ಶುಕ್ರವಾರ, ಜೂನ್ 5, 2020
27 °C
Varad rangan- mysore v. subramanya

ಸಂಗೀತ ವಿಜ್ಞಾನಗಳ ಸವ್ಯಸಾಚಿ ವರದರಂಗನ್

ಮೈಸೂರು ವಿ. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

Prajavani

ಡಾ.ಕೆ. ವರದರಂಗನ್ ಅವರಿಗೆ ಸಂಗೀತ ಹೊಸದೇನಲ್ಲ. ಸಂಗೀತ-ಸಾಹಿತ್ಯಗಳ ಪರಂಪರೆಯಲ್ಲಿ ಹೆಸರಾದ ಮನೆತನದಲ್ಲಿ ಜನಿಸಿದ ಅವರು ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದರಲ್ಲದೇ ಭೌತಶಾಸ್ತ್ರದಲ್ಲಿಎಂ.ಎಸ್ಸಿ ಮಾಡಿ, ಚೆನ್ನೈನ ಐಐಟಿಯಲ್ಲಿ ಪಿ.ಎಚ್‌ಡಿ ಸಹ ಗಳಿಸಿದರು.

ವರದರಂಗನ್ ಅವರು ಗಾಯಕನಾಗಿ ರಾಜ್ಯ-ರಾಷ್ಟ್ರದ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ಕಛೇರಿ ನೀಡಿದ್ದಾರಲ್ಲದೇ, ಅಮೆರಿಕದಲ್ಲೂ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ. ಜೊತೆಗೆ ವಿದ್ವತ್ ಸಭೆಗಳಲ್ಲಿ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನೂ ನೀಡಿ ಮಾನ್ಯರಾಗಿದ್ದಾರೆ.

ಮೇ 12ರಂದು ಶ್ರೀತ್ಯಾಗರಾಜ ಗಾನಸಭೆಯಿಂದ ‘ಕಲಾಭೂಷಣ’ ಬಿರುದು ಸ್ವೀಕರಿಸಲಿರುವ ಡಾ.ಕೆ. ವರದರಂಗನ್ ಅವರು ಸಂಗೀತ ಮತ್ತು ವಿಜ್ಞಾನಗಳ ಅಪೂರ್ವ ಮಿಲನ. ತಮ್ಮ ಸಂಗೀತ ಜ್ಞಾನವನ್ನು ವೈಜ್ಞಾನಿಕ ಸಂಶೋಧನೆಗಳ ಮೂಲಕ ಒರೆಹಚ್ಚಿ, ಹೊಸ ವಾದ್ಯ–ಯಂತ್ರಗಳನ್ನು ಆವಿಷ್ಕರಿಸಿದ್ದಾರೆ.

ತಮ್ಮ ನಿರಂತರ ಸಂಶೋಧನೆಗಳಿಂದ ಸಿಂಥೆಟಿಕ್ ಮೃದಂಗವನ್ನು ಆವಿಷ್ಕರಿಸಿದ್ದಾರೆ. ಇದರಿಂದ ಪ್ರಾಣಿಗಳ ಚರ್ಮವನ್ನು ಬಳಸದೆ ಫೈಬರ್ ಗ್ಲಾಸ್‍ನಿಂದ ಮೃದಂಗ ಮಾಡಿದ ವಿಶ್ವದ ಪ್ರಥಮ ವಿಜ್ಞಾನಿ-ಕಲಾವಿದರಾದರು, ಕನ್ನಡಿಗ ವರದರಂಗನ್! ಹಾಗೆಯೇ ಸಿಂಥೆಟಿಕ್ ತಬಲವನ್ನೂ ಸಹ ತಯಾರು ಮಾಡಿ, ಸಂಗೀತ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಇವುಗಳು ಕ್ರಮೇಣ ಸಂಗೀತ ವೇದಿಕೆಯ ಮೇಲೆ ಕಾಣಿಸುತ್ತಿದ್ದು, ಜನಪ್ರಿಯವಾಗತೊಡಗಿವೆ. ರಾಗಗಳ ಶ್ರುತಿಭೇದವನ್ನು ಕುರಿತು ಅವರು ಬರೆದಿರುವ ‘ಶ್ರುತಿ ಲಕ್ಷಣ ಪ್ರಕಾಶಿನಿ’ಕೃತಿ ಬಹು ಉಪಯುಕ್ತವಾದುದು.

ವರದರಂಗನ್ ಅವರು ಪ್ರಾಯದಲ್ಲೇ ಬೆಂಗಳೂರು ಗಾಯನ ಸಮಾಜ, ಚೆನ್ನೈನ ಕೃಷ್ಣ ಗಾನಸಭಾಗಳಿಂದ ಬಹುಮಾನ ಗಳಿಸಿರುವರಲ್ಲದೆ ಈಚೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ ಹಾಗೂ ಗಾಯನ ಸಮಾಜ, ಅನನ್ಯ ಸಂಸ್ಥೆಗಳ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ನಿಜಜೀವನದಲ್ಲಿ ಬಹು ಸರಳರಾದ ಡಾ.ವರದರಂಗನ್ ಗಾಯನ, ಶಿಕ್ಷಣ, ಲೇಖನ, ಸಂಶೋಧನಗಳಲ್ಲಿ ನಿರಂತರ ತೊಡಗಿಕೊಂಡಿದ್ದಾರೆ. ಇದೀಗ ಡಾ.ಕೆ.ವರದರಂಗನ್ ಅವರು ಶ್ರೀತ್ಯಾಗರಾಜ ಗಾನಸಭಾದ 48ನೇ ವರ್ಷದ ಸಂಗೀತೋತ್ಸವದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ.

ಶ್ರೀತ್ಯಾಗರಾಜ ಗಾನಸಭೆ 48ನೇ ವರ್ಷದ ಸಂಗೀತೋತ್ಸವ: ಅಧ್ಯಕ್ಷರು–ಡಾ.ಕೆ. ವರದರಂಗನ್. ಸಾನ್ನಿಧ್ಯ–ಯದುಗಿರಿ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ. ಅತಿಥಿಗಳು–ಶಾಸಕ ಗೋಪಾಲಯ್ಯ, ಆರ್.ಕೆ.ಪದ್ಮನಾಭ. ಅಧ್ಯಕ್ಷತೆ–ಎಂ. ಅನಂತ್. ‘ಕಲಾಭೂಷಣ ಪ್ರಶಸ್ತಿ’ ಪುರಸ್ಕಾರ–ಡಾ.ಕೆ. ವರದರಂಗನ್. ವಾರ್ಷಿಕ ಪ್ರಶಸ್ತಿ ಪುರಸ್ಕೃತರು–ಡಾ.ಎಂ.ಎ. ಜಯರಾಮರಾವ್, ಶ್ರೀರಾಮ ಲಲಿತ ಕಲಾಮಂದಿರ, ಎಂ.ಕೆ.ಸರಸ್ವತಿ, ಡಾ.ಎಸ್.ಆರ್. ಶೇಷಾದ್ರಿ ಭಟ್ಟರ್, ಡಾ.ವಿಜಯಲಕ್ಷ್ಮಿ, ಮೋಹನ್ ಕುಮಾರ್. ಆಯೋಜನೆ–ಶ್ರೀತ್ಯಾಗರಾಜ ಗಾನಸಭಾ. ಸ್ಥಳ–ಬಾಲಮೋಹನ ವಿದ್ಯಾಮಂದಿರ, 19ನೇ ‘ಬಿ’ ರಸ್ತೆ, 1ನೇ ಬ್ಲಾಕ್ ರಾಜಾಜಿನಗರ. ಬೆಳಿಗ್ಗೆ 11

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು