ಬುಧವಾರ, ಫೆಬ್ರವರಿ 1, 2023
16 °C

ಕವನ | ನಾವೇ ವಾಲುತ್ತೇವೆ

ಚಂ.ಸು.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಸೂರ್ಯ
ಪಥ ಬದಲಿಸುವುದಿಲ್ಲ ನಮ್ಮಂತೆ!
ಅವಕಾಶ ಸಿಕ್ಕಾಗಲೆಲ್ಲ ನಾವೇ ವಾಲುತ್ತೇವೆ..
ಭೂಮಿಯಂತೆ!

ಈ ಪಕ್ಷದಿಂದ ಆ ಪಕ್ಷಕ್ಕೆ
ಆ ಪಕ್ಷದಿಂದ ಈ ಪಕ್ಷಕ್ಕೆ
ಎಡಕ್ಕೆ, ಬಲಕ್ಕೆ ಮತ್ತೊಮ್ಮೆ
ಎಡವೋ ಬಲವೋ ಒಂದೂ ತಿಳಿಯದೇ
ಸರ್ರನೇ ಸರಿದು, ಭರ್ರನೆ ಬಾಗಿ
ಜರ್ರನೇ ಜರಿದು
ಎಡಬಿಡಂಗಿಗಳಾಗುತ್ತೇವೆ!

ಸೂರ್ಯ
ಪಥ ಬದಲಿಸುವುದಿಲ್ಲ ನಮ್ಮಂತೆ
ಅಗತ್ಯ ಬಿದ್ದರೆ ನಾವೇ ವಾಲುತ್ತೇವೆ...
ಭೂಮಿಯಂತೆ!

ಭೂಮಿ ವಾಲುವುದೂ ನಿಜ!
ತನ್ನ ಸುತ್ತ ತಾನೇ ತಿರುಗುವ
ಲಯ ಕಂಡುಕೊಳ್ಳುವುದಕ್ಕೆ,
ಗುರುತ್ವದ ಸಮತೋಲನ
ಸಾಧಿಸುವುದಕ್ಕೆ!
ನಾವೂ ವಾಲುತ್ತೇವೆ...
ಪದವಿ ಪರಮಾಧಿಕಾರದ ಮೋಹಕ್ಕೆ
ಪ್ರತಿಷ್ಠೆ, ಪುರಸ್ಕಾರದ ಲೋಭಕ್ಕೆ
ಆಯ ತಪ್ಪಿ ಬಿದ್ದರೂ
ಜಯ ಸಾಧಿಸಿದೆವೆಂದು ಬೀಗುವುದಕ್ಕೆ!
ಇರುಳು ಕಂಡ ಬಾವಿಗೆ
ಹಗಲೇ ಬೀಳುತ್ತೇವೆ!

ಸೂರ್ಯ ಪಥ
ಬದಲಿಸುವುದಿಲ್ಲ ನಮ್ಮಂತೆ
ನಮ್ಮಂತೆ ಭರವಸೆ ಭಾಷಣ ಬಿಗಿದು
ತೊಡೆ ತಟ್ಟಿ, ಎದೆ ಮುಟ್ಟಿ
ಶಪಥಗೈಯ್ಯುವುದಿಲ್ಲ...
ಪಥ ಭ್ರಷ್ಟರ ಕಂಡು ನಗುತ್ತಾನೆ!

ಸಂಕ್ರಾಂತಿಯ ಶುಭಾಶಯಗಳನೆಲ್ಲ
ಭೂತಾಯಿಗಿತ್ತು ನಮಿಸುತ್ತಾನೆ...

ಅವಳ ಕಂಬನಿಗಳನ್ನು
ಆಕೆಯ ಚೊಚ್ಚಿಲು ಮಕ್ಕಳ
ಕಂಗಳಲ್ಲಿ ಕಂಡು

ಈ ಕ್ರೌರ್ಯಕೆ
ಕೊನೆಯೆಂದೋ...

ಎಂದು
ನಿಡುಸುಯ್ಯುತ್ತಾನೆ!
ಸೂರ್ಯ
ಪಥ ಬದಲಿಸುವುದಿಲ್ಲ,
ನಾವೇ ವಾಲುತ್ತೇವೆ..

ಭೂಮಿಯಂತೆ...
ವಾಲಿದರೂ
ಭೂಮಿಯಂತಾಗದೇ
ಉರಿದು ಉದುರಿ ಬೀಳುತ್ತೇವೆ...
ಉಲ್ಕೆಯಂತೆ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.