ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆ ಮೇಲಿನ ಕತೆ ಮುಗಿದ ಮೇಲೆ ಮನದೊಳಗಿನ ಕತೆ ಏಳುವುದಲ್ಲ; ಅದು ಮುಗಿವುದು ಹೇಗೊ?

Last Updated 21 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು
ಈಗ ಅದು ಹೇಳದೆಯೂ ಮುಗಿಸುವುದನ್ನು ಕಲಿತಿರುವರು
ಇರಲಿ, ತೆರೆಯ ಮೇಲಿನ ಕತೆ ಮುಗಿದೊಡನೆ
ಮನದೊಳಗಿನ ಕತೆ ಏಳುವುದಲ್ಲ
ಅದು ಮುಗಿವುದು ಹೇಗೊ

ಎದುರು ಬದುರು ನಿಂತ ಅವರಿಬ್ಬರು ಮದುವೆಯಾದರೋ
ಬೇರೆಯಾಗದೆ ಬಾಳಿದರೋ ಮಕ್ಕಳಾದರೋ
ಕಣ್ಣು ಹಾಕಿದ್ದ ಗೆಳೆಯ ಆಮೇಲೆ ಸುಮ್ಮನಿದ್ದನೋ
ಕ್ಷಮೆ ಕೇಳಿದ ಕೇಡಿಗಳು ಮತ್ತೆ ಗನ್ನು ಹಿಡಿದಲ್ಲಿ
ನಿಟಿಕೆ ಮುರಿದ ಚಿಕ್ಕಮ್ಮ ಮತ್ತೆ ಹುಳಿ ಹಿಂಡಿದಲ್ಲಿ

ಹೀಗೆ ಮುಗಿದ ಮೇಲೂ ಇರುವ ಕತೆಯ ಸುಳಿವು ಬಿಚ್ಚಿಟ್ಟಿದ್ದೇ ತಡ
ಮುಂದೇನಾಯಿತು ಎಂದು ಅನೇಕರು
ಮುಗಿಸಿದ ಕತೆಗಳಿಗೆಲ್ಲ ಜೀವ ಕೊಟ್ಟು ಕೊಟ್ಟು
ಟೈಟಾನಿಕ್ ಹಡಗು ಮತ್ತೆ ಮೇಲೆದ್ದು
ರಾಮಾಚಾರಿ ಮಕ್ಕಳು ತ್ರೀ ಈಡಿಯಟ್ಸ್‌ಗಳಾಗಿ
ಫಣಿಯಮ್ಮನ ಮರಿಮಕ್ಕಳೇ ಕಿರಗೂರಿನ ಗಯ್ಯಾಳಿಗಳಾಗಿ

ಮುಗಿಯುತ್ತಲೇ ಇಲ್ಲ ಮುಗಿಯುವುದೂ ಇಲ್ಲ
ಕತೆಗೆ ನೂರು ಕತೆ ಹುಟ್ಟಿ ಕಾಬೂಲಿವಾಲ ಇಲ್ಲೇ ಸಂಸಾರ ಹೂಡಿ
ಅಡಗೂಲಜ್ಜಿ ಗುಳೆ ಹೋಗಿ
ಕರಟಕ ದಮನಕ ವಂಶಾವಳಿ ಬೆಳೆದು
ಎಷ್ಟು ಚಂದ ಅನ್ನುವಲ್ಲಿ ಇಲ್ಲೀ ಕತೆ ಕಾಶ್ಮೀರಕ್ಕೆ ಹೋಗಿ
ಹಿಂದಿ ಕತೆ ಬೆಂಗಾಲಿಯಾಗಿ ಅಸ್ಸಾಮಿ ಮಲೆಯಾಳಾಗಿ
ಪಾತ್ರಗಳು ಹರಡಿ ಹಂಚಿ ಹೆಣೆದು ಒಂದಾಗಿ ಬೇರೆಯಾಗಿ
ಎಡವಾಗಿ ಬಲವಾಗಿ ಮಧ್ಯಮವಾಗಿ
ಎಲ್ಲವೂ ಮೀರಿ ಅವರೂ ಅವರ ಮೀರಿ

***

ಆಯಾ ಕತೆ ಅಲ್ಲೇ ಮುಗಿಸಬೇಕಂತೆ
ಪಾತ್ರ ಮುಗಿದ ಮೇಲೂ ಅದೇ ಆಗಿರಬೇಕಂತೆ
ಇಲ್ಲಿ ಸಂಭವಿಸಬೇಕು ಇಲ್ಲಾ ಅಲ್ಲಿ ಸಂಭವಿಸಬೇಕು
ಶುರುವಾದ ದನಿ ಬೆಳೆಬೆಳೆದು ಏರಿ ಒಂದೇ ಸಮ
ಮುಟ್ಟಲಾಗದು ಯಾರು ಯಾರನ್ನೂ ಅಪ್ಪಣೆಯಿಲ್ಲದೆ

ಈಗ ಪಾತ್ರಗಳನ್ನು ವಾಪಸು ಕಳಿಸುವ ಕೆಲಸ
ತೆಕ್ಕೆಗೆ ಬಿದ್ದವರನ್ನು ದೂಡಿ ಎಷ್ಟು ಗಡಿ ದಾಟಿಸುವುದು
ಪ್ರತಿ ಗಡಿಗೂ ನಾಕು ಗಡಿ
ಕಟ್ಟಿಕೊಂಡಿದ್ದನ್ನು ಕಳಚುವ ಪಾತ್ರ
ಎಂಬ ಪಾತ್ರದಲ್ಲಿ ಯಾರನ್ನು ಕೇಳಬೇಕೋ
ಒಪ್ಪಿಸಬೇಕೋ ಎಂದು ಒಪ್ಪಿತವಾಗದಿರುವಲ್ಲಿ
ಮನೆಯೊಂದು ಮೂರು ಬಾಗಿಲು
ತೆಗೆದು ಹಾಕಿ ಹಾಕಿ ತೆಗೆದು ಸಾಕಾಗಿ
ಕತೆಯೇ ಬೇಡ ಎನ್ನುವಲ್ಲಿ
ನಮ್ಮ ಕತೆಯೆಂತಲೂ ಒಂದಿರುವುದಲ್ಲ

ಮುಗಿದ ಕತೆಯಿಂದ ಬಂದುದೋ
ಇರುವ ಕತೆಯಿಂದ ಹೋದುದೋ
ನನ್ನ ಪಾತ್ರ ನನ್ನ ಹುಡುಕುವ ಮೊದಲು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT