ಮಂಗಳವಾರ, ಸೆಪ್ಟೆಂಬರ್ 28, 2021
20 °C

ರಸೆಲ್‌ ಮಾರ್ಕೆಟ್‌ : ರಂಜಾನ್‌ ಆರಂಭದಲ್ಲೇ ಕವಿದ ಕತ್ತಲು!

ಅಮೃತ ಕಿರಣ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಶಿವಾಜಿನಗರದ ರಸೆಲ್ ಮಾರುಕಟ್ಟೆಯಲ್ಲಿ ರಂಜಾನ್ ಮಾಸದ ಆರಂಭದಿಂದಲೇ ಸಂಜೆಯಾಗುತ್ತಿದ್ದಂತೆ ರಂಗೇರುತ್ತಿದ್ದ ಇಡೀ ಪ್ರದೇಶವೀಗ ಬಣ್ಣ ಕಳೆದುಕೊಂಡಿದೆ. ವರ್ಷದಿಂದ ಹಬ್ಬದ ತಯಾರಿ ಮಾಡಿಕೊಂಡು ಭರ್ಜರಿ ವ್ಯಾಪಾರದ ಕನಸು ಕಂಡಿದ್ದ ವ್ಯಾಪಾರಿಗಳ ಮೊಗದಲ್ಲೀಗ ಸೋಲಿನ ಛಾಯೆ. ಹೈಕೋರ್ಟ್ ಆದೇಶದ ಪ್ರಕಾರ ಮಾರುಕಟ್ಟೆಯ ಸುತ್ತಲಿನ ಒತ್ತುವರಿದಾರರನ್ನು ತೆರವುಗೊಳಿಸುವ ಕೆಲಸಕ್ಕೆ ಬಿಬಿಎಂಪಿ ಕೈಹಾಕಿದೆ. ತೆರವುಗೊಳಿಸಲೂ ಅವರೂ ಸಿದ್ಧರಿದ್ದಾರೆ. ಆದರೆ ಹಬ್ಬ ಮುಗಿಯುವತನಕ ಅವಕಾಶ ನೀಡಬೇಕಿತ್ತು ಎಂಬುದು ಅವರ ವಿನಮ್ರ ಮಾತು. ಲಾಠಿ ಏಟು ಕೊಟ್ಟು ಜನರನ್ನು ಚದುರಿಸಿದ ಜಾಗದಲ್ಲೀಗ ಉಳಿದಿರುವುದು ಅನ್ನದ ಪ್ರಶ್ನೆ ಮಾತ್ರ. 

ಬೆಳಗ್ಗೆ ಒಂಬತ್ತು ಗಂಟೆಗಾಗಲೇ ಅಲ್ಲಿದ್ದ ಎಲ್ಲರ ಮೊಗದಲ್ಲೂ ಆತಂಕ. ಪಟಪಟನೇ ಓಡಾಟ. ಏನಾಗುತ್ತೆ ಎಂದು ಅವರವರೇ ಪರಸ್ಪರ ಕೇಳಿಕೊಳ್ಳುತ್ತಿದ್ದರು. ಅವರೆಲ್ಲರೂ ಸಮಾನದುಃಖಿಗಳು. ರಸೆಲ್ ಮಾರುಕಟ್ಟೆಯ ವ್ಯಾಪಾರಿಗಳಿಗೆ ಮೂರು ದಿನಗಳಿಂದ ನಿದ್ದೆಯಿಲ್ಲ. ನೆತ್ತಿ ಸುಡುತ್ತಿದ್ದರೂ ನೀರು ಕುಡಿಯುವ ಮನಸ್ಸಿಲ್ಲ. ತುತ್ತಿನ ಚೀಲಕ್ಕೆ ಕತ್ತರಿ ಬಿದ್ದ ಹೊತ್ತಿನಲ್ಲಿ ಎಲ್ಲರೂ ಅವರಿಗೆ ಶತ್ರುಗಳಂತೆಯೇ ಕಾಣುತ್ತಿದ್ದಾರೆ.

ಸ್ವಲ್ಪ ಹೊತ್ತಿನಲ್ಲೇ ಜೆಸಿಬಿ ಯಂತ್ರ ದಾಂಗುಡಿಯಿಟ್ಟಿತು. ಹಿಂದೆಯೇ ಪೊಲೀಸರ ದೊಡ್ಡ ಪಡೆ ಆಗಮಿಸಿತು. ಇನ್ನೇನೂ ಮಾಡಲಾಗದು ಎಂಬುದು ವ್ಯಾಪಾರಿಗಳಿಗೆ ಖಾತ್ರಿಯಾಯಿತು. ಇನ್ನೂ ಬೆಳಗಿನ ವ್ಯಾಪಾರವೇ ಆರಂಭವಾಗಿಲ್ಲ. ಆದರೆ ವ್ಯಾಪಾರಕ್ಕೆ ಕೊಡಲಿಯೇಟು ಹಾಕಲು ಜೆಸಿಬಿ ಸಿದ್ಧವಾಗಿ ನಿಂತಿತ್ತು. ಮೈಜುಂ ಎನಿಸುವ ಸದ್ದಿನೊಂದಿಗೆ ಅಂಗಡಿಗಳ ಮುಂದಿದ್ದ ನಾಮಫಲಕಗಳು ಮೊದಲಿಗೆ ಆಹಾರವಾದವು. ನೋಡನೋಡುತ್ತಿದ್ದಂತೆ ಅಂಗಡಿಯ ವಿಳಾಸವೇ ಮಣ್ಣುಪಾಲಾಯಿತು. ಲಾರಿಗಳು ಬಂದು ಅವುಗಳನ್ನು ತುಂಬಿಕೊಂಡು ಹೋದವು. ಇಡೀ ಬೀದಿಯ ಎಲ್ಲ ವ್ಯಾಪಾರಿಗಳೂ ಇದಕ್ಕೆ ಮೂಕಸಾಕ್ಷಿಯಾಗಿದ್ದರು. ಕೆಲವರು ಪ್ರತಿರೋಧ ತೋರುವ ಯತ್ನ ಮಾಡಿದರಾದರೂ ಅಧಿಕಾರಿಗಳ ಎದುರು ಅದು ಮೂಕವಾಯಿತು.

ವರ್ಷದ ಕೂಳು ಮಣ್ಣುಪಾಲಾಯಿತು..

ಹೀಗೆ ಹೇಳುತ್ತಾ ಕಣ್ತುಂಬಿಕೊಂಡರು ಸಗಾಯ್‌ರಾಜ್. ಅವರ ಒಡಲೊಳಗಿನ ಆಕ್ರೋಶ, ಕೆನ್ನೆ ಮೇಲೆ ಕಣ್ಣೀರಾಗಿ ಕೆಳಗಿಳಿಯಿತು. ಮಾತಂತೂ ಅರ್ಧ ಸತ್ತೇಹೋಗಿತ್ತು. ಒಮ್ಮೆ ರಸ್ತೆಯ ಆ ಕಡೆ, ಒಮ್ಮೆ ಈ ಕಡೆ ನೋಡುತ್ತಾ ಸಂಕಟ ತೋಡಿಕೊಂಡರು. ಒಮ್ಮೆ ರಸ್ತೆಯ ಆ ಕಡೆ, ಒಮ್ಮೆ ಈ ಕಡೆ ನೋಡುತ್ತಾ ಸಂಕಟ ತೋಡಿಕೊಂಡರು.

ಶಿವಾಜಿನಗರದ ರಸೆಲ್ ಮಾರುಕಟ್ಟೆಯ ಹೊರಭಾಗದಲ್ಲಿ ನಿಂಬೆ ಹಣ್ಣು ಮಾರುವುದು ಇವರ ಕಾಯಕ. ವ್ಯಾಪಾರ ಶುರುಮಾಡಿ ಸುಮಾರು 30 ವರ್ಷಗಳೇ ಕಳೆದಿವೆ. ಆದರೆ ಇಷ್ಟೊಂದು ಹತಾಶೆ ಎಂದೂ ಕಾಡಿರಲಿಲ್ಲ. ಹೈಕೋರ್ಟ್ ಆದೇಶದ ಪ್ರಕಾರ ಮಾರುಕಟ್ಟೆ ಸುತ್ತಲಿನ ಅನಧಿಕೃತ ಅಂಗಡಿ, ಮುಂಗಟ್ಟು ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ತುತ್ತಾದ ನೂರಾರು ಸಂತ್ರಸ್ತರಲ್ಲಿ ಇವರೂ ಒಬ್ಬರು. ವರ್ಷದಿಂದ ಕಾದು ಕುಳಿತಿದ್ದ ರಂಜಾನ್ ಹಬ್ಬ ಇನ್ನೇನು ಬಂದೇಬಿಟ್ಟಿದೆ. ಕಾಲಿಡಲೂ ಜಾಗವಿಲ್ಲದಂತೆ ಜನ ಸೇರುವ ಮಾರುಕಟ್ಟೆ ಪ್ರದೇಶದಿಂದ ಬೀದಿಬದಿ ವ್ಯಾಪಾರಿಗಳನ್ನು ಹಬ್ಬದ ಮುನ್ನಾದಿನ ತೆರವುಗೊಳಿಸಲಾಗಿದೆ. 

ಇವರು ನಿಂಬೆಹಣ್ಣು ಮಾರಾಟ ಮಾಡಿ ನಿತ್ಯ ₹800ರಿಂದ ಸಾವಿರ ರೂಪಾಯಿ ಗಳಿಸುತ್ತಿದ್ದರು. ರಂಜಾನ್ ಹಬ್ಬದ ವೇಳೆ ದುಪ್ಪಟ್ಟು ವ್ಯಾಪಾರದ ನಿರೀಕ್ಷೆಯಿಟ್ಟುಕೊಂಡಿದ್ದ ಅವರಿಗೆ ನಿರಾಸೆಯ ಕಾರ್ಮೋಡ ಕವಿದಿದೆ. ಅಂಗಡಿ ಇಟ್ಟುಕೊಳ್ಳಲು ಜಾಗವಿಲ್ಲ, ಅನ್ನವೂ ಇಲ್ಲ, ಹರುಷವೂ ಇಲ್ಲ. ಬೇರೊಂದು ಕಾಯಕ ಹುಡುಕಾಟಕ್ಕೆ ಅವರು ಅನಿವಾರ್ಯವಾಗಿ ಅನುವಾಗುತ್ತಿದ್ದಾರೆ. 

ರಂಜಾನ್‌ವರೆಗೆ ಕಾಯಬೇಕಿತ್ತು

ಜನರು ಓಡಾಡುವ ರಸ್ತೆಯಲ್ಲಿ ಕಟ್ಟಡ ಕಟ್ಟಿಕೊಂಡಿದ್ದಾಗ ಅದನ್ನು ಒಡೆದುಹಾಕಿದರೆ ಅಡ್ಡಿಯಿಲ್ಲ. ಆದರೆ ಬಿಸಿಲಿನಿಂದ ರಕ್ಷಣೆಗಾಗಿ ಕಟ್ಟಿಕೊಂಡಿದ್ದ ಚಾವಣಿಯನ್ನೂ ಕಿತ್ತುಹಾಕಿದರೆ ಹೇಗೆ ಎಂಬುದು ಚಾಂದ್ ಬಾಷಾ ಅವರ ಪ್ರಶ್ನೆ. ₹20 ಸಾವಿರ ಖರ್ಚು ಮಾಡಿ ಅವರು ನೆರಳಿನ ಆಸರೆ ಮಾಡಿಕೊಂಡಿದ್ದರು. ಸೋಮವಾರ ನಡೆದ ಮತ್ತೊಂದು ಸುತ್ತಿನ ತೆರವು ಕಾರ್ಯಾಚರಣೆಯಲ್ಲಿ ಬಾಷಾ ಅವರ ಅಂಗಡಿ ಮುಂದಿದ್ದ ತಾತ್ಕಾಲಿಕ ಚಾವಣಿ ಕ್ಷಣಾರ್ಧದಲ್ಲಿ ಧರೆಗುರುಳಿತು. ಜೊತೆಜೊತೆಗೆ ಅವರ ಆಕ್ರೋಶವೂ ಕಟ್ಟೆಯೊಡೆಯಿತು.

ರಸೆಲ್ ಮಾರುಕಟ್ಟೆಯ ಹಿಂದಿನ ರಸ್ತೆಯಲ್ಲಿ ತಗಡಿನ ಶೀಟ್‌ಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡಿರುವ ಬಾಷಾ ನಿನ್ನೆ ಮೊನ್ನೆ ವ್ಯಾಪಾರಕ್ಕೆ ಬಂದವರಲ್ಲ. ಅವರ ತಂದೆ ಶುರು ಮಾಡಿದ್ದ ಅಂಗಡಿಗೆ ಇದೀಗ ನೂರು ವರ್ಷ. ‘ಸರ್ಕಾರದ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಅಸಡ್ಡೆ, ತೆರವು ಕಾರ್ಯಾಚರಣೆ ಸಿಬ್ಬಂದಿಯ ದರ್ಪದ ಮನಸ್ಥಿತಿಗೆ ಏನು ಹೇಳುವುದು’ ಎಂದು ಹೇಳುವಾಗ ಅವರ ಸಿಟ್ಟು ಅಕ್ಷರಶಃ ನೆತ್ತಿಗೇರಿತ್ತು. 

‘ಮುಸ್ಲಿಮರ ಪ್ರಮುಖ ಹಬ್ಬ ರಂಜಾನ್ ಅಡಿಯಿಟ್ಟಿದೆ. ಸಂಭ್ರಮಪಡಬೇಕಿದ್ದ ನಾವು ಕಿತ್ತುಹೋಗಿರುವ ಅಂಗಡಿಯ ಪರಿಕರಗಳನ್ನು ಹೆಕ್ಕುವ ಕೆಲಸ ಮಾಡುತ್ತಿದ್ದೇವೆ. ಆದರೆ ಒಡೆದು ಹಾಕುವವರಗೆ ಅದೆಂಥದೋ ವಿಕೃತ ಖುಷಿ’ ಎಂದು ಭಾವುಕರಾದರು ಬಾಷಾ. ಜನಪ್ರತಿನಿಧಿಗಳ ಮೇಲೂ ಅವರ ಸಿಟ್ಟು ವಿಸ್ತರಿಸಿತು.  

ವಿಳಾಸ ಕಳೆದುಕೊಂಡವರು ನಾವು

ಬಟ್ಟೆ ಹೊಲಿಯುವ ಕೆಲಸ ಮಾಡುವ ಇಮ್ರಾನ್ ಅವರಿಗೆ ಮತ್ತೊಂದು ರೀತಿಯ ಸಂಕಟ. ಅವರ ಅಂಗಡಿಯ ವಿಳಾಸ ಹೇಳುತ್ತಿದ್ದ ನಾಮಫಲಕವೇ ಇಲ್ಲ ಎಂಬುದು ಅವರ ಅಳಲಿಗೆ ಕಾರಣ. ನೂರಾರು ಜನರು ಅಂಗಡಿ ಹುಡುಕಿಕೊಂಡು ಬರುತ್ತಾರೆ. ಆದರೆ ಅನಧಿಕೃತ ಎಂಬ ಕಾರಣಕ್ಕೆ ಬೋರ್ಡ್ ಕಿತ್ತುಹಾಕಿದರೆ ಗಿರಾಕಿಗಳು ಬರುವುದಾದರು ಹೇಗೆ ಎಂಬುದು ಅವರ ಪ್ರಶ್ನೆ. ಏಳು ವರ್ಷದಿಂದ ಅವರು ಇದೇ ವೃತ್ತಿಯಲ್ಲಿದ್ದಾರೆ. ಭರ್ಜರಿ ವ್ಯಾಪಾರ ಆಗಬೇಕಾದ ಈ ಹೊತ್ತಿನಲ್ಲಿ ಎಲ್ಲಿಂದ ಜನ ಬರುತ್ತಾರೆ ಎನ್ನುತ್ತಾ ತಲೆಮೇಲೆ ಕೈಹೊತ್ತು ಕುಳಿತುಕೊಂಡರು. ಕನಿಷ್ಟ ಹಬ್ಬ ಮುಗಿಯುವವರೆಗಾದರೂ ಬಿಡಬೇಕಿತ್ತು, ಸರ್ಕಾರವಾದರೂ ಮಧ್ಯಪ್ರವೇಶಿಸಬೇಕಿತ್ತು ಎನ್ನುತ್ತಾರೆ ಇಮ್ರಾನ್. 

ತುತ್ತಿನ ಚೀಲಕ್ಕೆ ಕತ್ತರಿ

ಶಿವಾಜಿನಗರಕ್ಕೆ ಶಾಪಿಂಗ್ ಹೋಗುವವರು ಗಮನಿಸಿ. ಚರ್ಚ್ ಹಾಗೂ ರಸೆಲ್ ಮಾರುಕಟ್ಟೆ ಮುಂದಿನ ರಸ್ತೆಗಳು ಹಾಗೂ ಇವರೆಡೂ ರಸ್ತೆಗಳ ನಡುವಿನ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಈಗ ಇಲ್ಲ. ಬೈಕ್, ಕಾರುಗಳನ್ನು ಇನ್ನುಮುಂದೆ ಇಲ್ಲಿ ನಿಲ್ಲಿಸುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನುತ್ತಾರೆ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುವ ಗಣೇಶ್. ದಿನಕ್ಕೆ 300 ರೂಪಾಯಿ ದುಡಿಯುತ್ತಿದ್ದ ಇವರಿಗೆ ಈಗ ತುತ್ತಿನ ಪ್ರಶ್ನೆ ಎದುರಾಗಿದೆ. ಮತ್ತೊಂದು ಕೆಲಸ ಹುಡುಕಿಕೊಳ್ಳುವ ತುರ್ತಿನಲ್ಲಿ ಅವರಿದ್ದಾರೆ... 

ಇಂದಿನಿಂದ ರಂಜಾನ್‌ ಉಪವಾಸ ವ್ರತ ಆರಂಭ

ರಂಜಾನ್‌ ಮಾಸ ಮಂಗಳವಾರದಿಂದ ಶುರುವಾಗಲಿದೆ. ಮುಸ್ಲೀಮರಿಗೆ ಇದೊಂದು ಪವಿತ್ರ ಮಾಸ. ಉಪವಾಸ (ರೋಜಾ) ವ್ರತಾಚರಣೆ ಈ ಮಾಸದ ವಿಶೇಷ. ಮುಸ್ಲೀಮರಿಗೆ ಈ ತಿಂಗಳಿಡೀ ಉಪವಾಸ ವ್ರತ ಕಡ್ಡಾಯ ಎನ್ನುತ್ತದೆ ಇಸ್ಲಾಂ ಧರ್ಮ.

ಬೆಳಗಿನ ಜಾವದ ನಿಗದಿತ ಸಮಯದಲ್ಲಿ ಸಹರೀ (ಬೆಳಗಿನ ಆಹಾರ) ನಂತರ ಇಡೀ ದಿನ ಅನ್ನ, ನೀರು ಇಲ್ಲದೇ ಉಪವಾಸ ಮಾಡಿ ಸಂಜೆ ಇಫ್ತಾರ್‌ನಲ್ಲಿ ಆಹಾರ ಸೇವಿಸುವ ಮೂಲಕ ರೋಜಾ ಮುಗಿಸುತ್ತಾರೆ. ಇಡೀ ತಿಂಗಳು ರೋಜಾ ಮತ್ತು ಎಂದಿನಂತೆ ನಮಾಜ್‌, ರಂಜಾನ್‌ ಮಾಸದ ವಿಶೇಷ ತರಾವೀ ನಮಾಜ್‌, ಖುರಾನ್‌ ಪಠಣ ಸೇರಿದಂತೆ ಧಾರ್ಮಿಕ ಕಾರ್ಯಗಳಲ್ಲಿ ಮುಸ್ಲೀಮರು ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು