ಭಾನುವಾರ, ಮಾರ್ಚ್ 26, 2023
24 °C

ಕವಿತೆ | ಪರಮೋಚ್ಚ ಉದಾಸೀನತೆ 

ವಸುಂಧರಾ ಕದಲೂರು Updated:

ಅಕ್ಷರ ಗಾತ್ರ : | |

Prajavani

ಆನೆ ಯೋಚಿಸಿರಬಹುದೆ
ಇರುವೆಯ ಬಗ್ಗೆ
ದಿಟ್ಟಿಸಿ ನೋಡಿದರಷ್ಟೇ
ಕಣ್ಣಿಗೆ ಬೀಳುವ ಪಾಪದ 
ಜೀವಿಯನದು 
ಉಪೇಕ್ಷಿಸಿರಬಹುದು
ಹೋಲಿಸಿ, ಗಾತ್ರ ನೋಡಿ 

ನಕ್ಕಿರಬಹುದು ಅಥವಾ
ಮುದ್ದುಕ್ಕಿ ಗೆಳೆತನ
ಬೆಳೆಸಿರಬಹುದು. ಈ ನಡುವೆ 
ಆನೆಯ ಕಷ್ಟ ಇರುವೆಯ
ನಷ್ಟ ಇಬ್ಬರ ಮಾತುಕತೆಗೆ 
ವಿಷಯವಾಗಿರಬಹುದು

ಇರುವೆ! ಅದೊಂದು ಜೀವ
ಎಂದೂ ಗಣಿಸದೆ ‘ಅದೆಷ್ಟು
ಸಲ ಹೊಸಕಿ ಗೂಡಿಗೆ ನೀರು
ಹೋಯ್ದು ಗೋಳುಗರೆದಿಲ್ಲ
ನಾನು! 
ಇನ್ನು ಆನೆ ಬಿಟ್ಟೀತೆ?!’

ಭಂಡು ನುಡಿವೆ
ತನ್ನೊಂದು ಹೆಜ್ಜೆಯಡಿಗೆ 
ಸಿಲುಕಿ ಅಪ್ಪಚ್ಚಿಯಾದ ಇರುವೆಗಳ 
ಲೆಕ್ಕ ಇಟ್ಟಿರಲಾರದು; ಗುಡಿಸಿ 
ಗುಡ್ಡೆ ಹಾಕಿದರೆ ತನ್ನ ಗಾತ್ರವೂ 
ಆಗಲಾರದ ಪೊಳ್ಳು ಕಳೆಬರಗಳು 
ಸೊಯ್ಯನೆ ದೂಳ ಕಣವಾಗಿ 
ಹೋಯ್ತೆಂದು ಹಂಗಿಸದೇ 
ಬಿಟ್ಟೀತೆ ಎಂದು ವ್ಯಂಗ್ಯಿಸುತ್ತೇನೆ

ನನ್ನ ಕೊಲೆಯ ಕೆಲಸಗಳಿಗೆ 
ದೈತ್ಯನ ಹಿಂದೆ ಮರೆಯಾಗುತ್ತೇನೆ
ಪ್ರತೀ ಹೊಲೆ ಕೆಲಸಗಳಿಗೂ ಸಬೂಬು 
ಹೇಳಿ, ಕೊಲೆಹೊಲೆಗೆ ಹೊಸ 
ಕಸುಬುದಾರರ ಹುಡುಕುತೇನೆ

ಆನೆಯಷ್ಟೇನೂ ಬಲಶಾಲಿಯಲ್ಲದ
ಇರುವೆಯ ಬಲ ನಂಬಲು ಸಿದ್ಧವಿಲ್ಲದ
ನಾನು
ಸಮಯ ಸಿಕ್ಕಾಗಲೆಲ್ಲಾ ತುಳಿಯುತಾ 
ಹೊಸಕುತಾ ಓಡಾಡುವಾಗ ಸರೀ 
ಉರಿ ತಾಕುವಂತೆ ಇರಿವ
ಇರುವೆಗಳ ಇರುವಿಕೆಗೆ ಪರಮೋಚ್ಚ
ಉದಾಸೀನತೆ ತೋರುತೇನೆ
ಸಾಮಾನ್ಯ ಮನುಷ್ಯರಂತೆ….

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು