ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ಸಾವ ಮೆಟ್ಟುವುದೆಂದರೆ...

Last Updated 12 ಏಪ್ರಿಲ್ 2020, 4:11 IST
ಅಕ್ಷರ ಗಾತ್ರ

ಈ ಹೊತ್ತಿಗಾಗಲೇ
ಚೌಕಟ್ಟು ಹಾಕಿಸಿಕೊಂಡ ನನ್ನ ಫೋಟೋ
ಚೆಂದದೊಂದು ಹಾರದಲಂಕಾರದಲಿ
ಗೋಡೆಗೆ ನೇತು, ಧೂಪ ಹಾಕಿಸಿಕೊಳ್ಳುತ್ತ
ಹಲವು ಪುಣ್ಯತಿಥಿಗಳ ಕಾಣಬೇಕಿತ್ತು

ಹೀಗೆ ಈ ಕಾಲ ಬಿಗಿದ
ಕಾಲಕೂಟನಂಥ ಸಂಕಟಾದಿಗಳಿಗೆ
ತತ್ತರಿಸಿ ಕಂಗೆಟ್ಟಿದ್ದರೆ ನಾ
ಕಾಲವಾಗಿ ಯಾವುದೋ ಕಾಲವಾಗಬೇಕಿತ್ತು

ಬಡಪೆಟ್ಟಿಗೆ ಬಗ್ಗದೀ
ಭಂಡ ಜೀವದ ಮೇಲೆ
ಅದಾವ ಪರಿಯ ಅಕ್ಕರೆಯೋ
ಈ ವಿಷದ ಸಂತತಿಗಳಿಗೆ
ಸಾಲು ಸಾಲು ಸರತಿಯಲಿ
ಒಕ್ಕರಿಸುತ್ತವೆ
ಸಣ್ಣ ಮರೆವೊಂದ ತೋರಿದರೂ ಸಾಕು
ಬ್ರಹ್ಮಾಂಡ ಬಾಯ್ತೆರೆದು
ಮುಕ್ಕರಿಸ ನುಗ್ಗುತ್ತವೆ

ಈ ಇವುಗಳೋ ಬಗೆ ಬಣ್ಣದವು
ಬಲು ಭಿನ್ನದವು
ತಣ್ಣಗೆ ಒಳ ಹೊಕ್ಕು
ನುಣ್ಣನರೆದು ನುಂಗುವ
ಯಮನ ಖಾಸಾ ನೆಂಟಸ್ತಿಕೆಯವು
ತಾವಾಗೇ ನನ್ನರಸಿ ಬಂದವು ಕೆಲವಾದರೆ
ನನ್ನಿರವ ತಾಳದ ಖೂಳರಣತಿಗೆ
ಮಣಿದು ಬಂದವೂ ಹಲವು

ತುಂಬ ಶ್ರದ್ಧೆಯಲೇ ನನ್ನ ನೊಣೆಯ ನುಗ್ಗುವ
ಈ ವಿಷ-ಆದಿಗಳ ಬಗ್ಗೆ
ನನಗೊಮ್ಮೊಮ್ಮೆ ಅತೀವ ಕನಿಕರವುಕ್ಕುತ್ತದೆ
ಸುಮ್ಮನೆ ನೋಡಿ, ನಸುನಕ್ಕು
ಸರಿದು ಹೋದಾವೆಂದು ಸುಮ್ಮನಿರಬೇಕೆನ್ನುತ್ತೇನೆ
ಇದ್ದರಾದೀತೆ...?!
ಸಮ್ಮನಿದ್ದವನೇ ಇಲ್ಲವಾದಾನಿಲ್ಲಿ!


ಬಲು ಜಾಣತನದಲೇ ಹೆಜ್ಜೆಯ ಬಿಗಿದು, ಬೀಳಿಸಿ, ಕೆಡಹಿ
ನನ್ನಂತಃಸತ್ವವ ಹೀರ ಬಂದವುಗಳನು ಹೀಗೆ
ಸಕಲ ಗೌರವ ನೀಡಿ
ತಲೆಯ ಮೆಟ್ಟುತ್ತೇನೆ
ಸೊಲ್ಲನಡಗಿಸಿ ಅವುಗಳ
ಸಲ್ಲಬೇಕಾದ್ದೆಲ್ಲಿ ನೋಡಿ ಅಲ್ಲಿಗೇ ಅಟ್ಟುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT