ಮಂಗಳವಾರ, ಮಾರ್ಚ್ 9, 2021
30 °C

ಯೋಧರಿಗೆ ಹಳೇ ವಿಮಾನ, ‘ಬಾಬು’ಗೆ ಬೆಣ್ಣೆ: ಸೋದರನ ಸಾವು ನೆನೆದು ಬರೆದ ಪತ್ರ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಎಚ್‌ಎಎಲ್‌ ಆವರಣದಲ್ಲಿ ಈಚೆಗೆ ಸಂಭವಿಸಿದ ‘ಮಿರಾಜ್ 2000’ ಯುದ್ಧವಿಮಾನ ದುರಂತದಲ್ಲಿ ಮೃತಪಟ್ಟ ವಾಯುಪಡೆಯ ಅಧಿಕಾರಿ ಸ್ಕ್ವಾರ್ಡನ್ ಲೀಡರ್ ಸಮೀರ್ ಅಬ್ರೋಲ್ ಅವರ ಶವಪೆಟ್ಟಿಗೆಯನ್ನು ಹೊತ್ತಿದ್ದ ವಿಮಾನದಲ್ಲಿಯೇ ಬರೆದ ಪದ್ಯವೊಂದು ಇದೀಗ ದೇಶದ ಗಮನ ಸೆಳೆದಿದೆ.

‘ಸೋದರನ ಶವಪೆಟ್ಟಿಗೆಯನ್ನು ನೋಡುತ್ತಿದ್ದೆ. ಕಣ್ಣು ಮಂಜಾಯಿತು. ಒಮ್ಮೆ ಕತ್ತೆತ್ತಿ ಸುತ್ತ ನೋಡಿದೆ. ವಾಯುಪಡೆಯ ಸಿಬ್ಬಂದಿ ಕಣ್ಣೀರಿಡುತ್ತಿದ್ದರು. ನನ್ನ ಭಾವಕೋಶ ಒಡೆದು ಪದ್ಯವಾಗಿ ಹರಿಯಿತು’ ಎಂದು ಮೃತ ಸಮೀರ್ ಅವರ ಸೋದರ ಸುಶಾಂತ್‌ ಐಎಎನ್‌ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಾವಿರ ಜನರ ಪ್ರಾಣ ಉಳಿಸಲು ಇವರಿಬ್ಬರು ಹುತಾತ್ಮರಾದರು

‘ಪರಿಸ್ಥಿತಿ ಸುಧಾರಿಸಬೇಕು. ಯೋಧರಿಗೆ ನೀಡುವ ಜೀವರಕ್ಷಕ ಸಲಕರಣೆಗಳು ಗುಣಮಟ್ಟ ಹೆಚ್ಚಾಗಬೇಕು. ಇಲ್ಲದಿದ್ದರೆ ನಮ್ಮ ಕುಟುಂಬದ ಸರ್ವಸ್ವವೂ ಆಗಿದ್ದ ಸೋದರನನ್ನು ಮಲಗಿಸಿರುವ ಇಂಥದ್ದೇ ಶವಪೆಟ್ಟಿಗೆಯಲ್ಲಿ ಇನ್ನಷ್ಟು ಯೋಧರು ಮಲಗುವ ಸ್ಥಿತಿ ಒದಗೀತು’ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

‘ಒಂದೆಡೆ ಅಧಿಕಾರಶಾಹಿ ತಮ್ಮ ಭ್ರಷ್ಟ ಬೆಣ್ಣೆ ಮತ್ತು ಮದ್ಯ ಸವಿಯುತ್ತಿದ್ದರೆ, ಮತ್ತೊಂದೆಡೆ ನಮ್ಮ ಯೋಧರು ಹಳೇ ಸಲಕರಣೆ ಹೊತ್ತು ಹೋರಾಡಲು ಓಡುತ್ತಿದ್ದಾರೆ, ಸಲಕರಣೆ ಹಳೆಯದಾದರೇನು ಕೆಚ್ಚು ಹರಿತವಾಗಿದೆಯಲ್ಲಾ’ ಎಂದು ಸೈನಿಕ ಉಪಕರಣಗಳಲ್ಲಿಯೂ ಭ್ರಷ್ಟಾಚಾರ ಎಸಗುವ ಭ್ರಷ್ಟರಿಗೆ ಪದ್ಯದಲ್ಲಿಯೇ ಚಾಟಿ ಬೀಸಿದ್ದಾರೆ. ಹುತಾತ್ಮ ಯೋಧನ ಪತ್ನಿ ಗರೀಮಾ ಈ ಪದ್ಯವನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಮಾನ ದುರಂತ; ಪೈಲಟ್‌ಗಳ ದುರ್ಮರಣ

ತಮ್ಮ ಇನ್ನೊಂದು ಪೋಸ್ಟ್‌ನಲ್ಲಿ ಸುಶಾಂತ್, ‘ಕೇವಲ ಮತಗಳ ಬಗ್ಗೆ ಮಾತ್ರವೇ ಅಲ್ಲ, ಭ್ರಷ್ಟ ವ್ಯವಸ್ಥೆಗೆ ಬಲಿಯಾದ ನಮ್ಮ ದೇಶದ ಹುತಾತ್ಮ ಯೋಧರ ಬಗ್ಗೆ ಗಮನ ನೀಡಲು ಇದು ಸಕಾಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದುರಂತಕ್ಕೀಡಾದ ವಿಮಾನದ ಬ್ಲ್ಯಾಕ್‌ಬಾಕ್ಸ್‌ ವಶಕ್ಕೆ

ಪದ್ಯದ ಭಾವಾನುವಾದ ಹೀಗಿದೆ...

ಅವನು ಆಕಾಶದಿಂದಲೇ ಭೂಮಿಗೆ ಬಿದ್ದ,

ಮೂಳೆ ಮುರಿದಿತ್ತು; ಸಿಕ್ಕಿದ್ದು ಒಂದು ಕಪ್ಪುಪೆಟ್ಟಿಗೆ ಮಾತ್ರ.

ವಿಮಾನದಿಂದ ಹೊರಗೆ ಸುರಕ್ಷಿತವಾಗಿ ಹೊರಗೇನೋ ಬಂದ, ಆದರೆ ಪ್ಯಾರಾಚೂಟ್‌ಗೆ ಬೆಂಕಿ ಹೊತ್ತಿಕೊಂಡಿತ್ತು,

ನಮ್ಮ ಕುಟುಂಬ– ಅವನು ಇಷ್ಟಪಟ್ಟಿದ್ದೆಲ್ಲವೂ ಅಲುಗಾಡಿಹೋಯ್ತು.

ಅವನ ಕೊನೆಯುಸಿರು ಅಷ್ಟು ದೀರ್ಘವಾಗಿತ್ತು,

ಇತ್ತ ಅಧಿಕಾರಶಾಹಿ ಭ್ರಷ್ಟ ಬೆಣ್ಣೆಯನ್ನು ಮದ್ಯದಲ್ಲಿ ನಂಚಿಕೊಂಡು ಖುಷಿಪಡುತ್ತಿದ್ದರು

ನನ್ನ ಯೋಧರಿಗೆ ಕೆಲಸಕ್ಕೆ ಬಾರದ ಸಲಕರಣೆಕೊಟ್ಟು ಯುದ್ಧಕ್ಕೆ ಕಳಿಸ್ತಾ ಇದ್ದೇವೆ

ಆದರೂ ಅವರ ಕೆಚ್ಚು, ಕೌಶಲದಿಂದ ಗೆದ್ದು ಬರುತ್ತಿದ್ದಾರೆ.

ಹುತಾತ್ಮನೊಬ್ಬನನ್ನು ಮತ್ತೊಮ್ಮೆ ಕೊಂದಿದ್ದೇವೆ

ಆಕಾಶದಿಂದ ಜಾರಿದ ಅವನು ನೆಲದ ಮೇಲೆ ಬಿದ್ದಿದ್ದಾರೆ

ಕ್ಷಮಿಸದಿರುವುದು ಟೆಸ್ಟ್‌ ಪೈಲಟ್‌ನ ಕೆಲಸ

ಬೇರೆಯವರಿಗೆ ಬೆಳಕು ತೋರಲು ಬತ್ತಿ ತಾನೇ ಉರಿಯುವುದು ಅಗತ್ಯ

ಓ ಸೋದರ ನೀನು ನನ್ನ ಹೆಮ್ಮೆ

ನೀನು ಸದಾ ಹಾರುತಿರು...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು