ಅವರ ‘ಗಾಯಕಿ’ಯೂ ಅತ್ಯಂತ ಆಕರ್ಷಕ. ಸಂಗೀತದ ಜ್ಞಾನ ಇಲ್ಲದವರೂ ರಾಗಗಳನ್ನು ಆಸ್ವಾದಿಸುವಂತೆ ಹಿಡಿದಿಡುವ ಶಕ್ತಿ ಅವರ ಗಾಯನದಲ್ಲಿತ್ತು. ಅವರು ಬಳಸುತ್ತಿದ್ದ ಸ್ವರ ತಾನ್‌, ಆಕಾರ್‌ ತಾನ್‌ಗಳು ಬಹಳ ಪ್ರಸಿದ್ಧವಾಗಿದ್ದವು’ ಎಂದು ಹೇಳುತ್ತಾರೆ ಹೆಸರಾಂತ ಗಾಯಕ ಪಂ. ವಿನಾಯಕ ತೊರವಿ.

ದೇಶದ ಅತ್ಯುನ್ನತ ಗೌರವಗಳಾದ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರಶಸ್ತಿ–ಪುರಸ್ಕಾರಗಳು ಅವರ ಮುಡಿಗೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT