ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಅರಸಿ ವಲಸಿಗರಾಗುವ ಕಲಾವಿದರು

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 20 ಡಿಸೆಂಬರ್ 2019, 13:47 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಗಾಯಕ ರವೀಂದ್ರ ಸೋರಗಾಂವಿ ಹುಟ್ಟಿದ್ದು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ. ತಾಯಿ ಶಂಕರಮ್ಮ, ತಂದೆ ಸುಭಾಷ ಸೋರಗಾಂವಿ. ಶ್ರೀ ಕೃಷ್ಣ ಪಾರಿಜಾತ ಜನಪದ ರಂಗ ಕಲಾವಿದರ ಹಿನ್ನೆಲೆಯುಳ್ಳ ಅವರಿಗೆ ಸಂಗೀತದತ್ತ ಒಲವು ಮೂಡಲು ಮನೆಯೇ ಮೊದಲ ಶಾಲೆಯಾಯಿತು. ತಾತ ಮುರಿಗೆಪ್ಪ ಸೋರಗಾಂವಿ ಪಾರಿಜಾತ ಬಯಲಾಟದ ಕಲಾವಿದ. ತಂದೆ ಹಾರ್ಮೋನಿಯಂ ಕಲಾವಿದರೂ ಹೌದು. ಚಿಕ್ಕಪ್ಪ ಹಾಗೂ ತಂದೆಯ ಆಶ್ರಯದಲ್ಲಿ ಬಾಲ್ಯದಿಂದಲೇ ನಾಟಕ, ಸಂಗೀತಗಳಲ್ಲಿ ತೊಡಗಿಕೊಂಡರು.

ಈವರೆಗೆ ಕರ್ನಾಟಕ ಸಮಾಜ ರತ್ನ, ಕರ್ನಾಟಕ ಚಲನಚಿತ್ರ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ (ಪುಟ್ಟಕ್ಕನ ಹೈವೇ), ಸ್ವರಚತುರ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಅನೇಕ ಪ್ರಶಸ್ತಿಗಳು ಅವರಿಗೆ ಸಿಕ್ಕಿವೆ. ದೇಶ, ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಹುಬ್ಬಳ್ಳಿಯ ಜೊತೆ ಅಪಾರ ನಂಟು ಹೊಂದಿರುವ ಅವರು ಈಚೆಗೆ ಕಾರ್ಯಕ್ರಮವೊಂದಕ್ಕೆ ಹುಬ್ಬಳ್ಳಿಗೆ ಬಂದಾಗ ‘ಪ್ರಜಾವಾಣಿ ಮೆಟ್ರೊ’ ಜತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದು ಹೀಗೆ..

ಸಂಗೀತ ಜೀವನ ಆರಂಭವಾದದ್ದು ಹೇಗೆ?

ಬಾಲ್ಯದಿಂದಲೂ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇತ್ತು. ತಂದೆ ಅವರೂ ಸಂಗೀತ ಕಲಾವಿದರಾಗಿದ್ದರಿಂದ ಅದನ್ನೇ ಮುಂದುವರಿಸಿಕೊಂಡು ಬಂದೆ. ಹೆಚ್ಚಿನ ಸಂಗೀತಭ್ಯಾಸಕ್ಕೆ ಹುಬ್ಬಳ್ಳಿಯ ಅರ್ಜುನಸಾ ನಾಕೋಡ ಹಾಗೂ ಪಂ. ಬಾಲಚಂದ್ರಸಾ ನಾಕೋಡ ಅವರ ಬಳಿ ಕಲಿತು ಸಂಗೀತದಲ್ಲಿ ವಿದ್ವತ್‌ ಪಡೆದೆ.

ಯಾವ ಸಂಗೀತ ಪ್ರಕಾರದ ಬಗ್ಗೆ ಹೆಚ್ಚು ಆಸಕ್ತಿ ಇದೆ?

ಎಲ್ಲಾ ರೀತಿಯ ಹಾಡುಗಳನ್ನು ಹಾಡುತ್ತೇನೆ. ಆದರೆ ನಮ್ಮ ನೆಲ, ಜಲ, ಸೊಗಡು ವಿಭಿನ್ನವಾಗಿರುವುದರಿಂದ ಈ ನೆಲದಲ್ಲಿ ಬೆಳೆದವರಲ್ಲಿ ತತ್ವಪದ, ಭಾಷಾ ಶೈಲಿ ರಕ್ತಗತವಾಗಿರುತ್ತದೆ. ಅವರಿಂದ ಮಾತ್ರ ಅದಕ್ಕೆ ಜೀವ ತುಂಬಲು, ಸ್ಪರ್ಶ ನೀಡಲು ಸಾಧ್ಯ. ಆದ್ದರಿಂದ ಇಲ್ಲಿನ ಜಾನಪದ, ತತ್ವಪದ, ಶಾಸ್ತ್ರೀಯ ಸಂಗೀತ, ಮರಾಠಿ ಅಭಂಗ್‌, ಹಿಂದಿ ಗೀತೆಗಳಿಗೆ ಮಾತ್ರವಲ್ಲದೆ, ಧಾರಾವಾಹಿ, ನಾಟಕಗಳಿಗೂ ಸ್ವರ ನೀಡಿದ್ದೇನೆ.

ಹುಬ್ಬಳ್ಳಿಯ ಬಗ್ಗೆ ನಿಮ್ಮ ಅನಿಸಿಕೆ ಏನು?

ಹುಬ್ಬಳ್ಳಿಯಲ್ಲಿಯೇ ನಾನು ಸಂಗೀತವನ್ನು ಅಭ್ಯಾಸ ಮಾಡಿದೆ. ಸಿದ್ಧಾರೂಢ ಮಠದಲ್ಲೇ ಇದ್ದುಕೊಂಡು ಕಲಿಕೆಗೆ ತೊಡಗಿಸಿಕೊಂಡೆ. ಆದ್ದರಿಂದ ಹುಬ್ಬಳ್ಳಿ ಜೊತೆ ಅನುಬಂಧ ಗಟ್ಟಿಯಾಗಿದೆ. ನಾನು ಉನ್ನತ ಸ್ಥಾನ ತಲುಪಲು ಈ ಭೂಮಿಯೇ ಕಾರಣ. ಆದ್ದರಿಂದ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಕೊಡುವುದೆಂದರೆ ನನಗೆ ಅತೀವ ಸಂತೋಷ.

ಶಾಸ್ತ್ರೀಯ ಸಂಗೀತದಿಂದ ಸಿನಿಮಾ ಸಂಗೀತಕ್ಕೆ ತೆರೆದುಕೊಂಡದ್ದು ಏಕೆ?

ಪಂ. ಅರ್ಜುನ ಸಾ ನಾಕೋಡ ಅವರ ಶಿಷ್ಯನಾಗಿ ಸಂಗೀತವನ್ನು ಮೈಗೂಡಿಸಿಕೊಂಡಿದ್ದ ನಾನು, ಸಂಗೀತವನ್ನೇ ಜೀವನವಾಗಿಸಿಕೊಂಡೆ. ಆದ್ದರಿಂದ ಶಾಸ್ತ್ರೀಯ ಸಂಗೀತದ ಜೊತೆ ಸಿನಿಮಾ ಸಂಗೀತಕ್ಕೂ, ತತ್ವ, ದ್ವಂದ್ವ ಸಂಗೀತದಲ್ಲೂ ತೊಡಗಿಸಿಕೊಂಡೆ. ಬೆಂಗಳೂರಿನಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಪರ್ಕ ಸಿಕ್ಕ ನಂತರ ಸಿನಿಮಾ ಸಂಗೀತದಲ್ಲಿಕ್ಕೆ ಹೆಚ್ಚಿನ ಅವಕಾಶಗಳು ಸಿಕ್ಕವು.

ಸಿನಿಮಾ ಸಂಗೀತದಲ್ಲಿ ಉ.ಕ. ಭಾಷಾ ಸಂಗೀತಕ್ಕೆ ನಿಮಗೆ ಸಿಕ್ಕ ಅವಕಾಶ?

ನಾನು ಮೂಲತಃ ಉತ್ತರ ಕರ್ನಾಟಕದವನೇ ಆಗಿರುವುದರಿಂದ ಆ ಭಾಷೆಯ ಸೊಗಡು ಮೈಗೂಡಿದೆ. ಅದು ಇಲ್ಲಿನ ನೆಲ, ಜನರಿಂದ ಸೊಗಡಿನಿಂದ ಬರಲು ಸಾಧ್ಯ. ಆದ್ದರಿಂದ ಸಹಜವಾಗಿ ಉತ್ತರ ಕರ್ನಾಟಕದ ಯಾವುದೇ ಹಾಡಿದ್ದರೂ ನನ್ನನ್ನು ಬಳಸಿಕೊಳ್ಳುತ್ತಾರೆ. ಜತೆಗೆ ಇಲ್ಲಿನ ಸೂಫಿ, ತತ್ವಪದ, ಜನಪದ ಹಾಡುಗಳನ್ನು ಹಾಡಿರುವುದರಿಂದ ನನಗೆ ಹೆಚ್ಚು ಅವಕಾಶ ಸಿಕ್ಕಿದೆ. ಉ.ಕ. ಭಾಷಾ ಶೈಲಿಯಲ್ಲಿ ಸಂಗೀತ ಹಾಡುವುದೆಂದರೆ ಸಂಗೀತ ನಿರ್ದೇಶಕರ ಮೊದಲ ಆಯ್ಕೆ ನಾನೇ ಆಗಿರುತ್ತೇನೆ.

ಚುಟುಚುಟು ಹಾಡಿನ ಕುರಿತು?

ರಾಂಬೋ-2 ಚಿತ್ರದ ಚುಟು-ಚುಟು ಹಾಡನ್ನು ಇದುವರೆಗೆ 95 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದೊಂದು ದಾಖಲೆ. ಶಿವು ಬೇರಗಿ ಉತ್ತರ ಕರ್ನಾಟಕದ ಜನಪದ ಶೈಲಿಯಲ್ಲಿ ಈ ಹಾಡನ್ನು ಬರೆದಿದ್ದಾರೆ. ಉತ್ತರ ಕರ್ನಾಟಕದವನೇ ಆದ ನನಗೆ ಅದನ್ನು ಹಾಡುವ ಸದವಕಾಶ ಸಿಕ್ಕಿತು. ಎಲ್ಲೆಡೆಯಿಂದ ಈ ಸಂಗೀತಕ್ಕೆ ಶ್ಲಾಘನೆ ಸಿಕ್ಕಿವೆ. ಇದೇ ನಮಗೆ ಸಿಕ್ಕ ಸಂಭ್ರಮ.

ನಿಮ್ಮ ಗಾಯನದ ಚಲನಚಿತ್ರಗಳು?

ಕಲ್ಲರಳಿ ಹೂವಾಗಿ, ಪುಟ್ಟಕ್ಕನ ಹೈವೇ, ಮನಸಾಲಜಿ, ಗೂಳಿಹಟ್ಟಿ, ಬಾನಾಡಿ, ರಣ, ಮುಂಜಾನೆ, ಈ ಬಣ್ಣದ ಲೋಕದಲ್ಲಿ, ಶೇಷು, ಮ್ಯಾಜಿಕ್‌ ಬಾಲ್, ರಥಾವರ, ರಮಬಾಯಿ, ಫಲಿತಾಂಶ, ಹಳ್ಳಿ ಸೊಗಡು, ರಾಜ್‌ ವಿಷ್ಣು, ಪಾಂಡವಪುರದ ಪ್ರಚಂಡರು, ಬರಗಾರ, ಹಾಲು ತುಪ್ಪಾ, ಹನಿ ಹನಿ, ಮೂಕ ನಾಯಕ, ಲೈಟಾಗಿ ಲವ್‌ಆಗಿದೆ.

ಉ.ಕ. ಎಲ್ಲಾ ಪ್ರತಿಭೆಗಳು ಬೆಂಗಳೂರಿನಲ್ಲಿ ಅರಳಿ, ಅಲ್ಲೇ ಉಳಿಯುತ್ತವೆ ಎಂಬ ಆರೋಪವಿದೆ. ಆ ಬಗ್ಗೆ ನಿಮ್ಮ ಅಭಿಪ್ರಾಯ?

ಇದು ಬಹುದೊಡ್ಡ ಪ್ರಶ್ನೆ. ನಾವು ಅವಕಾಶ, ಬದುಕು ಅರಸಿ ಬೆಂಗಳೂರಿಗೆ ಹೋದವರು. ಇಲ್ಲಿ ಪ್ರತಿಭೆಗೆ ಪ್ರೋತ್ಸಾಹ ನೀಡುವ ಅಂತಹ ಇಚ್ಛಾಶಕ್ತಿ ಇಲ್ಲ. ಸಂಘಟನೆ ಕೊರತೆ, ಎಕ್ಸ್‌ಪೋಸಿಂಗ್‌ಗೆ ಮಾಧ್ಯಮದ ಸಹಾಯವೂ ಅಲ್ಲೇ ಇದೆ. ಅವಕಾಶಗಳು, ಸವಲತ್ತುಗಳು ಮಹಾನಗರ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದರಿಂದ ಉ.ಕದಲ್ಲಿ ಅಸಂಖ್ಯಾತ ಪ್ರತಿಭೆಗಳು ಮಹಾನಗರಕ್ಕೆ ವಲಸೆ ಹೋಗುವ ಪರಿಸ್ಥಿತಿ ಮುಂದುವರಿಯುತ್ತಿದೆ. ಇದರಿಂದಾಗಿ ಎಷ್ಟೋ ಪ್ರತಿಭೆಗಳಿಗೆ ಅವಕಾಶ ಸಿಗದೆ ಕಮರಿ ಹೋಗುತ್ತಿದೆ ಎಂಬುದು ವಾಸ್ತವ.

ಉ.ಕ.ದಲ್ಲಿ ಅವಕಾಶ ವಿಸ್ತರಿಸುವ ಬಗ್ಗೆ ನಿಮ್ಮ ಸಲಹೆ?

ಹುಬ್ಬಳ್ಳಿ ವಿಸ್ತರಿಸುತ್ತಿದೆ. ಆದರೆ ಅವಕಾಶಗಳು ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿ ಎಂಜಿನಿಯರಿಂಗ್‌, ಡಾಕ್ಟರೇಟ್ ಮಾಡಿದವರೂ ಉದ್ಯೋಗ ಮೊದಲು ಮಾಡಿ ಎಲ್ಲದಕ್ಕೂ ವಲಸೆ ಹೋಗುವಂತಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸಿಗುವ ಅವಕಾಶಗಳು ಇಲ್ಲಿಯೂ ಸಿಗುವಂತಾಗಬೇಕು. ಅದಕ್ಕಾಗಿ ಕಲಾಲೋಕ, ಮಹನೀಯರು ಸಹಕರಿಸಬೇಕು. ಇಲ್ಲಿಯೂ ಫಿಲ್ಮ್‌ ಸಿಟಿ ಶಾಖೆಗಳು ತೆರೆಯಬೇಕು. ಮಾಧ್ಯಮಗಳ ಸಹಾಯ, ಸಮೂಹದ ಇಚ್ಛಾಶಕ್ತಿ ಬೇಕು. ಜನಪದ, ಸಂಗೀತ ನೃತ್ಯ ಅಕಾಡೆಮಿಗಳನ್ನು ಇಲ್ಲಿ ಆರಂಭಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT