ಗುರುವಾರ , ಮೇ 6, 2021
23 °C
ಮಕ್ಕಳ ಕತೆ

ವ್ಯಾಮೋಹದ ಪರಿಣಾಮ

ಮಾರ್ಪಳ್ಳಿ ಆರ್. ಮಂಜುನಾಥ್ Updated:

ಅಕ್ಷರ ಗಾತ್ರ : | |

ಮಾಧವನೆಂಬ ಸಾತ್ವಿಕ ಬ್ರಾಹ್ಮಣನಿದ್ದ. ಅವನ ಪತ್ನಿಯ ಹೆಸರು ಲಕ್ಷ್ಮಿ. ಮಗ ಕೃಷ್ಣ. ಒಳ್ಳೆಯ ಸಂಸಾರ ಅವರದಾಗಿತ್ತು. ಮಾಧವ ವೇದ ಪಾರಂಗತ, ದೈವಭಕ್ತನಾಗಿದ್ದ. ಮಹಾಗಣಪತಿಯ ಪರಮ ಭಕ್ತನೂ ಆಗಿದ್ದ. ಅವನು ಮಗ ಕೃಷ್ಣನಿಗೆ ಒಳ್ಳೆಯ ಕುಟುಂಬದಲ್ಲಿ ಹುಟ್ಟಿ ಬೆಳೆದ ‘ಬ್ರಾಹ್ಮೀ’ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿಸಿದ್ದ. ಸ್ವಲ್ಪ ಕಾಲದ ನಂತರ ಸೊಸೆ ಬ್ರಾಹ್ಮೀ ಗರ್ಭವತಿಯಾದಳು. ಇಡೀ ಕುಟುಂಬದಲ್ಲಿ ಹೇಳತೀರದ ಸಂತೋಷ ಉಕ್ಕಿತು.

ಒಂದು ರಾತ್ರಿ ಮಾಧವನು ಊಟ ಮಾಡಿ, ಗಣಪತಿಯನ್ನು ನೆನೆದು ಮಲಗಲು ಹೋದನು. ಎಷ್ಟು ಹೊತ್ತಾದರೂ ಅವನಿಗೆ ನಿದ್ದೆ ಬರಲಿಲ್ಲ. ಅವನ ಮನಸ್ಸು ಗರ್ಭವತಿಯಾದ ಸೊಸೆಯ ಬಗ್ಗೆಯೇ ಚಿಂತಿಸುತ್ತಿತ್ತು. ‘ನನ್ನ ಸೊಸೆಗೆ ಈಗ 8 ತಿಂಗಳು ತುಂಬಿ ಒಂಬತ್ತನೇ ತಿಂಗಳಿಗೆ ಕಾಲಿಸಿರಿಸಿದ್ದಾಳೆ. ಅವಳಿಗೆ ಗಂಡು ಮಗುವಾಗುತ್ತದೆಯೋ? ಹೆಣ್ಣು ಮಗುವಾಗುತ್ತದೆಯೋ? ಗಂಡು ಮಗುವಾದರೆ ಏನೆಂದು ಹೆಸರಿಡಲಿ, ಹೆಣ್ಣು ಮಗುವಾದರೆ ಏನೆಂದು ಹೆಸರಿಡಲಿ... ಎಂದೆಲ್ಲ ಯೋಚಿಸುತ್ತಿದ್ದ. ಅಷ್ಟು ಹೊತ್ತಿಗೆ ಅವನು ಮಲಗಿದ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಅಪಾರವಾದ ಬೆಳಕು ಮೂಡಿತು. ಆ ಬೆಳಕಿನಲ್ಲಿ ಇಬ್ಬರು ಭಯಂಕರ ರೂಪದ ಯಮಭಟರು ಕಾಣಿಸಿದರು.

ಮಾಧವ ಬ್ರಾಹ್ಮಣನು ಅವರನ್ನು ಆಶ್ಚರ್ಯ, ಭಯದಿಂದ ನೋಡಿ ‘ನೀವ್ಯಾರು? ಇಲ್ಲಿಗೇಕೆ ಬಂದಿರಿ’ ಎಂದು ಕೇಳಿದನು. ಬಂದವರು, ‘ಎಲೈ ಬ್ರಾಹ್ಮಣನೇ, ನಾವು ಯಮದೂತರು. ನಿನ್ನ ಆಯಸ್ಸು ಮುಗಿದಿದೆ. ನಿನ್ನ ಪ್ರಾಣವನ್ನು ತೆಗೆದುಕೊಂಡು ಹೋಗಲು ಬಂದಿದ್ದೇವೆ’ ಎಂದರು. ಮಾಧವ ಬ್ರಾಹ್ಮಣನು ಭಯದಿಂದ, ‘ಯಮ ದೂತರೇ, ನನಗೀಗ ನಲ್ವತ್ತೈದು ವರ್ಷ ವಯಸ್ಸು. ನಾನಿನ್ನೂ ಮೊಮ್ಮಕ್ಕಳನ್ನು ಕಂಡಿಲ್ಲ. ನನ್ನ ಸೊಸೆ ಈಗಿನ್ನೂ ಬಸುರಿಯಾಗಿದ್ದಾಳೆ. ಇನ್ನು ಕೆಲವೇ ದಿನಗಳಲ್ಲಿ ಅವಳು ಮಗುವನ್ನು ಹೆರಲಿದ್ದಾಳೆ. ದಯಮಾಡಿ ಅಲ್ಲಿಯವರೆಗೆ ನನ್ನ ಪ್ರಾಣವನ್ನು ತೆಗೆದುಕೊಂಡು ಹೋಗಬೇಡಿ’ ಎಂದು ಅಂಗಲಾಚಿದನು.

ಯಮದೂತರೆಂದರು, ‘ಆಯ್ಯಾ ಬ್ರಾಹ್ಮಣ, ನೀನು ವೇದಪಾರಂಗತನಾಗಿರುವೆ. ಯಮದೂತರಿಗೆ ಕಿಂಚಿತ್ತೂ ಕರುಣೆ ಇಲ್ಲ ಎಂಬುದು ನಿನಗೆ ಗೊತ್ತಿಲ್ಲವೇ. ನಾವು ಯಮನ ಆದೇಶದಿಂದ ಬಂದಿದ್ದೇವೆ. ತಡ ಮಾಡುವಂತಿಲ್ಲ’ ಎಂದೆನುತ ಮಾಧವನ ಶರೀರದಿಂದ ಪ್ರಾಣವನ್ನು ಎಳೆದೊಯ್ದೇ ಬಿಟ್ಟರು.

ಮಾಧವ ಬ್ರಾಹ್ಮಣನ ಪ್ರಾಣವು ‘ನನ್ನನ್ನು ರಕ್ಷಿಸು’ ಎಂದು ತನ್ನ ಆರಾಧ್ಯ ದೈವ ಮಹಾಗಣಪತಿಯನ್ನು ಮೊರೆಯಿಡತೊಡಗಿತು. ಆ ಮೊರೆಯನ್ನು ಕೇಳಿದ ಮಹಾಗಣಪತಿಯು ಕೂಡಲೇ ಯಮಲೋಕದಲ್ಲಿ ಪ್ರತ್ಯಕ್ಷನಾದನು.

ಯಮನು ಮಹಾಗಣಪತಿಯನ್ನು ನೋಡಿ ಸಂತೋಷ, ಭಕ್ತಿಯಿಂದ ನಮಸ್ಕರಿಸಿದನು. ‘ಸ್ವಾಮಿ, ತಾವು ಇಲ್ಲಿಗೇಕೆ ಬರುವ ಕಷ್ಟವನ್ನು ತೆಗೆದುಕೊಂಡಿರಿ. ತಾವು ನನ್ನನ್ನು ಕರೆದರೆ ನಾನೇ ಓಡೋಡಿ ಬರುತ್ತಿದ್ದೆ’ ಎಂದನು.

ಮಹಾಗಣಪತಿಯು ಯಮನನ್ನು ಕುರಿತು, ‘ಯಮಧರ್ಮ, ನಿನಗೆ ಆ ಕಷ್ಟ ಬೇಡ. ಈಗ ನೀನು ಹಿಡಿದು ತಂದಿರುವ ಈ ಬ್ರಾಹ್ಮಣನು ನನ್ನ ಭಕ್ತ. ಇವನ ಮೊರೆಯನ್ನು ಕೇಳಿ ನಾನು ಇಲ್ಲಿಗೆ ಬಂದೆ’ ಎಂದನು. ಯಮಧರ್ಮನು ಭಕ್ತಿಯಿಂದ, ‘ಸ್ವಾಮಿ ನಿಮಗೆ ತಿಳಿಯದ ವಿಚಾರವೇನೂ ಇಲ್ಲ. ಈ ಬ್ರಾಹ್ಮಣನ ಆಯಸ್ಸು ಮುಗಿದಿರುವುದರಿಂದ ನಿಯಮದಂತೆ ಇವನ ಪ್ರಾಣವನ್ನು ತೆಗೆದುಕೊಂಡು ಬರಲಾಗಿದೆ. ಬ್ರಾಹ್ಮಣ ರೂಪದ ಇವನ ಬದುಕು ಅಂತ್ಯವಾಗಿದೆ’ ಎಂದನು.

ಆಗ ಮಾಧವ ಬ್ರಾಹ್ಮಣನ ಪ್ರಾಣವು, ‘ಹೇ ಮಹಾ ಗಣಪತಿಯೇ, ನನ್ನ ಸೊಸೆ ಈಗ ಗರ್ಭಿಣಿಯಾಗಿದ್ದು, ಅವಳು ಈ ತಿಂಗಳಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾಳೆ. ನನಗೆ ನನ್ನ ಮೊಮ್ಮಗುವನ್ನು ಕಣ್ತುಂಬ ನೋಡುವ, ಮಗುವಿನ ಆಟ–ಪಾಠಗಳನ್ನು ಹತ್ತಿರದಿಂದ ನೋಡುವ ಭಾಗ್ಯವನ್ನು ಕರುಣಿಸು. ಅದಕ್ಕಿಂತ ಹಚ್ಚಿನದೇನೂ ಬೇಡ ದೇವಾ’ ಎಂದು ಮಹಾಗಣಪತಿಯನ್ನು ಪ್ರಾರ್ಥಿಸಿತು.

ಮಹಾಗಣಪತಿಯು ಯಮಧರ್ಮನಿಗೆ, ‘ಯಮ ಧರ್ಮ, ನಿನ್ನ ಲೆಕ್ಕದಲ್ಲಿ ಈ ಬ್ರಾಹ್ಮಣನ ಪಾಪ ಕರ್ಮಗಳು ಹೇಗಿವೆ’ ಎಂದು ಕೇಳಿದನು. ಯಮಧರ್ಮನೆಂದನು, ‘ದೇವಾ ಇವನಿಗೆ ಒಬ್ಬ ದೊಡ್ಡ ಯತಿಯಾಗುವ ಯೋಗವಿದೆ. ಆದರೆ ಅವನ ಆಸೆಗಳು ಮತ್ತು ಸಂಸಾರ ಬಂಧನದಲ್ಲಿನ ಅತಿಯಾದ ಮೋಹದಿಂದ ಕೆಲವು ಕಾಲ ‘ನಾಯಿ’ ಆಗಬೇಕಿದೆ’ ಎಂದನು.

ಮಹಾಗಣಪತಿಯು ತಲೆಯಾಡಿಸುತ್ತ, ‘ಎಲೈ ಮಾಧವನೆ, ನಿನಗೆ ಯೋಗಿಯಾಗಿ ಜನ್ಮವೆತ್ತುವ ಪುಣ್ಯವಿದೆ. ಅದರಂತೆ ನಿನ್ನ ಪಾಪ ಕರ್ಮಗಳ ಪರಿಹಾರಕ್ಕಾಗಿ ನೀನು ನಾಯಿಯಾಗಿ ಹುಟ್ಟ ಬೇಕಾಗಿರುವುದರಿಂದ ನಿನ್ನ ಮಗನ ಮನೆಯಲ್ಲಿಯೇ ಸಾಕು ನಾಯಿಯಾಗಿ ಕಾಲ ಕಳೆದು, ನಿನ್ನ ಮಗ, ಸೊಸೆ, ಮೊಮ್ಮಗನನ್ನು ಹತ್ತಿರದಿಂದಲೇ ನೋಡುವಂತೆ ಅನುಗ್ರಹಿಸುತ್ತಿದ್ದೇನೆ’ ಎಂದು ತಿಳಿಸಿ ಮಾಯವಾದನು.

ಮಾಧವ ಬ್ರಾಹ್ಮಣನು ತನ್ನ ಮಗ ಕೃಷ್ಣನ ಮನೆಯಲ್ಲಿಯೇ ಸಾಕುನಾಯಿಯಾಗಿ ಮರುಜನ್ಮ ಎತ್ತಿದನು. ಅಷ್ಟರಲ್ಲಿಯೇ ಕೃಷ್ಣನ ಹೆಂಡತಿ ಬ್ರಾಹ್ಮೀ, ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಳು. ನಾಯಿ ಜನ್ಮ ಎತ್ತಿದ ಮಾಧವನು ಮಗನನ್ನು, ಸೊಸೆಯನ್ನು, ಮೊಮ್ಮಗನನ್ನು ಮತ್ತು ಹೆಂಡತಿ ಸರಸ್ವತಿಯನ್ನು ಹತ್ತಿರದಿಂದ ನೋಡುತ್ತಿದ್ದನು. ಅವರ ಸಂತೋಷ, ಖುಷಿಯನ್ನು ಕಂಡು ಸಂತೋಷಪಟ್ಟನು.

ಒಂದು ದಿನ ಮೊಮ್ಮಗನನ್ನು ತೊಟ್ಟಿಲಲ್ಲಿ ಮಲಗಿಸಿ, ಮಗ ಮತ್ತು ಸೊಸೆ ಹೊರ ಹೋಗಿದ್ದರು. ಮೊಮ್ಮಗು ಅಳುತ್ತಿತ್ತು. ನಾಯಿಯಾಗಿದ್ದ ಮಾಧವನು, ಅಯ್ಯೋ ಮಗು ಅಳುತ್ತಿದೆ ಎನ್ನುತ್ತ ಬಾಲ ಆಡಿಸಿಕೊಂಡು, ತೊಟ್ಟಿಲ ಹತ್ತಿರ ಹೋಗಿ ಸಮಾಧಾನಪಡಿಸುವಂತೆ ಬೌ ಬೌ ಎನ್ನತೊಡಗಿದ. ನಾಯಿಗೆ ಮಾತು ಬಾರದಿರುವುದರಿಂದ, ಬೌಬೌ ಎನ್ನುವ ಬೊಗಳುವಿಕೆಗೆ ಹೆದರಿ ಮಗು ಇನ್ನೂ ಜೋರಾಗಿ ಅಳತೊಡಗಿತು. ಮಗು ಕಿರುಚುವುದನ್ನು ಕೇಳಿಸಿದ ಮಾಧವ ಬ್ರಾಹ್ಮಣನ ಮಗ ಮತ್ತು ಸೊಸೆ ಒಳಗೆ ಓಡಿ ಬಂದರು.

ನಾಯಿ ತೊಟ್ಟಿಲ ಬಳಿ ಬೌ ಬೌ ಎಂದು ಬೋಗಳುವುದನ್ನು ನೋಡಿ, ಮಗುವನ್ನು ಕಚ್ಚಲು ಬಂದಿದೆ ಎಂದು ತಿಳಿದರು. ಕೋಪದಿಂದ ಒಂದು ಬಡಿಗೆ ತೆಗೆದುಕೊಂಡು ನಾಯಿಗೆ ಸರಿಯಾಗಿ ಹೊಡೆದರು. ನಾಯಿ ರೂಪದಲ್ಲಿದ್ದ ಮಾಧವನು ‘ನಾನು ನಿನ್ನ ತಂದೆ ಕಣೋ’ ಎನ್ನುತ್ತ ಬೊಗಳ ತೊಡಗಿದ.

ನಾಯಿ ತಮ್ಮನ್ನು ನೋಡಿ ಬೊಗಳುತ್ತಿದೆ ಎಂದು ಇನ್ನಷ್ಟು ಸಿಟ್ಟುಗೊಂಡ ಮಗನ ಜೊತೆಗೆ, ಮಾಧವನ ಹೆಂಡತಿಯಾಗಿದ್ದ ಸರಸ್ವತಿಯೂ ನಾಯಿಯನ್ನು ಹೊಡೆದು, ಮನೆಯಿಂದ ಹೊರಗಟ್ಟಿದಳು. ನಾಯಿಯಾಗಿದ್ದ ಬ್ರಾಹ್ಮಣ ಮಾಧವನು ದುಃಖದಿಂದ ಕುರ್‍ರೋ ಮುರ್‍ರೋ ಎನ್ನುತ್ತ ಮನೆಯಂಗಳದಲ್ಲಿ ನೋವಿನಿಂದ ನರಳ ತೊಡಗಿತು. ಮಗುವನ್ನು ಕಚ್ಚಲು ಬಂದಿತ್ತೆಂದು ಅವರುಗಳು ಅಂದು ನಾಯಿಗೆ, ಊಟವನ್ನೇ ಹಾಕಲಿಲ್ಲ. ಒಂದೆಡೆ ಮೈ ಎಲ್ಲ ರಕ್ತದಿಂದ ಸೋರುತ್ತ ನೋವು, ಇನ್ನೊಂದೆಡೆ ಹೊಟ್ಟೆಗೆ ಕೂಳಿಲ್ಲದೆ ಹಸಿವೋ ಹಸಿವು ನಾಯಿ ಸ್ವರೂಪಿ ಮಾಧವ ಬ್ರಾಹ್ಮಣನನ್ನು ಕಾಡತೊಡಗಿತು.

ಎರಡು ಮೂರು ದಿನಗಳ ಕಾಲ ಮಗ ಮತ್ತು ಸೊಸೆ ನಾಯಿಗೆ ತಿನ್ನಲು ಕೂಳೇ ಹಾಕಿರಲಿಲ್ಲ. ಅದರೂ ನಾಯಿ ಜನ್ಮ ಎತ್ತಿದ್ದ ಮಾಧವ ಬ್ರಾಹ್ಮಣನು, ಮೊಮ್ಮಗನನ್ನು ಒಮ್ಮೆಯಾದರೂ ನೋಡೋಣ ಎನ್ನುತ್ತಾ ಮಗ ಸೊಸೆ ಇಲ್ಲದ ಸಮಯ ಕಾಯತೊಡಗಿದ.  ಆ ಸಮಯ ಬಂದಿತು. ಯಾರೂ ಇಲ್ಲವೆಂದು ತಿಳಿದ ನಾಯಿಯು ನಿಧಾನವಾಗಿ ಮನೆಯೊಳಗೆ ನುಗ್ಗಿತು. ಒಳ ಕೋಣೆಯಲ್ಲಿ ಆಡುತ್ತಿದ್ದ ಮೊಮ್ಮಗನನ್ನು ನೋಡಿ, ಆನಂದದಿಂದ ನಾಲಿಗೆ ಚಾಚಿ ನೆಕ್ಕಲು ಹೋಯಿತು. ಅಷ್ಟರಲ್ಲಿ ಒಳಬಂದ ಸರಸ್ವತಿಯು ನಾಯಿಯು ಮಗುವನ್ನು ಕಚ್ಚಲು ಬಂದಿದೆ ಎಂದು ಭಾವಿಸಿ, ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಿಂದ ನಾಯಿಯ ಮೈಗೆ ಬರೆ ಇಟ್ಟಳು. ಮೊದಲೇ ಆಗಿದ್ದ ಗಾಯದ ಮೇಲೆ ಬರೆ ಇಟ್ಟರೆ ನಾಯಿ ಏನಾಗಬೇಕು? ಅದು ಸತ್ತೆನೋ ಬಿಟ್ಟೆನೋ ಎನ್ನುತ್ತ ಹೊರಗೋಡಿತು.

ಈ ಘಟನೆಯಿಂದ ನಾಯಿಯಾಗಿದ್ದ ಮಾಧವ ಬ್ರಾಹ್ಮಣನಿಗೆ ಪುತ್ರ– ಪೌತ್ರ ಮೋಹ ಬಿಟ್ಟು ಹೋಯಿತು. ಅದರಲ್ಲೂ ನಾಯಿಯಾಗಿದ್ದ ತನಗೆ ಮಾತನಾಡಲು ಬರುವುದಿಲ್ಲ, ನಾನು ಅವರ ತಂದೆ, ಮಾವ, ಗಂಡ, ಅಜ್ಜ ಅಂತಾ ಅವರಿಗೆ ಯಾರಿಗೂ ಗೊತ್ತಾಗುವುದಿಲ್ಲ. ಓ ಮಹಾಗಣಪತಿ ನನಗೆ ಈ ನಾಯಿಯ ಜನ್ಮ ಸಾಕಾಗಿ ಹೋಯಿತು. ನನ್ನನ್ನು ನಿನ್ನೆಡೆಗೆ ಕರಸಿಕೋ ಎನ್ನುತ್ತ ದೇವರಲ್ಲಿ ಮೊರೆಯಿಟ್ಟನು.

ಮಹಾಗಣಪತಿಗೆ ನಾಯಿಯ ಅರ್ತನಾದ– ದುಃಖ ಕೇಳಿಸಿತು. ಕೆಲವೇ ದಿನಗಳಲ್ಲಿ ನಾಯಿಯು ಸತ್ತು ಹೋಯಿತು. ಮುಂದಿನ ಜನ್ಮದಲ್ಲಿ ಮಾಧವನು ಯೋಗಿಯಾಗಿ ಹುಟ್ಟಿ ಬದುಕನ್ನು ಸಾರ್ಥಕಪಡಿಸಿಕೊಂಡು, ಮಹಾ ಗಣಪತಿಯ ಕೃಪೆಗೆ ಪಾತ್ರನಾದನು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.