ಸೋಮವಾರ, ಮಾರ್ಚ್ 27, 2023
32 °C

ಕವಿತೆ: ಬೆಳಕಿನ ಹಾಡುಗಳು

ಲಕ್ಷ್ಮಿ ಮುದೇನೂರು Updated:

ಅಕ್ಷರ ಗಾತ್ರ : | |

Prajavani

ಕತ್ತಲೆಯ ಹಾಡುಗಳನು ಹೇಗೆ ಮರೆಯಲಿ
ಹೇಳು ಓ ಕಾಲವೇ ನೀನು

ಚಂದಿರನ ಅಂಗಳದಲ್ಲಿ ಉಳಿದಿವೆ ಇನ್ನೂ ಆ ಬೆಳ್ಳಿಚುಕ್ಕಿಗಳು
ಹೇಳಬಹುದಲ್ಲವೇ ಬೆಳಕಿನ ಹಾಡುಗಳನು ನಾವೆಲ್ಲಾ

ನನ್ನದೆಯ ಹೊಲದಲ್ಲಿ ಮೂಡಲಿ ಒಲವಿನ ಚಿತ್ತಾರದ ಕನಸುಗಳು
‘ಜಗದಗಲ ಮುಗಿಲಗಲ’

ಪೂರ್ಣ ಚಂದಿರನ ಹಾಡುಗಳನು ಕೇಳಿಸಿಕೊಳ್ಳುತ್ತಿವೆ
ಹಸುಳೆ ಕಂದಮ್ಮಗಳು ತೊದಲು ನುಡಿಯುತ

ಬದುಕಿನ ಆಯತಪ್ಪಿ ಕನಸಿನ ಗರಿಗಳನು ಹುಡುಕುತ್ತಿರುವ ಮೊಗ್ಗು-
ಮನಸುಗಳಿಗಾಗಿ ಹೇಳಬೇಕಿದೆ ನಾವೆಲ್ಲಾ
ಬೆಳಕಿನ ಹಾಡುಗಳನು

ಶುಭಗಳಿಗೆ ಬರುವುದೀಗ ನಿಮಗೆ ಕಷ್ಟಪಟ್ಟು ಮಾಡಿದ ಗಾಳಿಪಟವನ್ನು
ಗಾಳಿಗೆ ಹಾರಿಸಿ ಬಿಡಿ ಸೂತ್ರದ ದಾರ ಹಿಡಿದು
ಮನಸ್ಸು ಹಗುರ, ತಲೆಯೆತ್ತಿ ನೋಡಿಹರು ಜನಸಾಗರ

ಕತ್ತಲೆ ಹಾಡುಗಳನು ಹೇಗೆ ಮರೆಯಲಿ?
ಹೇಳು ಓ ಕಾಲವೇ ನೀನು

ಮನಸ್ಸಿನ ಅಂತರಾಳದಲಿ ಹಸಿಹಸಿಯಾಗಿ ಉಳಿದ
ಒಡೆದ ಬಳೆಯ ಚೂರುಗಳ ನೆನಪನು ಮರೆಯಲಾದೀತೇ
ಕರುಳ ಕುಡಿಯ ನಗು ಮೊಗವ ಕಾಣುವ ಸಲುವಾಗಿ
ಭವಿಷ್ಯತ್ತಿನ ಪ್ರಶ್ನೆಗಾಗಿ
ತೀರದ ನೋವನು ಎದೆಯೊಳಗೇ ಅವಿತಿಟ್ಟು
ಹೇಳುವಳು ತಾಯಿ ನಕ್ಷತ್ರದಾಡುಗಳನು

ಕೂಲಿನಾಲಿ ಮಾಡಿ, ಮಕ್ಕಳ ಲಾಲಿಸಿ ಪಾಲಿಸಿ
ಬದುಕ ತೂಗುಯ್ಯಾಲೆಯಲಿ ಫಲವನು ಉಣುತಿರುವಾಗ
ಕಾಲನ ಬೇಡಿಗೆ ದುಡಿಯುವಂತ ಉಸಿರುಗಳು ಸಿಲುಕಿದಾಗ
ಇಳಿ ವಯಸ್ಸಿನ ಜೀವಿಗಳು ತುತ್ತಿನ ಜೋಳಿಗೆಗಾಗಿ
ಅದೆಷ್ಟು ನೊಂದಿರುವರೋ...

ಓ ಕಾಲವೇ ಹೇಳು ನೀನು
ನೀನು ಹಾಡಿದ ಕತ್ತಲೆ ಹಾಡುಗಳನು ಮರೆಯಲಿ ಹೇಗೆ?

ಭಾವದುಸಿರಿನಾಚೆ ನೊಂದ ಹೃದಯಗಳ ಬಾಗಿಲುಗಳಲ್ಲಿೢ
ಬೆಳದಿಂಗಳ ದೀಪವನ್ನಿಟ್ಟು ಹರಸೋಣ ನಾವೆಲ್ಲಾ
ಬದುಕಿನ ಒಳಿತಿಗಾಗೇ ಹೇಳೋಣ ಬನ್ನಿ ಬೆಳಕಿನ ಹಾಡುಗಳನ್ನು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು