ಭಾನುವಾರ, ಜೂನ್ 26, 2022
21 °C

ಕವನ | ಧರೆಗೆ ದೊರೆ ಬೆಂಕಿ ಹಚ್ಚುವ ಮುನ್ನ ಬಾ

ಡಾ.ನೆಲ್ಲುಕುಂಟೆ ವೆಂಕಟೇಶ್ Updated:

ಅಕ್ಷರ ಗಾತ್ರ : | |

Prajavani

ಸಖನೆ
ಪ್ರಾಣಸುಖನೆ
ಒಡಲ ದಂಡಿಗೆಯ ನುಡಿಸಿ
ಜಲ ಜಲನೆ ಮಾಗಿಸಿ
ಕೋಟಿ ಮಿಂಚು
ಲಕ್ಷ ನದಿಗಳ ಜನಕ ಜಾತಕನೆ

ಮಣ್ಣ ಕಾಯವ ಬೆಣ್ಣೆ ಮಾಡಿ
ಹುಚ್ಚು ಕುದುರೆಯ
ಜೀನು ಬಿಚ್ಚಿ
ಮುಳುಗಿ ಮುಳುಗಿಸಿ
ಮರಳಿ ಮರಳಿಸಿ
ಜೇನ ಕಡಲಿಗೆ ನಾಲಿಗೆ ತಾಗಿಸಿ
ಹೊಕ್ಕುಳಾಳವ ಕಡಲ ತೂಫಾನಾಗಿಸಿ
ತೋಳ ತಬ್ಬಿ
ಝಲ್ಲನೆ ಕರಗಿಸಿ
ತೊಟ್ಟಿಕ್ಕಿಸುವ ಮಾಯಕಾರನೆ

ಬಾಳು ಬಿಸಿಲಿಗೆ ಸಿಕ್ಕಿ
ಮರಳಾದ ಎದೆ
ಒಡಲ ತಿರುಗಣಿಗಳೆಲ್ಲ
ಜಡ ಹಾವಿನ ಜೋಂಪು
ನೋಂಪಿ‌ ಮುರಿಯಲೆ ಬೇಕು
ಕಲ್ಲು ದೀಕ್ಷೆ ಬಿಡಲು!

ಶ್ಯಾಮನೊಂದಿಗೆ ಸಂವಾದ ಮಾಡಿ
ಶಿವನ ಸಂಗವ ಮಾಡಿ
ಅಮೃತ ಸೋಪಾನ ಕಟ್ಟಿದ ಮಾಯಕಾರನೆ!

ಕ್ರೂರ ಕಾಲನ ಮುಂದಲೆಯ ಹಿಡಿದು
ತಿರುಗಿಸಿ ಹದಿನೆಂಟು ಮೈಲಿ ಕಡೆ
ಮಲ್ಲಿಗೆ ನೆಟ್ಟು
ಮಾವು ಮೋಹದ ಜುಟ್ಟು
ಗಿಳಿ ಕೋಗಿಲೆ ಗಾನ ಬೆರೆಸಿ
ನಿತ್ಯ
ಉಗಾದಿಯ
ತೋರಣದ ಜತೆಗಾರನೆ

ಸಾಕು ಮಾಡಯ್ಯ ನೀನು
ಕನಸಿನ ದಾಳಿ!

ಬಾ ಒಮ್ಮೆ
ನಿಜದ ಕಾಯವ ತಬ್ಬು
ಹರಿವ ಕಾಯ ನಿತ್ಯ ನೂತನವೆ
ಮೈಯಿಗೆಲ್ಲಿದೆ ಮೈಲಿಗೆ ಮಿತ್ರನೆ?
ಕೋರೈಸುವ ಆತ್ಮ ಮಂಟಪದ ಶಿಖರ ಸೂರ್ಯನೆ

ತಬ್ಬಬೇಕು ನಿಜದಲ್ಲಿ ನಾನೂ
ಜಲ್ಲ ಜಲ್ಲನೆ ಕರಗಿ
ಗಂಗೆಯಾಗಬೇಕು
ಆತ್ಮಕ್ಕೆ ಬೆದೆ ಬಂದಿದೆ ಬಾರಯ್ಯ ಬಾ
ನನ್ನ ಕಾಲದ ಮಲ್ಲಿಕಾರ್ಜುನ!

ಬಾ
ಕುಣಿ
ಇನ್ನೂ ಕುಣಿ
ಬ್ರಹ್ಮ ವಿಷ್ಣುಗಳ ಪೀಠ
ಥರಗುಟ್ಟುವಂತೆ ಕುಣಿ
ಥೈಯಗಟ್ಟಿ ತಾಕಿಸಿ ಬೆರಳು
ತಿದಿ ಒತ್ತಿ ಬಿಸಿ ಉಸಿರು
ಆವಿ ಮೋಡಗಳ ಬೆವರು
ಮಂಜು ಬೆಟ್ಟದ ಎದೆಯೊಳಗೆ ರೋಮಾಂಚನ
ಹುಟ್ಟಿ
ಇಷ್ಟಿಷ್ಟೆ ತೊಟ್ಟಿಕ್ಕಿ
ಕಡಲಂತೆ ಹರಿವ ಗಂಗೆಯಾಗಬೇಕು

ಲೋಕದ ಪಾತಕ ಕಳೆವುದಕ್ಕೊಂದೆ ದಾರಿ
ಕೂಡಬೇಕು
ಕಳೆಯದಂತೆ ಕೂಡಬೇಕು

ತಡ ಬೇಡ
ಬೇಗ ಬಾ
ಧರೆಗೆ ಬೆಂಕಿ ಹಚ್ಚುತ್ತಿದ್ದಾನೆ ದೊರೆ
ಇದ್ದಿಲಾಗುವ ಮುನ್ನ ಬಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು