ಶುಕ್ರವಾರ, ಜನವರಿ 27, 2023
21 °C

ಕವನ | ಶಂಕರ್ ಸಿಹಿಮೊಗೆ ಅವರ ‘ದೀಪದ ನೆರಳು’

ಶಂಕರ್ ಸಿಹಿಮೊಗೆ Updated:

ಅಕ್ಷರ ಗಾತ್ರ : | |

Prajavani

ನಾನು‌ 
ಒಂಟಿ ಬೀದಿಯ 
ದೀಪದ ನೆರಳಿನಲ್ಲಿ 
ನಡೆಯುತ್ತಿರುವಾಗ ಅವರನ್ನು ಪ್ರೀತಿಸಿದೆ,
ಇಲ್ಲ ಅವರು ಸುಮಧುರವಾಗಿ 
ಹಾಡುವುದನ್ನು ಕೇಳಿ ಪ್ರೀತಿಸಿದೆ,
ಆದರೆ ಸುಶ್ರಾವ್ಯ ಕಂಠದಲ್ಲಿದ್ದ ಮಮತೆ
ಅವರ ಹೃದಯದಲ್ಲಿರಲಿಲ್ಲ!

ಅವರು ಪದಕ್ಕೆ ಪದ ಕಟ್ಟಿ
ಸಮುದ್ರಕ್ಕೆ ರೆಕ್ಕೆ ಮೂಡಿ ಹಾರಿದಂತೆ
ಬರೆದ ಕವಿತೆಯ ಕಂಡು ಬೆರಗಾದೆ!
ಆದರೆ ಅಕ್ಷರದಲ್ಲಿದ್ದ ರೂಪಕ 
ಅವರ ಮನಸ್ಸಿನಲ್ಲಿರಲಿಲ್ಲ!

ಅವರು ಗೆರೆಗೆ ಗೆರೆ ತಾಕಿಸಿ ಇಳಿಸಿ ಏರಿಸಿ 
ಬಿಡಿಸಿದ ಚಿತ್ರಗಳ ಕಂಡು 
ಬಣ್ಣಗಳ ವಾಸನೆ ಹೀರುತ್ತಾ ತಬ್ಬಿ ಮುದ್ದಾಡಿದೆ!
ಆದರೆ ರೇಖೆಗಳಲ್ಲಿದ್ದ ಸೊಬಗು 
ಅವರ ಆಂತರ್ಯದಲ್ಲಿ ಕಾಣಲಿಲ್ಲ!

ಅವರು ಶಿಲೆಯನ್ನು ಉಳಿಯಿಂದ ಕೆತ್ತಿ
ರಂಭೆ ಊರ್ವಶಿ ಮೇನಕೆಯ ವೈಯಾರದ 
ಮೈಮಾಟವ ಕಲ್ಲೊಳಗೆ ತುಂಬುವುದ
ಕಂಡು ನಿಬ್ಬೆರಗಾಗಿ ನಿಂತೆ!
ಆದರೆ ಶಿಲೆಯಲ್ಲಿದ್ದ ಶಿಲಾಲತೆಯ ಸೌಂದರ್ಯ 
ಅವರ ಮಾತಿನಲ್ಲಿರಲಿಲ್ಲ!
 
ಅವರ ಹಾಡಿಗೆ ಮತ್ತು ಕವಿತೆಗೆ 
ಯಾವುದಾದರು ಸರಿ
ಕೇಳುವ ಕಿವಿ ಮಾತ್ರ ಬೇಕಿತ್ತು!
ಅವರ ಚಿತ್ರಕ್ಕೆ ಮತ್ತು ಶಿಲ್ಪಕ್ಕೆ
ಯಾರದ್ದಾದರು ಸರಿ
ನೋಡುವ ಕಣ್ಣು ಮಿಟುಕಿದರೆ ಸಾಕಿತ್ತು!
ಲೋಕ ಕಂಡಂತೆ
ಅವರು ಅಲ್ಲಿ ಗಾಯಕರಾಗಿದ್ದರು, 
ಕವಿಗಳಾಗಿದ್ದರು
ಕಲಾವಿದರಾಗಿದ್ದರು ಮತ್ತು
ಶಿಲ್ಪಿಗಳಾಗಿದ್ದರು!
ಆದರೆ ಅವರು
ಸಾಮಾನ್ಯ ಮನುಷ್ಯರಾಗಿರಲಿಲ್ಲ ಅಷ್ಟೇ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.