ಬುಧವಾರ, ಡಿಸೆಂಬರ್ 7, 2022
20 °C

ಎನ್‌.ಶ್ರೀನಿವಾಸ ಉಡುಪ ಅವರ ಶಿಶುಪದ್ಯಗಳು: ಮೂವರು ಮುದುಕರು

ಎನ್‌. ಶ್ರೀನಿವಾಸ ಉಡುಪ Updated:

ಅಕ್ಷರ ಗಾತ್ರ : | |

Prajavani

ದಿವಂಗತ ಎನ್‌.ಶ್ರೀನಿವಾಸ ಉಡುಪ ಅವರ ಇನ್ನೂ ಅಚ್ಚಿನಲ್ಲಿರುವ ಕಾವ್ಯ ಸಂಕಲನ 'ಪಾಪಚ್ಚಿ ಪದ್ಯಗಳು' ಕೃತಿಯಿಂದ ಆಯ್ದ ಶಿಶುಪದ್ಯಗಳು.

**

ಮೂವರು ಮುದುಕರು
ಹಳ್ಳದಾಚೆ ಕೊಳ್ಳದಲ್ಲಿ ಮೂರು ಮುದುಕರಿದ್ದರು
ಬೆಳ್ಳನೆ ಬೆಳುದಿಂಗಳಲ್ಲಿ ಅವರು ಯಾಕೊ ಎದ್ದರು.

ಮೊದಲ ಮುದುಕ ‘ಚಳಿ’ ಎನ್ನುತ ಮುಗಿಲನೆಳೆದು ಹೊದ್ದನು!
‘ಹಸಿವು, ಹಸಿವು’ ಎನ್ನುತೊಬ್ಬ ಇಡೀ ಬೆಟ್ಟ ಮೆದ್ದನು!

ಮೂರನೇ ಮುದುಕ ಎದ್ದು ‘ನೀರು ಬೇಕು’ ಎಂದನು
ಬೊಗಸೆಯಲ್ಲಿ ಮೊಗೆದು ಮೊಗೆದು, ಇಡೀ ಹಳ್ಳ ಕುಡಿದನು!

ಬೆಳಗಾಯಿತು; ಸೂರ್‍ಯ ಬಂದ: ಆಕಾಶವ ಹುಡುಕಿದ
‘ಅಯ್ಯೋ, ಆಗಸವೆ ಇಲ್ಲ! ಮೂಡಲೆಲ್ಲಿ?’– ಮಿಡುಕಿದ!

ಹಣ್ಣ ಅರಸಿ ತಿನ್ನಲೆಂದು ಹಕ್ಕಿ ಹಾರಿ ಬಂದವು
‘ಬೆಟ್ಟವಿಲ್ಲ, ಮರಗಳಿಲ್ಲ, ಹೊಟ್ಟೆಗೇನು?’– ನೊಂದವು

ಆನೆ, ಸಿಂಹ, ಹುಲಿ, ಜಿಂಕೆ ನೀರು ಕುಡಿಯಬಂದವು
‘ಹಳ್ಳದಲ್ಲಿ ನೀರೆ ಇಲ್ಲ, ಏನು ಗತಿ!’ ಎಂದವು.

ಮೂರು ಮುದುಕರಿದನು ಕಂಡು ತುಂಬ ನೊಂದುಕೊಂಡರು
ತಾವು ಮಾಡಿದಂಥ ತಪ್ಪು ಎಂಥದೆಂದು ಕಂಡರು.

ಮೊದಲ ಮುದುಕ ಮೈಯ ಒದರಿ ಆಕಾಶವ ಎಸೆದನು
ಎರಡನೆಯವ ಬೆಟ್ಟವನ್ನು ಹೊಟ್ಟೆಯಿಂದ ಹಿಸಿದನು

ಮೂರನೇ ಮುದುಕ ಕುಡಿದ ನೀರೆಲ್ಲವ ಉಗುಳಿದ
ತಾ ಮಾಡಿದ ತಪ್ಪಿಗಾಗಿ ಬಹಳ ಬಹಳ ಮರುಗಿದ!

ಬಿಸಿಲು ಕೊಟ್ಟ ಸೂರ್‍ಯ; ಗಾಳಿ ಹಿತವಾಗಿ ಬೀಸಿತು!
ಹೂವರಳಿತು; ಹಕ್ಕಿ ಹಾಡಿ ಮೃಗಸಂಕುಲ ತಣಿಯಿತು!

***


ಒಳಚಿತ್ರದಲ್ಲಿ ಶ್ರೀನಿವಾಸ ಉಡುಪ

ಚೆಂಡಿನ ಅಳಲು
ಯಾಕಪ್ಪಾ ನಂಗಿಂಥಾ ಶಿಕ್ಷೆ ಕೊಟ್ಟೆ ಭಗವಂತಾ?
ಮೂರು ಹೊತ್ತೂ ಒದೆತಾ ಹೊಡೆತಾ ತಿಂತಾ ಇರು ಅಂತಾ!

ಫುಸ್‌ಫುಸ್ ಎಂದು ಗಾಳಿ ತುಂಬಿಸಿ ‘ಫುಟ್‌ಬಾಲ್’ ಅಂತಾರೆ
ಎರ್‍ರಾಬಿರ್‍ರಿ ಒದೆದೂ ಒದೆದೂ ಜೀವಾನೆ ತಿಂತಾರೆ!

ಸುಸ್ತಾಗಿ ನಾ ಮೂಲೆ ಸೇರಿದರೆ ‘ಗೋಲ್, ಗೋಲ್’ ಅಂತಾರೆ
ಮತ್ತಲ್ಲಿಂದ ಹೊರಕ್ಕೆ ಎಳೆದು ಗೋಳು ಹೊಯ್ತಾರೆ!

‘ಕ್ರಿಕೆಟ್’ ಅಂತ ಬ್ಯಾಟಲಿ ನಂಗೆ ಫಟಾರ್ ಬಡೀತಾರೆ
ನೋವು ತಾಳದೆ ದೂರ ಓಡಿದರೆ, ಸಿಳ್ಳೆ ಹೊಡೀತಾರೆ!

ನೆಟ್ಟನು ಕಟ್ಟಿ ಆ ಕಡೆ ಈ ಕಡೆ ತಳ್ಳಿ ಕುಣೀತಾರೆ
ನೆಲದಲ್ಲಿರಿಸಿ ‘ಹಾಕೀ!’ ಎಂದು ದೊಣ್ಣೇಲಿ ಬಡಿತಾರೆ!

ಇಷ್ಟೊಂದ್ ಶಿಕ್ಷೆ ನಂಗೊಬ್ಬನಿಗೇ ಯಾಕೋ ಗೊತ್ತಿಲ್ಲ!
ದೊಡ್ದಾಗಿದ್ರೂ ಚಿಕ್ದಾಗಿದ್ರೂ ನೋವು ತಪ್ಪೋಲ್ಲ!

ಯಾರಿಗೂ ಬೇಡ ಇಂಥಾ ಗೋಳು, ಅಯ್ಯೋ ಭಗವಂತಾ!
ಯಾರು ಹೊಗಳಿದರೋ ನಿನ್ನನು ಭಾಳ ‘ಕರುಣಾಕರ’ ಅಂತಾ?!

***

ಕಪ್ಪೆಯ ಬಯಕೆ
ಊರಿನ ಆಚೆ ಇದೆಯಲ್ಲಪ್ಪ ದೊಡ್ಡ ಸಂತೆ ಮಾಳ - ಅಲ್ಲಿ
ಪೀರ ಗಫೂರ ಹೊಡೆಯುತ್ತಿದ್ದ ಕುದುರೇಗೆ ಲಾಳ.

ಠಣ್ ಠಣ್ ಠಪ್ ಠಪ್ ಎನ್ನುತ್ತಿತ್ತು ಸುತ್ತಿಗೇ ಹೊಡೆತ – ಜೊತೆಗೇ
ಹ್ಞೇ ಹ್ಞೇ ಅಂತಾ ಕೇಳುತ್ತಿತ್ತು ಕುದುರೇ ಕೆನೆತ.

ಧಪ್ ಧಪ್ ಎಂದು ಕುಪ್ಪಳಿಸುತ್ತಾ ಬಂತು ಒಂದು ಕಪ್ಪೆ - ಹಾಗೇ
ಏನಿದು ನಡೆದಿದೆ ಎನ್ನುತ ನೋಡಿತು ಮುಚ್ಚದೆಯೇ ರೆಪ್ಪೆ.

ಕಪ್ಪೆ ಕೇಳಿತು ಹೆದರೀ ಹೆದರೀ ಮಲಗಿದ ಕುದುರೇನ: ‘ಅಯ್ಯೋ
ನೋವಾಗಲ್ಲವೇ ಈ ಹೊಡೆತಕ್ಕೆ ಕೊಂಚವೂ, ಯಜಮಾನ?’

‘ಲಾಳ ಹೊಡೆದರೆ ಕಾಲು ಜಾರದು, ಗೊತ್ತಾ ನನರಾಜಾ? ನೀನೂ
ಹೊಡೆಸಿಕೊಂಡರೆ ಗೊತ್ತಾಗುತ್ತೆ ನಿನಗೂ ಅದರ ಮಜಾ!’

ಪೀರ ಗಫೂರನ ಕೇಳಕೊಂಡಿತು ಕಪ್ಪೆ ಅಂಗಲಾಚಿ: ‘ಅಯ್ಯಾ,
ನನ್ನ ಕಾಲಿಗೂ ಹೊಡೆಯೋ ಲಾಳ’ ಎಂದು ಕಾಲು ಚಾಚಿ.

ಗಫೂರ ಗದರಿದ: ‘ತೊಲಗಿಲ್ಲಿಂದ: ನಿನಗೇತಕೆ ಲಾಳ? ಅಲ್ಲದೆ
ಸುತ್ತಿಗೆ ಏಟಿಗೆ ಸತ್ತೇ ಹೋಗುವಿ, ಗೊತ್ತೇ ಮುಟ್ಠಾಳ!’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.