ಶುಕ್ರವಾರ, ನವೆಂಬರ್ 22, 2019
23 °C

ಆಹಾ, ವನ ಭೋಜನ

Published:
Updated:
Prajavani

ಬೇಸಿಗೆ ರಜೆಯ ಅದೊಂದು ದಿನದಲಿ
ಹೊರಟರು ಮಕ್ಕಳು ವನಭೋಜನಕೆ
ಆಡಿ ಪಾಡಿ ಕುಣಿಯಲಿಕೆ
ಹರುಷದಿ ದಿನವನು ಕಳೆಯಲಿಕೆ

ವನದಲಿ ಅಡುಗೆಯ ಮಾಡಲು ಎಂದು
ಎಲ್ಲರು ತಮ್ಮಯ ಮನೆಯಿಂದ
ಅಕ್ಕಿ ಬೇಳೆ ಬೆಲ್ಲ ಪಾತ್ರೆಯ
ಹೊತ್ತು ನಡೆದರು ಮುದದಿಂದ

ವನದಲಿ ಒಲೆಯನು ಹೂಡಿದರು
ಮೊದಲಿಗೆ ಅನ್ನವ ಮಾಡಿದರು
ನಂತರ ಬೇಳೆಯ ಬೇಯಿಸುತ
ಗಮ ಗಮ ಸಾರನು ಕುದಿಸಿದರು

ತರಕಾರಿ ಹೆಚ್ಚಿ ಪಲ್ಯವ ಮಾಡಿ
ಹಪ್ಪಳ ಸಂಡಿಗೆ ಕರಿದಿರಲು
ಬೆಲ್ಲವ ಜಜ್ಜಿ ಪಾಯಸ ಮಾಡಿ
ಊಟಕೆ ಕೈಯ್ಯನು ಹಚ್ಚಿರಲು

ಊಟದ ಬಳಿಕ ಶುರುವಾಯಿತು ಆಟ
ಮೊದಲನೆ ಆಟವೇ ಜೂಟಾಟ
ಆ ಆಟದ ನಂತರ ಇನ್ನೊಂದು ಆಟ
ಅದುವೇ ಕಣ್ಣಾ ಮುಚ್ಚಾಲೆಯಾಟ

ಆ ಆಟದ ಬಳಿಕ ಒಂದಿಷ್ಟು ಹುಡುಗರು
ಮರಕೋತಿ ಆಟ ಆಡಿದರು
ಹುಡುಗಿಯರೆಲ್ಲ ಕೈ ಕೈ ಹಿಡಿದು
ಗಿರಗಿರ ಸುತ್ತುತ ಗಿರಿಗಿಟ್ಲಿಯಾಟ ಆಡಿದರು

ಗಿರಗಿಟ್ಲಿಯಾಟ ಮುಗಿದ ಮೇಲೆ
ಆಡಿದರೆಲ್ಲಾ ಐಸ್‍ಪೈಸ್ ಆಟ
ನಂತರ ಉಳಿದು ಇನ್ನೊಂದೇ ಆಟ
ಅದುವೇ ಕಳ್ಳ ಪೊಲೀಸ್ ಅಟ

ಅದನೂ ಆಡಿ ಮುಗಿಸುವ ಹೊತ್ತಿಗೆ
ಸಂಜೆಯು ಆಗುತ ಬಂದಿತ್ತು
ಆಗಲೇ ಎಲ್ಲಾ ಮಕ್ಕಳ ಮನಸು
ಮನೆಯ ಕಡೆಗೆ ಓಡಿತ್ತು

ಆಟವ ಆಡುತ ಕುಣಿದು ನಲಿದು
ವನಭೋಜನದ ಸವಿಯನು ಉಂಡು
ಸಂತಸ ಪಟ್ಟ ಮಕ್ಕಳ ಹಿಂಡು
ಮನೆಯ ದಾರಿ ಹಿಡಿದಿತ್ತು

ಪ್ರತಿಕ್ರಿಯಿಸಿ (+)