ವಾಸು ಹೊಸ ಆಲ್ಬಂ

7

ವಾಸು ಹೊಸ ಆಲ್ಬಂ

Published:
Updated:
Deccan Herald

ತ್ವಪದ–ಜನಪದವನ್ನು ಹದವಾಗಿ ಬೆರೆಸಿ ಹಾಡುವ ಗಾಯಕ ವಾಸು ದೀಕ್ಷಿತ್ ಈಗ ಹೊಸ ಆಲ್ಬಂನ ಗುಂಗಿನಲ್ಲಿದ್ದಾರೆ. ‘ವಾಸು ದೀಕ್ಷಿತ್ ಕಲೆಕ್ಟಿವ್ ಲೈವ್ ಸೆಷನ್’ ಶೀರ್ಷಿಕೆಯಡಿ ರೂಪುಗೊಂಡಿರುವ ಈ ಆಲ್ಬಂನಲ್ಲಿ ಕನ್ನಡದ ನಾಲ್ಕು ಮತ್ತು ಹಿಂದಿಯ ಒಂದು ಹಾಡು ಇರುವುದು ವಿಶೇಷ.

ಪುರಂದರ ದಾಸರು, ಬಸವಣ್ಣ, ಯುವ ಗೀತರಚನೆಕಾರರಾದ ಕಾರ್ತಿಕ್ ಪತ್ತಾರ್, ಅಪೂರ್ವ ಮೈಸೂರು ಅವರ ಕನ್ನಡ ಸಾಹಿತ್ಯ ಹಾಗೂ ಉಸ್ತಾದ್ ಅಬ್ದುಲ್ ರಷೀದ್ ಖಾನ್ ಅವರ ಹಿಂದಿ ಸಾಹಿತ್ಯಕ್ಕೆ ವಾಸು ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಒಟ್ಟು 21 ಜನರ ತಂಡ ಈ ಆಲ್ಬಂಗಾಗಿ ಶ್ರಮಿಸಿದ್ದು, ಕಾರ್ತಿಕ್ ಪತ್ತಾರ್ ಅವರ ‘ಕೇಳಬೇಡ’  ಹಾಡಿನ ಪ್ರೋಮೊ ಡಿ. 10ರಂದು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ವಾರಕ್ಕೊಂದರಂತೆ ಒಂದೊಂದು ಹಾಡನ್ನು ಬಿಡುಗಡೆ ಮಾಡುವ ಉದ್ದೇಶ ವಾಸು ಅವರದ್ದು.

ರಾಯಚೂರಿನ ಕಾರ್ತಿಕ್, ಬೆಂಗಳೂರಿಗೆ ಬರುವ ಉತ್ತರ ಕರ್ನಾಟಕದವರ ಅನುಭವವನ್ನು ಅವರದ್ದೇ ಭಾಷೆಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ‘ಲೋಲ್‌ಬಾಗ್‌’ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಹೆಸರು ಗಳಿಸಿರುವ ಕಾರ್ತಿಕ್ ಈಗ ಗೀತ ರಚನೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.

‘ನಗರೀಕಣದ ಜಂಜಡದಲ್ಲಿ ತಮ್ಮೂರನ್ನು ನೆನಪಿಸಿಕೊಳ್ಳುವ ಉತ್ತರ ಕರ್ನಾಟಕ ಮಂದಿಯ ನೋವು–ನಲಿವಿನ ಗೀತೆ ಇದಾಗಿದೆ. ಅಪ್ಪಟ ಜವಾರಿ ಭಾಷೆಯಲ್ಲಿ ಈ ಹಾಡು ಇದೆ. ಇಂಥ ಗೀತೆಗೆ ಸಂಗೀತ ಸಂಯೋಜಿಸಿ ಹಾಡಿರುವುದು ಖುಷಿಯ ವಿಚಾರ’ ಎನ್ನುತ್ತಾರೆ ವಾಸು.

‘ಕೇಳಬೇಡ ನನ್ನ ಕಥೆಯ, ನನ್ನ ವ್ಯಥೆಯ, ಬೆರಕಿ ಜನ ಬಹಳ ಫಿರಕಿ, ಹರಕು ಗುಣ ಬರೀ ತೋರಕಿ ಒಣ... ಹೀಗೆ ಸಾಗುವ ಸಾಲು ಕೇಳುಗರನ್ನು ಕಾಡುವುದರಲ್ಲಿ ಸಂಶಯವಿಲ್ಲ. 22 ವರ್ಷದ ಹುಡುಗ ಕಾರ್ತಿಕ್ ಇಷ್ಟೊಂದು ಗಂಭೀರವಾದ ವಿಷಯವನ್ನು  ಜವಾರಿ ಸಾಹಿತ್ಯದ ಸೊಗಡಿನಲ್ಲಿ ಕಟ್ಟಿಕೊಟ್ಟಿದ್ದಾನೆ.  ಅಂತೆಯೇ ಮೈಸೂರಿನ ಅಪೂರ್ವ ಕೃಷ್ಣ ಮತ್ತು ಆತನ ತಾಯಿಯ ನಡುವಿನ ಬಾಂಧವ್ಯದ ಗೀತೆ ರಚಿಸಿಕೊಟ್ಟಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ಗಾಯಕಿ ಬಿಂದುಮಾಲಿನಿ ಅವರ ಗುರು ಉಸ್ತಾದ್ ಅಬ್ದುಲ್ ರಷೀದ್ ಖಾನ್ ಅವರ ಬದುಕಿದ್ದಾಗ ನಾಲ್ಕು ಸಾಲು ಬರೆದುಕೊಟ್ಟಿದ್ದರು. ಅವರ ಸಾಹಿತ್ಯಕ್ಕೆ ಸಂಗೀತ ನಿರ್ದೇಶಿಸುವ ಭಾಗ್ಯ ನನ್ನದಾಗಿದೆ’ ಎಂದು ಭಾವುಕವಾಗಿ ನುಡಿದರು.

ವಾಸು ಅವರ ಇತ್ತೀಚಿನ ‘ಪುಕ್ಸಟ್ಟೆ ಲೈಫು’ ವಿಡಿಯೊ ಈಗಾಗಲೇ ಯುಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದು, 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !