ಪ್ರೇಮಕ್ಕೆ ಅಕ್ಷರದ ಹಂಗಿಲ್ಲ...

7

ಪ್ರೇಮಕ್ಕೆ ಅಕ್ಷರದ ಹಂಗಿಲ್ಲ...

Published:
Updated:

ಪ್ರೀತಿ, ಪ್ರೇಮ, ಲವ್‌, ಮೊಹಬತ್‌.. ಎಂದಾಕ್ಷಣ ಎಲ್ಲ ವಯೋಮಾನದವರ ಕಿವಿ ನಿಮಿರುತ್ತವೆ. ಮನಸ್ಸೂ ಅರಳುತ್ತದೆ. ಸಂಗಾತಿಯ ಕಡೆಗೆ, ಪ್ರೇಮದ ಅಪೂರ್ವ ಗಳಿಗೆಗಳ ಕಡೆಗೆ ಮನಸ್ಸು ಹರಿಯುತ್ತದೆ. ಇಂತಹ ಪ್ರೇಮದ ಅನುಭೂತಿ, ಅನುಭವದ ಬಗ್ಗೆ ರಸಿಕರ ಸಂವೇದನೆಗಳನ್ನು ವಿಸ್ತಾರಗೊಳಿಸುವುದು ಕವಿತೆ, ಕತೆ, ಕಾದಂಬರಿ, ಸಿನಿಮಾದಂತಹ ಕಲೆಗಳು. ಸಿನಿಮಾದ ನಾಯಕಿಯನ್ನು ಎಷ್ಟು ಹುಡುಗರು, ನಾಯಕನನ್ನು ಅದೆಷ್ಟು ಹುಡುಗಿಯರು ಪ್ರೇಮಿಸಿಲ್ಲ? ಆದ್ದರಿಂದಲೇ ಪ್ರೀತಿಯ ಕತೆಗಳು ಮನಸ್ಸಿಗೆ ರಾಗ–ರಂಗನ್ನು ಕೊಡಬಲ್ಲವು. ಪ್ರೀತಿ ಎಂಬ ಮನಮೋಹಕ ಪದ ವರ್ತಮಾನದ್ದು ಮಾತ್ರವಲ್ಲ, ನೆನಪಿನದೂ ಆಗಿರುತ್ತದೆ. ವಾಸನೆ, ಸ್ಪರ್ಶ, ದನಿ, ರೂಪ ಈ ಎಲ್ಲದರ ನೆನಪು ಅದು.

ಪ್ರೇಮದ ವಸ್ತುವನ್ನು ಆಧರಿಸಿ ಅಸಂಖ್ಯ ಕಾದಂಬರಿಗಳು, ಕತೆಗಳು, ಸಿನಿಮಾಗಳು, ಕವನಗಳು ಬಂದಿವೆ; ಬರುತ್ತಲೂ ಇವೆ. ಒಂದು ಕಾಲದಲ್ಲಿ ಉಷಾ ಕೆ.ಟಿ. ಗಟ್ಟಿ, ಉಷಾ ನವರತ್ನರಾಮ್, ಸಾಯಿಸುತೆ, ರಾಧಾದೇವಿ ಮುಂತಾದವರ ಪ್ರೇಮಕತೆಗಳ ಕಾದಂಬರಿಗಳನ್ನು ಓದದೇ ಅನೇಕರ ದಿನಚರಿ ಪೂರ್ತಿಗೊಳ್ಳುತ್ತಿರಲಿಲ್ಲ. ’ಪ್ರೀತಿ’ ಎಂಬ ಪದ ಹುಡುಗ ಹುಡುಗಿಯರಿಗೆ ಎಷ್ಟು ಉಲ್ಲಾಸದಾಯಕವೋ ಹಾಗೆಯೇ ಅದರ ಮೇಲೆ ರಂಜಕ ಕಾದಂಬರಿ ಬರೆಯುವವರಿಗೂ ಸಿನಿಮಾ ಮಾಡುವವರಿಗೂ ಪ್ರಿಯವಾದದ್ದು. ಹಾಗಾಗಿಯೇ ಟೀವಿ ಇಲ್ಲದ ಕಾಲದಲ್ಲಿ ಪ್ರೀತಿಯ ಕತೆಯನ್ನು ತೆಳುವಾಗಿ ಹೇಳುವ ರಂಜಕ ಕಾದಂಬರಿಗಳು, ಸಿನಿಮಾಗಳು ಬರುತ್ತಲೇ ಇದ್ದವು. ಪ್ರೇಮಿಗಳು ತಮ್ಮ ಪ್ರೀತಿಯ ಬಿಂಬಗಳನ್ನು ಸಿನಿಮಾ ನಟರಲ್ಲಿ, ಕಾದಂಬರಿಯ ಪಾತ್ರಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅವು ರಸಿಕರ ಪ್ರೀತಿಯ ಕಲ್ಪನೆಗೆ, ಭಾಷೆಗೆ, ಒಟ್ಟಾಗಿ ಸಂವೇದನೆಗೆ ಹೊಸದೇನನ್ನಾದರೂ ಸೇರಿಸುತ್ತಿದ್ದವು.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಕಾಲದಲ್ಲಿ ಪ್ರೀತಿಯನ್ನು ಅಭಿವ್ಯಕ್ತಿಸಲು ಹೊಸನುಡಿಗಟ್ಟುಗಳೇ ಸಿಗದಂತಾಗಿದೆ. ಏನಿದ್ದರೂ ಚುಟುಕು ಸಂದೇಶ. ಯಾವ ಮಾತಿದ್ದರೂ ಮೊಬೈಲ್‌ನಲ್ಲೇ. ಪ್ರೇಮಕ್ಕೆ ಬೇಕಾದ ಕಾತರದ, ನಿರೀಕ್ಷೆಯ ಕ್ಷಣಗಳನ್ನು ಮೊಬೈಲ್‌ ಕಡಿಮೆ ಮಾಡಿದೆ. ಕಳಿಸಿದ ಯಾವುದೇ ಸಂದೇಶಕ್ಕೆ ತಕ್ಷಣಕ್ಕೆ ಒಂದಕ್ಷರದ ಇಲ್ಲವೇ ಒಂದು ಎಮೋಜಿಯ ಉತ್ತರ ಪ್ರೇಮಿಯಿಂದ ಬರುತ್ತದೆ. ಸುದೀರ್ಘ ಪತ್ರಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಗಾಗಿ ಪ್ರೇಮಪತ್ರಗಳು ವಸ್ತುಸಂಗ್ರಹಾಲಯದಲ್ಲಿ ಕಾಣಲು ಸಿಗುವ ವಸ್ತುಗಳಾಗಿವೆ. ಪ್ರೇಮ ಕವನಗಳ ಸಾಲುಗಳಿಂದ ಅಲಂಕೃತಗೊಂಡಿರುವ, ಯಾವುದೋ ಕತೆ, ಕಾದಂಬರಿಯ ನಾಯಕ/ನಾಯಕಿಯ ಮಾತುಗಳನ್ನು ತನ್ನದೇ ಮಾತುಗಳೆಂಬಂತೆ ಬರೆದಿರುವ ಎರಡು ಪುಟಗಳ ಪತ್ರವನ್ನು ಪ್ರೇಮಿಗೆ ತಲುಪಿಸಿ, ಬಳಿಕ ಎರಡು ವಾರ ನಿದ್ದೆಗೆಟ್ಟು, ಊಟಬಿಟ್ಟು ಕಾಯುವ ಪ್ರೇಮಿಗಳ ಕಾಲ ಯಾವತ್ತೋ ಆಗಿಹೋಗಿದೆ. ಪ್ರೇಮಕ್ಕೀಗ ಅಕ್ಷರದ ಹಂಗಿಲ್ಲ!

ಈ ಕಾಲದ ಪ್ರೇಮಕತೆಗಳ ಸಿನಿಮಾಗಳು, ಕಾದಂಬರಿಗಳು ಕನ್ನಡದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಲೇ ಇಲ್ಲ. ಹೊಸಕಾಲದ ಪ್ರೇಮದ ಪರಿ ಯಾವ ರೀತಿಯದು, ಅದರ ನುಡಿಗಟ್ಟು ಏನು, ಹುಡುಗರ ಪ್ರೀತಿಯ ಭಾಷೆ ಯಾವುದು ಎಂಬುದು ಸಿನಿಮಾ ನಿರ್ದೇಶಕರಿಗೆ, ಬರಹಗಾರರಿಗೆ ಗೊತ್ತಿದ್ದಂತಿಲ್ಲ. ಎಂದಿನಂತೆ ಈ ಕಾಲದಲ್ಲೂ ಪ್ರೇಮ ಆಗುತ್ತಲೇ ಇದೆ. ಅದರ ಭಾಷೆ, ಅದರ ಕತೆ ತಿಳಿಯದಿರುವುದರಿಂದಲೇ ಈಗ ಬರುತ್ತಿರುವ ಯಾವ ಸಿನಿಮಾ ಪ್ರೇಮಕತೆಗಳೂ ಹುಡುಗರನ್ನು ಸೆಳೆಯುತ್ತಿಲ್ಲ. ಈಗಿನ ಸಿನಿಮಾಗಳಂತೂ ಈ ಲೋಕಕ್ಕೆ ಸಂಬಂಧವೇ ಇಲ್ಲದ ಪೆದ್ದು ಪ್ರೇಮಕತೆಯನ್ನು ನಾಲ್ಕಾರು ಹಾಡುಗಳೊಂದಿಗೆ ಹೇಳುತ್ತವೆ. ಅದನ್ನು ನೋಡಿ ಎದ್ದ ಪ್ರೇಕ್ಷಕರು ಮತ್ತೆ ಅದರತ್ತ ಸುಳಿಯುವುದಿಲ್ಲ. ಅವರು ನೋಡಿದ ಸಿನಿಮಾಪ್ರೇಮ ಅದೇ ಹಳೆಯ ವಿನ್ಯಾಸದಲ್ಲಿರುತ್ತದೆ; ಅದರ ಭಾಷೆ, ವ್ಯಾಕರಣ, ನುಡಿಗಟ್ಟು ಕ್ರಿಸ್ತ ಪೂರ್ವ ಕಾಲಕ್ಕೆ ಸೇರಿರುತ್ತದೆ. ಸಹಜವಾಗಿ ಅದು ಜನರ, ಅದರಲ್ಲೂ ಯುವಜನಾಂಗದ ತಿರಸ್ಕಾರಕ್ಕೆ ಗುರಿಯಾಗುತ್ತದೆ. ಆಯಾ ಕಾಲದ ಪ್ರೇಮದ ಲಯವನ್ನು, ನುಡಿಗಟ್ಟನ್ನು ಹಿಡಿಯಲು ವಿಫಲವಾದ್ದರಿಂದಲೇ ಸರ್ವಕಾಲಿಕ ಪ್ರೇಮಕತೆಗಳ ಸಿನಿಮಾಗಳು, ಕಾದಂಬರಿಗಳು ಕನ್ನಡದಲ್ಲಿ ಕಡಿಮೆ.

ಈ ಕಾಲದ ಹುಡುಗರ ಭಾಷೆಯನ್ನು ಅರಿಯದೇ ಈ ಕಾಲದ ಪ್ರೇಮವನ್ನು ಅರ್ಥಮಾಡಿಕೊಳ್ಳಲಾಗದು. ಪ್ರೀತಿಯ ರೀತಿ ಬದಲಾಗಿದೆ; ಪ್ರೀತಿಯೂ ಬೇಗ, ಮುರಿದು ಬೀಳುವುದೂ ಅಷ್ಟೇ ವೇಗ. ಇವನ್ನೆಲ್ಲ ಕಲೆಯ ಮಾಧ್ಯಮದಲ್ಲಿ ಹಿಡಿಯಬಲ್ಲವರೂ ತೀರ ಕಡಿಮೆ. ಅಂದಹಾಗೆ, ಪ್ರೇಮದ ಹೊಸ ವ್ಯಾಕರಣವನ್ನು ಕಲೆಯಲ್ಲಿ ಸೃಷ್ಟಿಸಬಲ್ಲ, ಹುಡುಗ, ಹುಡುಗಿಯರಿಗೆ ಪ್ರೇಮದ ಹೊಸ ಕನಸಿನ ಬಿಂಬಗಳನ್ನು ಹಂಚುವ ಪ್ರತಿಭಾವಂತರು ಎಲ್ಲಿದ್ದಾರೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !