ಸೋಮವಾರ, ಜೂನ್ 21, 2021
30 °C

ಕವಿತೆ| ಎದೆಯ ಸೀಳಿದರೆ

ಪಿ.ಬಿ. ಪ್ರಸನ್ನ Updated:

ಅಕ್ಷರ ಗಾತ್ರ : | |

Prajavani

ನಿಜ
ನಿಮ್ಮೆದೆಯ ಸೀಳಿದರೆ
ಪುತಪುತನೆ ಹೊಮ್ಮುವುವು
ಶತಮಾನಗಳಿಂದ ಹುಗಿದಿಟ್ಟ
ಬಣ್ಣ ಬಣ್ಣದ ಅಕ್ಷರ

ಯಾರೂ ತಿಳಿಯಬಾರದೆಂದು
ನಿಮ್ಮೊಳಗೆ ನೀವೇ ಆಡಿಕೊಂಡಿರಿ
ತಿಳಿವ ತಿಳಿಯದೇ ನಾವು ಮೂಕರಾದಾಗ
ನಿಮ್ಮದೇ ಸನ್ನೆಯಲಿ ಮಕ್ಕಾರು ಮಾಡಿದಿರಿ

ನಿಮ್ಮ ಒಂದೊಂದು ಹೂಂಕಾರಕ್ಕೂ
ಬಾಜಾ ಬಜಂತ್ರಿ ಚೆಂಡೆ ಮದ್ದಳೆ ಅಬ್ಬರ
ಆಗಾಗ ನೂರು ನೂರು ದಿಗಿಣ
ಭಕ್ತಗಣ ಮೇಳ ತನ್ಮಯದಿ ಭಜಿಸುವಾಗ
ನಿಮ್ಮೆದೆಯ ಅಕ್ಕರವ ನೀವು
ಉಚ್ಚರಿಸಿದಿರೋ ಬಿಟ್ಟಿರೋ
ಅಂತೂ ತುಟಿಯ ಅಲುಗಿಸಿದಿರಿ

ಹೊಸಿಲಾಚೆ ಗುಡಿಯಾಚೆ ಊರಾಚೆ
ನಿಂತ ನಾವು
ನೀವು ತುಟಿ ಅಲುಗಿಸಿದ್ದನ್ನೇ ಕರುಣೆಯೆಂದರಿತಿದ್ದೆವು

ಎದೆಯಿಂದ ಹೊರಬಿದ್ದ
ಅಕ್ಕರಗಳಿಗೆ ರೂಪ ರಸ ಗಂಧ ನೀಡಿ
ಹೊನ್ನ ಸಂದೂಕದಲಿ ಕಾಪಿಟ್ಟು
ತಲೆಮಾರುಗಳಿಗೆ ನೀಡಿದಿರಿ

2

ನೀವು ಅಂದದ್ದು
ಅಪ್ಪಂತ ಮಾತು
ನಮ್ಮೆದೆಯ ಸೀಳಿದರೆ
ಒಂದೇ ಒಂದು ಅಕ್ಕರವಿಲ್ಲ

ಎಲ್ಲ ಕಲಸು ಮೇಲೋಗರಗೊಳಿಸುವ
ಬ್ರಹ್ಮ ವಿದ್ಯೆಯು ಇಲ್ಲ
ಶಬ್ದ ಅರ್ಥ ಸಂಕೇತಗಳ
ಕಗ್ಗ ಹೊಸೆದವರಲ್ಲ

ಎಲ್ಲರೊಡನೊಂದಾಗಿ ಎಲ್ಲರಿಗೆ ದನಿಯಾಗಿ
ಎದೆಯೊಳಗೆ ಹಾಡ ಹೊತ್ತವರು
ನಮ್ಮೆದೆಯ ಸೀಳಿದರೆ
ಹೊಮ್ಮುವುದು ಹಾಲಾಹಲವಲ್ಲ
ಹಾಲು ಜೇನಿನಂತಿರುವ ಹಾಡು
 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.