ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ಬಾಬ ಸಾಹೇಬರು ನೆಟ್ಟ ಮರ

Last Updated 24 ಅಕ್ಟೋಬರ್ 2020, 19:49 IST
ಅಕ್ಷರ ಗಾತ್ರ

ಹಿಂದೊಮ್ಮೆ ರಣಗುಡುವ ಬಿಸಿಲು
ಬಾಯಾರಿದರೂ ಬಾಯ್ತೆರೆಯಲಾಗದೆ,
ಇಷ್ಟೊಂದು ಜನರ ಸುಡು ಬಿಸಿಲಲಿಟ್ಟು
ನೀರು, ನೆಳಲುಗಳ ತಮಗೆ ಮಾತ್ರವೆಂದು
ಗೆರೆ ಎಳೆದು ಕೂತ ಸಣ್ಣತನದ ಜನರ
ಮಣಿಸಲಾಗದೆ, ಮಾತು ಮರೆತವರು
ಹಣೆಬರಹಕೆ ದೇವರ ಶಪಿಸತ್ತಿದ್ದರು…

ಅದೇ ಉರಿ ಬಿಸಿಲಲ್ಲೇ ಬೆಂದು, ಬಸವಳಿದು
ನೋವುಂಡರೂ ಅದೃಷ್ಟ, ಹಣೆಬರಹಗಳ
ಹಳಿಯುತ್ತ ಕೂರದೇ, ಬೇಗುದಿಯ ಮೆಟ್ಟಿ‌ನಿಂತ
ಮರಿ ಸೂರ್ಯನಂತೆ ತಾಪದೊಳಗೂ ತಣ್ಣಗೆ…
ಎಲ್ಲವನರಿತ, ಇನ್ನಷ್ಟು, ಮತ್ತಷ್ಟು, ಜಗದಷ್ಟು
ಅರಿವಿಗೆ ಪರ್ಯಾಯವಾದನೊಬ್ಬ ಛಲದಂಕಮಲ್ಲ.

ಬಿಸಿಲಲಿ ಬಸವಳಿದ ಸಹಚರರ ಸುಟ್ಟ ನೆತ್ತಿ,
ರಕ್ತವೊಸರುವ ನೊಂದ ಪಾದಗಳ ಬಿರುಕು,
ಹುಟ್ಟನೇ ನೆಪ‌ಮಾಡಿ, ನೂರಾರು ವರುಷ
ಬಿಸಿಲನೇ ಕುಡಿಸಿ ಬಿಸಿಲನೇ ತಿನ್ನಿಸಿ
ತನ್ನವರನೆಲ್ಲ ನೋವ ಕೂಪಕೆ ದೂಡಿ
ತಾವಷ್ಟೇ ತಿಂದುಂಡು ತೇಗಿ, ಉಟ್ಟು ಮರೆದಾಡಿ
ಗೆರೆ ಎಳೆದು, ನೆರಳ ವಶ‌ ಮಾಡಿಕೊಂಡವರ
ನರಿತನದ ನಡು ಮುರಿದು ನೆರಳನರಸಿ ಹೊರಟ.
ಅವ ನೆಟ್ಟ ಗಿಡ, ಹೆಮ್ಮರವಾಯ್ತು
ಭದ್ರವಾದ ಬೇರು, ಸಹಸ್ರಾರು ಬಿಳಲುಗಳು
ಅರಸಿ ಬಂದ ಬಾಯಿ ಸತ್ತವರಿಗೆ ನೆರಳೋ, ನೆರಳು…
ಬರಿ ನೆರಳಲ್ಲ ಉಸಿರು, ಮಾತು ಕೊಟ್ಟಿತು‌ ಮರ.
ತಲೆ ಎತ್ತಿ ನಡೆವುದ ಕಲಿಸಿದ ಮರದೊಡೆಯ.

ಅವನಂದು ನೆಟ್ಟ ಮರದಡಿಯೇ ಇಂದಿಗೂ
ಎಲ್ಲರಿಗೂ ಸಮನಾದ ತಂಪು ನೆಳಲು…
ಮರಕೆ ಅವನಿಟ್ಟ ಹೆಸರು ಭಾರತದ ಸಂವಿಧಾನ.
ನಡುರಾತ್ರಿ ಗಾಳಿ ಬೀಸುವಾಗ ಕಿವಿಗೊಟ್ಟು ಕೇಳಿ
ಮರವೂ ಅಂದು ಅವ ಕಲಿಸಿದ್ದ ಹಾಡು ಹಾಡುತ್ತದೆ
ಶಿಕ್ಷಣ- ಸಂಘಟನೆ- ಹೋರಾಟ ಎಲ್ಲರಿಗೂ…
ಸ್ವಾತಂತ್ರ್ಯ-ನ್ಯಾಯ- ಸಮಾನತೆ ಎಲ್ಲರಿಗೂ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT