ಸೋಮವಾರ, ಜೂನ್ 1, 2020
27 °C

‘ಗಾಯನ ಕ್ಷೇತ್ರದಲ್ಲಿ ಇಲ್ಲ ಫಾಸ್ಟ್‌ಫುಡ್‌’

ಮಂಜುನಾಥ ಆರ್.ಗೌಡರ Updated:

ಅಕ್ಷರ ಗಾತ್ರ : | |

Deccan Herald

‘ನಾನು ಸ್ಪರ್ಧಿಯಾಗಿದ್ದ ಕಾಲಕ್ಕೂ ಹಾಗೂ ಇಂದಿನ ಸ್ಪರ್ಧಿಗಳ ಕಾಲಕ್ಕೂ ಬಹಳವೇ ವ್ಯತ್ಯಾಸ ಇದೆ. ಆಗ ಶಾಸ್ತ್ರೀಯವಾಗಿ ಸಂಗೀತ ಕಲಿತಿದ್ದರೆ ಪ್ರಥಮ ಪ್ರಾಶಸ್ತ್ಯ ಇತ್ತು. ಕಲಿತು ಬಂದವರಿಗೆ, ಶಾಸ್ತ್ರೀಯವಾಗಿ ಕೃಷಿ ಮಾಡಿದವರಿಗೆ ಅಡಿಷನ್ ಸಂದರ್ಭದಲ್ಲಿ ಶೇ 80ರಷ್ಟು ಆದ್ಯತೆ ಸಿಗುತ್ತಿತ್ತು. ಆದರೆ ಈಗ ದೃಷ್ಟಿಕೋನ ಬದಲಾಗಿದೆ. ಗಾಯನದ ಜೊತಗೆ ಹಾವ-ಭಾವವೂ ಬೇಕು‘ ಎನ್ನುತ್ತಾರೆ, ಗಾಯಕಿ ಅರ್ಚನಾ ಉಡುಪ.

ಪರ್‌ಫಾರ್ಮನ್ಸ್ ಕೂಡ ಇಂದಿನ ಬೇಡಿಕೆ. ಇದನ್ನು ಪ್ರೇಕ್ಷಕರೂ ಬಯಸುತ್ತಾರೆ. ನಾನು ಸ್ಪರ್ಧಿಯಾಗಿದ್ದಾಗ ಸ್ಟ್ಯಾಚ್ಯೂ ರೀತಿ ನಿಲ್ಲುತ್ತಿದ್ದೆ. ಆಗ ಅಲ್ಲಿನ ಟೀಮ್ ಸದಸ್ಯರ ಒತ್ತಾಯದ ಮೂಲಕ ಕೈ ಚಲನೆ ಒಂದನ್ನು ಕಲಿತಿದ್ದೆ. ವರ್ಷಗಳ ನಂತರ ಈಗ ಅದು ಸಹಜವಾಗಿಬಿಟ್ಟಿದೆ. ಇನ್ನು ಈ ಕಾಲದಲ್ಲಿ ಸ್ಪರ್ಧಿಗಳು ಡ್ಯಾನ್ಸ್‌, ಹಾವ–ಭಾವ, ಭಂಗಿಯೊಂದಿಗೇ ಗಾಯನ ಮಾಡುವ  ಆ ‘ಎಕ್ಸ್‌ಫ್ಯಾಕ್ಟರ್’ ಇದ್ದರೆ ಪ್ರೇಕ್ಷಕರ ಮನ ಗೆಲ್ಲುವ ಜೊತೆಗೆ ಮುಂದಿನ ಅವರ ಜೀವನದ ಸ್ಟೇಜ್ ಪರ್‌ಫಾರ್ಮನ್ಸ್‌ಗೆ ಸಾಕಷ್ಟು ಅನುಕೂಲವಾಗುತ್ತದೆ’

ಸ್ಪರ್ಧೆಯಿಂದಲೇ ಬೆಳಕಿಗೆ

1998ರಲ್ಲಿ ಝೀ ಹಿಂದಿ ಸರೆಗಮಪದಲ್ಲಿ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿಯಾಗಿ ಗೆಲುವು ಸಾಧಿಸಿದ ಅರ್ಚನಾ, ನಂತರ ಕನ್ನಡದ ವಿವಿಧ ವಾಹಿನಿಗಳಲ್ಲಿ ಸಂಗೀತ ಕಾರ್ಯಕ್ರಮಗಳ ನಿರೂಪಕಿಯಾಗಿ, ತೀರ್ಪುಗಾರರಾಗಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಕಲರ್ಸ್ ವಾಹಿನಿಯ ‘ಕನ್ನಡ ಕೋಗಿಲೆ’ಯಲ್ಲಿ ತೀರ್ಪುಗಾರರಾಗಿದ್ದಾರೆ. ‘ಗಾಯಕಿ ಹಾಗೂ ಜಡ್ಜ್ ಎರಡೂ ಕಷ್ಟದ ಕೆಲಸವೇ. ಗಾಯಕಿಯಾಗಿ ಹಾಡು ಉತ್ತಮವಾಗಿ ಮೂಡಿಬರಬೇಕೆಂಬ ಟೆನ್ಷನ್ ಇದ್ದೇ ಇರುತ್ತದೆ. ಆದರೆ ತೀರ್ಪುಗಾರರಾಗಿ ಆಗಿರುವುದು ಅದಕ್ಕಿಂತ ಹೆಚ್ಚಿನ ಸವಾಲು. ಹಾಡುವವರ ಒಂದು ನಂಬಿಕೆ, ಅವರನ್ನು ತೂಕದಲ್ಲಿ ಅಳೆಯುವ ಜವಾಬ್ದಾರಿ, ಲಕ್ಷಾಂತರ ಜನರು ನಮ್ಮಲ್ಲಿಟ್ಟಿರುವ ವಿಶ್ವಾಸ... ಹೀಗೆ ನಮ್ಮ ಹೆಗಲ ಮೇಲಿರುವ ಭಾರ ತುಂಬಾ ದೊಡ್ಡದು' ಎನ್ನುವುದು ಅರ್ಚನಾ ಅನುಭವದ ಮಾತು.

ಯುವ ಗಾಯಕರಿಗೆ ಒಂದಿಷ್ಟು ಟಿಪ್ಸ್, ಹಾಗೂ ಗಾಯನ ಕ್ಷೇತ್ರದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ಅವರು.

ಫಾಸ್ಟ್‌ಫುಡ್‌ ಇಲ್ಲಿಲ್ಲ

‘ಗಾಯನದಲ್ಲಿ ಫಾಸ್ಟ್ ಫುಡ್ ಅನ್ನುವುದು ಏನೂ ಇಲ್ಲ. ತಕ್ಷಣ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಫೇಮಸ್ ಆಗಿಬಿಡಬೇಕು ಎಂಬ ಮನೋಭಾವ ಮೊದಲು ಬಿಡಬೇಕು. ಕಲಿಕೆ ನಿರಂತರ, ಎಂದಿಗೂ ವಿದ್ಯಾರ್ಥಿಯೇ ಆಗಿರಬೇಕು. ಆಗ ಮಾತ್ರ ಹೆಚ್ಚು ವರ್ಷಗಳು ಉಳಿದುಕೊಳ್ಳಲು ಸಾಧ್ಯ. ಯಾವತ್ತೂ ಅವಕಾಶಕ್ಕಾಗಿ ಬೆನ್ನು ಹತ್ತಿ ಹೋಗಬಾರದು. ಸಾಧನೆ ಮಾಡುತ್ತಾ ಇರಬೇಕು. ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬಂದಾಗ ನಮ್ಮ 200 ಪರ್ಸೆಂಟ್‌ ಕೊಡಬೇಕು. ಆ ಯೋಗ್ಯತೆಯನ್ನು ನಾವು ಹೊಂದಿರಬೇಕು’ ಎಂಬುದು ಅವರು ನೀಡುವ ಸಲಹೆ.

‘ನಾನು ಈ ಕ್ಷೇತ್ರಕ್ಕೆ ಬಂದು ಹೆಚ್ಚುಕಮ್ಮಿ 32 ವರ್ಷ ಆಯಿತು. ಈಗಲೂ ಜನ ನನ್ನ ಹಾಡನ್ನು ಕೇಳಲು ಏಕೆ ಇಷ್ಟ ಪಡುತ್ತಾರೆ ಅಂದರೆ, ನನ್ನಲ್ಲಿ ವಿದ್ಯೆ ಜೊತೆಗೆ ನನ್ನ ತಂದೆತಾಯಿ ಕೊಟ್ಟಂತಹ ಸಂಸ್ಕಾರವೇ ದೊಡ್ಡ ಕಾರಣ. ‘ಸ್ಲೋ ಆ್ಯಂಡ್‌ ಸ್ಟಡಿ ವಿನ್ಸ್ ದ ರೇಸ್’ ಎಂಬ ಮನೋಭಾವ ಇಟ್ಟುಕೊಂಡು ನಡೆಯಬೇಕು.  ಆತುರ ಬೇಡ, ಒಂದೊಂದೇ ಮೆಟ್ಟಿಲೇರಿಕೊಂಡು ಸಾಧನೆ ಮಾಡಬೇಕು. ಒಟ್ಟಿಗೆ ಐದು ಮೆಟ್ಟಿಲು ಏರುತ್ತೇವೆ ಎಂದರೆ ಬಿದ್ದುಹೋಗುತ್ತೇವೆ. ಶಾರ್ಟ್ ಕಟ್ ಬಳಸಿಕೊಳ್ಳುವುದು ಬೇಡ’ ಎಂಬುದು ಅರ್ಚನಾ ಕಿವಿ ಮಾತು.

‘ಸಿನಿಮಾ ಹಾಗೂ ಸುಗಮ ಸಂಗೀತ ಕ್ಷೇತ್ರದ ಗಾಯನ ಎರಡೂ ವಿಭಿನ್ನ. ಸಿನಿಮಾದಲ್ಲಿ ನಾಲ್ಕು ಗೋಡೆಗಳ ಮಧ್ಯೆಯ ರೆಕಾರ್ಡಿಂಗ್ ರೂಂನಲ್ಲಿ ನಮ್ಮ ಚಾಕಚಕ್ಯತೆಯನ್ನು ತೋರಬೇಕು. ಲೈವ್ ಕಾರ್ಯಕ್ರಮದಲ್ಲಿ ನಾನು ಅತಿಥಿಯಾಗಿ ಹೋದರೂ, ಪೂರ್ಣ ಕಾರ್ಯಕ್ರಮ ನನ್ನದಾದರೂ ಸಂಪೂರ್ಣ ತಯಾರಿ ಅತ್ಯಗತ್ಯ. ಎಲ್ಲವೂ ಚೆನ್ನಾಗಿಯೇ ಮೂಡಿಬರಬೇಕು. ಏಕೆಂದರೆ ಅಲ್ಲಿ ನಾವು ನೇರವಾಗಿ ಪ್ರೇಕ್ಷಕರು, ಜನರೊಂದಿಗೇ ಇರುತ್ತೇವೆ. ಒಂದು ಹಾಡು ಅಥವಾ ಎರಡೇ ಹಾಡಿರಲಿ. ಅದರಲ್ಲೇ ನಿಮ್ಮನ್ನು ನೀವು ಪ್ರೂವ್ ಮಾಡಿಕೊಳ್ಳಬೇಕು. ಜನರ ಪ್ರೀತಿ ನಿಮ್ಮ ಕಣ್ಣೆದುರೇ ಕಾಣುತ್ತದೆ. ಅದು ಕೊಡುವ ಸಂತೋಷವೇ ಬೇರೆ ರೀತಿ, ಪರಮಾನಂದದ ಅನುಭವ. ಸಿನಿಮಾ ಹಾಗೂ ಸುಗಮ ಸಂಗೀತ ಎರಡನ್ನು ನಾನು ಕಲಿತಿದ್ದೇನೆ. ಎರಡನ್ನೂ ನಾನು ಇಷ್ಟಪಡುತ್ತೇನೆ’ ಎಂದರು ಅರ್ಚನಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು