ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ್ ಸೊರಟೂರು ಬರೆದ ಕವನ: ಗಾಯಗೊಂಡ ಸಾಲುಗಳು..

Last Updated 26 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಮೊದಲ ಸಾಲಿನ ಎದೆಗೆ
ಷೆಲ್‌ಗಳನ್ನು ನುಗ್ಗಿಸಲಾಗಿದೆ
ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿ
ಕೊಂಬು ದೀರ್ಘ ಒತ್ತಾಕ್ಷರ ಸುಳಿ
ಮುರಿದುಕೊಂಡು ಬಿದ್ದು
ಪದಗಳ ಒದ್ದಾಟ ಕರುಣಾಜನಕ

ಮುಂದಿನ ಸಾಲು ಹೆದರದೆ ಪೇರಿ
ಕೀಳಲಿಲ್ಲ
ಎದೆ ಸೆಟಿಸಿ ನಿಂತಿದೆ
ಏನಾಗಬಹುದು ಬಹಳ ಮಾಡಿ
ಯಃಕಶ್ಚಿತ ಒಂದು ಸಾವು?

ಜತೆಗಾರ ಮೊದಲ ಸಾಲೇ
ಇಲ್ಲವಾಗಿರುವಾಗ ತಾನಾದ್ರೂ ಏಕೆ?
ಮಡಿಯುವುದಾದರೆ ಮಾಡಿಯೇ
ಮಡಿಯುತ್ತೇನೆ ಅಂದುಕೊಂಡು
ಮತ್ತಷ್ಟು ಎದೆ ಸೆಟಿಸುತ್ತದೆ

ಕೊಲ್ಲುವವನ ಕಣ್ಣಲ್ಲಿ‌ ಕಣ್ಣಿಟ್ಟು
ಮುಂದಿನ ಒಂದು ಸಾಲನ್ನಾದರೂ
ಅವನ ಎದೆಗಿಳಿಸುವ ಹಟದಲ್ಲಿದೆ
ಕವಿತೆ

ಶೀರ್ಷಿಕೆಯ ಪರದಾಟ
ಕಣ್ಣಲ್ಲಿ‌ ಹನಿ ಹುಟ್ಟಿಸುತ್ತಿದೆ
ಗಾಯಗೊಂಡ ಸಾಲುಗಳನು
ಎಬ್ಬಿಸಿ ಮದ್ದು ಬಳಿದು
ಬ್ಯಾಂಡೇಜ್ ನೇಯುತ್ತಿದೆ

ಕೊಲ್ಲುವವನ ಕಣ್ಣುಗಳಲ್ಲಿ
ಬರೀ ಯಾರದು ಆಜ್ಞೆ ಕಾಣುತ್ತಿದೆ
ಕವನ ಒಂದು ಸಾಲಾದರೂ
ಇರಬಾರದೆತ್ತೆ ಎದೆಯೊಳಗೆ ಟ್ರಿಗರ್ರ್ ಒತ್ತುವ
ಕೈಗಳನ್ನಾದರೂ ನಡುಗಿಸಲು?

ಕವಿತೆಯ ಕೊನೆಯ ಸಾಲು
ತೀರ ತೀರ ಎಳೆಯ ಪೋರ
ಬಾಂಬುಗಳನ್ನು ಲಡ್ಡುಗಳೆಂದು,
ಕಾಡತೂಸುಗಳನು
ಲಗೋರಿಯ ಬಿಲ್ಲೆಗಳೆಂದು‌
ತಿನ್ನುತ್ತಾ ಆಡುತ್ತಾ ಮೈ ಮರೆತಿದೆ..

ಎದೆಯೊಡ್ಡಿದ ಸಾಲುಗಳೆಲ್ಲ
ಅರೆಗಣ್ಣು ಮಾಡಿ
ಜೀವ ಚೆಲ್ಲಿರುವಾಗ, ಕವಿತೆಯ
ಹೃದಯ ಆಚೆ ಬಂದು
ರಕ್ತದ ಮಡುವಿನಲ್ಲಿ‌ ಈಜುತ್ತಿದೆ..

ಖೂನಿಯಾದ ಸಾಲುಗಳನು
ಓದಿ ಓದಿ
ನಿಮ್ಮ ತುಟಿಗಳಿಗೂ
ರಕ್ತ ಮೆತ್ತಿಕೊಂಡಿತೇನೊ!
ಆ್ಞಂ, ಒಮ್ಮೆ ಮುಟ್ಟಿನೊಡಿಕೊಳ್ಳಿ..

ಯುದ್ಧ‌ ಮತ್ತು ರಕ್ತ ಸಾಂಕ್ರಾಮಿಕ
ಎಲ್ಲಿಂದ ಎಲ್ಲಿಗೆ ಬೇಕಾದರೂ
ತಲುಪಬಹುದು..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT